ಜಾಗತಿಕ ತಾಪಮಾನ ದಾಖಲೆ ಮಟ್ಟದಲ್ಲಿ ಏರುತ್ತಿರುವ ಸಂದರ್ಭದಲ್ಲೇ ಅಧ್ಯಯನದ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈ ವರ್ಷ ಅತ್ಯಂತ ಪ್ರಬಲವಾದ ‘ಸೂಪರ್ ಎಲ್‌ನಿನೊ’ (Super El Niño) ರೂಪುಗೊಳ್ಳುವ ಸಾಧ್ಯತೆಯಿದ್ದು, ಹೀಗಾದರೆ ಮುಂದಿನ ಆರು ತಿಂಗಳು ವಿಶ್ವದ ಹಲವು ಭಾಗಗಳು ಕಠಿಣ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆ ಇದೆ. ತೀವ್ರ ಶಾಖದ ಅಲೆಗಳು, ಬರ, ಕಾಡ್ಗಿಚ್ಚು ಮತ್ತು ನೀರಿನ ಕೊರತೆಯಂತಹ ಹವಾಮಾನ ವೈಪರೀತ್ಯಗಳು ಹೆಚ್ಚಾಗಬಹುದು. ಇದರಿಂದ ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ ವಿಶ್ವದಾದ್ಯಂತ ಸುಮಾರು 4.51 ಲಕ್ಷದಷ್ಟು ಸಾವುಗಳು ಹೆಚ್ಚುವರಿಯಾಗಿ ಸಂಭವಿಸಬಹುದು ಎಂದು ಚಿಕಾಗೊ ವಿಶ್ವವಿದ್ಯಾಲಯದ ಸಂಶೋಧನಾ ವರದಿ ಎಚ್ಚರಿಸಿದೆ. ಭಾರತದಲ್ಲಿಯೂ ತೀವ್ರ ಶಾಖದ ಪರಿಣಾಮವಾಗಿ ಸುಮಾರು 15,800 ಮಂದಿ ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ಅಂದಾಜಿಸಿದೆ.
ಡಿಸೆಂಬರ್‌ನಿಂದಲೇ ಭಾರತದ ಮೇಲೆ ಶಾಖದ ಹೊಡೆತ
ಭಾರತದಲ್ಲಿ ಅಂದಾಜಿಸಲಾಗಿರುವ ಸಾವುಗಳಲ್ಲಿ ಸುಮಾರು ಅರ್ಧದಷ್ಟು ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಮೂರು ತಿಂಗಳಲ್ಲೇ ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ಆದರೆ ಅಪಾಯ ಇಲ್ಲಿಗೇ ಮುಗಿಯುವುದಿಲ್ಲ. ಬೇಸಿಗೆ ಆರಂಭವಾದ ಬಳಿಕವೂ ತೀವ್ರ ಉಷ್ಣತೆ ಮುಂದುವರಿದರೆ, ಶಾಖ ಸಂಬಂಧಿತ ಸಾವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಭಾರತದಲ್ಲಿ ಆರು ತಿಂಗಳ ಅವಧಿಯಲ್ಲಿ ಸುಮಾರು 15,800 ಮಂದಿ ತೀವ್ರ ಉಷ್ಣತೆಯಿಂದ ಸಾವಿಗೀಡಾಗಬಹುದು ಎಂಬುದು ಅಧ್ಯಯನದ ಅಂದಾಜು. ಇದರಲ್ಲಿ ಸುಮಾರು 1,600ರಷ್ಟು ವ್ಯತ್ಯಾಸ ಇರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಎಲ್‌ನಿನೊ ಎಂದರೇನು?
‘ಎಲ್‌ನಿನೊ’ ಎಂಬುದು ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ಭಾಗದಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುವ ನೈಸರ್ಗಿಕ ಹವಾಮಾನ ವಿದ್ಯಮಾನ. ಸಮುದ್ರದ ಈ ಉಷ್ಣತೆಯ ಬದಲಾವಣೆ ವಾತಾವರಣದ ಚಲನವಲನದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಇದರ ಪರಿಣಾಮ ಪೆಸಿಫಿಕ್ ಸಾಗರದ ಸುತ್ತಮುತ್ತ ಮಾತ್ರವಲ್ಲದೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ದೇಶಗಳಲ್ಲಿಯೂ ಕಾಣಿಸಿಕೊಳ್ಳಬಹುದು.
‘ಸೂಪರ್ ಎಲ್‌ನಿನೊ’ ಎಂದರೆ ಸಾಮಾನ್ಯ ಎಲ್‌ನಿನೊಗಿಂತಲೂ ಹೆಚ್ಚು ಪ್ರಬಲವಾದ ಹವಾಮಾನ ಬದಲಾವಣೆಯ ಸ್ಥಿತಿ. ಇಂತಹ ಸಂದರ್ಭದಲ್ಲಿ ಜಗತ್ತಿನ ಹಲವು ಭಾಗಗಳಲ್ಲಿ ತಾಪಮಾನ ಮತ್ತು ಮಳೆಯ ಸ್ವರೂಪದಲ್ಲಿ ದೊಡ್ಡ ಬದಲಾವಣೆಗಳು ಉಂಟಾಗಬಹುದು.
ಈಗಾಗಲೇ ಜಾಗತಿಕ ತಾಪಮಾನ ಅಸಾಮಾನ್ಯ ಮಟ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಅತ್ಯಂತ ಪ್ರಬಲವಾದ ಎಲ್‌ನಿನೊ ಸಂಭವಿಸಿದರೆ ಅದರ ಪರಿಣಾಮಗಳು ಮತ್ತಷ್ಟು ಗಂಭೀರವಾಗಬಹುದು ಎಂಬುದು ಅಧ್ಯಯನದ ಪ್ರಮುಖ ಎಚ್ಚರಿಕೆ. ತೀವ್ರ ಶಾಖದ ಅಲೆಗಳ ಜೊತೆಗೆ ಬರ, ಕಾಡ್ಗಿಚ್ಚು ಮತ್ತು ನೀರಿನ ಲಭ್ಯತೆಯ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ.
‘ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್’ (Climate Impact Lab) ಪ್ರಕಾರ, ಪ್ರಸ್ತುತ ವಿದ್ಯಮಾನದ ಅವಧಿಯಲ್ಲಿ ಭೂಮಿಯ ಮೇಲಿನ ಸರಾಸರಿ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ (baseline) 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಬಹುದು. ಸಾಮಾನ್ಯವಾದ ವರ್ಷಕ್ಕೆ ಹೋಲಿಸಿದರೆ, ವಾರ್ಷಕವಾಗಿ ತೀವ್ರ ಉಷ್ಣತೆಯ ದಿನಗಳ ಸಂಖ್ಯೆ ಶೇಕಡಾ 44 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವಿಜ್ಞಾನಿಗಳು ಹೇಳುವಂತೆ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭವಿಷ್ಯದಲ್ಲಿ ನಾವು ಇಂತಹ ಪರಿಸ್ಥಿತಿಗಳನ್ನು ಹೆಚ್ಚು ಆಗಾಗ್ಗೆ ಕಾಣಬಹುದು ಎಂಬುದಕ್ಕೆ ಇವು ಸೂಚಕಗಳಾಗಿವೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, “ಸೂಪರ್ ಎಲ್ ನಿನೊ” (Super El Niño) ಎಂಬ ಪದವು ವಿಶ್ವ ಹವಾಮಾನ ಸಂಸ್ಥೆಯ (World Meteorological Organization) ಅಧಿಕೃತ ಪರಿಭಾಷೆಯಲ್ಲ. ವಿಶ್ವ ಹವಾಮಾನ ಸಂಸ್ಥೆಯು ಈ ವಿದ್ಯಮಾನವನ್ನು “ಪ್ರಬಲ ಎಲ್ ನಿನೊ” (strong El Niño) ಎಂದು ಕರೆಯುತ್ತದೆ.
ಭಾರತದ ಮೇಲೆ ಏಕೆ ಪರಿನಾಮ ತೀವ್ರ…?
ಭಾರತದ ಬೃಹತ್ ಜನಸಂಖ್ಯೆ ಹೊಂದಿರುವ ರಾಷ್ಟ್ರ. ಹೀಗಾಗಿ ಹೆಚ್ಚಿನ ತಾಪಮಾನಕ್ಕೆ ಹೆಚ್ಚು ನೇರವಾಗಿ ಒಡ್ಡಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗಿದೆ. ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರ ಪ್ರಮಾಣವೂ ಹೆಚ್ಚಿರುವುದರಿಂದ ಭಾರತವು ತೀವ್ರ ಶಾಖದ ಪರಿಣಾಮಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ.
ದೀರ್ಘಕಾಲದ ಶಾಖದ ಅಲೆಗಳು ದೇಹದಲ್ಲಿ ನೀರಿನ ಕೊರತೆ ಉಂಟುಮಾಡಬಹುದು. ಇದನ್ನು ಡಿಹೈಡ್ರೇಷನ್ (Dehydration) ಎಂದು ಕರೆಯಲಾಗುತ್ತದೆ. ತೀವ್ರವಾದರೆ ಹೀಟ್‌ಸ್ಟ್ರೋಕ್ ಉಂಟಾಗಬಹುದು. ಅಲ್ಲದೆ ಹೃದಯ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು. ವಯೋವೃದ್ಧರು, ಮಕ್ಕಳು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಅಪಾಯಕ್ಕೆ ಒಳಗಾಗಬಹುದು.
ತಾಪಮಾನ ಹೆಚ್ಚಾದಾಗ ದೇಹ ತನ್ನ ಉಷ್ಣತೆಯನ್ನು ಕಡಿಮೆ ಮಾಡಲು ಬೆವರಿನ ಮೂಲಕ ಶಾಖವನ್ನು ಹೊರಹಾಕುತ್ತದೆ. ಆದರೆ ತಾಪಮಾನ ಮತ್ತು ಗಾಳಿಯಲ್ಲಿನ ತೇವಾಂಶ ಎರಡೂ ಹೆಚ್ಚಾಗಿದ್ದರೆ ದೇಹದಿಂದ ಶಾಖ ಹೊರಹಾಕುವುದು ಕಷ್ಟವಾಗುತ್ತದೆ. ಇದರಿಂದ ದೇಹದ ಉಷ್ಣಾಂಶ ಅಪಾಯಕಾರಿ ಮಟ್ಟಕ್ಕೆ ಏರಿ ಹೀಟ್‌ಸ್ಟ್ರೋಕ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಕ್ಕೂ ಅಪಾಯ
ಭಾರತದ ಹೊರತಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕದ ಕೆಲವು ಭಾಗಗಳು ಕೂಡ ಹೆಚ್ಚಿನ ಅಪಾಯದಲ್ಲಿವೆ ಎಂದು ಅಧ್ಯಯನ ಗುರುತಿಸಿದೆ.
ಫಿಲಿಪ್ಪೀನ್ಸ್, ಥಾಯ್ಲೆಂಡ್, ವಿಯೆಟ್ನಾಂ ಮತ್ತು ಕಾಂಬೋಡಿಯಾಗಳಲ್ಲಿ ಒಟ್ಟಾಗಿ ಸುಮಾರು 19,400ರಷ್ಟು ಹೆಚ್ಚುವರಿ ಶಾಖ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಇಂಡೋನೇಷ್ಯಾದಲ್ಲಿ ಸುಮಾರು 19,300 ಹಾಗೂ ಬ್ರೆಜಿಲ್‌ನಲ್ಲಿ ಸುಮಾರು 13,300 ಹೆಚ್ಚುವರಿ ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಅಲ್ಲದೆ, ಆಫ್ರಿಕಾದ ಸಹೇಲ್ ಪ್ರದೇಶವು ಸುಮಾರು 66,800 ಸಾವುಗಳನ್ನು ದಾಖಲಿಸುವ ಸಂಭವವಿದೆ ಎಂದು ಅದು ಹೇಳಿದೆ.
ಒಟ್ಟಾರೆ, ತೀವ್ರ ಶಾಖ ಮತ್ತು ಅದಕ್ಕೆ ಸಂಬಂಧಿಸಿದ ಹವಾಮಾನ ವೈಪರೀತ್ಯಗಳಿಂದ ಮುಂದಿನ ಆರು ತಿಂಗಳಲ್ಲಿ ವಿಶ್ವದಾದ್ಯಂತ ಸುಮಾರು 4.51 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಇದು ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ ಸಂಭವಿಸಬಹುದಾದ ಹೆಚ್ಚುವರಿ ಸಾವುಗಳ ಅಂದಾಜು.
ಮಳೆಯ ಮೇಲೂ ಎಲ್‌ನಿನೊ ಪರಿಣಾಮ
ಎಲ್‌ನಿನೊದ ಪರಿಣಾಮ ಕೇವಲ ತಾಪಮಾನ ಏರಿಕೆಗೆ ಸೀಮಿತವಾಗುವುದಿಲ್ಲ. ಇದು ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಮತ್ತು ಸಮಯದಲ್ಲೂ ಬದಲಾವಣೆ ತರಬಹುದು.
ಭಾರತದಲ್ಲಿ ಇಂತಹ ಬದಲಾವಣೆಗಳು ಕೃಷಿ, ನೀರಿನ ಲಭ್ಯತೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಳೆ ಕಡಿಮೆಯಾದರೆ ಅಥವಾ ಅದರ ಸಮಯ ಬದಲಾದರೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಹುದು. ದೀರ್ಘಕಾಲದ ಬಿಸಿಲು ಮತ್ತು ಕಡಿಮೆ ಮಳೆಯ ಪರಿಣಾಮ ನೀರಿನ ಮೂಲಗಳ ಮೇಲಿನ ಒತ್ತಡವೂ ಹೆಚ್ಚಾಗಬಹುದು.
ಹೀಗಾಗಿ ಎಲ್‌ನಿನೊವನ್ನು ಕೇವಲ ಸಮುದ್ರದ ನೀರು ಬೆಚ್ಚಗಾಗುವ ವಿದ್ಯಮಾನವೆಂದು ನೋಡಲು ಸಾಧ್ಯವಿಲ್ಲ. ಇದು ತಾಪಮಾನ, ಮಳೆ, ನೀರು, ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ಪರಿಣಾಮ ಬೀರುವ ದೊಡ್ಡ ಹವಾಮಾನ ಬದಲಾವಣೆಯ ಭಾಗವಾಗಿದೆ.
ಇದು ಖಚಿತ ಸಾವಿನ ಮುನ್ಸೂಚನೆಯಲ್ಲ-ಕೇವಲ ಅಂದಾಜು
ಅಧ್ಯಯನದಲ್ಲಿ ನೀಡಿರುವ 4.51 ಲಕ್ಷ ಜಾಗತಿಕ ಸಾವುಗಳು ಮತ್ತು ಭಾರತದಲ್ಲಿನ 15,800 ಸಾವುಗಳ ಅಂಕಿಅಂಶಗಳು ಖಚಿತ ಭವಿಷ್ಯವಾಣಿಗಳಲ್ಲ. ನಿರ್ದಿಷ್ಟ ಹವಾಮಾನ ಪರಿಸ್ಥಿತಿ ಉಂಟಾದರೆ ಸಂಭವಿಸಬಹುದಾದ ಹೆಚ್ಚುವರಿ ಸಾವುಗಳ ವೈಜ್ಞಾನಿಕ ಅಂದಾಜುಗಳಿವು.
ವಾಸ್ತವವಾಗಿ ಎಷ್ಟು ಸಾವುಗಳು ಸಂಭವಿಸುತ್ತವೆ ಎಂಬುದು ಎಲ್‌ನಿನೊದ ತೀವ್ರತೆ ಮತ್ತು ಅದು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದರ ಜೊತೆಗೆ ಸ್ಥಳೀಯ ತಾಪಮಾನ, ಮಳೆಯ ಪ್ರಮಾಣ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಿದ್ಧತೆ, ಜನರಿಗೆ ತಂಪಾಗಿರಲು ಲಭ್ಯವಿರುವ ವ್ಯವಸ್ಥೆಗಳು, ವೈದ್ಯಕೀಯ ಸೇವೆಗಳ ಲಭ್ಯತೆ ಮತ್ತು ತೀವ್ರ ಶಾಖದ ಸಂದರ್ಭದಲ್ಲಿ ತಕ್ಷಣ ಕೈಗೊಳ್ಳುವ ಕ್ರಮಗಳೂ ಪ್ರಮುಖ ಪಾತ್ರ ವಹಿಸುತ್ತವೆ.
ಹೀಗಾಗಿ ‘ಸೂಪರ್ ಎಲ್‌ನಿನೊ’ದ ಸಾಧ್ಯತೆ ಬಗ್ಗೆ ಬಂದಿರುವ ಈ ಅಧ್ಯಯನವನ್ನು ಭವಿಷ್ಯದ ಖಚಿತ ಸಾವಿನ ಸಂಖ್ಯೆಯಾಗಿ ನೋಡದೆ, ತೀವ್ರ ಶಾಖದ ಪರಿಸ್ಥಿತಿಗಳಿಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯದ ಎಚ್ಚರಿಕೆಯಾಗಿ ನೋಡಬೇಕಾಗಿದೆ. ಶಾಖದ ಅಲೆಗಳನ್ನು ಎದುರಿಸಲು ಮುಂಚಿತ ಸಿದ್ಧತೆ, ನೀರಿನ ಸಮರ್ಪಕ ನಿರ್ವಹಣೆ, ಆರೋಗ್ಯ ಸೇವೆಗಳ ಸನ್ನದ್ಧತೆ ಮತ್ತು ಹೆಚ್ಚು ಅಪಾಯದಲ್ಲಿರುವ ಜನರ ರಕ್ಷಣೆ ಈ ಸಂದರ್ಭದಲ್ಲಿ ಪ್ರಮುಖವಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ