ಖ್ಯಾತ ಕನ್ನಡ ನಟ ದುನಿಯಾ ವಿಜಯ – ನಾಗರತ್ನ ದಂಪತಿ ವಿಚ್ಛೇದನ : 2 ಕೋಟಿ ಜೀವನಾಂಶ ನೀಡಲು ಆದೇಶ

ಬೆಂಗಳೂರು: ಖ್ಯಾತ ಕನ್ನಡ ನಟ ದುನಿಯಾ ವಿಜಯ ಮತ್ತು ಅವರ ಪತ್ನಿ ನಾಗರತ್ನ ಅವರ ನಡುವಿನ ಸುದೀರ್ಘ ವೈವಾಹಿಕ ವಿವಾದ ಅಂತ್ಯಗೊಂಡಿದೆ. ಗುರುವಾರ ಕರ್ನಾಟಕ ಹೈಕೋರ್ಟ್ ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಇದರ ಜೊತೆಗೆ, ಪತ್ನಿ ನಾಗರತ್ನ ಅವರಿಗೆ ಒಂದು ಬಾರಿಯ ಕಾಯಂ ಜೀವನಾಂಶವಾಗಿ (ಅಲಿಮೋನಿ) 2 ಕೋಟಿ ರೂಪಾಯಿ ಪಾವತಿಸುವಂತೆ ನಟ ದುನಿಯಾ ವಿಜಯ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿ ಭೂಷಣ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮದುವೆಯನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ನಾಗರತ್ನ ಅವರ ಪರಿಸ್ಥಿತಿ, ದಂಪತಿಯ ಮೂವರು ಮಕ್ಕಳ ಭವಿಷ್ಯ ಹಾಗೂ ಚಿತ್ರರಂಗದಲ್ಲಿ ದುನಿಯಾ ವಿಜಯ ಅವರ ಆರ್ಥಿಕ ಸ್ಥಿತಿಗತಿ ಮತ್ತು ಸ್ಥಾನಮಾನಗಳನ್ನು ನ್ಯಾಯಪೀಠ ಪರಿಗಣನೆಗೆ ತೆಗೆದುಕೊಂಡಿದೆ.
ಪ್ರಕರಣದ ಹಿನ್ನೆಲೆ:
ನಾಗರತ್ನ ಜೊತೆ ದುನಿಯಾ ವಿಜಯ್ 1999ರಲ್ಲಿ ಮದುವೆ ಆಗಿ ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರೂ ನಂತರ ವೈಮನಸ್ಸು ಉಂಟಾಗಿ ತಾರಕಕ್ಕೇರಿತ್ತು. ಹಲವು ಬಾರಿ ಮಾಧ್ಯಮಗಳಲ್ಲಿ ಕೂಡ ಸುದ್ದಿಯಾಗಿತ್ತು. ದುನಿಯಾ ವಿಜಯ್ 2013ರಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಆರಂಭದಲ್ಲಿ ದುನಿಯಾ ವಿಜಯ ಅವರು ‘ಕ್ರೌರ್ಯ’ದ ಆಧಾರದ ಮೇಲೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಕುಟುಂಬ ನ್ಯಾಯಾಲಯ (ಫ್ಯಾಮಿಲಿ ಕೋರ್ಟ್) ವಜಾಗೊಳಿಸಿತ್ತು. ವಿಜಯ್ ಅವರು ಹೇಳಿದ ಕ್ರೌರ್ಯದ ಕಾರಣಗಳು ಸಾಬೀತಾಗಿಲ್ಲ ಎಂದು ಹೇಳಿತ್ತು. ಆದರೂ, ಇಬ್ಬರ ನಡುವಿನ ಸಂಬಂಧ ಸುಧಾರಿಸಿರಲಿಲ್ಲ. ವಿಜಯ ಅವರು ಮತ್ತೆ ಜೊತೆಯಾಗಿ ಬಾಳಲು ನಿರಾಕರಿಸಿದ್ದರೆ, ನಾಗರತ್ನ ಅವರು ಆರಂಭದಲ್ಲಿ ವಿಚ್ಛೇದನವನ್ನು ವಿರೋಧಿಸಿದ್ದರು. ವಿಚಾರಣೆ ವೇಳೆ, ನಾಗರತ್ನ ಅವರು ತಮ್ಮ ತಂದೆ-ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬುದು ಸೇರಿದಂತೆ ಹಲವು ಆರೋಪಗಳನ್ನು ವಿಜಯ ಮಾಡಿದ್ದರು.
ಸುದೀರ್ಘ ಕಾಲದಿಂದ ದಂಪತಿ ಬೇರೆಯಾಗಿದ್ದು, ಮದುವೆ ಸಂಪೂರ್ಣ ಮುರಿದುಬಿದ್ದಿರುವುದು ಹಾಗೂ ಪತ್ನಿ-ಮಕ್ಕಳ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಅಂತಿಮವಾಗಿ ವಿಚ್ಛೇದನ ಮಂಜೂರು ಮಾಡಿದೆ.
2 ತಿಂಗಳ ಕಾಲಾವಕಾಶ:
ವಿಧಿಸಲಾಗಿರುವ 2 ಕೋಟಿ ರೂಪಾಯಿ ಜೀವನಾಂಶವನ್ನು ಎರಡು ತಿಂಗಳ ಒಳಗಾಗಿ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ, ವಾರ್ಷಿಕ ಶೇಕಡಾ 6ರಷ್ಟು ಬಡ್ಡಿಯೊಂದಿಗೆ ಜೀವನಾಂಶವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.
ರಿಯಲ್ ಲೈಫ್‌ನಲ್ಲೂ ಮೌಲ್ಯವಿರಲಿ:
ವಿಚಾರಣೆ ವೇಳೆ ಪೀಠವು ಪ್ರಮುಖ ಮಾರ್ಮಿಕ ಹೇಳಿಕೆಯೊಂದನ್ನು ನೀಡಿದ್ದು, “ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಬೆಳ್ಳಿತೆರೆಯ ಮೇಲೆ ಪ್ರದರ್ಶಿಸುವ ಉತ್ತಮ ನಡತೆ ಹಾಗೂ ಮೌಲ್ಯಗಳು ಅವರ ವೈಯಕ್ತಿಕ ಜೀವನದಲ್ಲೂ ಪ್ರತಿಫಲಿಸಬೇಕು” ಎಂದು ಕಿವಿಮಾತು ಹೇಳಿದೆ. ಈ ತೀರ್ಪನ್ನು ಪ್ರಶ್ನಿಸಿ ಸೂಕ್ತ ನ್ಯಾಯಿಕ ವೇದಿಕೆಯಲ್ಲಿ ಮೇಲ್ಮನವಿ ಸಲ್ಲಿಸಲು ಎರಡೂ ಕಡೆಯವರಿಗೆ ಅವಕಾಶವಿದೆ.
2007ರಲ್ಲಿ ತೆರೆಕಂಡ ‘ದುನಿಯಾ’ ಬ್ಲಾಕ್‌ಬಸ್ಟರ್ ಸಿನಿಮಾ ಮೂಲಕ ಮನೆಮಾತಾದ ವಿಜಯ, ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡರು.
 ಅವರ ಮಗಳು ಮೋನಿಷಾ ವಿಜಯಕುಮಾರ ಅವರು ವಿನಯ ರಾಜಕುಮಾರ್ ನಟನೆಯ ಹಾಗೂ ದುನಿಯಾ ವಿಜಯ ನಿರ್ದೇಶನದ ‘ಸಿಟಿ ಲೈಟ್ಸ್’ ಕನ್ನಡ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement