ಎಸ್‌ಸಿಒ ಶೃಂಗಸಭೆಯ ಮುಖ್ಯಸ್ಥರ ಗ್ರುಪ್‌ ಫೋಟೊದಿಂದ ಪ್ರಧಾನಿ ಮೋದಿ ಫೋಟೊ ಕಟ್‌ ಮಾಡಿ ಪ್ರಕಟಿಸಿದ ಪಾಕಿಸ್ತಾನ ಪಿಎಂಒ !

ಬಿಶ್ಕೆಕ್ (ಕಿರ್ಗಿಸ್ತಾನ್): ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ವೇಳೆ ತೆಗೆದ ಅಧಿಕೃತ ಗ್ರೂಪ್ ಫೋಟೋವನ್ನು ಪಾಕಿಸ್ತಾನದ ಪ್ರಧಾನಿ ಕಚೇರಿ (PMO) ಎಡಿಟ್‌ ಮಾಡಿ ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಫೋಟೋದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಐವರು ನಾಯಕರನ್ನು ಕತ್ತರಿಸಿ ತೆಗೆದುಹಾಕಲಾಗಿದ್ದು, ಆ ಮೂಲಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಚಿತ್ರದ ಮಧ್ಯಭಾಗಕ್ಕೆ ಸಮೀಪದಲ್ಲಿರುವಂತೆ ತೋರಿಸಲಾಗಿತ್ತು.
ವಿಶೇಷವೆಂದರೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನೂ ಪಾಕಿಸ್ತಾನದ ಪಿಎಂಒ ಕೇರಿ ಹಂಚಿಕೊಂಡ ಈ ಎಡಿಟ್‌ ಮಾಡಿದ ಚಿತ್ರದಿಂದ ಹೊರಗಿಡಲಾಗಿತ್ತು. ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮ ಮಾತುಕತೆಗಳಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿದ್ದರೂ, ಪಾಕಿಸ್ತಾನದ ಪ್ರಧಾನಿ ಕಚೇರಿ ಪ್ರಕಟಿಸಿದ ಈ ಗ್ರೂಪ್ ಫೋಟೋದಲ್ಲಿ ಪೆಜೆಶ್ಕಿಯನ್ ಅವರನ್ನು ತೆಗೆದುಹಾಕಿರುವುದು ಹಲವು ಪ್ರಶ್ನೆಗಳನ್ನು ಎತ್ತಿದೆ.

ಪಾಕಿಸ್ತಾನದ ಪ್ರಧಾನಿ ಕಚೇರಿ ತನ್ನ ಎಕ್ಸ್ (X) ಖಾತೆಯಲ್ಲಿ, “2026ರ ಸೆಪ್ಟೆಂಬರ್ 1ರಂದು ಕಿರ್ಗಿಸ್ತಾನದ ಬಿಶ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಮುಹಮ್ಮದ್ ಶೆಹಬಾಜ್ ಷರೀಫ್ ಇತರ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಗ್ರೂಪ್ ಫೋಟೋದಲ್ಲಿ ಪಾಲ್ಗೊಂಡಿದ್ದಾರೆ” ಎಂದು ಬರೆದು ಈ ಎಡಿಟ್‌ ಮಾಡಿದ ಚಿತ್ರವನ್ನು ಪ್ರಕಟಿಸಿತ್ತು.
ಆದರೆ, ಭಾರತದ ಪ್ರಧಾನಿ ಕಚೇರಿ ಹಂಚಿಕೊಂಡಿದ್ದ ಮೂಲ ಚಿತ್ರದಲ್ಲಿ ಪಾಲ್ಗೊಂಡಿದ್ದ ಎಲ್ಲ ಸದಸ್ಯ ರಾಷ್ಟ್ರಗಳ ನಾಯಕರು ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ಶೆಹಬಾಜ್ ಷರೀಫ್ ಬಲಭಾಗದಿಂದ ನಾಲ್ಕನೇ ಸ್ಥಾನದಲ್ಲಿದ್ದು, ಚಿತ್ರದ ಮಧ್ಯಭಾಗದಲ್ಲಿರಲಿಲ್ಲ. ಇದರಿಂದ ಪಾಕಿಸ್ತಾನದ ಪ್ರಧಾನಿ ಕಚೇರಿ ಉದ್ದೇಶಪೂರ್ವಕವಾಗಿ ಚಿತ್ರವನ್ನು ಕತ್ತರಿಸಿ ಪ್ರಕಟಿಸಿದೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದವು.
ವಿವಾದ ತೀವ್ರವಾಗುತ್ತಿದ್ದಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ವೈಯಕ್ತಿಕ ಎಕ್ಸ್ ಖಾತೆಯಲ್ಲಿ ಎಲ್ಲ ದೇಶಗಳ ಪ್ರಮುಖರು ಇದ್ದ, ಎಡಿಟ್‌ ಮಾಡದ ಮೂಲ ಚಿತ್ರವನ್ನು ಮರುಪ್ರಕಟಿಸಿದರು. ಇದರೊಂದಿಗೆ ಮೋದಿ ಸೇರಿದಂತೆ ಮೊದಲು ತೆಗೆದುಹಾಕಲಾಗಿದ್ದ ಎಲ್ಲ ನಾಯಕರು ಮತ್ತೆ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ ಆರಂಭದಲ್ಲಿ ಚಿತ್ರವನ್ನು ಏಕೆ ಸಂಪಾದಿಸಲಾಗಿತ್ತು ಎಂಬುದರ ಬಗ್ಗೆ ಪಾಕಿಸ್ತಾನದ ಪ್ರಧಾನಿ ಕಚೇರಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನಾಕಾರರ ವಿರುದ್ಧದ ಎಲ್ಲ ಎಫ್‌ಐಆರ್‌ ರದ್ದು ಮಾಡಿದ ಸುಪ್ರೀಂ ಕೋರ್ಟ್‌ ; ಆದರೆ ಕೆಲವರಿಗೆ ವಿನಾಯಿತಿ ಇಲ್ಲ...

ಈ ಫೋಟೋ ವಿವಾದವು ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆಯೇ ನಡೆದಿದೆ. ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ “ದ್ವಂದ್ವ ಮಾನದಂಡಗಳಿಗೆ ಅವಕಾಶ ಇರಬಾರದು” ಎಂದು ಹೇಳಿ, ಭಯೋತ್ಪಾದನೆಗೆ ಹಣಕಾಸು ನೆರವು, ನೇಮಕಾತಿ ಹಾಗೂ ಸುರಕ್ಷಿತ ಆಶ್ರಯ ಒದಗಿಸುವ ಸಂಪೂರ್ಣ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವಂತೆ ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.
ಮೋದಿ ಅವರ ಭಾಷಣದ ವೇಳೆ ಸಭಾಂಗಣದಲ್ಲಿ ಹಾಜರಿದ್ದ ಶೆಹಬಾಜ್ ಷರೀಫ್, ತಮ್ಮ ಭಾಷಣದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ನೀಡಿರುವ ತ್ಯಾಗಗಳನ್ನು ಪ್ರಸ್ತಾಪಿಸಿದರು. ಜೊತೆಗೆ, ಸಿಂಧು ಜಲ ಒಪ್ಪಂದದ ವಿಷಯವನ್ನು ಪ್ರಸ್ತಾಪಿಸಿ, “ನೀರು ನಮ್ಮ ಪ್ರದೇಶದ ಜೀವನಾಡಿ; ಅದನ್ನು ಶಸ್ತ್ರವಾಗಿ ಬಳಸಬಾರದು” ಎಂದು ಹೇಳಿದರು.

ಪ್ರಮುಖ ಸುದ್ದಿ :-   ನೌಕಾಪಡೆಗೆ ಐಎನ್ಎಸ್ ನಿಪುಣ್ ಸೇರ್ಪಡೆ : ಭಾರತಕ್ಕೆ ಈ ಆಳ ಸಮುದ್ರ ಡೈವಿಂಗ್ ಹಡಗುಗಳು ಏಕೆ ಬೇಕು? ಇದರ ವಿಶೇಷತೆ ಏನು?

ಗ್ರುಪ್ ಫೋಟೋ ನಂತರ ನಡೆದ ಮತ್ತೊಂದು ಘಟನೆ ಕೂಡ ಗಮನ ಸೆಳೆಯಿತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ವೇದಿಕೆಯಿಂದ ಹೊರಟು ಹೋಗುತ್ತಿದ್ದಾಗ, ಶೆಹಬಾಜ್ ಷರೀಫ್ ತ್ವರಿತವಾಗಿ ಅವರ ಬಳಿ ತೆರಳಿ ಮಾತುಕತೆಗೆ ಮುಂದಾದಂತೆ ಕಂಡುಬಂದ ದೃಶ್ಯ ಹಲವು ಮಾಧ್ಯಮಗಳ ಗಮನ ಸೆಳೆಯಿತು.
ಈ ಬಾರಿ ಬಿಶ್ಕೆಕ್‌ನಲ್ಲಿ ನಡೆದ ಶೃಂಗಸಭೆಯು ಎಸ್‌ಸಿಒ ಸ್ಥಾಪನೆಯ 25ನೇ ವಾರ್ಷಿಕೋತ್ಸವದ ಸಂದರ್ಭವಾಗಿತ್ತು. 1996ರಲ್ಲಿ ಚೀನಾ, ಕಜಕಸ್ತಾನ್, ಕಿರ್ಗಿಸ್ತಾನ್, ರಷ್ಯಾ ಮತ್ತು ತಜಿಕಿಸ್ತಾನ್ ರಾಷ್ಟ್ರಗಳೊಂದಿಗೆ ಆರಂಭವಾದ ‘ಶಾಂಘೈ ಫೈವ್’ ಗುಂಪು, 2001ರಲ್ಲಿ ಉಜ್ಬೇಕಿಸ್ತಾನ್ ಸೇರ್ಪಡೆಯೊಂದಿಗೆ ಅಧಿಕೃತವಾಗಿ ಎಸ್‌ಸಿಒ ಆಗಿ ರೂಪುಗೊಂಡಿತು. ಬಳಿಕ 2017ರಲ್ಲಿ ಭಾರತ ಮತ್ತು ಪಾಕಿಸ್ತಾನ ಸದಸ್ಯತ್ವ ಪಡೆದರೆ, ನಂತರ ಇರಾನ್ ಮತ್ತು ಬೆಲಾರಸ್ ಕೂಡ ಸಂಘಟನೆಯಲ್ಲಿ ಸೇರಿಕೊಂಡವು.
ಈ ಗ್ರುಪ್ ಫೋಟೋ ಸಂಪಾದನೆ ವಿವಾದದ ಬಳಿಕ, ಪಾಕಿಸ್ತಾನದ ಪ್ರಧಾನಿ ಕಚೇರಿ ತನ್ನ ನಾಯಕನ ಸ್ಥಾನವನ್ನು ಛಾಯಾಚಿತ್ರದಲ್ಲಿ ಹೆಚ್ಚು ಪ್ರಮುಖವಾಗಿ ತೋರಿಸಲು ಪ್ರಯತ್ನಿಸಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement