ಅಂತ್ಯಸಂಸ್ಕಾರ ನಡೆದು 15 ದಿನಗಳ ಬಳಿಕ ‘ನಿಮ್ಮ ಮಗ ಜೀವಂತವಾಗಿದ್ದಾನೆ’ ಎಂದು ಪೊಲೀಸರಿಂದ ಬಂತು ಫೋನ್‌ ಕಾಲ್‌…!

ಕಪುರ್ತಲಾ (ಪಂಜಾಬ್): ತಮ್ಮ ಮಗನನ್ನು ಕಳೆದುಕೊಂಡ ದುಃಖದಲ್ಲಿ ಅಂತ್ಯಸಂಸ್ಕಾರ ಹಾಗೂ ಪ್ರಾರ್ಥನಾ ವಿಧಿಗಳನ್ನು ನಡೆಸಿದ್ದ ಪಂಜಾಬ್‌ನ ಒಂದು ಕುಟುಂಬವೊಂದಕ್ಕೆ 15 ದಿನಗಳ ಬಳಿಕ ನಿಮ್ಮ ಮಗ ಜೀವಂತವಾಗಿದ್ದಾನೆ ಎಂದು ಜೈಲಿನಿಂದ ಕರೆಯೊಂದು ನಂತರ ಬೆಚ್ಚಿಬಿದಿದ್ದಾರೆ.
ಈ ಅಚ್ಚರಿಯ ಘಟನೆ ಪಂಜಾಬ್‌ನ ಕಪುರ್ತಲಾದಲ್ಲಿ ನಡೆದಿದೆ. ಮೃತನಾಗಿದ್ದಾನೆ ಎಂದು ಭಾವಿಸಿ ಅಂತ್ಯಸಂಸ್ಕಾರ ನಡೆಸಿದ 15 ದಿನಗಳ ಬಳಿಕ ನಿಮ್ಮ ಮಗ ಜೈಲಿನಲ್ಲಿ ಜೀವಂತವಾಗಿದ್ದಾನೆ ಎಂದು ಕಪುರ್ತಲಾ ಕೇಂದ್ರ ಕಾರಾಗೃಹದಿಂದ ಬಂದ ದೂರವಾಣಿ ಕರೆ ಈ ಅಚ್ಚರಿಯ ಸತ್ಯವನ್ನು ಬಹಿರಂಗಪಡಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರವಿಕುಮಾರ ಎಂಬಾತ ಆಗಸ್ಟ್ 5ರಂದು ಮನೆಯಿಂದ ಹೊರಟಿದ್ದ. ಆದರೆ ಬಳಿಕ ಮನೆಗೆ ಮರಳಿರಲಿಲ್ಲ. ಆತನ ತಂದೆ ಮತ್ತು ಸಹೋದರ ಸ್ವತಃ ಸಾಕಷ್ಟು ಹುಡುಕಾಟ ನಡೆಸಿದರೂ ಯಾವುದೇ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.ಹುಡುಕಾಟ ವಿಫಲವಾದ ಬಳಿಕ ಕುಟುಂಬವು ಆಗಸ್ಟ್ 11ರಂದು ಕಪುರ್ತಲಾ ಸಿಟಿ ಪೊಲೀಸ್ ಠಾಣೆಗೆ ತೆರಳಿ ಕಾಣೆಯಾಗಿದ್ದಾನೆಂದು ದೂರು ದಾಖಲಿಸಿತು.
ಇದರ ಮಧ್ಯೆ, ಯುವಕನೊಬ್ಬನ ಸುಟ್ಟ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದರು.
ಆ ವ್ಯಕ್ತಿಯ ಛಾಯಾಚಿತ್ರಗಳನ್ನು ಕುಟುಂಬದವರಿಗೆ ತೋರಿಸಲಾಯಿತು. ಮುಖವನ್ನು ಗುರುತಿಸಲಾಗದ ಕಾರಣ, ಕುಟುಂಬವು ಶವವನ್ನು ರವಿ ಧರಿಸಿದ್ದರು ಎಂದು ನಂಬಲಾದ ಬಟ್ಟೆಗಳ ಆಧಾರದ ಮೇಲೆ ಗುರುತಿಸಿತು. ಕುಟುಂಬದ ಸದಸ್ಯರು ಹಾಗೂ ಇತರರು ಆ ಶವವನ್ನು ರವಿಕುಮಾರನದ್ದೇ ಎಂದು ಗುರುತಿಸಿದರು. ತಮ್ಮ ಪುತ್ರ ಮೃತಪಟ್ಟಿದ್ದಾನೆ ಎಂದು ನಂಬಿದ ಕುಟುಂಬದವರು ಆಗಸ್ಟ್ 13ರಂದು ಆತನ ಅಂತ್ಯಸಂಸ್ಕಾರವನ್ನು ನೆರವೇರಿಸಿತು.

ಪ್ರಮುಖ ಸುದ್ದಿ :-   ಮೈ ಜುಂ ಎನ್ನುವ ವಿಡಿಯೊ | ಹಠಾತ್‌ ಪ್ರವಾಹದಲ್ಲಿ ಸಿಲುಕಿದ ಬೈಕರ್‌; ಹಗ್ಗದಂತೆ ದುಪಟ್ಟಾ ಬಳಸಿ ಆತನನ್ನು ರಕ್ಷಿಸಿದ ಕುಟುಂಬ

ಆದರೆ ಸೆಪ್ಟೆಂಬರ್ 2ರಂದು ಈ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿತು. ಕಪುರ್ತಲಾ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರು ಕುಟುಂಬಕ್ಕೆ ಕರೆ ಮಾಡಿ, ರವಿಕುಮಾರ ಎಂಬ ವ್ಯಕ್ತಿ ಜೈಲಿನಲ್ಲಿ ಬಂಧನದಲ್ಲಿದ್ದಾನೆ ಎಂದು ಮಾಹಿತಿ ನೀಡಿದರು.
ವಾಸ್ತವ ಸಂಗತಿಯೆಂದರೆ, ಜಲಂಧರ್ ಪೊಲೀಸರು ಸುಮಾರು ಒಂದು ತಿಂಗಳ ಹಿಂದೆ ಸಂಶಯಾಸ್ಪದವಾಗಿ ಅಲೆದಾಡುತ್ತಿದ್ದ ಆರೋಪದ ಮೇಲೆ ರವಿಕುಮಾರನನ್ನು ಬಂಧಿಸಿ, ಕಪುರ್ತಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.
ಈ ಮಾಹಿತಿ ಕೇಳಿ ಕುಟುಂಬದವರು ಬೆಚ್ಚಿಬಿದ್ದಷ್ಟೇ ಅಲ್ಲ, ಗೊಂದಲಕ್ಕೂ ಒಳಗಾದರು. ಮರುದಿನ ಅವರು ಜೈಲಿಗೆ ಭೇಟಿ ನೀಡಿದಾಗ, ರವಿಕುಮಾರ ಜೀವಂತವಾಗಿರುವುದನ್ನು ಕಂಡು ಭಾವುಕರಾದರು. ಮೃತನಾಗಿದ್ದಾನೆ ಎಂದು ಭಾವಿಸಿ ಅಂತ್ಯಸಂಸ್ಕಾರ ನಡೆಸಿದ್ದ ಪುತ್ರನೇ ತಮ್ಮ ಎದುರು ಜೀವಂತವಾಗಿ ನಿಂತಿರುವುದನ್ನು ಕಂಡು ಕುಟುಂಬದ ಸಂತಸಕ್ಕೆ ಪಾರವೇ ಇರಲಿಲ್ಲ.
ಆದರೆ ಮೃತ ದೇಹವನ್ನು ರವಿ ಎಂದು ಭಾವಿಸಿ ದಹನ ಮಾಡಿದ ಈ ಯುವಕ ಯಾರು ಎಂದು ಪೊಲೀಸರು ಈಗ ಮೃತ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement