1000 ಕಿಮೀ ದೂರದ ಟಾರ್ಗೆಟ್‌ಗಳ ಮೇಲೂ ನಿಖರ ದಾಳಿ ; ಭಾರತದ ಸ್ವದೇಶಿ ನಿರ್ಮಿತ ‘ಕೆಎಎಲ್‌’ ಡ್ರೋನ್‌ ಪರೀಕ್ಷೆ ಯಶಸ್ವಿ

ನವದೆಹಲಿ: ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಿನಲ್ಲಿ ನೋಯ್ಡಾ ಮೂಲದ ಐಜಿ ಡಿಫೆನ್ಸ್‌ (IG Defence) ಸಂಸ್ಥೆ ಅಭಿವೃದ್ಧಿಪಡಿಸಿರುವ ಕೆಎಎಲ್‌ (KAL)ಎಂಬ ದೀರ್ಘ ವ್ಯಾಪ್ತಿಯ ದಾಳಿ ಡ್ರೋನ್‌ ಅನ್ನು ರಾಜಸ್ಥಾನದ ಪೋಖ್ರಾನ್‌ ಫೈರಿಂಗ್‌ ರೇಂಜ್‌ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಇತ್ತೀಚಿನ ಯುದ್ಧಗಳಲ್ಲಿ ಇಂತಹ ದೀರ್ಘ ವ್ಯಾಪ್ತಿಯ ಡ್ರೋನ್‌ಗಳ ಬಳಕೆ ಹೆಚ್ಚುತ್ತಿದ್ದು, ರಷ್ಯಾ–ಉಕ್ರೇನ್‌ ಯುದ್ಧದಲ್ಲಿ ಅವುಗಳ ಪರಿಣಾಮಕಾರಿತ್ವ ಜಗತ್ತಿನ ಗಮನ ಸೆಳೆದಿದೆ. ಕಡಿಮೆ ವೆಚ್ಚದಲ್ಲಿ ದೂರದ ಟಾರ್ಗೆಟ್‌ಗಳು ಮತ್ತು ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ನಡೆಸಲು ಹಾಗೂ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಇಂತಹ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಐಜಿ ಡಿಫೆನ್ಸ್‌ ಅಭಿವೃದ್ಧಿಪಡಿಸಿರುವ ಕೆಎಎಲ್‌ (KAL) ಡ್ರೋನ್‌ ಸುಮಾರು 1,000 ಕಿಲೋಮೀಟರ್‌ ದೂರದವರೆಗೆ ಹಾರಬಲ್ಲದು. ಇದು ಒಂದೇ ಬಾರಿ 7 ರಿಂದ 8 ಗಂಟೆಗಳ ಕಾಲ ಗಾಳಿಯಲ್ಲಿ ಇರಬಲ್ಲ ಸಾಮರ್ಥ್ಯ ಹೊಂದಿದ್ದು, 50 ಕೆ.ಜಿ.ವರೆಗೆ ತೂಕವಿರುವ ಸಾಮಗ್ರಿ ಹೊತ್ತೊಯ್ಯಬಲ್ಲ ಈ ಡ್ರೋನ್‌ ಸಮುದ್ರಮಟ್ಟದಿಂದ 5000 ಮೀಟರ್‌ ಅಂದರೆ 5ಕಿಮೀ ಎತ್ತರದವರೆಗೂ ಕಾರ್ಯನಿರ್ವಹಿಸಬಲ್ಲದು.

ಡ್ರೋನ್‌ನಲ್ಲಿ ಉಪಗ್ರಹ ಆಧಾರಿತ ನ್ಯಾವಿಗೇಶನ್‌ ವ್ಯವಸ್ಥೆ ಮತ್ತು ಸ್ವಯಂಚಾಲಿತ ಮಾರ್ಗದರ್ಶನ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಮಾನವ ನಿಯಂತ್ರಣವಿಲ್ಲದೆ ನಿಗದಿತ ಮಾರ್ಗದಲ್ಲಿ ಅದಯ ತಾನೇ ಸ್ವಯಂ ಹಾರಾಟ ನಡೆಸಿ ಗುರಿ ತಲುಪುವ ಸಾಮರ್ಥ್ಯ ಇದಕ್ಕಿದೆ. ಈ ಡ್ರೋನ್‌ ಅನ್ನು ರಾಡಾರ್‌ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಪ್ರಮುಖ ಮೂಲಸೌಕರ್ಯಗಳು ಹಾಗೂ ಇತರೆ ಕಾರ್ಯತಂತ್ರದ ಮಹತ್ವದ ಗುರಿಗಳ ಮೇಲೆ ನಿಖರ ದಾಳಿ ನಡೆಸಲು ವಿನ್ಯಾಸಗೊಳಿಸಲಾಗಿದೆ.
ಕಂಪನಿಯ ಪ್ರಕಾರ, ಕೆಎಎಲ್‌ (KAL) ಡ್ರೋನ್‌ನ ಪ್ರಮುಖ ಭಾಗಗಳಾದ ಏರ್‌ಫ್ರೇಮ್‌, ಎಂಜಿನ್‌ ವ್ಯವಸ್ಥೆ, ಎಲೆಕ್ಟ್ರಾನಿಕ್‌ ಸಾಧನಗಳು, ನ್ಯಾವಿಗೇಶನ್‌ ವ್ಯವಸ್ಥೆ ಹಾಗೂ ಮಿಷನ್‌ ವ್ಯವಸ್ಥೆಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಪೋಖ್ರಾನ್‌ನಲ್ಲಿ ನಡೆದ ಪರೀಕ್ಷೆಯು ಈ ಎಲ್ಲ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಯಶಸ್ವಿಯಾಗಿ ದೃಢಪಡಿಸಿದೆ.

ಪ್ರಮುಖ ಸುದ್ದಿ :-   ಸ್ಟೇಡಿಯಂನಲ್ಲಿ ರನ್ನಿಂಗ್‌ ಮುಗಿಸಿದ ನಂತ್ರ ಕುಸಿದ್ದುಬಿದ್ದು ಬಾಲಕ ಸಾವು ; ಆಘಾತದಿಂದ ನದಿಗೆ ಹಾರಿ ಪ್ರಾಣಬಿಟ್ಟ ತಾಯಿ

ಕೆಎಎಲ್‌ (KAL) ಡ್ರೋನ್‌ ಅನ್ನು ಕಂಪನಿಯ ಕೃತಕ ಬುದ್ಧಿಮತ್ತೆ (AI) ಆಧಾರಿತ ಗ್ರಿಡ್‌ ಬ್ಯಾಟಲ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (GRID Battle Management System) ಜತೆಗೆ ಸಂಪರ್ಕಿಸಿ ಬಳಸಬಹುದಾಗಿದೆ. ಇದರಿಂದ ವಿವಿಧ ಮಾನವರಹಿತ ಯುದ್ಧ ಸಾಧನಗಳು ಮತ್ತು ಯುದ್ಧಭೂಮಿಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಲು ಸಾಧ್ಯವಾಗುತ್ತದೆ.
ಇದರ ಜೊತೆಗೆ, ಐಜಿ ಡಿಫೆನ್ಸ್‌ ಅಭಿವೃದ್ಧಿಪಡಿಸಿರುವ ‘ಟಿ-ಶುಲ್‌ ಬೀಮ್‌’ (T-Shul BEAM) ಎಂಬ ಸ್ವದೇಶಿ ಆ್ಯಂಟಿ-ಡ್ರೋನ್‌ ವ್ಯವಸ್ಥೆಯೂ ಪರೀಕ್ಷೆಯಲ್ಲಿ ಗಮನ ಸೆಳೆದಿದೆ. ಈ ವ್ಯವಸ್ಥೆಯು ಏಕಕಾಲದಲ್ಲಿ ಐದು ಹೊರಗಿನ ಡ್ರೋನ್‌ಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ ಎಂದು ಕಂಪನಿ ತಿಳಿಸಿದೆ.
‘ಟಿ-ಶುಲ್‌ ಬೀಮ್‌’ ಕೈಯಲ್ಲಿ ಹೊತ್ತುಕೊಂಡು ಕಾರ್ಯಾಚರಣೆ ನಡೆಸಬಹುದಾದ ಆ್ಯಂಟಿ-ಡ್ರೋನ್‌ ಸಾಧನವಾಗಿದೆ. ಇದು ಡ್ರೋನ್‌ಗಳನ್ನು ಸ್ಫೋಟಿಸಿ ನಾಶಪಡಿಸುವುದಿಲ್ಲ. ಬದಲಾಗಿ, ಡ್ರೋನ್‌ಗಳ ಸಂವಹನ ಮತ್ತು ನ್ಯಾವಿಗೇಶನ್‌ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿ ಅವುಗಳನ್ನು ಕಾರ್ಯರಹಿತಗೊಳಿಸುತ್ತದೆ. ಈ ತಂತ್ರಜ್ಞಾನವನ್ನು ‘ಸಾಫ್ಟ್‌-ಕಿಲ್‌’ ವಿಧಾನ ಎಂದು ಕರೆಯಲಾಗುತ್ತದೆ.

ಪ್ರಮುಖ ಸುದ್ದಿ :-   ಕೇರಳದಲ್ಲಿ ಭಾರೀ ಮಳೆ : ಭೂಕುಸಿತ, ಪ್ರವಾಹಕ್ಕೆ 5 ಸಾವು; ಇಬ್ಬರು ನಾಪತ್ತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement