ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ವಿಮಲ್ ಎಲೈಚಿ ಜಾಹೀರಾತು : ಅಜಯ ದೇವಗನ್, ಶಾರುಖ್ ಖಾನ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್

ಮುಂಬೈ: ವಿಮಲ್ ಎಲೈಚಿ ಜಾಹೀರಾತಿನಲ್ಲಿ ಬ್ರ್ಯಾಂಡ್ ಅನುಮೋದಕರಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟರಾದ ಅಜಯ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ‘ವಿಮಲ್ ಎಲೈಚಿ’ ಹೆಸರಿನಲ್ಲಿ ಪ್ರಸಾರವಾಗಿರುವ ಈ ಜಾಹೀರಾತು ನಿಷೇಧಿತ ಅಥವಾ ನಿರ್ಬಂಧಿತ ಉತ್ಪನ್ನದ ಪರೋಕ್ಷ, ಪರ್ಯಾಯ ಅಥವಾ ಇತರ ರೀತಿಯ ಪ್ರಚಾರವಾಗಿದೆಯೇ ಎಂಬುದನ್ನು ಎಫ್‌ಡಿಎ ಪ್ರಶ್ನಿಸಿದೆ.
ಆಗಸ್ಟ್ 11, 2026ರಂದು ಜಾರಿಯಾಗಿರುವ ನೋಟಿಸ್‌ಗಳಲ್ಲಿ, ಸಂಬಂಧಿತ ಜಾಹೀರಾತು ಪ್ರಾಥಮಿಕವಾಗಿ ವಿಮಲ್‌ (VIMAL) ಬ್ರ್ಯಾಂಡ್ ಅನ್ನು ಪ್ರಚಾರ ಮಾಡುತ್ತಿರುವಂತೆ ಕಾಣುತ್ತದೆ ಎಂದು ಅದು ಹೇಳಿದೆ. ಈ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಮುಖ್ಯವಾಗಿ ‘ಪಾನ್ ಮಸಾಲಾ’ ಉತ್ಪನ್ನದ ಜೊತೆಗುರುತಿಸಿಕೊಂಡಿದೆ ಎಂಬುದನ್ನೂ ಎಫ್‌ಡಿಎ ಉಲ್ಲೇಖಿಸಿದೆ.

ನೋಟಿಸ್‌ನಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಎಫ್‌ಡಿಎ ಪ್ರಸ್ತಾಪಿಸಿದೆ. ಮಹಾರಾಷ್ಟ್ರ ಆಹಾರ ಸುರಕ್ಷತಾ ಆಯುಕ್ತರು 2026ರ ಜುಲೈ 13ರಂದು ಹೊರಡಿಸಿರುವ ನಿಷೇಧ ಆದೇಶದಡಿ, ವಿಮಲ್ ಪಾನ್ ಮಸಾಲಾ ಉತ್ಪನ್ನದ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಮಹಾರಾಷ್ಟ್ರದಲ್ಲಿ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಆದೇಶವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 30(2)(a) ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಇದರ ಹಿನ್ನೆಲೆಯಲ್ಲಿ ವಿಮಲ್ ಎಲೈಚಿ (VIMAL Elaichi) ಎಂಬ ಹೆಸರಿನ ಬಳಕೆಯೇ ಅನುಮಾನಕ್ಕೆ ಕಾರಣವಾಗಿದೆ ಎಂದು ಎಫ್‌ಡಿಎ ಹೇಳಿದೆ. ‘ವಿಮಲ್’ ಎಂಬ ಬ್ರ್ಯಾಂಡ್ ಹೆಸರು ಪಾನ್ ಮಸಾಲಾ ಉತ್ಪನ್ನದ ಜೊತೆ ಗ್ರಾಹಕರ ಮನಸ್ಸಿನಲ್ಲಿ ಈಗಾಗಲೇ ಗಟ್ಟಿಯಾಗಿ ಸಂಬಂಧ ಹೊಂದಿರುವುದರಿಂದ, ‘ವಿಮಲ್ ಎಲೈಚಿ’ ಎಂಬ ಹೆಸರಿನ ಬಳಕೆಯು ಪಾನ್ ಮಸಾಲಾ ಬ್ರ್ಯಾಂಡ್‌ನ ಗುರುತನ್ನು ಪರೋಕ್ಷವಾಗಿ ಮುಂದುವರಿಸುವ ಅಥವಾ ಪ್ರಚಾರ ಮಾಡುವ ಉದ್ದೇಶ ಹೊಂದಿದೆಯೇ ಎಂಬುದನ್ನು ಅದು ಪರಿಶೀಲಿಸುತ್ತಿದೆ.

ಪ್ರಮುಖ ಸುದ್ದಿ :-   ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ನೂತನ ತಂಡದ ಘೋಷಣೆ ; ಹಲವು ಬದಲಾವಣೆ, ಮಹಿಳೆಯರಿಗೆ ಆದ್ಯತೆ

‘ವಿಮಲ್ ಎಲೈಚಿ’ ಸ್ವತಂತ್ರ ಉತ್ಪನ್ನವೇ ಅಥವಾ ಬದಲಿ ಪ್ರಚಾರವೇ?
ಜಾಹೀರಾತಿನಲ್ಲಿ ಬಳಸಿರುವ ಬ್ರ್ಯಾಂಡ್ ಗುರುತು, ಪ್ರಸ್ತುತಿ, ದೃಶ್ಯದ ಅಂಶಗಳು, ಸಂಭಾಷಣೆ, ಉತ್ಪನ್ನದ ಹೆಸರು ಹಾಗೂ ಮಾರುಕಟ್ಟೆಯಲ್ಲಿ ಆ ಬ್ರ್ಯಾಂಡ್‌ಗೆ ಇರುವ ಗುರುತನ್ನು ಒಟ್ಟಾಗಿ ಪರಿಗಣಿಸಿದಾಗ, ಈ ಜಾಹೀರಾತು ನಿಷೇಧಿತ ಅಥವಾ ನಿರ್ಬಂಧಿತ ತಂಬಾಕು ಸಂಬಂಧಿತ ಉತ್ಪನ್ನದ ಪರೋಕ್ಷ, ಬದಲಿ ಅಥವಾ ಇತರ ರೀತಿಯ ಪ್ರಚಾರವಾಗಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ ಎಂದು ಎಫ್‌ಡಿಎ ತನ್ನ ನೋಟಿಸ್‌ನಲ್ಲಿ ಹೇಳಿದೆ.
‘ವಿಮಲ್‌’ ಬ್ರ್ಯಾಂಡ್ ಅನ್ನು ಎಲೈಚಿ ಉತ್ಪನ್ನದ ಮೂಲಕ ಬಳಸಿರುವುದು ಪಾನ್ ಮಸಾಲಾ ಅಥವಾ ತಂಬಾಕು ಸಂಬಂಧಿತ ಉತ್ಪನ್ನಗಳೊಂದಿಗೆ ಹೊಂದಿರುವ ಬ್ರ್ಯಾಂಡ್ ಗುರುತನ್ನು ಉಳಿಸುವುದು, ಮತ್ತಷ್ಟು ಬಲಪಡಿಸುವುದು ಅಥವಾ ಗ್ರಾಹಕರ ಆಕರ್ಷಣೆಯನ್ನು ಹೆಚ್ಚಿಸುವುದು ಉದ್ದೇಶವಾಗಿದೆಯೇ ಎಂಬುದನ್ನೂ ನಟರಿಂದ ಸ್ಪಷ್ಟಪಡಿಸಲು ಅದು ಸೂಚಿಸಿದೆ.

ಆಹಾರ ಸುರಕ್ಷತಾ ಕಾಯ್ದೆಯ ಸೆಕ್ಷನ್ 24 ಉಲ್ಲೇಖ
ಎಫ್‌ಡಿಎ ತನ್ನ ನೋಟಿಸ್‌ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 24ನ್ನೂ ಉಲ್ಲೇಖಿಸಿದೆ. ಆಹಾರದ ಕುರಿತು ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಪ್ರತಿನಿಧಿಕೆಗಳನ್ನು ಈ ಸೆಕ್ಷನ್ ನಿಷೇಧಿಸುತ್ತದೆ. ಆಹಾರದ ಮಾರಾಟ, ಪೂರೈಕೆ, ಬಳಕೆ ಅಥವಾ ಸೇವನೆಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆಯುವ ಅನ್ಯಾಯಕರ ಅಥವಾ ಮೋಸಗೊಳಿಸುವ ವ್ಯಾಪಾರ ಕ್ರಮಗಳಿಗೂ ಈ ನಿಯಮ ಅನ್ವಯಿಸುತ್ತದೆ.
ಇದೇ ವೇಳೆ, ಸೆಕ್ಷನ್ 53ರ ಅಡಿಯಲ್ಲಿ, ಆಹಾರದ ಬಗ್ಗೆ ತಪ್ಪು ವಿವರಣೆ ನೀಡುವ ಅಥವಾ ಗ್ರಾಹಕರನ್ನು ತಪ್ಪುದಾರಿಗೆಳೆಯುವ ಸಾಧ್ಯತೆ ಇರುವ ಜಾಹೀರಾತನ್ನು ಪ್ರಕಟಿಸುವ ವ್ಯಕ್ತಿ ಅಥವಾ ಅದರ ಪ್ರಕಟಣೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗೆ ₹10 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಎಂದು ಅದು ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ದೇವಸ್ಥಾನದಲ್ಲಿ ಕಾಲ್ತುಳಿತ : 7 ಮಂದಿ ಸಾವು, ಹಲವರಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement