ಹೊನ್ನಾವರ: ಹೆಂಡತಿಯನ್ನು ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಕತೆ ಕಟ್ಟಿದ್ದ ಗಂಡನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಠಾಣೆ ವ್ಯಾಪ್ತಿಯ ದೊಡ್ಡಗುಂದೆಂಬಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ದೊಡ್ಡಗುಂದ ಗ್ರಾಮದ ಗಣಪತಿ ನಾಯ್ಕ ಬಂಧಿತ ಆರೋಪಿಯಾಗಿದ್ದು, . ಆತನ ಪತ್ನಿ ಮಂಗಲಾ ನಾಯ್ಕ (28) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಆಗಸ್ಟ್ 25ರಂದು ಮಂಗಲಾ ನಾಯ್ಕ ಮೃತಪಟ್ಟಿದ್ದರು. ಬೆಳಗಿನ ಜಾವ ರಕ್ತವಾಂತಿ ಮಾಡಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಮಧ್ಯೆ ಆಕೆ ಮೃತಪಟ್ಟಿದ್ದಾಳೆ ಎಂದು ಗಣಪತಿ ನಾಯ್ಕ ತನ್ನ ಪತ್ನಿಯ ತವರು ಮನೆಯವರಿಗೆ ತಿಳಿಸಿದ್ದ. ಆದರೆ ಮಂಗಲಾ ಅವರ ಸಹೋದರಿ ದಾಂಡೇಲಿಯ ಲಲಿತಾ ಸಚಿನ್ ಗುಂಜಿಕರ್ ಅವರು ತಮ್ಮ ತಂಗಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಮಂಕಿ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಆಗಸ್ಟ್ 25ರಂದು ಬೆಳಗಿನ ಜಾವ 5:30ರ ಸುಮಾರಿಗೆ ಮಂಗಲಾ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಆರೋಪಿಯ ಹೇಳಿಕೆಗೆ ಪೂರಕವಾದ ಯಾವುದೇ ಸಿಸಿಟಿವಿ ದೃಶ್ಯಗಳು ದೊರಕಲಿಲ್ಲ. ಹಾಗೂ ಸಣ್ಣ ಸಾಕ್ಷ್ಯವೂ ಸಿಗಲಿಲ್ಲ. ಇದರಿಂದ ಸಾವಿನ ಬಗ್ಗೆ ಪೊಲೀಸರಿಗೆ ಮತ್ತಷ್ಟು ಅನುಮಾನ ಉಂಟಾಯಿತು. ನಂತರ ತನಿಖೆಯನ್ನು ತೀವ್ರಗೊಳಿಸಿದಾಗ, ಮಂಗಲಾ ಅವರನ್ನು ಆಕೆಯ ಗಂಡನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿ ಗಣಪತಿ ನಾಯ್ಕ ಮದ್ಯದ ವ್ಯಸನಿಯಾಗಿದ್ದು, ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಆಗಸ್ಟ್ 25ರಂದು ಬೆಳಗಿನ ಜಾವ ಸುಮಾರು 3:30ರ ವೇಳೆಗೆ ಗಣಪತಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಕೋಪಗೊಂಡ ಆತ ಮೊದಲು ಪತ್ನಿಯ ಕೆನ್ನೆಗೆ ಹೊಡೆದಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ಗಿರೀಶ ಹಾಗೂ ಸಿಪಿಐ ಜಗದೀಶ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಕುಮಾರ ಕಾಂಬ್ಳೆ ನೇತೃತ್ವದ ಪೊಲೀಸ್ ತಂಡ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸಿದೆ. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ