ನವದೆಹಲಿ: ಎಂ3ಎಂ ಹುರೂನ್ ಇಂಡಿಯಾ ರಿಚ್ ಲಿಸ್ಟ್ 2026 (M3M Hurun India Rich List 2026) ಪ್ರಕಟವಾಗಿದ್ದು, ಉದ್ಯಮಿ ಗೌತಮ ಅದಾನಿ ಮತ್ತು ಅವರ ಕುಟುಂಬವು ಮತ್ತೆ ಭಾರತದ ಅತಿ ಶ್ರೀಮಂತ ಕುಟುಂಬವಾಗಿ ಮೊದಲ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಕಳೆದ ವರ್ಷ ಅಗ್ರಸ್ಥಾನದಲ್ಲಿದ್ದ ಮುಕೇಶ ಅಂಬಾನಿ ಮತ್ತು ಕುಟುಂಬವನ್ನು ಹಿಂದಿಕ್ಕಿ ಅದಾನಿ ಕುಟುಂಬ ಮೊದಲ ಸ್ಥಾನಕ್ಕೇರಿದೆ. ಇದೇ ವೇಳೆ ದೇಶದಲ್ಲಿ ಡಾಲರ್ ಬಿಲಿಯನೇರ್‌ಗಳ ಸಂಖ್ಯೆ ದಾಖಲೆಯ 391ಕ್ಕೆ ಏರಿಕೆಯಾಗಿದೆ.
ಪಟ್ಟಿಯ ಪ್ರಕಾರ, ಗೌತಮ ಅದಾನಿ ಮತ್ತು ಕುಟುಂಬದ ಒಟ್ಟು ಆಸ್ತಿ ಮೌಲ್ಯ ₹9.23 ಲಕ್ಷ ಕೋಟಿ ಆಗಿದ್ದು, ಕಳೆದ ವರ್ಷದೊಂದಿಗೆ ಹೋಲಿಸಿದರೆ 13% ಹೆಚ್ಚಳವಾಗಿದೆ. ಮತ್ತೊಂದೆಡೆ, ಮುಖೇಶ ಅಂಬಾನಿ ಮತ್ತು ಕುಟುಂಬದ ಆಸ್ತಿ ಮೌಲ್ಯವು 10% ಇಳಿಕೆಯಾಗಿದ್ದು ₹8.63 ಲಕ್ಷ ಕೋಟಿಗೆ ತಲುಪಿದೆ. ಇದರಿಂದ ಅದಾನಿ ಕುಟುಂಬವು ಅಂಬಾನಿ ಕುಟುಂಬಕ್ಕಿಂತ ₹59,400 ಕೋಟಿ ಹೆಚ್ಚು ಆಸ್ತಿ ಮೌಲ್ಯವನ್ನು ಹೊಂದಿದೆ.
ಹುರೂನ್ ಇಂಡಿಯಾ ರಿಚ್ ಲಿಸ್ಟ್ 2026: ಭಾರತದ ಟಾಪ್-10 ಶ್ರೀಮಂತರು
ಗೌತಮ ಅದಾನಿ ಮತ್ತು ಕುಟುಂಬ — ₹9.23 ಲಕ್ಷ ಕೋಟಿ
ಮುಕೇಶ ಅಂಬಾನಿ ಮತ್ತು ಕುಟುಂಬ — ₹8.63 ಲಕ್ಷ ಕೋಟಿ
ಎಲ್.ಎನ್. ಮಿತ್ತಲ್ ಮತ್ತು ಕುಟುಂಬ — ₹3.39 ಲಕ್ಷ ಕೋಟಿ
ಸೈರಸ್ ಎಸ್. ಪೂನಾವಾಲಾ ಮತ್ತು ಕುಟುಂಬ — ₹3.03 ಲಕ್ಷ ಕೋಟಿ
ರೋಶ್ನಿ ನಾಡಾರ್ ಮಲ್ಹೋತ್ರಾ ಮತ್ತು ಕುಟುಂಬ — ₹2.79 ಲಕ್ಷ ಕೋಟಿ
ಕುಮಾರ್ ಮಂಗಳಂ ಬಿರ್ಲಾ ಮತ್ತು ಕುಟುಂಬ — ₹2.69 ಲಕ್ಷ ಕೋಟಿ
ದಿಲೀಪ್ ಸಾಂಘ್ವಿ — ₹2.65 ಲಕ್ಷ ಕೋಟಿ
ಅಜೀಂ ಪ್ರೇಮ್‌ಜಿ ಮತ್ತು ಕುಟುಂಬ — ₹2.63 ಲಕ್ಷ ಕೋಟಿ
ಅನಿಲ್ ಅಗರ್ವಾಲ್ ಮತ್ತು ಕುಟುಂಬ — ₹2.08 ಲಕ್ಷ ಕೋಟಿ
ಸಮೀರ್ ಮೆಹ್ತಾ ಮತ್ತು ಕುಟುಂಬ — ₹1.89 ಲಕ್ಷ ಕೋಟಿ
ಈ ವರ್ಷದ ಶ್ರೀಮಂತರ ಪಟ್ಟಿಯು ಭಾರತದಲ್ಲಿ ಸಂಪತ್ತಿನ ರಚನೆ ಹೇಗೆ ಬದಲಾಗುತ್ತಿದೆ ಎಂಬುದಕ್ಕೂ ಸ್ಪಷ್ಟ ಚಿತ್ರಣ ನೀಡಿದೆ. ಸಾಂಪ್ರದಾಯಿಕ ಕೈಗಾರಿಕಾ ಮತ್ತು ಔಷಧೋದ್ಯಮ ಕ್ಷೇತ್ರಗಳು ಇನ್ನೂ ಪ್ರಾಬಲ್ಯ ಹೊಂದಿದ್ದರೂ, ಕೃತಕ ಬುದ್ಧಿಮತ್ತೆ (AI), ಡೇಟಾ ಸೆಂಟರ್‌ಗಳು, ರಕ್ಷಣಾ ಉತ್ಪಾದನೆ, ಸೆಮಿಕಂಡಕ್ಟರ್‌ಗಳು ಹಾಗೂ ಹಸಿರು ಇಂಧನ ಕ್ಷೇತ್ರಗಳು ಆಸ್ತಿ ಸೃಷ್ಟಿಯ ಪ್ರಮುಖ ವಲಯಗಳಾಗಿ ಹೊರಹೊಮ್ಮಿವೆ.
ಹುರೂನ್ ಇಂಡಿಯಾದ ಸಂಸ್ಥಾಪಕ ಹಾಗೂ ಸಂಶೋಧನಾ ತಂಡದ ಮುಖ್ಯಸ್ಥ ಅನಾಸ್ ರೆಹಮಾನ್ ಜುನೈದ್ ಅವರ ಪ್ರಕಾರ, ಸಮಾನ ಆಧಾರದ ಮೇಲೆ ಪರಿಶೀಲಿಸಿದಾಗ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಂಪತ್ತು 69% ಏರಿಕೆಯಾಗಿದೆ. ಹಸಿರು ಇಂಧನ ಮತ್ತು ಕೈಗಾರಿಕಾ ಉತ್ಪನ್ನಗಳ ಕ್ಷೇತ್ರಗಳಲ್ಲಿ ತಲಾ 31# , ಲೋಹ ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ 30%, ಔಷಧೋದ್ಯಮದಲ್ಲಿ 25% ಹಾಗೂ ಹಣಕಾಸು ಸೇವಾ ವಲಯದಲ್ಲಿ 23% ಬೆಳವಣಿಗೆ ದಾಖಲಾಗಿದೆ.
ಕೈಗಾರಿಕಾ ಉತ್ಪನ್ನಗಳ ಕ್ಷೇತ್ರವೇ ಅತಿ ಹೆಚ್ಚು ಹೊಸ ಶ್ರೀಮಂತರನ್ನು ಸೃಷ್ಟಿಸಿದ್ದು, ಈ ವಲಯದಿಂದ 44 ಹೊಸ ಎಂಟ್ರಿಗಳು ಬಂದಿವೆ. ವೈಯಕ್ತಿಕ ಆಸ್ತಿ ಏರಿಕೆಯಲ್ಲಿ ಎಲ್.ಎನ್. ಮಿತ್ತಲ್ ಮತ್ತು ಕುಟುಂಬದ ಸಂಪತ್ತು 93%, ಅನೀಲ ಅಗರ್ವಾಲ್ ಮತ್ತು ಕುಟುಂಬದ ಸಂಪತ್ತು 87% ಹಾಗೂ ಸಮೀರ ಮೆಹ್ತಾ ಮತ್ತು ಕುಟುಂಬದ ಸಂಪತ್ತು 52% ಹೆಚ್ಚಳವಾಗಿದೆ. ಆರ್ಡರ್ ಬುಕ್‌ಗಳು, ಮೂಲಸೌಕರ್ಯ ಹೂಡಿಕೆ, ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಬೇಡಿಕೆಗಳು ಸಂಪತ್ತಿನ ಸೃಷ್ಟಿಯ ಪ್ರಮುಖ ಚಾಲಕಶಕ್ತಿಗಳಾಗುತ್ತಿವೆ ಎಂದು ಜುನೈದ್ ಹೇಳಿದ್ದಾರೆ.
ದೇಶದಲ್ಲಿ ಈಗ ದಾಖಲೆಯ 391 ಡಾಲರ್ ಬಿಲಿಯನೇರ್‌ಗಳಿದ್ದು, ಈ ಪಟ್ಟಿಗೆ 76 ಹೊಸ ಮುಖಗಳು ಸೇರ್ಪಡೆಯಾಗಿವೆ. ಕಳೆದ ಒಂದು ವರ್ಷದಲ್ಲೇ ಭಾರತವು 27 ಹೊಸ ಡಾಲರ್ ಬಿಲಿಯನೇರ್‌ಗಳನ್ನು ಸೇರಿಸಿಕೊಂಡಿದೆ. ಐದು ವರ್ಷಗಳ ಹಿಂದೆ ಈ ಸಂಖ್ಯೆ 237 ಆಗಿದ್ದರೆ, ಇದೀಗ 391ಕ್ಕೆ ಏರಿಕೆಯಾಗಿದೆ.
ರೂಪಾಯಿ ಮೌಲ್ಯದ ಕುಸಿತವನ್ನು ಉಲ್ಲೇಖಿಸಿದ ಜುನೈದ್, “2014ರ ವಿನಿಮಯ ದರವನ್ನು ಆಧಾರವಾಗಿಟ್ಟುಕೊಂಡಿದ್ದರೆ ಭಾರತದಲ್ಲಿ ಡಾಲರ್ ಬಿಲಿಯನೇರ್‌ಗಳ ಸಂಖ್ಯೆ 559 ಆಗುತ್ತಿತ್ತು. ಆದರೆ ರೂಪಾಯಿ ಮೌಲ್ಯದ ಬದಲಾವಣೆಯಿಂದ 168 ಮಂದಿ ಬಿಲಿಯನೇರ್ ಕ್ಲಬ್‌ನ ಹೊರಗೇ ಉಳಿದಿದ್ದಾರೆ” ಎಂದು ಹೇಳಿದ್ದಾರೆ.
ಒಟ್ಟಾರೆ 2026ರ ಪಟ್ಟಿಯಲ್ಲಿ ಕನಿಷ್ಠ ₹1,000 ಕೋಟಿ ಆಸ್ತಿ ಹೊಂದಿರುವ 1,810 ಮಂದಿ ಸ್ಥಾನ ಪಡೆದಿದ್ದಾರೆ. ಇದು ಕಳೆದ ವರ್ಷಕ್ಕಿಂತ 128 ಹೆಚ್ಚು ಹಾಗೂ ಐದು ವರ್ಷಗಳ ಹಿಂದಿಗಿಂತ 803 ಹೆಚ್ಚು. ಈ ಎಲ್ಲರ ಒಟ್ಟು ಆಸ್ತಿ ಮೌಲ್ಯ ₹187.5 ಲಕ್ಷ ಕೋಟಿಯಾಗಿದ್ದು, ಸುಮಾರು 1.96 ಟ್ರಿಲಿಯನ್ ಡಾಲರ್‌ಗೆ ಸಮಾನವಾಗಿದೆ. ಇದು ಕಳೆದ ವರ್ಷಕ್ಕಿಂತ 12.8% ಹೆಚ್ಚಳವಾಗಿದ್ದು, ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಸುಮಾರು ಅರ್ಧದಷ್ಟಾಗಿದೆ.
ಗಮನಾರ್ಹ ಸಂಗತಿಯೆಂದರೆ, ಭಾರತೀಯ ಷೇರುಪೇಟೆ ದುರ್ಬಲಗೊಂಡಿದ್ದ ಅವಧಿಯಲ್ಲಿಯೇ ಶ್ರೀಮಂತರ ಒಟ್ಟು ಸಂಪತ್ತು ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ ನಿಫ್ಟಿ-50 ಸೂಚ್ಯಂಕ 3.9% ಮತ್ತು ಸೆನ್ಸೆಕ್ಸ್ 5.8% ಕುಸಿದಿದ್ದರೂ, ಪಟ್ಟಿಯಲ್ಲಿರುವವರ ಒಟ್ಟು ಸಂಪತ್ತು 12.8% ಏರಿಕೆಯಾಗಿದೆ.
ಆದರೆ ಈ ಬೆಳವಣಿಗೆಯು ಕೇವಲ ಷೇರುಪೇಟೆಯ ಲಾಭದಿಂದಲೇ ಉಂಟಾಗಿದೆ ಎನ್ನಲು ಸಾಧ್ಯವಿಲ್ಲ. ಪಟ್ಟಿಯಲ್ಲಿ ಪರಿಗಣಿಸಲಾದ ಸಂಪತ್ತಿನ ಬಹುಪಾಲು ಉದ್ಯಮಗಳಲ್ಲಿನ ಮಾಲೀಕತ್ವದ ಪಾಲುಗಳಿಗೆ ಸಂಬಂಧಿಸಿದ್ದು, ಅವುಗಳ ಮೌಲ್ಯಮಾಪನವು ಸಾಮಾನ್ಯ ಷೇರುಪೇಟೆಯ ಏರಿಳಿತಗಳಿಗಿಂತ ಭಿನ್ನವಾಗಿ ಬದಲಾಗಬಹುದು ಎಂದು ವರದಿಯಲ್ಲಿ ವಿವರಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ