ವಿಡಿಯೋ | ಶಿವಮೊಗ್ಗ ; ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ; ಆದ್ರೂ ಹಿಡಿದ ಪೊಲೀಸರು !

ಶಿವಮೊಗ್ಗ: 16 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿ ಕುಳಿತಿದ್ದರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಂಧಿತ ಆರೋಪಿಯನ್ನು ಭದ್ರಾವತಿ ನಿವಾಸಿ ದಿಲೀಪ ಅಲಿಯಾಸ್ ಕರಿಯ (19 ವರ್ಷ) ಎಂದು ಗುರುತಿಸಲಾಗಿದೆ. ದಿಲೀಪ ಹಲವು ದಿನಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದಲ್ಲದೆ, ತನ್ನ ವಿರುದ್ಧ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದರೂ ಪದೇಪದೇ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ನ್ಯಾಯಾಲಯವು ಮೂರು ಬಾರಿ ಜಾಮೀನು ರಹಿತ ಬಂಧನ ವಾರಂಟ್ (ನಾನ್-ಬೇಲಬಲ್ ವಾರಂಟ್) ಹೊರಡಿಸಿತ್ತು. ಆದರೂ ದಿಲೀಪ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ.

ಆತನ ಇರುವಿಕೆಯ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲು ಮುಂದಾದರು. ಪೊಲೀಸರು ಬಂಧಿಸಲು ಬರುತ್ತಿರುವುದನ್ನು ಗಮನಿಸಿದ ದಿಲೀಪ ಅಲ್ಲಿಂದ ತಪ್ಪಿಸಿಕೊಳ್ಳಲು ಸಮೀಪದ ಕೆರೆಗೆ ಹಾರಿ, ನೀರಿನೊಳಗೆ ಅಡಗಿ ಕುಳಿತುಕೊಳ್ಳಲು ಯತ್ನಿಸಿದ್ದಾನೆ.
ಆದರೆ ಆತನನ್ನು ಬೆನ್ನಟ್ಟಿದ ಪೊಲೀಸರು ಕೆರೆಯೊಳಗೆ ಇಳಿದು ಕಾರ್ಯಾಚರಣೆ ನಡೆಸಿದರು. ಪಿಎಸ್‌ಐ ರಮೇಶ ಹಾಗೂ ಪೊಲೀಸ್ ಸಿಬ್ಬಂದಿ ಪ್ರಸನ್ನ ನೀರಿಗೆ ಹಾರಿ ದಿಲೀಪನನ್ನು ಹಿಡಿದು ಹೊರಗೆ ಕರೆತಂದಿದ್ದಾರೆ. ಈ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳುವ ಆತನ ಪ್ರಯತ್ನಕ್ಕೆ ತೆರೆ ಬಿದ್ದಿದೆ.
ದಿಲೀಪ್ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ ಇದ್ದರೂ ವಿಚಾರಣೆಗೆ ಹಾಜರಾಗದೆ ದೀರ್ಘ ಸಮಯದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವ ಉದ್ದೇಶದಿಂದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಬಂಧನ ನಡೆದಿದೆ.

ಪ್ರಮುಖ ಸುದ್ದಿ :-   ಅಕ್ಷರ ಸೇವೆಯ ಅಪ್ರತಿಮ ಸಾಧಕ ಪ್ರೊಫೆಸರ್‌ ‘ಯಾದವಾಡ ಸರ್’

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement