ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಸಭೆ: ರಾಜತಾಂತ್ರಿಕ ಪರಿಹಾರ, ಸುರಕ್ಷಿತ ಸಮುದ್ರ ಮಾರ್ಗಕ್ಕೆ ಭಾರತ ಪುನರುಚ್ಚಾರ

ನವದೆಹಲಿ: ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಶುಕ್ರವಾರ ನವದೆಹಲಿಗೆ ಆಗಮಿಸಿದ್ದಾರೆ. ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಉಭಯ ನಾಯಕರ ನಡುವೆ ನಡೆಯುತ್ತಿರುವ ಎರಡನೇ ಭೇಟಿ ಇದಾಗಿದ್ದು, ವ್ಯಾಪಾರ ಹಾಗೂ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ.
ಸವಾಲಿನ ಪರಿಸ್ಥಿತಿಯ ನಡುವೆಯೂ ಬ್ರಿಕ್ಸ್ ಸಂಬಂಧಿತ ಸಭೆಗಳಲ್ಲಿ ಇರಾನ್ ಭಾಗವಹಿಸಿರುವುದಕ್ಕೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ.
ಮಾತುಕತೆಯ ವೇಳೆ ಪ್ರಧಾನಿ ಮೋದಿ ಅವರು ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಪ್ರಸ್ತುತ ಬಿಕ್ಕಟ್ಟು ಹಾಗೂ ಪ್ರಾದೇಶಿಕ ಸ್ಥಿರತೆಯ ಕುರಿತು ಪ್ರಸ್ತಾಪಿಸಿದರು. ಸಮುದ್ರಯಾನ ಕೈಗೊಳ್ಳುವ ನಾವಿಕರ (Seafarers) ಸುರಕ್ಷತೆ ಮತ್ತು ಭದ್ರತೆಗೆ ಭಾರತವು ಮೊದಲ ಆದ್ಯತೆ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು “ಸಂವಾದ ಮತ್ತು ರಾಜತಾಂತ್ರಿಕತೆ” (Dialogue and Diplomacy) ಒಂದೇ ಮಾರ್ಗ ಎಂದು ಭಾರತ ನಂಬಿದೆ. ಇಂಧನ ಭದ್ರತೆಯು ಭಾರತಕ್ಕೆ ಅತ್ಯಂತ ಪ್ರಮುಖವಾಗಿದ್ದು, ಸರಕು ಹಾಗೂ ಇಂಧನ ಸಾಗಿಸುವ ಹಡಗುಗಳಿಗೆ ಸುರಕ್ಷಿತ ಸಂಚಾರ ಮಾರ್ಗ ದೊರೆಯಬೇಕು ಎಂದು ಭಾರತ ಪ್ರತಿಪಾದಿಸಿದೆ.
ಉಭಯ ನಾಯಕರು ಭಾರತ-ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳ ಕುರಿತು ಚರ್ಚಿಸಿದರು. ಸವಾಲಿನ ಸಂದರ್ಭಗಳ ಹೊರತಾಗಿಯೂ ಬ್ರಿಕ್ಸ್ (BRICS) ಸಂಬಂಧಿತ ಸಭೆಗಳಲ್ಲಿ ನಿಯಮಿತವಾಗಿ ಮತ್ತು ಉನ್ನತ ಮಟ್ಟದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಇರಾನ್‌ಗೆ ಧನ್ಯವಾದ ಅರ್ಪಿಸಿದರು. ‘ಗ್ಲೋಬಲ್ ಸೌತ್’ (ಜಾಗತಿಕ ದಕ್ಷಿಣ) ರಾಷ್ಟ್ರಗಳ ನಡುವೆ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯನ್ನು ಬೆಳೆಸುವಲ್ಲಿ ಬ್ರಿಕ್ಸ್ ಹೊಂದಿರುವ ಸಾಮರ್ಥ್ಯವನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಇರಾನ್ ಮೇಲೆ ಅಮೆರಿಕವು ‘ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್’ (Operation Economic Outcast) ಎಂಬ ಕಠಿಣ ಆರ್ಥಿಕ ನಿರ್ಬಂಧಗಳ ಅಭಿಯಾನವನ್ನು ನಡೆಸಿ, ಆ ದೇಶದ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಯತ್ನಿಸುತ್ತಿರುವ ಮಧ್ಯೆಯೇ ಇರಾನ್ ಅಧ್ಯಕ್ಷರ ಈ ಭಾರತ ಭೇಟಿ ನಡೆದಿದೆ.
ವ್ಯಾಪಾರದಲ್ಲಿ ಸ್ವದೇಶಿ ಕರೆನ್ಸಿ ಬಳಕೆಗೆ ಇರಾನ್ ಕರೆ
ಶುಕ್ರವಾರ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಪೆಜೆಶ್ಕಿಯನ್, ಜಗತ್ತು ಪ್ರಸ್ತುತ ಸಂಕೀರ್ಣ ಪರಿಸ್ಥಿತಿ ಹಾಗೂ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳನ್ನು ಎದುರಿಸುತ್ತಿದೆ ಎಂದರು. ಆರ್ಥಿಕ ಚೇತರಿಕೆಯನ್ನು ಹೆಚ್ಚಿಸಲು ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳು ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಸ್ವದೇಶಿ (ರಾಷ್ಟ್ರೀಯ) ಕರೆನ್ಸಿಗಳನ್ನು ಬಳಸಬೇಕು ಎಂದು ಕರೆ ನೀಡಿದರು.
ಅಮೆರಿಕದ ಮಿಲಿಟರಿ ಆಕ್ರಮಣ ಹಾಗೂ ಆರ್ಥಿಕ ನಿರ್ಬಂಧಗಳನ್ನು ಖಂಡಿಸಿದ ಅವರು, ಹಣಕಾಸು ಟೂಲ್‌ಗಳನ್ನು ಏಕಸ್ವಾಮ್ಯಗೊಳಿಸಿ ಯಾವುದೇ ದೇಶವು ಇನ್ನೊಂದು ದೇಶದ ಕಾನೂನುಬದ್ಧ ವ್ಯಾಪಾರಕ್ಕೆ ತಡೆ ಒಡ್ಡದಂತೆ ಬ್ರಿಕ್ಸ್ ಸೂಕ್ತ ವಾತಾವರಣ ನಿರ್ಮಿಸಬೇಕು ಎಂದರು. ಅಮೆರಿಕದ ಪ್ರಾಬಲ್ಯ ಮತ್ತು ಡಾಲರ್ ಮೇಲಿನ ಅವಲಂಬನೆಯಿಂದ ದೇಶಗಳಿಗೆ ಮುಕ್ತಿ ನೀಡಲು ಬ್ರಿಕ್ಸ್ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಸಾಂಸ್ಕೃತಿಕ ನಂಟು ಮತ್ತು ಪೂರ್ವ ಭೇಟಿ
ಇರಾನ್ ಅಧ್ಯಕ್ಷರನ್ನು ಸ್ವಾಗತಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್, “ಭಾರತ ಮತ್ತು ಇರಾನ್ ನಡುವೆ ಬಲವಾದ ಸಾಂಸ್ಕೃತಿಕ ಹಾಗೂ ಜನರಿಂದ ಜನರ ಸಂಬಂಧದ ನಂಟು ಇದೆ. ಬ್ರಿಕ್ಸ್ ಪಾಲುದಾರರಾಗಿ ಉಭಯ ದೇಶಗಳು ಹಂಚಿಕೆಯ ಪ್ರಗತಿ ಮತ್ತು ಸಮೃದ್ಧಿಗಾಗಿ ಶ್ರಮಿಸುತ್ತಿವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಆಗಸ್ಟ್ 31 ರಂದು ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ವೇಳೆ ಇಬ್ಬರೂ ನಾಯಕರು ಭೇಟಿಯಾಗಿದ್ದರು. ಆ ವೇಳೆ ಸಂಘರ್ಷ ನಿಲ್ಲಿಸುವ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡಲಿದೆ ಎಂದು ಮೋದಿ ಹೇಳಿದ್ದರು. ಪೆಜೆಶ್ಕಿಯನ್ ಅವರು ಸಂಘರ್ಷನಿರತ ದೇಶಗಳನ್ನು ಮಾತುಕತೆಯತ್ತ ತರಲು ಭಾರತ ತನ್ನ ರಾಜತಾಂತ್ರಿಕ ಪ್ರಭಾವವನ್ನು ಬಳಸಬೇಕೆಂದು ಪ್ರಧಾನಿ ಮೋದಿಯವರಲ್ಲಿ ವಿನಂತಿಸಿದ್ದರು.
ರಷ್ಯಾ-ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯ ಬಿಕ್ಕಟ್ಟು (ವಿಶೇಷವಾಗಿ ಹಾರ್ಮುಜ್ ಜಲಸಂಧಿಯ ತಡೆ), ಹಾಗೂ ಟ್ರಂಪ್ ಆಡಳಿತದ ವ್ಯಾಪಾರ-ಸುಂಕ ನೀತಿಗಳಿಂದ ಜಾಗತಿಕ ಆರ್ಥಿಕತೆ ತೀವ್ರ ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯ ಬ್ರಿಕ್ಸ್ ಶೃಂಗಸಭೆ ಮಹತ್ವ ಪಡೆದುಕೊಂಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement