ಜೈಪುರ: ರಾಜಸ್ಥಾನದ ಜೈಪುರದಲ್ಲಿ ಸುಮಾರು ₹20 ಲಕ್ಷ ಮೌಲ್ಯದ ಚಿನ್ನದ ಉಂಗುರಗಳ ಪೆಟ್ಟಿಗೆಗಳನ್ನು ಕಳವು ಮಾಡಲು ಯತ್ನಿಸಿದ ಮಹಿಳೆಯನ್ನು ಜ್ಯುವೆಲ್ಲರಿ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿ ಸುಮಾರು 500 ಮೀಟರ್ಗಳಷ್ಟು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಸಂಪೂರ್ಣ ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೈಪುರದ ನಿವಾರು ರಸ್ತೆಯ ಲಕ್ಷ್ಮೀನಗರದಲ್ಲಿರುವ ಭವಾನಿ ಜ್ಯುವೆಲ್ಲರ್ಸ್ನಲ್ಲಿ ಶುಕ್ರವಾರ ಪೂರ್ವಾಹ್ನ ಸುಮಾರು 11:45 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಅಂಗಡಿ ಮಾಲೀಕ ತ್ರಿಲೋಕಚಂದ ಪ್ರಜಾಪತ್ ಅವರು ಜೋತ್ವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಮಹಿಳೆ ಅಂಗಡಿಗೆ ಬಂದು ಚಿನ್ನದ ಉಂಗುರಗಳನ್ನು ತೋರಿಸುವಂತೆ ಕೇಳಿದ್ದಳು. ಅಂಗಡಿ ಮಾಲೀಕ 25 ಚಿನ್ನದ ಉಂಗುರಗಳಿದ್ದ ಒಂದು ಪೆಟ್ಟಿಗೆಯನ್ನು ಆಕೆಯ ಮುಂದೆ ಇಟ್ಟಿದ್ದರು. ಮಹಿಳೆ ಅದರಲ್ಲಿ ಎರಡು ಉಂಗುರಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಬೆಲೆ ಬಗ್ಗೆ ವಿಚಾರಿಸಿದ್ದಳು. ಬಳಿಕ ಆನ್ಲೈನ್ ಮೂಲಕ ಹಣ ಪಾವತಿಸಲು ತನ್ನ ತಂದೆಗೆ ಕರೆ ಮಾಡುವುದಾಗಿ ಹೇಳಿದ್ದಳು.
ಮಹಿಳೆ ಉಂಗುರಗಳನ್ನು ಪರಿಶೀಲಿಸುತ್ತಿರುವ ವೇಳೆ ಅಂಗಡಿ ಮಾಲೀಕ ಮತ್ತೊಬ್ಬ ಗ್ರಾಹಕರನ್ನು ವಿಚಾರಿಸುವುದರಲ್ಲಿ ನಿರತರಾಗಿದ್ದರು. ಇದೇ ಅವಕಾಶವನ್ನು ಬಳಸಿಕೊಂಡ ಮಹಿಳೆ, ಉಂಗುರಗಳಿದ್ದ ಸಂಪೂರ್ಣ ಪೆಟ್ಟಿಗೆಯನ್ನು ಎತ್ತಿಕೊಂಡು ಅಂಗಡಿಯಿಂದ ಓಡಿ ಹೋಗಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಗಮನಕ್ಕೆ ಬಂದ ತಕ್ಷಣ ತ್ರಿಲೋಕಚಂದ ಪ್ರಜಾಪತ್ ಹಾಗೂ ಮತ್ತೊಬ್ಬ ಸಿಬ್ಬಂದಿ ಮಹಿಳೆಯನ್ನು ಬೆನ್ನಟ್ಟಿದ್ದಾರೆ. ಸುಮಾರು 500 ಮೀಟರ್ಗಳಷ್ಟು ದೂರ ಬೆನ್ನಟ್ಟಿದ ಬಳಿಕ ಆಕೆಯನ್ನು ಹಿಡಿದುಕೊಂಡು ಚಿನ್ನದ ಉಂಗುರಗಳಿದ್ದ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.
ಬಳಿಕ ಮಹಿಳೆಯನ್ನು ಜೋತ್ವಾರಾ ಪೊಲೀಸರಿಗೆ ಒಪ್ಪಿಸಲಾಗಿದೆ. ಆಕೆಯನ್ನು ಅಂಗಡಿ ಮಾಲಕ ಹಿಡಿದ ನಂತರ ಮಹಿಳೆ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. “ನಾನು ಜೈಲಿಗೆ ಹೋಗಬೇಕೆಂದು ಈ ಕೆಲಸ ಮಾಡಿದೆ” ಎಂದು ಆಕೆ ಹೇಳಿದ್ದಾಳೆ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ತಿಳಿಸಿದ್ದಾರೆ.
ಇದಲ್ಲದೆ, ಮಹಿಳೆಯ ಬ್ಯಾಗ್ನ್ನು ಪರಿಶೀಲಿಸಿದ ವೇಳೆ ಅದರಲ್ಲಿ ಕೆಂಪು ಮೆಣಸಿನ ಪುಡಿ ಹಾಗೂ ಕಿರಿಕಿರಿ ಉಂಟುಮಾಡುವ ಸ್ಪ್ರೇ (ಇರಿಟೆಂಟ್ ಸ್ಪ್ರೇ) ಪತ್ತೆಯಾಗಿದೆ ಎಂದು ಅಂಗಡಿ ಮಾಲೀಕ ಆರೋಪಿಸಿದ್ದಾರೆ.
ಮಹಿಳೆ ಆಭರಣಗಳನ್ನು ತೆಗೆದುಕೊಂಡು ಓಡುವುದಕ್ಕೆ ಕೆಲವೇ ಕ್ಷಣಗಳ ಮೊದಲು ಆಕೆಗೆ ಒಂದು ಫೋನ್ ಕರೆ ಬಂದಿತ್ತು. ಕರೆ ಮುಗಿಸಿ ಮೊಬೈಲ್ನ್ನು ಬ್ಯಾಗ್ನಲ್ಲಿ ಇಟ್ಟ ತಕ್ಷಣವೇ ಆಕೆ ಉಂಗುರಗಳಿದ್ದ ಪೆಟ್ಟಿಗೆಯನ್ನು ಎತ್ತಿಕೊಂಡು ಓಡಿದ್ದಾಳೆ ಎಂದು ಪ್ರಜಾಪತ್ ತಿಳಿಸಿದ್ದಾರೆ.
ಘಟನೆಯ ವೇಳೆ ಮಹಿಳೆಯೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಇದ್ದನು ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯನ್ನು ಹಿಡಿಯಲು ಜನರು ಬೆನ್ನಟ್ಟುವುದನ್ನು ಕಂಡ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಕಳ್ಳತನದ ಯತ್ನವನ್ನು ಮಹಿಳೆ ಮತ್ತೊಬ್ಬರ ಸಹಾಯದೊಂದಿಗೆ ಪೂರ್ವಯೋಜಿತವಾಗಿ ನಡೆಸಿದ್ದಾಳೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯಗಳಲ್ಲಿ ಮಹಿಳೆ ಉಂಗುರಗಳಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ಹೊರಗೆ ಓಡುತ್ತಿರುವುದು ದಾಖಲಾಗಿದೆ.
ಮಹಿಳೆ ಜೈಲಿಗೆ ಹೋಗಬೇಕೆಂಬ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾಳೆಯೇ, ಆಕೆಯೊಂದಿಗೆ ಮತ್ತಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ದೊರೆಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ