ವಾಷಿಂಗ್ಟನ್ : 2015ರಲ್ಲಿ ಪ್ಲುಟೊ ಗೃಹಕ್ಕೆ ಕಳುಹಿಸಲಾಗಿದ್ದ ನಾಸಾದ ‘ನ್ಯೂ ಹೊರೈಸನ್ಸ್’ ಬಾಹ್ಯಾಕಾಶ ನೌಕೆ ತೆಗೆದ ಚಿತ್ರಗಳ ಹೊಸ ವಿಶ್ಲೇಷಣೆಯಲ್ಲಿ ಮಹತ್ವದ ಸುಳಿವೊಂದು ಪತ್ತೆಯಾಗಿದೆ. ಪ್ಲುಟೊದ ಉತ್ತರ ಭಾಗದಲ್ಲಿರುವ ‘ಸ್ಪುಟ್ನಿಕ್ ಪ್ಲಾನಿಟಿಯಾ’ ಪ್ರದೇಶದ ಹಿಮ ನದಿಯ ಕೆಳಗಿನ ಬಿರುಕುಗಳ ಮೂಲಕ ದ್ರವ ನೈಟ್ರೋನ್ ಮೇಲ್ಮೈಗೆ ಬರುತ್ತಿರಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ನ್ಯೂ ಹೊರೈಸನ್ಸ್ ಮಿಷನ್‌ನ ಪ್ರಧಾನ ತನಿಖಾಧಿಕಾರಿ ಹಾಗೂ ಅಧ್ಯಯನದ ಪ್ರಮುಖ ಲೇಖಕ ಅಲನ್ ಸ್ಟರ್ನ್, “ಪ್ಲುಟೊ ನಮಗೆ ಇನ್ನೂ ಅಚ್ಚರಿಗಳನ್ನು ನೀಡುತ್ತಲೇ ಇದೆ” ಎಂದು ಹೇಳಿದ್ದಾರೆ. ಈ ಸಂಶೋಧನೆಯು ಪ್ಲುಟೊದ ಮೇಲ್ಮೈಗೆ ದ್ರವವು ಇತ್ತೀಚಿನ ಅವಧಿಯಲ್ಲೇ ತಲುಪಿರಬಹುದೆಂಬ ಸೂಚನೆ ನೀಡುತ್ತದೆ. ಅಲ್ಲದೆ, ಕಾಲಕ್ರಮೇಣ ಬದಲಾಗುವ ಹೊಸ ರೀತಿಯ ಭೂವೈಜ್ಞಾನಿಕ ರಚನೆಗಳು ಪ್ಲುಟೊದಲ್ಲಿ ಇರಬಹುದೆಂಬ ಸಾಧ್ಯತೆಯನ್ನೂ ಇದು ತೋರಿಸುತ್ತದೆ.
‘ಸ್ಪುಟ್ನಿಕ್ ಪ್ಲಾನಿಟಿಯಾ’ ಪ್ಲುಟೊದಲ್ಲಿರುವ ಅತ್ಯಂತ ವಿಶಾಲವಾದ ಹೆಪ್ಪುಗಟ್ಟಿದ ನೈಟ್ರೋಜನ್ ಹಿಮನದಿಯಾಗಿದೆ. ಇದರ ವಿಸ್ತೀರ್ಣ ಅಮೆರಿಕದ ಟೆಕ್ಸಾಸ್ ಮತ್ತು ಒಕ್ಲಹೋಮಾ ರಾಜ್ಯಗಳ ಒಟ್ಟು ವಿಸ್ತೀರ್ಣಕ್ಕಿಂತಲೂ ಹೆಚ್ಚಾಗಿದೆ.
2015ರಲ್ಲಿ ನ್ಯೂ ಹೊರೈಸನ್ಸ್ ನೌಕೆ ಸ್ಪುಟ್ನಿಕ್ ಪ್ಲಾನಿಟಿಯಾದ ಉತ್ತರ ಭಾಗದ ಚಿತ್ರಗಳನ್ನು ಸೆರೆಹಿಡಿದಿತ್ತು. ಆ ಚಿತ್ರಗಳಲ್ಲಿ ನಗರಗಳಷ್ಟು ದೊಡ್ಡದಾದ ಭೂವೈಜ್ಞಾನಿಕ ಸಂವಹನ ಕೋಶಗಳು ಕಂಡುಬಂದಿದ್ದವು. ಅವುಗಳ ನಡುವೆ ತೆಳುವಾದ ಕಪ್ಪು ರೇಖೆಗಳು ಹಾಗೂ ಇನ್ನಷ್ಟು ಅಗಲವಾದ ಕಪ್ಪು ಪ್ರದೇಶಗಳೂ ಕಂಡುಬಂದಿದ್ದವು. ಈ ಗುರುತುಗಳು ಆ ಭಾಗದಲ್ಲಿ ಹಿಂದೆ ದ್ರವ ಹರಿದಿರಬಹುದೆಂಬ ಅನುಮಾನಕ್ಕೆ ಕಾರಣವಾಗಿದ್ದವು.
ಜುಲೈ 31ರಂದು ಪ್ಲಾನೆಟ್ ಸೈನ್ಸ್ ಜರ್ನಲ್(Planetary Science Journal)ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಈ ಕಪ್ಪು ಪ್ರದೇಶಗಳು ಕೆಲವೊಮ್ಮೆ ತೇವವಾಗಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ ದ್ರವ ನೈಟ್ರೋಜನ್ ಕಾರಣವಾಗಿರಬಹುದು ಎಂಬುದು ಅವರ ಅಭಿಪ್ರಾಯ.
ಈ ಅಧ್ಯಯನದಲ್ಲಿ ಪ್ಲುಟೊ ಗ್ರಹದ ವಿಜ್ಞಾನ ಹಾಗೂ ಭೂಮಿಯ ಹಿಮನದಿಗಳ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ವಿಜ್ಞಾನಿಗಳು ಭಾಗವಹಿಸಿದ್ದರು. ಸ್ಪುಟ್ನಿಕ್ ಪ್ಲಾನಿಟಿಯಾದ ಉತ್ತರ ಭಾಗದಲ್ಲಿರುವ ಮೇಲ್ಮೈ ಗುರುತುಗಳು ಗಾಢವಾಗಿ ಕಾಣುತ್ತವೆ. ಇವು ಭೂಮಿಯ ಮೇಲಿನ ಮಳೆ ಅಥವಾ ಹಿಮನದಿಯ ಕೆಳಗಿನಿಂದ ಮೇಲಕ್ಕೆ ಬರುವ ದ್ರವದಿಂದ ತೇವವಾಗುವ ಹಿಮನದಿಗಳಲ್ಲಿನ ಕೆಲವು ರಚನೆಗಳಿಗೆ ಇವು ಹೋಲುತ್ತವೆ ಎಂದು ಹೇಳಿದ್ದಾರೆ.
ಆದರೆ ಪ್ಲುಟೊದ ವಾತಾವರಣ ಮತ್ತು ಅತ್ಯಂತ ಕಡಿಮೆ ತಾಪಮಾನದಲ್ಲಿ ದ್ರವ ನೈಟ್ರೋಜನ್ ಮಳೆಯಾಗಿ ಬೀಳುವುದು ಸಾಧ್ಯವಿಲ್ಲ. ಹೀಗಾಗಿ, ಹಿಮದ ಕೆಳಗಿರುವ ದ್ರವ ನೈಟ್ರೋಜನ್ ಮೇಲಕ್ಕೆ ಚಲಿಸಿ ಮೇಲ್ಮೈ ತಲುಪುತ್ತಿರಬಹುದು ಎಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ.
ಹೊಸ ಅಧ್ಯಯನವು ಪ್ಲುಟೊದ ಹಿಮಾವೃತ ಹೊರಪದರದಲ್ಲಿರುವ ಬಿರುಕುಗಳ ಮೂಲಕ ದ್ರವ ನೈಟ್ರೋಜನ್ ಕೆಲವೊಮ್ಮೆ ಮೇಲ್ಮೈಗೆ ಏರಿಬರಬಹುದು ಎಂಬ ಸಾಧ್ಯತೆಗೆ ಮತ್ತಷ್ಟು ಬಲ ನೀಡಿದೆ. ಪ್ಲುಟೊದ ಮೇಲ್ಮೈ ನಲ್ಲಿ ದ್ರವದ ಚಲನೆಯಿಂದ ಕಾಲಕ್ರಮೇಣ ಬದಲಾವಣೆಗಳು ಸಂಭವಿಸಬಹುದು ಎಂಬ ಹೊಸ ವೈಜ್ಞಾನಿಕ ಸುಳಿವನ್ನು ಈ ಸಂಶೋಧನೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ