ಔಷಧಗಳಿಗೆ ಸವಾಲಾಗಿರುವ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ಹೋರಾಡುವ ʼಜೈವಿಕ ಅಸ್ತ್ರ’ ಹಸುವಿನ ಕರುಳಿನಲ್ಲಿ ತಯಾರಾಗುತ್ತೆ ; ಐಐಎಸ್‌ಸಿ ಅಧ್ಯಯನ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (IISC) ಸಂಶೋಧಕರು ಹಸುವಿನ ಕರುಳಿನಲ್ಲಿರುವ ವಿಶಿಷ್ಟ ಕಿಣ್ವವೊಂದನ್ನು (Enzyme) ಗುರುತಿಸಿದ್ದು, ಇದು ಔಷಧಗಳು ಪರಿಣಾಮಕಾರಿಯಾಗದ (Antibiotic-resistant) ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಹೊಸ ಭರವಸೆ ಮೂಡಿಸಿದೆ. ಈ ಕಿಣ್ವವು ಬ್ಯಾಕ್ಟೀರಿಯಾಗಳು ರಚಿಸುವ ರಕ್ಷಣಾತ್ಮಕ ಬಯೋಫಿಲ್ಮ್‌ಗಳನ್ನು (Biofilms) ಒಡೆಯುವ ಸಾಮರ್ಥ್ಯ ಹೊಂದಿದ್ದು, ಬ್ಯಾಕ್ಟೀರಿಯಾಗಳ ಮೇಲೆ ಪ್ರತಿಜೀವಕ(Antibiotics) ಔಷಧಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಅತ್ಯಂತ ಅಪಾಯಕಾರಿ ರೋಗಕಾರಕಗಳ ಪಟ್ಟಿಯಲ್ಲಿ ಸೇರಿಸಿರುವ ಅಸಿನೆಟೋಬ್ಯಾಕ್ಟರ್ ಬೌಮಾನಿ (Acinetobacter baumannii) ಎಂಬ ಬ್ಯಾಕ್ಟೀರಿಯಾವು ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಗಂಭೀರ ಸಮಸ್ಯೆಯಾಗಿದೆ. ಇದು ಗಾಯಗಳು ಮತ್ತು ವೈದ್ಯಕೀಯ ಉಪಕರಣಗಳ ಮೇಲ್ಮೈಗಳಲ್ಲಿ ಜೈವಿಕ ಫಿಲ್ಮ್‌ಗಳನ್ನು ನಿರ್ಮಿಸಿ ದೀರ್ಘಕಾಲದ ಸೋಂಕುಗಳಿಗೆ ಕಾರಣವಾಗುತ್ತದೆ. ಇದರಿಂದ ಗಾಯಗಳು ಗುಣಮುಖವಾಗಲು ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಚಿಕಿತ್ಸೆ ಕಷ್ಟಕರವಾಗುತ್ತದೆ.

ಬಯೋಫಿಲ್ಮ್ (ಜೈವಿಕ ಫಿಲ್ಮ್‌) ಎಂದರೇನು?

ಬಯೋಫಿಲ್ಮ್‌ಗಳು ಬ್ಯಾಕ್ಟೀರಿಯಾಗಳ ಸಮೂಹವಾಗಿದ್ದು, ಅವುಗಳು ತಮ್ಮ ಸುತ್ತಲೂ ಪಾಲಿಸ್ಯಾಕರೈಡ್‌ಗಳು (Polysaccharides), ಪ್ರೋಟೀನ್‌ಗಳು, ಲಿಪಿಡ್‌ಗಳು ಹಾಗೂ ಹೊರಕೋಶೀಯ ಡಿಎನ್‌ಎ (Extracellular DNA)ಗಳಿಂದ ಕೂಡಿದ ರಕ್ಷಣಾತ್ಮಕ ಪದರವನ್ನು ನಿರ್ಮಿಸಿಕೊಳ್ಳುತ್ತವೆ. ಈ ಪದರವು ಪ್ರತಿಜೀವಕ ಔಷಧಗಳು ಮತ್ತು ರೋಗನಿರೋಧಕ ಕೋಶಗಳು ಬ್ಯಾಕ್ಟೀರಿಯಾಗಳನ್ನು ತಲುಪುವುದನ್ನು ತಡೆಯುತ್ತದೆ. ಪರಿಣಾಮವಾಗಿ, ಅನೇಕ ಚಿಕಿತ್ಸೆಗಳು ಪರಿಣಾಮಕಾರಿಯಾಗುವುದಿಲ್ಲ.
ಐಐಎಸ್‌ಸಿಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಸಹ-ಸಂಶೋಧಕ ಪ್ರೊ. ದೇವಾಶಿಶ್ ದಾಸ್ ಅವರ ಪ್ರಕಾರ, ಬ್ಯಾಕ್ಟೀರಿಯಾ ಬಯೋಫಿಲ್ಮ್‌ಗಳಲ್ಲಿ ಪಾಲಿಸ್ಯಾಕರೈಡ್‌ಗಳ ಪ್ರಮಾಣ ಶೇ.45ರಿಂದ ಶೇ.95ರವರೆಗೆ ಇರುತ್ತದೆ. ಇವು ಪರಸ್ಪರ ಜೋಡಣೆಗೊಂಡು ಬಯೋಫಿಲ್ಮ್‌ಗೆ ಹೆಚ್ಚಿನ ಬಲ ಮತ್ತು ಸ್ಥಿರತೆಯನ್ನು ನೀಡುತ್ತವೆ.

ಹಸುವಿನ ಕರುಳಿನಲ್ಲಿರುವ ಕಿಣ್ವದಿಂದ ಸಿಕ್ಕ ಪರಿಹಾರ
ಗೋವುಗಳ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು ಹುಲ್ಲು ಮತ್ತು ಮೇವುಗಳಲ್ಲಿ ಕಂಡುಬರುವ ಸೆಲ್ಯುಲೋಸ್‌ (Cellulose) ಎಂಬ ಸಂಕೀರ್ಣ ಪಾಲಿಸ್ಯಾಕರೈಡ್ ಅನ್ನು ಜೀರ್ಣಿಸಬಲ್ಲ ಕಿಣ್ವಗಳನ್ನು ಉತ್ಪಾದಿಸುತ್ತವೆ. ಇದೇ ವೈಜ್ಞಾನಿಕ ತತ್ವವನ್ನು ಆಧಾರವಾಗಿಟ್ಟುಕೊಂಡು ಐಐಎಸ್‌ಸಿ ತಂಡವು ಹಸುವಿನ ಕರುಳಿನ ಸೂಕ್ಷ್ಮಜೀವಿಗಳ ಜಿನೋಮಿಕ್ ಮಾಹಿತಿಯನ್ನು ವಿಶ್ಲೇಷಿಸಿತು.
ಈ ಅಧ್ಯಯನದಲ್ಲಿ ಸಂಶೋಧಕರು CRhAB (Cow Rumen Hydrolase against A. baumannii) ಎಂಬ ಕಿಣ್ವವನ್ನು ಗುರುತಿಸಿದರು. ಈ ಕಿಣ್ವವು ಬ್ಯಾಕ್ಟೀರಿಯಾದ ಬಯೋಫಿಲ್ಮ್ ರಚನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದರ ಜೊತೆಗೆ, ಬಯೋಫಿಲ್ಮ್ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಮುಖ ಜೀನ್‌ಗಳ ಚಟುವಟಿಕೆಯನ್ನು ಕೂಡ ಕುಂಠಿತಗೊಳಿಸಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.
ಬ್ಯಾಕ್ಟೀರಿಯಾವನ್ನು ಕೊಲ್ಲದೆ ರಕ್ಷಣಾ ಕವಚವನ್ನೇ ಒಡೆಯುತ್ತದೆ
ಅಧ್ಯಯನದ ಪ್ರಮುಖ ಲೇಖಕಿ ಹಾಗೂ ಐಐಎಸ್‌ಸಿಯ ಮಾಜಿ ಪಿಎಚ್‌ಡಿ ವಿದ್ಯಾರ್ಥಿನಿ ರೇಷ್ಮಾ ರಾಮಕೃಷ್ಣನ್ ಅವರ ಪ್ರಕಾರ, ಈ ಕಿಣ್ವವು ಬ್ಯಾಕ್ಟೀರಿಯಾಗಳನ್ನು ನೇರವಾಗಿ ಕೊಲ್ಲುವುದಿಲ್ಲ. ಬದಲಿಗೆ, ಅವುಗಳ ಸುತ್ತಲಿರುವ ಬಯೋಫಿಲ್ಮ್ ಪದರವನ್ನು ಒಡೆದು ಬ್ಯಾಕ್ಟೀರಿಯಾದ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.
ಇದರಿಂದ ಈಗಾಗಲೇ ಬಳಕೆಯಲ್ಲಿರುವ ಪ್ರತಿಜೀವಕ (Antibiotics) ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ, ಬ್ಯಾಕ್ಟೀರಿಯಾಗಳಲ್ಲಿ ಹೊಸ ಔಷಧ ನಿರೋಧಕ ಗುಣಗಳು ಬೆಳೆಯುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಮತ್ತೊಂದು ಅಪಾಯಕಾರಿ ಬ್ಯಾಕ್ಟೀರಿಯಾದ ಮೇಲೂ ಪರಿಣಾಮಕಾರಿ
CRhAB ಕಿಣ್ವವು ಕ್ಲೆಬ್ಸಿಯೆಲ್ಲಾ ನ್ಯುಮೋನಿಯೆ (Klebsiella pneumoniae) ಎಂಬ ಮತ್ತೊಂದು ಅಪಾಯಕಾರಿ ಬ್ಯಾಕ್ಟೀರಿಯಾದ ಬಯೋಫಿಲ್ಮ್‌ಗಳ ಮೇಲೂ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನವು ತಿಳಿಸಿದೆ. ಈ ಎರಡೂ ಬ್ಯಾಕ್ಟೀರಿಯಾಗಳು ಪ್ರತಿಜೀವಕಗಳಿಗೆ ಹೆಚ್ಚಿನ ಪ್ರತಿರೋಧ ತೋರಿಸುವ ESKAPE ಗುಂಪಿನ ರೋಗಕಾರಕಗಳಲ್ಲಿ ಸೇರಿವೆ.
ಐಐಎಸ್‌ಸಿಯ ಸೂಕ್ಷ್ಮಜೀವಶಾಸ್ತ್ರ ಮತ್ತು ಕೋಶಜೀವಶಾಸ್ತ್ರ ವಿಭಾಗದ ಪ್ರೊ. ದೀಪಶಿಖಾ ಚಕ್ರವರ್ತಿ ಅವರ ಪ್ರಕಾರ, ಒಂದೇ ಕಿಣ್ವವು ಎರಡು ವಿಭಿನ್ನ ಅಪಾಯಕಾರಿ ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ.
ಗಾಯಗಳಿಗೆ ಕಿಣ್ವ ಲೇಪಿತ ಗಾಜ್
ಸಂಶೋಧಕರು ಗಾಯದ ಚಿಕಿತ್ಸೆಗೆ CRhAB ಕಿಣ್ವವನ್ನು ಒಳಗೊಂಡ ವಿಶೇಷ ಗಾಜ್ (Gauze) ಪಟ್ಟಿಯನ್ನು ಅಭಿವೃದ್ಧಿಪಡಿಸಿ, ಇಲಿಗಳ ಗಾಯದ ಸೋಂಕಿನ ಮಾದರಿಯಲ್ಲಿ ಪರೀಕ್ಷಿಸಿದರು. ಆರಂಭದಲ್ಲಿ ಇಲಿಗಳು ಗಾಜ್ ಅನ್ನು ತೆಗೆಯಲು ಪ್ರಯತ್ನಿಸಿದ್ದರಿಂದ ಕೆಲವು ಸವಾಲುಗಳು ಎದುರಾದವು. ಬಳಿಕ ಸಂಶೋಧಕರು ಪಟ್ಟಿಯನ್ನು ಸುರಕ್ಷಿತವಾಗಿ ಸ್ಥಿರಗೊಳಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದರು.

ಭವಿಷ್ಯದಲ್ಲಿ ಶ್ವಾಸಕೋಶ ಸೋಂಕುಗಳ ಚಿಕಿತ್ಸೆಯತ್ತ ಹೆಜ್ಜೆ
ಸಂಶೋಧನಾ ತಂಡವು ಈಗ ಮಧುಮೇಹದಿಂದ ಉಂಟಾಗುವ ಕಾಲಿನ ಗಾಯಗಳಂತಹ ಸಂಕೀರ್ಣ ಸೋಂಕುಗಳಿಗೆ ಸೂಕ್ತವಾದ ಪ್ಯಾಚ್‌ ಮಾದರಿಯ ಚಿಕಿತ್ಸಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಜೊತೆಗೆ, ಶ್ವಾಸಕೋಶ ಸೋಂಕುಗಳಿಗೆ ಕಿಣ್ವವನ್ನು ತಲುಪಿಸುವ ಹೊಸ ವಿಧಾನಗಳ ಮೇಲೂ ಅಧ್ಯಯನ ನಡೆಸುತ್ತಿದೆ.
ದೀರ್ಘಾವಧಿಯಲ್ಲಿ ಈ ಕಿಣ್ವವನ್ನು ಇನ್ಹೇಲರ್‌ ಅಥವಾ ನೆಬುಲೈಸರ್‌ ಮೂಲಕ ಶ್ವಾಸಕೋಶಗಳಿಗೆ ತಲುಪಿಸಿ, ಬಯೋಫಿಲ್ಮ್ ರಚನೆಯನ್ನು ತಡೆಯುವ ಹಾಗೂ ಈಗಾಗಲೇ ನಿರ್ಮಾಣವಾಗಿರುವ ಬಯೋಫಿಲ್ಮ್‌ಗಳನ್ನು ಒಡೆಯುವ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.
ಈ ಮಹತ್ವದ ಸಂಶೋಧನೆಯ ಫಲಿತಾಂಶಗಳು ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ ಎನ್‌ಪಿಜೆ ಬಯೋಫಿಲ್ಮಸ್‌ ಮತ್ತು ಮೈಕ್ರೊಬಯೋಮ್ಸ್‌ (npj Biofilms and Microbiomes)ನಲ್ಲಿ ಪ್ರಕಟಗೊಂಡಿವೆ. ಹಸುವಿನ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳಿಂದ ದೊರೆತ ಈ ಕಿಣ್ವವು ಭವಿಷ್ಯದಲ್ಲಿ ಔಷಧ ನಿರೋಧಕ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧದ ಹೋರಾಟದಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement