ನವದೆಹಲಿ: ಸಾಮಾನ್ಯವಾಗಿ ದೇವಸ್ಥಾನದ ಹೊರಗೆ ಚಪ್ಪಲಿ ಕಳೆದುಹೋದರೆ, ಜನರು ಸಾಲುಸಾಲಾಗಿ ಇಟ್ಟಿರುವ ನೂರಾರು ಚಪ್ಪಲಿಗಳ ನಡುವೆ ತಮ್ಮ ಚಪ್ಪಲಿ ಹುಡುಕುತ್ತಾ ಪರದಾಡುತ್ತಾರೆ. ಆದರೆ ಗೋವಾ ಮೂಲದ ವ್ಯಕ್ತಿಯೊಬ್ಬರು ಇದಕ್ಕೆ ವಿಭಿನ್ನ ಹಾಗೂ ತಂತ್ರಜ್ಞಾನಮಯ ಪರಿಹಾರ ಕಂಡುಕೊಂಡಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳ ದೇವಸ್ಥಾನದ ಹೊರಗೆ ತಮ್ಮ ಚಪ್ಪಲಿಗಳನ್ನು ಕಳೆದುಕೊಂಡ ಅವರು, ಅವುಗಳನ್ನು ಹುಡುಕಲು ನೇರವಾಗಿ ಚಾಟ್‌ಜಿಪಿಟಿ (ChatGPT) ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ ಕೃತಕ ಬುದ್ಧಿಮತ್ತೆ ಚಾಟ್‌ಜಿಪಿಟಿಯು ಅವರ ಚಪ್ಪಲಿಯ ಚಿತ್ರಗಳನ್ನು ಪರಿಶೀಲಿಸಿ ಅವರ ಚಪ್ಪಲಿಗಳು ಇರುವ ಸ್ಥಳವನ್ನೂ ತೋರಿಸಿದ್ದು, ಕೊನೆಗೆ ವ್ಯಕ್ತಿಗೆ ತಮ್ಮ ಚಪ್ಪಲಿಗಳು ಸಿಕ್ಕಿವೆ. ಈ ಅಪರೂಪದ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ವಿಡಿಯೋ, ಫೋಟೋ ಕಳುಹಿಸಿ ಸಹಾಯ ಕೇಳಿದ ವ್ಯಕ್ತಿ
ಗೋವಾ ಮೂಲದ ಶುಭಾಂಗ ಬೋರ್ಕರ್ ಎಂಬ ಇನ್ಸ್ಟಾಗ್ರಾಂ (Instagram) ಬಳಕೆದಾರರು ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನದ ಹೊರಗೆ ಸಾಲುಸಾಲಾಗಿ ಇಟ್ಟಿದ್ದ ಚಪ್ಪಲಿಗಳ ರಾಶಿಯಲ್ಲಿ ತಮ್ಮ ಚಪ್ಪಲಿಯನ್ನು ಹುಡುಕಲು ಸಾಧ್ಯವಾಗದೇ ಅವರು ಪರದಾಡಿದ್ದಾರೆ. ನಂತರ ಚಪ್ಪಲಿ ರಾಶಿಯ ವಿಡಿಯೋವನ್ನು ಅವರು ಮೊದಲು ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದಾರೆ. ನಂತರ ಚಾಟ್‌ಜಿಪಿಟಿ (ChatGPT) ತೆರೆದು ಆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಅದರ ಜೊತೆಗೆ ತಮ್ಮ ಚಪ್ಪಲಿಗಳು ಹೇಗಿವೆ ಎಂಬುದನ್ನು ತೋರಿಸುವ ಪ್ರತ್ಯೇಕ ಫೋಟೋವನ್ನೂ ಚಾಟ್‌ಜಿಪಿಟಿಗೆ ಕಳುಹಿಸಿದ್ದಾರೆ.
ತಾವು ಉಜ್ಜಯಿನಿಯ ಮಹಾಕಾಳ ದೇವಸ್ಥಾನದಲ್ಲಿದ್ದು, ಹೊರಗೆ ಇಟ್ಟಿದ್ದ ನೂರಾರು ಚಪ್ಪಲಿಗಳ ನಡುವೆ ತಮ್ಮ ಪಾದರಕ್ಷೆಗಳು ಕಾಣೆಯಾಗಿವೆ ಎಂದು ಅವರು ಚಾಟ್‌ಜಿಪಿಟಿಗೆ ವಿವರಿಸಿದ್ದಾರೆ. ಬಳಿಕ ರ‍್ಯಾಕ್‌ಗಳಲ್ಲಿ ಇಟ್ಟಿದ್ದ ಚಪ್ಪಲಿಗಳ ವಿವಿಧ ಫೋಟೋಗಳನ್ನು ಒಂದೊಂದಾಗಿ ಕಳುಹಿಸುತ್ತಾ, ತಮ್ಮ ಚಪ್ಪಲಿಗಳನ್ನು ಗುರುತಿಸಲು ಸಹಾಯ ಮಾಡುವಂತೆ ಅದರ ಬಳಿ ಕೇಳಿಕೊಂಡಿದ್ದಾರೆ.
ಕೊನೆಗೂ ಪತ್ತೆ
ಕಳುಹಿಸಿದ ಚಿತ್ರಗಳನ್ನು ಪರಿಶೀಲಿಸಿದ ಚಾಟ್‌ಜಿಪಿಟಿ (ChatGPT), ಅವುಗಳಲ್ಲಿ ಶುಭಾಂಗ್ಗ ಅವರ ಚಪ್ಪಲಿಗಳಿಗೆ ಹೋಲುವ ಜೋಡಿಯನ್ನು ಗುರುತಿಸಿದೆ. ಬಳಿಕ ನಿರ್ದಿಷ್ಟ ಸ್ಥಳವನ್ನೂ ಸೂಚಿಸಿದೆ. ರ‍್ಯಾಕ್‌ನ ಬಲಭಾಗದಲ್ಲಿ, ಮಧ್ಯದ ಸುತ್ತಮುತ್ತ, ರ‍್ಯಾಕ್‌ನ ಕೆಳಭಾಗದ ಸ್ವಲ್ಪ ಕೆಳಗೆ ಇರುವ ಚಪ್ಪಲಿಗಳ ನಡುವೆ ನಿಮ್ಮ ಚಪ್ಪಲಿಯ ಜೊತೆ ಇರಬಹುದೆಂದು ಚಾಟ್‌ಜಿಪಿಟಿ ತಿಳಿಸಿದೆ. ಶುಭಾಂಗ ಆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಚಾಟ್‌ಜಿಪಿಟಿ ತೋರಿಸಿದ್ದ ಜಾಗದಲ್ಲೇ ತಮ್ಮ ಚಪ್ಪಲಿಗಳು ಪತ್ತೆಯಾಗಿವೆ.
ಸಾಮಾನ್ಯ ಕೆಲಸಕ್ಕೂ ಎಐ (AI) ಬಳಕೆ
ಈ ಘಟನೆ ವಿಶೇಷವಾಗಿರುವುದು, ಚಾಟ್‌ಜಿಪಿಟಿಯನ್ನು ಸಾಮಾನ್ಯವಾಗಿ ಪ್ರಶ್ನೆಗಳಿಗೆ ಉತ್ತರ ಪಡೆಯಲು, ಬರವಣಿಗೆಗೆ ಅಥವಾ ಮಾಹಿತಿಗಾಗಿ ಬಳಸುವ ಬದಲು, ಕಳೆದುಹೋದ ಚಪ್ಪಲಿಗಳನ್ನು ಹುಡುಕುವಂತಹ ಅತ್ಯಂತ ಸಾಮಾನ್ಯ ಕೆಲಸಕ್ಕೂ ಬಳಸಿರುವುದು ಗಮನ ಸೆಳೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ತಮ್ಮ ಜೀವನದಲ್ಲಿ ಇಂತಹ ಸಂದರ್ಭ ಬಂದಾಗ ಚಾಟ್‌ಜಿಪಿಟಿ ಬಳಸಬಹುದು ಎಂಬುದು ತಮಗೆ ಈಗಷ್ಟೇ ಗೊತ್ತಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಕೃತಕ ಬುದ್ಧಿಮತ್ತೆಯನ್ನು ಬಳಸುವ ಸಂಪೂರ್ಣ ಹೊಸ ಮಾರ್ಗವೊಂದನ್ನು ತಮ್ಮ ಗಮನಕ್ಕೆ ತಂದಿದೆ ಎಂದು ಕೆಲ ಬಳಕೆದಾರರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ