ನೇಪಾಳ : ಪ್ರವಾಹದಲ್ಲಿ ಕೊಚ್ಚಿಹೋದ ಬ್ಯಾಂಕ್ ಲಾಕರ್ ; ಹಣಕ್ಕಾಗಿ ಮುಗಿಬಿದ್ದು ಲಾಕರ್‌ ಒಡೆದು 58 ಲಕ್ಷ ರೂ. ದೋಚಿದ ಜನ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ದುರಂತದಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 2500 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 537 ವಿದೇಶಿ ಪ್ರಜೆಗಳಿದ್ದು, ಅವರಲ್ಲಿ 320 ಮಂದಿ ಭಾರತೀಯರು ಸೇರಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದ್ದು, ಮತ್ತಷ್ಟು ಅಪಾಯದ ಸಾಧ್ಯತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ನಡುವೆ, ಪ್ರವಾಹದ ಭೀಕರತೆಯ ನಡುವೆಯೇ ಧಾದಿಂಗ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ವ್ಯಾಪಕ ಗಮನ ಸೆಳೆದಿದೆ. ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಬ್ಯಾಂಕ್‌ನ ಸೇಫ್ ಲಾಕರ್ ಅನ್ನು ಒಡೆದು ಅದರೊಳಗಿದ್ದ ಹಣವನ್ನು ದೋಚಿದ ಆರೋಪದಲ್ಲಿ 29 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಧಿಕಾರಿಗಳ ಮಾಹಿತಿಯ ಪ್ರಕಾರ, ರಸುವಾ ಜಿಲ್ಲೆಯ ಭೋಟೆಕೋಶಿ ಪ್ರದೇಶದಲ್ಲಿದ್ದ ಬ್ಯಾಂಕ್‌ ಲಾಕರ್‌ ಪ್ರವಾಹದ ಹೊಡೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಬಳಿಕ ಅದು ಧಾದಿಂಗ್ ಜಿಲ್ಲೆಯ ಗಲ್ಛಿ ಗ್ರಾಮೀಣ ನಗರಪಾಲಿಕೆಯ-4 ವ್ಯಾಪ್ತಿಯ ಬೆಲ್ಖುಖೋಲಾ ಸಮೀಪದ ತ್ರಿಶೂಲಿ ನದಿಯ ದಡದಲ್ಲಿ ಪತ್ತೆಯಾಗಿದೆ. ಬ್ಯಾಂಕ್‌ ಲಾಕರ್‌ ಪತ್ತೆಯಾಗುತ್ತಿದ್ದಂತೆಯೇ ಅದರೊಳಗಿದ್ದ ಹಣ ದೋಚಲು ಸ್ಥಳೀಯರು ಮುಗಿಬಿದ್ದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪ್ರಮುಖ ಸುದ್ದಿ :-   ಅಮೆರಿಕ-ವೆನಿಜುವೆಲಾ ಮಧ್ಯೆ ವಿಶ್ವದ ಅತಿದೊಡ್ಡ ತೈಲ ಒಪ್ಪಂದ : ಡೊನಾಲ್ಡ್‌ ಟ್ರಂಪ್‌ ಘೋಷಣೆ ; ಏನಿದು ಒಪ್ಪಂದ ?

ಕೆಲವರು ಲಾಕರ್‌ ಅನ್ನು ಒಡೆದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಧಾದಿಂಗ್ ಪೊಲೀಸರಿಗೆ ಲಭಿಸಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ವಿಶೇಷ ತಂಡವನ್ನು ಕಳುಹಿಸಿ ತನಿಖೆ ಆರಂಭಿಸಿದರು.
ಪ್ರಾಥಮಿಕ ತನಿಖೆಯ ವೇಳೆ 29 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಅವರ ಬಳಿಯಿಂದ ಒಟ್ಟು 92,68,505 ನೇಪಾಳಿ ರೂಪಾಯಿ (ಭಾರತೀಯ ಕರೆನ್ಸಿಯಲ್ಲಿ ಸುಮಾರು ₹57-58 ಲಕ್ಷ) ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಹೆಚ್ಚಿನವರು ಗಲ್ಛಿ-4ರ ಮಾಸ್ತಾರ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಇನ್ನು ಕೆಲವರು ಗಲ್ಛಿ-6ರ ಆಡಂಘಾಟ್ ಹಾಗೂ ಸಿದ್ಧಲೇಖ್-7ರ ಆಡಮ್ತಾರ್ ಪ್ರದೇಶದವರಾಗಿದ್ದು, ಮತ್ತಿತರರು ಮೂಲತಃ ಚಿತ್ವನ್ ಮತ್ತು ಪರ್ಸಾ ಜಿಲ್ಲೆಗಳವರಾಗಿದ್ದರೂ ಪ್ರಸ್ತುತ ಧಾದಿಂಗ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಬಂಧಿತರ ವಯಸ್ಸು 19ರಿಂದ 49 ವರ್ಷಗಳ ನಡುವೆ ಇದೆ ಎಂದು ತಿಳಿದುಬಂದಿದೆ.
ವಶಪಡಿಸಿಕೊಂಡಿರುವ ಹಣದ ಮೂಲ ಹಾಗೂ ಅದು ಬ್ಯಾಂಕ್‌ನ ಸೇಫ್‌ನಲ್ಲಿದ್ದ ಹಣವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಸಾಧ್ಯತೆಯ ಕುರಿತೂ ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಮೈ ಜುಂ ಎನ್ನುವ ವಿಡಿಯೋ : ಸುತ್ತಲಿನ ಕಟ್ಟಡಗಳನ್ನು ನುಂಗಿದ ನೇಪಾಳದ ರಕ್ಕಸ ಪ್ರವಾಹ ; ಆದ್ರೆ ಅಚಲವಾಗಿ ನಿಂತ ಒಂದು ಮನೆ...!

ಮೃತರ ಸಂಖ್ಯೆ 626ಕ್ಕೆ ಏರಿಕೆ
ಇದರ ಮಧ್ಯೆ, ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ನಿಯಂತ್ರಣ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಶನಿವಾರ ಪ್ರವಾಹ ದುರಂತಕ್ಕೆ ಸಂಬಂಧಿಸಿದ ಪರಿಷ್ಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಪ್ರಾಧಿಕಾರದ ಇತ್ತೀಚಿನ ವರದಿ ಪ್ರಕಾರ, ದೇಶದಲ್ಲಿ ನಾಪತ್ತೆಯಾಗಿರುವವರ ಸಂಖ್ಯೆ 2,426ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 626ಕ್ಕೆ ತಲುಪಿದೆ.
ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ್ದ ವರದಿಯಲ್ಲಿ 1,924 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ನಂತರದ ಮಾಹಿತಿ ಸಂಗ್ರಹಣೆಯಲ್ಲಿ ನಾಪತ್ತೆಯಾದವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿವೆ ಎಂದು ಪ್ರಾಧಿಕಾರ ತಿಳಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement