ನೇಪಾಳದ ಭೀಕರ ಪ್ರವಾಹಕ್ಕೂ ಮುನ್ನವೇ ಸಿಕ್ಕಿತ್ತು ಎಚ್ಚರಿಕೆಯ ಗಂಟೆ : 5 ತಿಂಗಳ ಹಿಂದೆ 2 ವರದಿಗಳು ನೀಡಿದ್ದ ಎಚ್ಚರಿಕೆ ಏನು ಗೊತ್ತೆ ?

ನವದೆಹಲಿ: ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ಕರಗುತ್ತಿರುವ ವೇಗ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಹಿಮನದಿಗಳ ಹಿಮ ಕರಗುವಿಕೆಯ ಪ್ರಮಾಣ ದುಪ್ಪಟ್ಟಾಗಿದೆ ಎಂದು ಅಂತರ್‌ ಸರ್ಕಾರಿ ಜ್ಞಾನ ಮತ್ತು ಕಲಿಕಾ ಕೇಂದ್ರವಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್ (ICIMOD) ಐದು ತಿಂಗಳ ಹಿಂದೆಯೇ ತನ್ನ ಎರಡು ವರದಿಗಳಲ್ಲಿ ಎಚ್ಚರಿಸಿತ್ತು.
ಕಠ್ಮಂಡುವಿನಲ್ಲಿ ಕೇಂದ್ರ ಕಚೇರಿ ಇರುವ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್ (ICIMOD) ಸಂಸ್ಥೆಯಲ್ಲಿ ಭಾರತ, ನೇಪಾಳ, ಭೂತಾನ್ ಹಾಗೂ ಚೀನಾ ಸೇರಿದಂತೆ ಹಿಂದೂ ಕುಶ್ ಹಿಮಾಲಯ ಪ್ರದೇಶದ ಹಲವು ದೇಶಗಳು ಸದಸ್ಯರಾಗಿವೆ. ಈ ವರ್ಷದ ಮಾರ್ಚ್‌ನಲ್ಲಿ ಪ್ರಕಟವಾದ ಎರಡು ವರದಿಗಳ ಪ್ರಕಾರ, 1975ರಿಂದ ಈವರೆಗೆ ಹಿಮನದಿಗಳ ಹಿಮದ ದಪ್ಪದಲ್ಲಿ ಗರಿಷ್ಠ 27 ಮೀಟರ್‌ವರೆಗೆ ಕರಗಿವೆ.
ಹಿಮನದಿಗಳ ಈ ವೇಗದ ಕರಗುವಿಕೆಯು ಮುಂದಿನ ದಿನಗಳಲ್ಲಿ ಅತ್ಯಂತ ಗಂಭೀರ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಏಷ್ಯಾದ ‘ವಾಟರ್ ಟವರ್ಸ್ ಆಫ್ ಏಷ್ಯಾ’ ಎಂದು ಕರೆಯಲಾಗುವ ಹಿಮಾಲಯದ ಹಿಮನದಿಗಳಿಂದ ಕರಗುವ ನೀರನ್ನು ಅವಲಂಬಿಸಿರುವ ಸುಮಾರು 200 ಕೋಟಿ ಜನರ ಭವಿಷ್ಯಕ್ಕೆ ಇದು ದೊಡ್ಡ ಆತಂಕವಾಗಿದೆ ಎಂದು ವರದಿಗಳು ಸೂಚಿಸಿವೆ.

ನೇಪಾಳ ಪ್ರವಾಹಕ್ಕೂ ಹಿಮನದಿಗಳ ಕರಗುವಿಕೆಗೂ ಏನು ನಂಟು?
ಎರಡು ದಿನಗಳ ಹಿಂದೆ ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಈವರೆಗೆ 579 ಮಂದಿ ಮೃತಪಟ್ಟಿರುವ ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ವಿಜ್ಞಾನಿಗಳು ಮತ್ತು ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಆದರೆ, ಹಲವಾರು ತಜ್ಞರು ಈ ದುರಂತಕ್ಕೆ ಹಲವು ಅಂಶಗಳ ಸಂಯೋಜನೆಯೇ ಕಾರಣವಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಅತ್ಯಂತ ಆತಂಕಕಾರಿ ಅಂಶವೆಂದರೆ 4,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿಯೂ ಹಿಮಪಾತದ ಬದಲಿಗೆ ಮಳೆ ಸುರಿಯುತ್ತಿದೆ ಎಂಬುದು ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ ಇಂತಹ ಅತಿ ಎತ್ತರದ ಪ್ರದೇಶಗಳಲ್ಲಿ ಹಿಮ ಬೀಳಬೇಕು, ಆದರೆ, ಅಲ್ಲಿ ಮಳೆಯಾಗುತ್ತಿರುವುದು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಐಸಿಐಎಂಒಡಿ (ICIMOD) ಮಾರ್ಚ್‌ನಲ್ಲಿ ಪ್ರಕಟಿಸಿದ್ದ ಎರಡು ವರದಿಗಳ ಪ್ರಕಾರ, 1990ರಿಂದ 2020ರ ಅವಧಿಯಲ್ಲಿ ಹಿಂದೂ ಕುಶ್ ಹಿಮಾಲಯದ ಹಿಮನದಿಗಳು ತಮ್ಮ ಒಟ್ಟು ವಿಸ್ತೀರ್ಣದ ಸುಮಾರು ಶೇ.12ರಷ್ಟು ಹಾಗೂ ಅಂದಾಜು ಮಾಡಲಾದ ಹಿಮದ ಸಂಗ್ರಹದ ಶೇ.9ರಷ್ಟನ್ನು ಕಳೆದುಕೊಂಡಿವೆ.

‘ಕ್ರಿಟಿಕಲ್ ಟಿಪ್ಪಿಂಗ್ ಪಾಯಿಂಟ್’ನತ್ತ ಹಿಮಾಲಯ?
ಐಸಿಐಎಂಒಡಿಯ ಎರಡು ವರದಿಗಳಲ್ಲಿ ಒಂದಾದ ಎಚ್‌ಕೆಎಚ್‌ ಗ್ಲೇಸಿಯರ್‌ ಔಟ್‌ಲುಕ್‌ 2026 (HKH Glacier Outlook 2026) ವರದಿಯು ಮೇಲ್ವಿಚಾರಣೆಯಲ್ಲಿರುವ 38 ಹಿಮನದಿಗಳ ಮಾಹಿತಿಯನ್ನು ವಿಶ್ಲೇಷಿಸಿದೆ. ಈ ಅಧ್ಯಯನದಲ್ಲಿ, 2000ನೇ ಇಸವಿಯಿಂದ ಹಿಮನದಿಗಳ ಕರಗುವಿಕೆ ಅಥವಾ ಹಿಮ ನಷ್ಟದ ಪ್ರಮಾಣ ದುಪ್ಪಟ್ಟಾಗಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಇದು ಹಿಮಾಲಯದ ಕ್ರಯೋಸ್ಫಿಯರ್‌—ಅಂದರೆ ಹಿಮ ಮತ್ತು ಹಿಮನದಿಗಳಿಂದ ಕೂಡಿರುವ ಪ್ರದೇಶದ ಕೆಲವು ಭಾಗಗಳು ಮತ್ತೆ ಬದಲಾಯಿಸಲಾಗದ ಅಥವಾ ಮರಳಿ ಹಿಂದಿನ ಸ್ಥಿತಿಗೆ ಬರಲಾರದ ರೀತಿಯಲ್ಲಿ ಹಿಮನದಿಯು ‘ನಿರ್ಣಾಯಕ ಬಿಂದು’(Critical Tipping Point)ವನ್ನು ಸಮೀಪಿಸುತ್ತಿರಬಹುದು ಎಂಬ ಬಲವಾದ ಸೂಚನೆಯಾಗಿದೆ ಎಂದು ವರದಿ ಹೇಳಿದೆ.
ಆದರೆ, ಹಿಮನದಿಗಳ ಮೇಲ್ವಿಚಾರಣೆಯಲ್ಲಿಯೂ ದೊಡ್ಡ ಪ್ರಮಾಣದ ದತ್ತಾಂಶದ ಕೊರತೆಯಿದೆ ಎಂದು ಐಸಿಐಎಂಒಡಿ ಎಚ್ಚರಿಸಿದೆ. ಮೇಲ್ವಿಚಾರಣೆಯಲ್ಲಿರುವ 38 ಹಿಮನದಿಗಳ ಪೈಕಿ ಕೇವಲ 7 ಹಿಮನದಿಗಳು ಮಾತ್ರ ವರ್ಲ್ಡ್ ಗ್ಲೇಸಿಯರ್ ಮಾನಿಟರಿಂಗ್ ಸರ್ವಿಸ್ (WGMS) ನ ಜಾಗತಿಕ ಮಾನದಂಡಗಳಿಗೆ ಅನುಗುಣವಾದ ಮೇಲ್ವಿಚಾರಣೆಯಲ್ಲಿದೆ ಎಂದು ಅದು ಹೇಳಿದೆ. ಹಿಮನದಿಗಳು ಹೆಚ್ಚಾಗಿ ಇರುವ ಕಾರಕೋರಂ, ಸಿಕ್ಕಿಂ, ಜಾನ್ಸ್ಕರ್ ಮತ್ತು ಭೂತಾನ್ ಪ್ರದೇಶಗಳು ಇನ್ನೂ ಬಹುತೇಕ ಮೇಲ್ವಿಚಾರಣೆಯಿಂದ ಹೊರಗಿವೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ʼನ್ಯಾಶನಲ್‌ ಕಾನ್ಫರೆನ್ಸ್ʼನಲ್ಲಿ ಭಿನ್ನಮತ ಸ್ಫೋಟ; ಪಕ್ಷ-ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ರೂಹುಲ್ಲಾ ಮೆಹ್ದಿ ನಿರ್ಧಾರ

ನೇಪಾಳ ಪ್ರವಾಹಕ್ಕೆ ಹಿಮ-ಬಂಡೆ ಕುಸಿತ ಕಾರಣವೇ?
ನೇಪಾಳದಲ್ಲಿ ಸಂಭವಿಸಿದ ಇತ್ತೀಚಿನ ಪ್ರವಾಹದ ಹಿಂದೆ ಅತಿ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಹಿಮ-ಬಂಡೆಗಳ ಕುಸಿತ ಕಾರಣವಾಗಿರಬಹುದೇ ಎಂಬುದನ್ನು ಐಸಿಐಎಂಒಡಿ ಸಂಶೋಧಕರು ಪರಿಶೀಲಿಸುತ್ತಿದ್ದಾರೆ.
ಅತಿ ಎತ್ತರದ ಪ್ರದೇಶದಿಂದ ದೊಡ್ಡ ಪ್ರಮಾಣದ ಹಿಮ ಬಂಡೆಗಳು ಭೋಟೆ ಕೋಶಿ ನದಿಯ ಉಪನದಿ ಲೆಂಡೆ ಖೋಲಾ ಎಂಬ ಹೊಳೆಗೆ ಕುಸಿದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇದರಿಂದ ನೀರು, ಕೆಸರು ಮತ್ತು ಬೃಹತ್ ಬಂಡೆಗಳನ್ನು ಒಳಗೊಂಡ ದಿಢೀರ್ ಪ್ರವಾಹದ ಅಲೆ ಕೆಳಭಾಗದ ಪ್ರದೇಶಗಳತ್ತ ಭಾರೀ ವೇಗದಲ್ಲಿ ಹರಿದು ಬಂದಿರಬಹುದು ಎಂಬ ಸಾಧ್ಯತೆಯ ಬಗ್ಗೆ ಸಂಶೋಧಕರು ಪರಿಶೀಲಿಸುತ್ತಿದ್ದಾರೆ.
“ಇದು ಹವಾಮಾನ ಬದಲಾವಣೆಗೆ ಸಂಬಂಧಿಸಿದೆ. ಏಕೆಂದರೆ ಹಿಮಾಲಯದಲ್ಲಿ ಹಿಮದ ಹೊದಿಕೆಗಳು ಕಡಿಮೆಯಾಗುತ್ತಿವೆ, ಹಿಮನದಿಗಳು ಕಡಿಮೆಯಾಗುತ್ತಿವೆ, ಹೆಚ್ಚು ಕಲ್ಲಿನ ಅಥವಾ ಬಂಜರು ಪ್ರದೇಶಗಳು ಕಾಣಿಸಿಕೊಳ್ಳುತ್ತಿವೆ – ಅವು ಹೆಚ್ಚಿನ ಶಾಖವನ್ನು ಹೀರಿಕೊಳ್ಳುತ್ತವೆ, ಇದು ಇಳಿಜಾರು ಪ್ರದೇಶಗಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ” ಎಂದು ಐಸಿಐಎಂಒಡಿಯ ಹಿರಿಯ ಕ್ರಯೋಸ್ಫಿಯರ್ ತಜ್ಞ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದೋರ್‌ನ ಅಸೋಸಿಯೇಟ್ ಪ್ರೊಫೆಸರ್ ಮೊಹಮ್ಮದ್ ಫಾರೂಕ್ ಅಜಮ್ ಹೇಳಿದ್ದಾರೆ.
ಪ್ರವಾಹಕ್ಕೆ ನಿಖರ ಕಾರಣ ಇನ್ನೂ ಖಚಿತವಾಗಿಲ್ಲವಾದರೂ, ಹಿಮನದಿಗಳಲ್ಲಿ ಕಡಿಮೆಯಾಗುತ್ತಿರುವ ಹಿಮದ ಹೊದಿಕೆ ಹಾಗೂ ಪರ್ಮಾಫ್ರಾಸ್ಟ್‌ (ಶಾಶ್ವತವಾಗಿ ಹೆಪ್ಪುಗಟ್ಟಿರುವ ನೆಲ) ಕರಗುವಿಕೆ ಪ್ರಮುಖ ಕಾರಣಗಳಾಗಿರಬಹುದೆಂಬ ಸೂಚನೆಗಳು ಹೆಚ್ಚು ಕಂಡುಬರುತ್ತಿವೆ ಎಂದು ಅಜಂ ಹೇಳಿದ್ದಾರೆ.

ಧ್ರುವ ಪ್ರದೇಶಗಳ ಹೊರಗೆ ಅತಿದೊಡ್ಡ ಹಿಮ ಸಂಗ್ರಹ
ಭೂಮಿಯ ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ, ಜಗತ್ತಿನ ಅತಿದೊಡ್ಡ ಹಿಮ ಸಂಗ್ರಹ ಹಿಂದೂ ಕುಶ್ ಪ್ರದೇಶದ ಹಿಮಾಲಯದಲ್ಲಿದೆ. ಐಸಿಐಎಂಒಡಿಯ ಪ್ರಕಾರ, ಈ ಪ್ರದೇಶದಲ್ಲಿ 63,700ಕ್ಕೂ ಹೆಚ್ಚು ಹಿಮನದಿಗಳು ಇದ್ದು, ಅವು 55,000 ಚದರ ಕಿಲೋಮೀಟರ್‌ಗೂ ಹೆಚ್ಚು ಪ್ರದೇಶವನ್ನು ಆವರಿಸಿವೆ. ಈ ಹಿಮನದಿಗಳು ಏಷ್ಯಾದ 10 ಪ್ರಮುಖ ನದಿ ವ್ಯವಸ್ಥೆಗಳಿಗೆ ನೀರಿನ ಮೂಲವಾಗಿವೆ. ಅಲ್ಲದೆ, ಕೋಟ್ಯಂತರ ಜನರ ಆಹಾರ, ನೀರು, ಇಂಧನ ಹಾಗೂ ಜೀವನೋಪಾಯದ ಭದ್ರತೆಯನ್ನು ಅವು ಬೆಂಬಲಿಸುತ್ತವೆ.
ವಿಶೇಷವಾಗಿ, 4,500ರಿಂದ 6,000 ಮೀಟರ್‌ ಎತ್ತರದಲ್ಲಿರುವ ಹಿಮನದಿ ಪ್ರದೇಶದ ಕನಿಷ್ಠ ಶೇ.78ರಷ್ಟು ಭಾಗವು ಎತ್ತರಕ್ಕೆ ಅನುಗುಣವಾಗಿ ಹೆಚ್ಚುತ್ತಿರುವ ತಾಪಮಾನ (Elevation-dependent warming)ಕ್ಕೆ ತೀವ್ರವಾಗಿ ಒಡ್ಡಿಕೊಂಡಿದೆ ಎಂದು ಐಸಿಐಎಂಒಡಿ ಮಾರ್ಚ್‌ನಲ್ಲಿ ಪ್ರಕಟಿಸಿದ ವರದಿಗಳಲ್ಲಿ ತಿಳಿಸಿತ್ತು.
ಈ ವರದಿಗಳ ಶೀರ್ಷಿಕೆಗಳು ಮಾರ್ಚ್ ವರದಿಗಳಲ್ಲಿ ‘1990 ರಿಂದ 2020 ರವರೆಗೆ ಹಿಂದೂ ಕುಶ್ ಹಿಮಾಲಯ ಪ್ರದೇಶದಲ್ಲಿ ಹಿಮನದಿಗಳ ಬದಲಾವಣೆಯ ಚಲನಶಾಸ್ತ್ರ’ ಹಾಗೂ ‘HKH ಹಿಮನದಿ ಔಟ್‌ಲುಕ್ 2026: 50 ವರ್ಷಗಳ ಹಿಮಾಲಯನ್ ಹಿಮನದಿ ಮೇಲ್ವಿಚಾರಣೆಯ ಒಳನೋಟಗಳು’ (Changing Dynamics of Glaciers in the Hindu Kush Himalaya Region from 1990 to 2020’ ಹಾಗೂ ‘HKH Glacier Outlook 2026: Insights from 50 Years of Himalayan Glacier Monitoring) ಆಗಿವೆ.

ಪ್ರಮುಖ ಸುದ್ದಿ :-   ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ವೇಗ : ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ ನಿಲೇಕಣಿ ನೇತೃತ್ವದ ಕಾರ್ಯಪಡೆ

ಪೂರ್ವ ಹಿಮಾಲಯದಲ್ಲಿ ಶೇ.33ರಷ್ಟು ಹಿಮನದಿ ವಿಸ್ತೀರ್ಣದಲ್ಲಿ ಕುಸಿತ
ಐಸಿಐಎಂಒಡಿ ವರದಿಗಳು ಹಿಮನದಿಗಳ ಕುಸಿತವು ಎಲ್ಲಾ ಪ್ರದೇಶಗಳಲ್ಲೂ ಒಂದೇ ರೀತಿಯಲ್ಲಿ ಸಂಭವಿಸುತ್ತಿಲ್ಲ ಎಂಬುದನ್ನೂ ಎತ್ತಿ ತೋರಿಸಿವೆ. ಪೂರ್ವದ ಹೆಂಗ್ಡುವಾನ್ ಶಾನ್ ಪರ್ವತ ಪ್ರದೇಶದಲ್ಲಿ ಹಿಮನದಿಗಳ ವಿಸ್ತೀರ್ಣ ಕಡಿಮೆಯಾಗುತ್ತಿರುವ ಪ್ರಮಾಣ ಅತ್ಯಧಿಕವಾಗಿದ್ದು, ಕೆಲವು ಪ್ರದೇಶಗಳಲ್ಲಿ ಕೇವಲ ಮೂರು ದಶಕಗಳಲ್ಲೇ ಹಿಮನದಿ ವಿಸ್ತೀರ್ಣದ ಶೇ.33ರವರೆಗೆ ಕಡಿಮೆಯಾಗಿದೆ ಅಥವಾ ಕರಗಿದೆ.
ಆದರೆ ಒಟ್ಟಾರೆ ಚದರ ಕಿಲೋಮೀಟರ್‌ಗಳ ಲೆಕ್ಕದಲ್ಲಿ ಅತಿ ಹೆಚ್ಚು ಹಿಮನದಿ ಪ್ರದೇಶದ ಕ್ಷೀಣಿಸುವಿಕೆಯು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಹಿಂದೂ ಕುಶ್ ಹಿಮಾಲಯ ಪ್ರದೇಶದ ಒಟ್ಟು ಹಿಮನದಿಗಳ ಪೈಕಿ ಶೇ.74ಕ್ಕೂ ಹೆಚ್ಚು ಹಿಮನದಿಗಳು ಈ ಮೂರು ನದಿ ಜಲಾನಯನ ಪ್ರದೇಶಗಳಲ್ಲೇ ಇವೆ.
ಇದರಿಂದ ಈ ಪ್ರದೇಶಗಳ ಹಿಮನದಿಗಳು ಹವಾಮಾನ ಬದಲಾವಣೆಗೆ ಅತ್ಯಂತ ದುರ್ಬಲವಾಗಿದ್ದು, ಅವುಗಳ ಕ್ಷೀಣಿಸುವಿಕೆ ಏಷ್ಯಾದ ನೀರು, ಆಹಾರ, ಇಂಧನ ಮತ್ತು ಕೋಟ್ಯಂತರ ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಐಸಿಐಎಂಒಡಿ (ICIMOD) ಎಚ್ಚರಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement