ಧಾರವಾಡ : ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಇನ್ನಿಲ್ಲ

ಧಾರವಾಡ : ರೋಗಿಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಜೀವನದ ಸಂಕಷ್ಟಗಳಿಂದ ಬಳಲುತ್ತಿದ್ದವರಿಗೆ ಭಾವನಾತ್ಮಕ ಬೆಂಬಲ, ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುತ್ತಿದ್ದ ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ (71) ಅವರು ಗುರುವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೂಲತಃ ಹಾವೇರಿಯವರಾದ ಡಾ. ಆನಂದ ಪಾಂಡುರಂಗಿ ಅವರು ಕಿಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಪದವಿ ಪಡೆದಿದ್ದರು. ಬಳಿಕ ಮಿರಜ್‌ನ ಖ್ಯಾತ ಮನೋವೈದ್ಯ ಡಾ. ಬಿ.ಎಂ. ದೇಬಾಸಿಕ್ದಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅವರು, ನಂತರ ಧಾರವಾಡವನ್ನು ತಮ್ಮ ವೃತ್ತಿಜೀವನದ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು.
ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಡಾ. ಪಾಂಡುರಂಗಿ ಅವರು ರೋಗಿಗಳನ್ನು ಅತ್ಯಂತ ಕರುಣೆ ಮತ್ತು ಮಾನವೀಯತೆಯಿಂದ ಕಾಣುವ ವೈದ್ಯರಾಗಿ ಹೆಸರು ಗಳಿಸಿದ್ದರು. ಅವರ ಪಾಲಿಗೆ ವೈದ್ಯಕೀಯ ಸೇವೆ ಎಂದರೆ ಕೇವಲ ಔಷಧಿ ನೀಡುವುದಾಗಿರಲಿಲ್ಲ. ರೋಗಿಗಳಲ್ಲಿದ್ದ ಭಯ, ನಿರಾಶೆ ಹಾಗೂ ಭಾವನಾತ್ಮಕ ಸಂಕಷ್ಟಗಳನ್ನು ನಿವಾರಿಸಿ, ಜೀವನವನ್ನು ಎದುರಿಸುವ ಧೈರ್ಯ ತುಂಬುವುದಕ್ಕೂ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅವರ ಈ ಮಾನವೀಯ ಚಿಕಿತ್ಸಾ ವಿಧಾನಕ್ಕೆ ಅವರನ್ನು ಭೇಟಿಯಾಗುತ್ತಿದ್ದವರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಪ್ರಮುಖ ಸುದ್ದಿ :-   ಬಿಪಿ, ಹೃದಯ ಕಾಯಿಲೆ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಮಾಸ್ಟರ್‌ ಪ್ಲಾನ್ ; 2030ರೊಳಗೆ ಉಪ್ಪಿನ ಸೇವನೆ ಶೇ.30ರಷ್ಟು ಇಳಿಕೆಗೆ ಯೋಜನೆ

ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದರೂ ಡಾ. ಪಾಂಡುರಂಗಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಅವರು ನಿರಂತರವಾಗಿ ಪಾಲ್ಗೊಳ್ಳುತ್ತಿದ್ದರು.
ಅವರ ಬಳಿ ಕೇವಲ ಮಾನಸಿಕ ರೋಗಿಗಳು ಮಾತ್ರ ಬರುತ್ತಿರಲಿಲ್ಲ. ಪರೀಕ್ಷೆ ಭಯವಿರುವ ವಿದ್ಯಾರ್ಥಿಗಳು, ಕೆಲಸದ ಒತ್ತಡದಲ್ಲಿ ಕುಗ್ಗಿಹೋದವರು ಹೀಗೆ ಎಲ್ಲರೂ ಅವರ ಬಳಿ ಬರುತ್ತಿದ್ದರು. ಪತ್ರಿಕೆಗಳಲ್ಲಿ ಪರೀಕ್ಷೆ ಸಮಯದಲ್ಲಿ ಅವರು ಬರೆಯುತ್ತಿದ್ದ ಅಂಕಣಗಳು ಎಷ್ಟೋ ಮಕ್ಕಳಿಗೆ ಉಪಯುಕ್ತವಾಗಿದ್ದವು. ಬದುಕಿನ ಬಗ್ಗೆ ಸಾವಿರಾರು ಉಪನ್ಯಾಸಗಳನ್ನು ನೀಡಿದ್ದರು. ಅವರು ಅನೇಕ ಕಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರು.
ವೈದ್ಯಕೀಯ ಕ್ಷೇತ್ರ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಹಲವು ಗೌರವಗಳು ಸಂದಿದ್ದವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಿ.ಸಿ. ರಾಯ್ ಪ್ರಶಸ್ತಿ, ಗೌರವ ಡಾಕ್ಟರೇಟ್ ಹಾಗೂ ಅವ್ವ ಸೇವಾ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿ-ಗೌರವಗಳಿಗೆ ಅವರು ಭಾಜನರಾಗಿದ್ದರು.
ಡಾ. ಪಾಂಡುರಂಗಿ ಅವರು ಪತ್ನಿ, ಮನೋವೈದ್ಯರಾಗಿರುವ ಪುತ್ರ ಆದಿತ್ಯ, ಸೊಸೆ ಸೇರಿದಂತೆ ಅಪಾರ ಬಂಧುಗಳು ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ವೈದ್ಯಕೀಯ ಕ್ಷೇತ್ರದ ಗಣ್ಯರು ಹಾಗೂ ಧಾರವಾಡದ ಜನರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮನಸ್ಸಿನ ಕಾಯಿಲೆಗಳನ್ನು ಗುಣಪಡಿಸುವ ವೈದ್ಯರಷ್ಟೇ ಅಲ್ಲದೆ, ಸಂಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬಿ ಬದುಕಿನತ್ತ ಹೊಸ ಭರವಸೆ ಮೂಡಿಸುತ್ತಿದ್ದ ಮಾನವೀಯ ವೈದ್ಯರಾಗಿ ಡಾ. ಆನಂದ್ ಪಾಂಡುರಂಗಿ ಅವರನ್ನು ಜನರು ಸ್ಮರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ರೇಣುಕಾಸ್ವಾಮಿ ಕೊಲೆ ಪ್ರಕರಣ : ಮಾಫಿ ಸಾಕ್ಷಿ ಆದೇಶ ರದ್ದತಿ ಕೋರಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement