ನವದೆಹಲಿ: ಆಗಸ್ಟ್ 4 ರಂದು ಒಡಿಶಾ ವಾಯುಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ 300 ಅಡಿಗಳಷ್ಟು ಕೆಳಕ್ಕೆ ಕುಸಿದು, ಹಲವು ಪ್ರಯಾಣಿಕರು ಗಾಯಗೊಳ್ಳಲು ಕಾರಣವಾಗಿದ್ದ ಫುಕೆಟ್-ದೆಹಲಿ ‘AI2379’ ಏರ್ ಇಂಡಿಯಾ ವಿಮಾನದ ಪೈಲಟ್-ಇನ್-ಕಮಾಂಡ್ (ಮುಖ್ಯ ಪೈಲಟ್) ಅವರನ್ನು ಏರ್ ಇಂಡಿಯಾ ವಜಾಗೊಳಿಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಪೈಲಟ್ ಮನೋರೋಗ ಶಾಮಕ/ಮತ್ತಿನ ಪದಾರ್ಥ (Psychoactive substance) ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಟಾಟಾ ಒಡೆತನದ ಏರ್ ಇಂಡಿಯಾ ಈ ಕಠಿಣ ಕ್ರಮ ಕೈಗೊಂಡಿದೆ.
ಸುರಕ್ಷತಾ ನಿಯಮಗಳ ಉಲ್ಲಂಘನೆಯಲ್ಲಿ ಶೂನ್ಯ ಸಹಿಷ್ಣುತಾ (Zero-tolerance) ನೀತಿಯನ್ನು ಅನುಸರಿಸಲಾಗುತ್ತಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪೈಲಟ್ ಅವರನ್ನು ವಜಾಗೊಳಿಸಲಾಗಿದೆ ಎಂದು ಏರ್ ಇಂಡಿಯಾ ‘X’ (ಟ್ವಿಟರ್) ಖಾತೆಯಲ್ಲಿ ತಿಳಿಸಿದೆ.
145 ಪ್ರಯಾಣಿಕರಿದ್ದ ಏರ್ ಇಂಡಿಯಾ ಏರ್ಬಸ್ A320 ವಿಮಾನವು 36,000 ಅಡಿ ಎತ್ತರದಲ್ಲಿ ಕ್ರೂಸ್ ಮಾಡುತ್ತಿದ್ದಾಗ, ಒಂದೇ ಬಾರಿಗೆ ಮೂರೂ ಹೈಡ್ರಾಲಿಕ್ ವ್ಯವಸ್ಥೆಗಳು ಸಂಪರ್ಕ ಕಳೆದುಕೊಂಡವು.
ಹೈಡ್ರಾಲಿಕ್ ವೈಫಲ್ಯದಿಂದ ಆಟೋ-ಪೈಲಟ್ ಸಂಪರ್ಕ ಕಡಿತಗೊಂಡು, ಕ್ಷಣಕಾಲ ‘ಸ್ಟಾಲ್ ವಾರ್ನಿಂಗ್’ ನೀಡಿತು. ನಂತರ ವಿಮಾನವು ನಿಯಂತ್ರಣ ತಪ್ಪಿ ಮೊದಲು 372 ಅಡಿ ಏರಿ, ಬಳಿಕ ನಿಯೋಜಿತ FL360 ಮಟ್ಟದಿಂದ 292 ಅಡಿ (ಸುಮಾರು 300 ಅಡಿ) ಕೆಳಗೆ ಬಿತ್ತು. ಇದರಿಂದಾಗಿ ವಿಮಾನದಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡರು.
ಈ ಘಟನೆಯ ಸಮಯಕ್ಕೆ ಸಹ-ಪೈಲಟ್ ವಿಮಾನವನ್ನು ಚಾಲನೆ ಮಾಡುತ್ತಿದ್ದರು. ಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾಗ ಮುಖ್ಯ ಪೈಲಟ್ (PIC) ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡರು. ಕೆಲವೇ ಕ್ಷಣಗಳಲ್ಲಿ ಫ್ಲೈಟ್ ಕಂಟ್ರೋಲ್ ಯಂತ್ರಗಳು ಚೇತರಿಸಿಕೊಂಡು ವಿಮಾನ ಸಾಮಾನ್ಯ ಸ್ಥಿತಿಗೆ ಮರಳಿತು.
ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ನಂತರ ಇಬ್ಬರೂ ಪೈಲಟ್ಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಲಾಯಿತು. ಮುಖ್ಯ ಪೈಲಟ್ ‘ಕನ್ಫರ್ಮೇಟರಿ ಟೆಸ್ಟ್’ನಲ್ಲಿ ‘ನಾನ್-ನೆಗೆಟಿವ್’ (ಮತ್ತಿನ ಪದಾರ್ಥ ಸೇವನೆ ದೃಢ) ಎಂದು ಕಂಡುಬಂದಿದ್ದರೆ, ಸಹ-ಪೈಲಟ್ ಅವರ ಪರೀಕ್ಷಾ ವರದಿ ‘ನೆಗೆಟಿವ್’ ಬಂದಿದೆ.
ಡಿಜಿಸಿಎ ಶಿಸ್ತುಕ್ರಮಕ್ಕೆ ಶಿಫಾರಸು
ಮುಖ್ಯ ಪೈಲಟ್ ಮತ್ತಿನ ಪದಾರ್ಥ ಸೇವಿಸಿರುವುದು ಗಂಭೀರ ವಿಚಾರವಾಗಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪೈಲಟ್ ವಿರುದ್ಧ ಆದ್ಯತೆಯ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಎಐಬಿ (AAIB) ತನ್ನ ಪ್ರಾಥಮಿಕ ವರದಿಯಲ್ಲಿ ಶಿಫಾರಸು ಮಾಡಿದೆ.
ವಿಮಾನ ದೆಹಲಿಯಲ್ಲಿ ಇಳಿದಾಗ ‘ವಿಮಾನವು ಸುಳಿಗಾಳಿಗೆ (Turbulence) ಸಿಲುಕಿತ್ತು’ ಎಂದು ವಿಮಾನ ಸಿಬ್ಬಂದಿ ಹೇಳಿದ್ದರು. ಆದರೆ, ಎಎಐಬಿ (AAIB) ತಂಡವು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಇದನ್ನು ಅಧಿಕೃತ ‘ಅಪಘಾತ’ (Accident) ಎಂದು ವರ್ಗೀಕರಿಸಲಾಯಿತು. ವಿಮಾನ ಹೊರಡುವ ಮೊದಲು ಸಿಬ್ಬಂದಿ ನಡೆಸಿದ್ದ ಪೂರ್ವ ಸಿದ್ಧತಾ ತಪಾಸಣೆಯಲ್ಲಿ (Pre-flight inspection) ಯಾವುದೇ ಲೋಪದೋಷಗಳು ಕಂಡುಬಂದಿರಲಿಲ್ಲ ಎಂದೂ ವರದಿ ಸ್ಪಷ್ಟಪಡಿಸಿದೆ.
ಪೈಲಟ್ನ ಡ್ರಗ್ಸ್ ಸೇವನೆಯೇ ಹೈಡ್ರಾಲಿಕ್ ವೈಫಲ್ಯಕ್ಕೆ ಅಥವಾ ವಿಮಾನದ ಎತ್ತರ ಕುಸಿತಕ್ಕೆ ನೇರ ಕಾರಣವೇ ಎಂಬುದನ್ನು ವರದಿ ಸ್ಪಷ್ಟಪಡಿಸಿಲ್ಲವಾದರೂ, ತಾಂತ್ರಿಕ ಹಾಗೂ ಇತರ ಮಗ್ಗಲುಗಳ ಸಮಗ್ರ ತನಿಖೆ ಮುಂದುವರಿದಿದೆ.
ಏರ್ ಇಂಡಿಯಾ ಸ್ಪಷ್ಟನೆ:
ಎಎಐಬಿ (AAIB) ಪ್ರಾಥಮಿಕ ವರದಿಯನ್ನು ಒಪ್ಪಿಕೊಂಡಿರುವ ಏರ್ ಇಂಡಿಯಾ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಪ್ರಯಾಣಿಕರ ಸುರಕ್ಷತೆಯೇ ತಮ್ಮ ಮೊದಲ ಆದ್ಯತೆಯಾಗಿದ್ದು, ಈ ಘಟನೆಯ ನಂತರ ಮುನ್ನೆಚ್ಚರಿಕೆಯಾಗಿ ತನ್ನ 100% ಪೈಲಟ್ಗಳನ್ನು ಸ್ವಯಂಪ್ರೇರಿತವಾಗಿ ‘ಡ್ರಗ್ ಪದಾರ್ಥ’ಗಳ ತಪಾಸಣೆಗೆ ಒಳಪಡಿಸಲು ಪ್ರಾರಂಭಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ