ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್‌ ; ಅಮೆರಿಕದಲ್ಲೂ ಕಡ್ಡಾಯ ʼವೋಟರ್‌ ಐಡಿ ಕಾರ್ಡ್‌ʼ ವ್ಯವಸ್ಥೆ ಜಾರಿಗೆ ಒತ್ತಾಯ

ವಾಷಿಂಗ್ಟನ್ : ಅಮೆರಿಕದ ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಪೌರತ್ವದ ದೃಢೀಕರಣವನ್ನು ಕಡ್ಡಾಯಗೊಳಿಸುವ ಉದ್ದೇಶದ ‘ಸೇವ್ ಅಮೆರಿಕಾ ಆಕ್ಟ್’ (SAVE America Act) ಜಾರಿಗೆ ತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಒತ್ತಾಯಿಸಿದ್ದಾರೆ. ತಮ್ಮ ವಾದಕ್ಕೆ ಭಾರತದ ಚುನಾವಣಾ ವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಿರುವ ಟ್ರಂಪ್, ಅಮೆರಿಕದ ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯ ಫೋಟೋ ಗುರುತಿನ ಚೀಟಿ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಪ್ರತಿಪಾದಿಸಿದ್ದಾರೆ.
ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ಇತ್ತೀಚೆಗೆ ಅಮೆರಿಕದ ಆಡಳಿತವನ್ನು ಪ್ರಶ್ನಿಸಿ, “ಮಾನ್ಯ ಫೋಟೋ ಗುರುತಿನ ಚೀಟಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆ ಹೇಗೆ ನಡೆಸಲಾಗುತ್ತದೆ?” ಎಂದು ಕೇಳಿದ್ದರು ಎಂದು ತಿಳಿಸಿದ್ದಾರೆ. ಚುನಾವಣಾ ಅಕ್ರಮಗಳನ್ನು ತಡೆಯಲು ಪ್ರತಿಯೊಬ್ಬ ಅಮೆರಿಕನ್ ಮತದಾರನಿಗೂ ಕಡ್ಡಾಯ ಫೋಟೋ ಗುರುತಿನ ಚೀಟಿ ಇರಬೇಕು ಎಂಬ ವಾದವನ್ನು ಟ್ರಂಪ್ ಮುಂದಿಟ್ಟಿದ್ದಾರೆ.
ಭಾರತದ 2024ರ ಲೋಕಸಭಾ ಚುನಾವಣೆಯನ್ನು ಉಲ್ಲೇಖಿಸಿರುವ ಟ್ರಂಪ್, “ಭಾರತದ ಕೊನೆಯ ಚುನಾವಣೆಯಲ್ಲಿ 64.6 ಕೋಟಿ ಮತದಾರರು ಇದ್ದರು. ಶೇ.1ಕ್ಕಿಂತಲೂ ಕಡಿಮೆ ಮಂದಿ ಅಂಚೆ ಮೂಲಕ ಮತ ಚಲಾಯಿಸಿದರು ಮತ್ತು ಪ್ರತಿಯೊಬ್ಬ ಮತದಾರನೂ ಮಾನ್ಯ ಫೋಟೋ ಗುರುತಿನ ದಾಖಲೆ ಹೊಂದಿರಬೇಕಾಗಿತ್ತು” ಎಂದು ಹೇಳಿದ್ದಾರೆ. ಇದೇ ವ್ಯವಸ್ಥೆಯನ್ನು ಅಮೆರಿಕದಲ್ಲಿಯೂ ಜಾರಿಗೆ ತರಬೇಕಿದ್ದು, “ನಾವು ‘ಸೇವ್ ಅಮೆರಿಕಾ ಆಕ್ಟ್’ (SAVE America Act) ಅನ್ನು ಈಗಲೇ ಅಂಗೀಕರಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಟ್ರಂಪ್‌ ನಿಲುವಿಗೆ ಭಾರತದಲ್ಲಿನ ಅಮೆರಿಕದ ರಾಯಭಾರಿ ಬೆಂಬಲ
ಅಮೆರಿಕದ ಭಾರತ ರಾಯಭಾರಿ ಸರ್ಜಿಯೋ ಗೋರ್ ಕೂಡ ಟ್ರಂಪ್ ಅವರ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶವ್ಯಾಪಿ ಕಠಿಣ ಮತದಾರರ ಗುರುತಿನ ಪರಿಶೀಲನಾ ಕಾನೂನು ಜಾರಿಗೆ ತರಬೇಕೆಂಬ ಟ್ರಂಪ್ ಅವರ ಪ್ರಯತ್ನವನ್ನು ಗೋರ್ ಸಮರ್ಥಿಸಿದ್ದಾರೆ.
ಭಾರತದ 2024ರ ಸಾರ್ವತ್ರಿಕ ಚುನಾವಣೆಯನ್ನು ಮತದಾರರ ದೃಢೀಕರಣದ ಜಾಗತಿಕ ಮಾದರಿ ಎಂದು ಉಲ್ಲೇಖಿಸಿರುವ ಗೋರ್, “ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ನಿಲುವು ಸಂಪೂರ್ಣ ಸರಿಯಾಗಿದೆ. ಭಾರತದ ಕೊನೆಯ ಚುನಾವಣೆಯಲ್ಲಿ 64.6 ಕೋಟಿ ಮತದಾರರು ಇದ್ದರು; ಪ್ರತಿಯೊಬ್ಬರೂ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿದ್ದರು. ಕಾಂಗ್ರೆಸ್ ‘ಸೇವ್ ಅಮೆರಿಕಾ ಆಕ್ಟ್’ (SAVE America Act) ಅನ್ನು ಅಂಗೀಕರಿಸಬೇಕು” ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ನೂತನ ತಂಡದ ಘೋಷಣೆ ; ಹಲವು ಬದಲಾವಣೆ, ಮಹಿಳೆಯರಿಗೆ ಆದ್ಯತೆ

ಏನಿದು ‘ಸೇವ್ ಅಮೆರಿಕಾ ಆಕ್ಟ್’ (SAVE America Act) ?
ಟ್ರಂಪ್ ಬಹುಕಾಲದಿಂದಲೂ ಸೇಫ್‌ ಗಾರ್ಡ್‌ ಅಮೆರಿಕನ್‌ ವೋಟರ್‌ ಎಲಿಜಿಬಿಲಿಟಿ ‘ಸೇವ್ ಅಮೆರಿಕಾ ಆಕ್ಟ್’ (Safeguard American Voter Eligibility (SAVE) America Act) ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ. ಚುನಾವಣಾ ಅಕ್ರಮಗಳನ್ನು ತಡೆಯಲು ಈ ಕಾನೂನು ಅಗತ್ಯ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಈ ಮಸೂದೆಯನ್ನು ಜನವರಿ 29ರಂದು ಮಂಡಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಡೆಮಾಕ್ರಾಟ್‌ಗಳು ಮತ್ತು ರಿಪಬ್ಲಿಕನ್‌ಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಅಮೆರಿಕದ ಸೆನೆಟ್ ಈ ತಿಂಗಳ ಆರಂಭದಲ್ಲಿ ಐದು ವಾರಗಳ ವಿರಾಮಕ್ಕೆ ತೆರಳುವ ವೇಳೆಯಲ್ಲೂ ಮಸೂದೆ ಅಂಗೀಕಾರದ ಬಗ್ಗೆ ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿರಲಿಲ್ಲ.
ಅಮೆರಿಕದ ಶ್ವೇತಭವನದ ಪ್ರಕಾರ, ಫೆಡರಲ್ ಚುನಾವಣೆಗಳಲ್ಲಿ ಅಮೆರಿಕದ ನಾಗರಿಕರು ಮಾತ್ರ ಮತ ಚಲಾಯಿಸುವುದನ್ನು ಖಚಿತಪಡಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ. “ಅಮೆರಿಕದ ಚುನಾವಣೆಗಳನ್ನು ಅಮೆರಿಕದ ನಾಗರಿಕರು—ಮತ್ತು ಅಮೆರಿಕದ ನಾಗರಿಕರು ಮಾತ್ರ—ನಿರ್ಧರಿಸಬೇಕು” ಎಂದು ಶ್ವೇತಭವನ ಹೇಳಿದೆ. ಇದನ್ನು ಅದು ‘ಸಾಮಾನ್ಯ ಜ್ಞಾನ ಆಧಾರಿತ ದ್ವಿಪಕ್ಷೀಯ ಮಸೂದೆ’ ಎಂದು ಬಣ್ಣಿಸಿದೆ.

ಪ್ರಮುಖ ಸುದ್ದಿ :-   ನಿತಿನ್ ನಬಿನ್ ಸಾರಥ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ತಂಡದ ಪುನರ್ರಚನೆ : ಇದು ಮೋದಿ ಸಂಪುಟದ ಪುನರ್ರಚನೆಗೆ ಮುನ್ನುಡಿಯೇ ?

ಪೌರತ್ವದ ದಾಖಲೆ ಮತ್ತು ಮತದಾರರ ಗುರುತಿನ ಚೀಟಿ ಕಡ್ಡಾಯ
ಶ್ವೇತಭವನದ ವಿವರಣೆಯಂತೆ, “ಸೇವ್‌ ಅಮೆರಿಕ ಆಕ್ಟ್‌ʼ ಜಾರಿಯಾದರೆ ಫೆಡರಲ್ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುವವರು ಮಾನ್ಯ ಗುರುತಿನ ಚೀಟಿಯ ಜೊತೆಗೆ ಅಮೆರಿಕದ ಪೌರತ್ವದ ಪುರಾವೆಯನ್ನೂ ಒದಗಿಸಬೇಕಾಗುತ್ತದೆ.
ಅಲ್ಲದೆ, ಅಂಚೆ ಮತದಾನಕ್ಕೂ ನಿರ್ಬಂಧಗಳನ್ನು ವಿಧಿಸುವ ಪ್ರಸ್ತಾವನೆ ಮಸೂದೆಯಲ್ಲಿದೆ. ಅನಾರೋಗ್ಯ, ಅಂಗವೈಕಲ್ಯ, ಸೇನಾ ಸೇವೆ ಅಥವಾ ಪ್ರಯಾಣದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡುವ ಉದ್ದೇಶವನ್ನು ಅದು ಹೊಂದಿದೆ.
ಇದರ ಜೊತೆಗೆ, ಮತದಾರರ ಪಟ್ಟಿಯಿಂದ ಅಮೆರಿಕದ ನಾಗರಿಕರಲ್ಲದವರನ್ನು ತೆಗೆದುಹಾಕಲು ರಾಜ್ಯಗಳಿಗೆ ನಿರ್ದೇಶನ ನೀಡುವ ಪ್ರಸ್ತಾವನೆಯೂ ಮಸೂದೆಯಲ್ಲಿದೆ. “ಅಮೆರಿಕದಲ್ಲಿ ಮತದಾನಕ್ಕೆ ನೋಂದಾಯಿಸಿಕೊಳ್ಳಬೇಕಾದರೆ, ನೀವು ಅಮೆರಿಕದ ನಾಗರಿಕರಾಗಿರಬೇಕು” ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಭಾರತ, ಬ್ರೆಜಿಲ್ ಮಾದರಿಯನ್ನೂ ಉಲ್ಲೇಖಿಸಿದ ಶ್ವೇತಭವನ
ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಇತರ ದೇಶಗಳೊಂದಿಗೆ ಹೋಲಿಸಿರುವ ಶ್ವೇತಭವನ, ಮತದಾರರ ಗುರುತಿನ ದೃಢೀಕರಣದ ವಿಷಯದಲ್ಲಿ ಅಮೆರಿಕ ಹಿಂದೆ ಉಳಿದಿದೆ ಎಂದು ವಾದಿಸಿದೆ.
“ಭಾರತ ಮತ್ತು ಬ್ರೆಜಿಲ್ ಮತದಾರರ ಗುರುತನ್ನು ಬಯೋಮೆಟ್ರಿಕ್ ಡೇಟಾಬೇಸ್‌ಗೆ ಜೋಡಿಸಿವೆ. ಆದರೆ ಅಮೆರಿಕವು ಬಹುತೇಕ ಪೌರತ್ವದ ಬಗ್ಗೆ ಮತದಾರರ ಸ್ವಯಂ ಘೋಷಣೆಯನ್ನೇ ಅವಲಂಬಿಸಿದೆ” ಎಂದು ಶ್ವೇತಭವನ ಹೇಳಿದೆ.
ಹೀಗಾಗಿ, ಭಾರತದ ಚುನಾವಣಾ ವ್ಯವಸ್ಥೆಯನ್ನು ಉದಾಹರಣೆಯಾಗಿ ಮುಂದಿಟ್ಟಿರುವ ಟ್ರಂಪ್ ಹಾಗೂ ಅವರ ಆಡಳಿತವು ಅಮೆರಿಕದ ಚುನಾವಣಾ ಪ್ರಕ್ರಿಯೆಯಲ್ಲಿ ಕಡ್ಡಾಯ ಫೋಟೋ ಗುರುತಿನ ಚೀಟಿ, ಪೌರತ್ವದ ದೃಢೀಕರಣ ಮತ್ತು ಅಂಚೆ ಮತದಾನದ ಮೇಲಿನ ನಿರ್ಬಂಧಗಳನ್ನು ಜಾರಿಗೆ ತರಲು ಸೇವ್‌ ಅಮೆರಿಕ ಆಕ್ಟ್‌ (SAVE America Act) ಅನ್ನು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement