ಮಂಡ್ಯ : ವೃದ್ಧ ಭಿಕ್ಷುಕಿ ನಿಧನ: ಮೃತಳ ಮನೆಯಲ್ಲಿ ಮೂಟೆಗಳಲ್ಲಿ ತುಂಬಿದ್ದ ಕಂತೆ ಕಂತೆ ಹಣ ಪತ್ತೆ…!

ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಅವರ ಮನೆಯನ್ನು ಶೋಧಿಸಿದಾಗ ಬರೋಬ್ಬರಿ 8 ಲಕ್ಷ ರೂಪಾಯಿಗೂ ಅಧಿಕ ನಗದು ಹಣ ಪತ್ತೆಯಾದ ಘಟನೆ  ಮಂಡ್ಯದ ಗುತ್ತಲು ಬಡಾವಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತ ವೃದ್ಧೆಯನ್ನು ನೂರ್ ಎಂದು ಗುರುತಿಸಲಾಗಿದೆ.  ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ನೂರ್ (ಹೆಸರು) ಎಂಬ ವೃದ್ಧೆ, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಸರೆ ಇಲ್ಲದ ಕಾರಣ ಅನೇಕ ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ  ಅವರು ಶನಿವಾರ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ವೃದ್ಧೆ ನಿಧನದ ಸುದ್ದಿ ತಿಳಿದ ನಂತರ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಅಂತ್ಯಸಂಸ್ಕಾರದ ನಂತರ ಭಿಕ್ಷಾಟನೆ ಮಾಡುತಿದ್ದ ವೃದ್ಧೆ ನೂರ್ ವಾಸವಿದ್ದ ಮನೆಗೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಮೂಟೆಗಟ್ಟಲೆ ನಾಣ್ಯಗಳು ಹಾಗೂ ಕರೆನ್ಸಿ ನೋಟುಗಳ ಕಂತೆಗಳು ಪತ್ತೆಯಾಗಿವೆ. ವೃದ್ಧೆಯ ಮನೆಯಲ್ಲಿ ಸಿಕ್ಕ ಹಣ ನೋಡಿ ಸ್ಥಳೀಯರು ಒಂದು ಸಲ ಶಾಕ್ ಆಗಿದ್ದಾರೆ. ತನಗೆ ಭಿಕ್ಷೆಯಲ್ಲಿ ಬಂದ ಹಣವನ್ನು ಆ ವೃದ್ಧೆ ಖರ್ಚು ಮಾಡದೆ ಹಾಗೆಯೇ ಕೂಡಿಟ್ಟಿದ್ದರು ಎನ್ನಲಾಗಿದೆ.
ಮನೆಯಲ್ಲಿ 8 ಲಕ್ಷ ರೂಪಾಯಿ ಪತ್ತೆ
ನೂರ್ ಮನೆಯ ಮೂಲೆ ಮೂಲೆಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿಟ್ಟಿದ್ದ ನೋಟಿನ ಕಂತೆಗಳು ಹಾಗೂ ಚೀಲಗಳಲ್ಲಿ ತುಂಬಿಟ್ಟಿದ್ದ ರಾಶಿಗಟ್ಟಲೆ ನಾಣ್ಯಗಳು ಪತ್ತೆಯಾಗಿವೆ. ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ಎಣಿಕೆ ಮಾಡಿದ್ದು,  ಒಟ್ಟು ಮೊತ್ತ ಬರೋಬ್ಬರಿ 8 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ.
ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಸ್ಥಳೀಯ ಮುಖಂಡರು ಮಾತುಕತೆ ನಡೆಸಿ ಕೊನೆಗೆ ಆ ಸಂಪೂರ್ಣ ಹಣವನ್ನು ಮೃತ ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.
 ‘ವೃದ್ಧೆ ಬದುಕಿದ್ದಾಗ ಯಾವೊಬ್ಬ ಸಂಬಂಧಿಯೂ ಸಹಾಯಕ್ಕೆ ಬರಲಿಲ್ಲ. ಆದರೆ ಆಕೆ ಸತ್ತ ಮೇಲೆ ಆಕೆಯ ಭಿಕ್ಷಾಟನೆಯ ಕಷ್ಟದ ಹಣವನ್ನು ಮುಲಾಜಿಲ್ಲದೆ ಹಂಚಿಕೊಂಡಿದ್ದಾರೆ’ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement