ಮುಂಬೈ: ಮುಂಬೈನ ದಹಿಸರ್ ಪಶ್ಚಿಮ ಭಾಗದ ಕಂದರ್ಪದ ಬಾಪು ಬಾಗ್ವೆ ರಸ್ತೆಯ ಸಮೀಪದ ಮಹೇಶ್ವರ ಕಟ್ಟಡದ ವಸತಿ ಸಂಕೀರ್ಣದಲ್ಲಿ ನಡೆದ ಘಟನೆ ನಿವಾಸಿಗಳನ್ನು ಕೆಲಕಾಲ ಆತಂಕಕ್ಕೆ ದೂಡಿದೆ. ಕಟ್ಟಡದ ನಿವಾಸಿ ಸನ್ನಿ ಕಾಂಬ್ಳೆ ಅವರ ಸಹೋದರಿಯ ಕಾರಿನ ಬಾನೆಟ್ ಒಳಗೆ ಬೃಹತ್ ಹೆಬ್ಬಾವು ಪತ್ತೆಯಾಗಿದೆ.
ಕಾರಿನ ಕೆಳಭಾಗದಿಂದ ಬಾನೆಟ್ ಕಡೆಗೆ ನಿಧಾನವಾಗಿ ಹಾವು ತೆವಳಿಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಆರಂಭದಲ್ಲಿ ಸಾಮಾನ್ಯ ಹಾವು ಎಂದು ಭಾವಿಸಿದ್ದ ಅವರು, ಬಳಿಕ ಅದು ದೊಡ್ಡ ಗಾತ್ರದ ಹೆಬ್ಬಾವು ಎಂಬುದು ತಿಳಿದು ಬೆಚ್ಚಿಬಿದ್ದರು.
ಹಾವಿನ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರು ತಕ್ಷಣ ವನ್ಯಜೀವಿ ರಕ್ಷಣಾ ತಜ್ಞರನ್ನು ಸಂಪರ್ಕಿಸಿದರು. ಮಾಹಿತಿ ಪಡೆದ ಕೂಡಲೇ ರಕ್ಷಣಾ ತಜ್ಞ ಸಮೀರ ಗುಪ್ತಾ ಸ್ಥಳಕ್ಕೆ ಧಾವಿಸಿದರು. ಕಾರಿನ ಬಾನೆಟ್ ತೆರೆದಾಗ ಎಂಜಿನ್ ಸಮೀಪ ಹೆಬ್ಬಾವು ಸುತ್ತಿಕೊಂಡಿರುವುದು ಕಂಡುಬಂದಿತು.
ಅನಂತರ ಸಮೀರ್ ಗುಪ್ತಾ ಅತ್ಯಂತ ಎಚ್ಚರಿಕೆಯಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಹೊರತೆಗೆದರು. ಹೆಬ್ಬಾವು ಸುಮಾರು ಸುಮಾರು 7 ಅಡಿ ಉದ್ದವಿತ್ತು. ಈ ರಕ್ಷಣಾ ಕಾರ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಕ್ಷಣೆ ಬಳಿಕ ಹೆಬ್ಬಾವನ್ನು ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಕಾರಿನ ಎಂಜಿನ್‌ನ ಉಷ್ಣತೆಯಿಂದ ಅಥವಾ ಇತರೆ ಕಾರಣಗಳಿಂದ ಯಾವುದೇ ಗಾಯಗಳಾಗಿವೆಯೇ ಎಂಬುದನ್ನು ಪರಿಶೀಲಿಸಲಾಯಿತು. ವನ್ಯಜೀವಿ ಅಧಿಕಾರಿಗಳು ಹಾವು ಸಂಪೂರ್ಣ ಆರೋಗ್ಯವಾಗಿದ್ದು ಯಾವುದೇ ಗಾಯಗಳಿಲ್ಲ ಎಂದು ದೃಢಪಡಿಸಿದ ನಂತರ ಅದನ್ನು ಸಮೀಪದ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ನೈಸರ್ಗಿಕ ವಾಸಸ್ಥಳಕ್ಕೆ ಸುರಕ್ಷಿತವಾಗಿ ಬಿಡುಗಡೆ ಮಾಡಿದರು.
ಇದೇ ರೀತಿಯ ಮತ್ತೊಂದು ಘಟನೆ ಜೂನ್‌ನಲ್ಲಿ ನಡೆದಿತ್ತು. ಮಡಗಾಂವ್–ಸಿಎಸ್ಎಂಟಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಕ್ಯಾಬಿನ್‌ನಲ್ಲಿ ಹೆಬ್ಬಾವಿನ ಮರಿ ಪತ್ತೆಯಾಗಿತ್ತು. ಅಂದು ರೈಲ್ವೆ ಅಧಿಕಾರಿಗಳು ಮತ್ತು ವನ್ಯಜೀವಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯದಲ್ಲಿ ಬಿಟಿದ್ದರು.
ಮಳೆಗಾಲ ಅಥವಾ ತಂಪಾದ ವಾತಾವರಣದಲ್ಲಿ ಹಾವುಗಳು ಬೆಚ್ಚಗಿನ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಅವುಗಳು ಕಾರಿನ ಬಾನೆಟ್, ಎಂಜಿನ್ ಬೇ ಭಾಗಗಳಿಗೆ ನುಸುಳುವುದು ಸಾಮಾನ್ಯ. ಹೀಗಾಗಿ ನಗರಗಳಲ್ಲಿ ಹಸಿರು ವಲಯದ ಸಮೀಪ ವಾಹನ ಪಾರ್ಕ್ ಮಾಡುವಾಗ ಎಚ್ಚರಿಕೆ ವಹಿಸಲು ವನ್ಯಜೀವಿ ತಜ್ಞರು ಸೂಚಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ