ಏಷ್ಯನ್‌ ಗೇಮ್ಸ್‌ನಲ್ಲಿ ಮತ್ತೊಂದು ಚಿನ್ನ : ಪುರುಷರ ಕಬಡ್ಡಿಯಲ್ಲಿ ಇರಾನ್‌ ಮಣಿಸಿ ಚಿನ್ನ ಗೆದ್ದ ಭಾರತ

ಐಚಿ-ನಗೋಯಾ : ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ 2026ರಲ್ಲಿ ಭಾರತೀಯ ಪುರುಷರ ಕಬಡ್ಡಿ ತಂಡ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದಿದ್ದು, ಫೈನಲ್‌ನಲ್ಲಿ ಇರಾನ್‌ ತಂಡವನ್ನು 40-34 ಅಂಕಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದೆ. ಜಪಾನ್‌ನ ಐಚಿಯ ಟೊಕೈ ಸಿಟಿಜನ್‌ ಜಿಮ್ನೇಷಿಯಂನಲ್ಲಿ ನಡೆದ ಈ ಹಣಾಹಣಿಯಲ್ಲಿ ಗೆಲುವು ಸಾಧಿಸಿದ ಭಾರತ, ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ತನ್ನ ಒಂಬತ್ತನೇ ಕಬಡ್ಡಿ ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಏಷ್ಯನ್‌ ಗೇಮ್ಸ್‌ನಲ್ಲಿ ಇದುವರೆಗೆ ನಡೆದ 10 ಪುರುಷರ ಕಬಡ್ಡಿ ಸ್ಪರ್ಧೆಗಳ ಪೈಕಿ ಭಾರತ ಒಂಬತ್ತು ಬಾರಿ ಚಿನ್ನದ ಪದಕ ಗೆದ್ದಿದ್ದು, 2018ರ ಜಕಾರ್ತಾದಲ್ಲಿ ನಡೆದ ಕೂಟದಲ್ಲಿ ಮಾತ್ರ ಇರಾನ್‌ ಚಾಂಪಿಯನ್‌ ಆಗಿತ್ತು.
ಫೈನಲ್‌ ಪಂದ್ಯ ಆರಂಭದಿಂದಲೇ ತೀವ್ರ ಪೈಪೋಟಿಯಿಂದ ಕೂಡಿತ್ತು. ಎರಡೂ ತಂಡಗಳ ಆಟಗಾರರು ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಒಂದು ಹಂತದಲ್ಲಿ ಭಾರತ ಕೇವಲ ಇಬ್ಬರು ಆಟಗಾರರೊಂದಿಗೆ ಮೈದಾನದಲ್ಲಿದ್ದು 7-9 ಅಂಕಗಳಿಂದ ಹಿನ್ನಡೆಯಲ್ಲಿತ್ತು. ಈ ಸಂದರ್ಭದಲ್ಲಿ ಜೈದೀಪ ದಹಿಯಾ ಅವರು ಇರಾನಿನ ಮೊಹಮ್ಮದ್‌ರೆಜಾ ಶದ್ಲೂಯಿ ಚಿಯಾನೆಹ್‌ ವಿರುದ್ಧ ನಿರ್ಣಾಯಕ ಸೂಪರ್‌ ಟ್ಯಾಕಲ್‌ ನಡೆಸಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು.

ಆ ಬಳಿಕ ಭಾರತ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾದರೂ, ಹೆಚ್ಚು ಆಟಗಾರರನ್ನು ಕಣದಲ್ಲಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಇರಾನಿನ ಅಮೀರ್‌ಮೊಹಮ್ಮದ್‌ ಜಫರ್‌ ದಾನೇಶ್‌ ಅವರು ಎರಡು ಅಂಕಗಳ ರೈಡ್‌ ಮೂಲಕ ಪಂದ್ಯದ ಮೊದಲ ‘ಆಲ್‌ಔಟ್‌’ ಅನ್ನು ಭಾರತಕ್ಕೆ ನೀಡುವಲ್ಲಿ ಯಶಸ್ವಿಯಾದರು.
ಆದರೂ ಅಂಕಗಳ ಅಂತರ ಹೆಚ್ಚಾಗಲಿಲ್ಲ. ಪಂದ್ಯವು ಸಮಬಲದ ಹೋರಾಟವಾಗಿ ಮುಂದುವರಿಯಿತು. ಅರ್ಜುನ ದೇಶ್ವಾಲ್‌ ಅವರ ಚುರುಕಿನ ರೈಡ್‌ ಹಾಗೂ ಶದ್ಲೂಯಿ ವಿರುದ್ಧ ಭಾರತದ ಸಾಹಸಮಯ ಡ್ಯಾಶ್‌ ಟ್ಯಾಕಲ್‌ ತಂಡಕ್ಕೆ 16-14ರ ಮುನ್ನಡೆ ತಂದುಕೊಟ್ಟಿತು.
ಆದರೆ ಇರಾನ್‌ ಕೂಡ ತಕ್ಷಣವೇ ತಿರುಗೇಟು ನೀಡಿತು. ಮೂರು ಆಟಗಾರರ ಸೂಪರ್‌ ಟ್ಯಾಕಲ್‌ ಮೂಲಕ ಭಾರತಕ್ಕೆ ಹೊಡೆತ ನೀಡಿದ ಇರಾನ್‌, ಮೊದಲಾರ್ಧದ ಅಂತ್ಯಕ್ಕೆ 18-17 ಅಂಕಗಳ ಮುನ್ನಡೆ ಸಾಧಿಸಿತು. ವಿಶೇಷವಾಗಿ ಜಫರ್‌ ದಾನೇಶ್‌ ಅವರ ಸರ್ವಾಂಗೀಣ ಪ್ರದರ್ಶನ ಇರಾನ್‌ಗೆ ದೊಡ್ಡ ಬಲವಾಯಿತು.

ಪ್ರಮುಖ ಸುದ್ದಿ :-   ಮಹಿಳೆಯ ಮಾರ್ಫ್‌ ಫೋಟೊ ವಿವಾದ: ಡಿಲೀಟ್‌ ಮಾಡಲು ಮೆಟಾಗೆ ದೆಹಲಿ ಹೈಕೋರ್ಟ್‌ ಆದೇಶ, ಸಿಜೆಪಿ ನಾಯಕರಿಗೆ ನೋಟಿಸ್‌

ದ್ವಿತೀಯಾರ್ಧದಲ್ಲೂ ಇರಾನ್‌ ಅಂಕಗಳ ಸುರಿಮಳೆಗೈದು ಭಾರತವನ್ನು ಮತ್ತೆ ಕೆಲಕಾಲ ಕೇವಲ ಮೂವರು ಆಟಗಾರರ ಮಟ್ಟಕ್ಕೆ ಇಳಿಸಿತು. ಆದರೆ ಭಾರತ ಮತ್ತೊಮ್ಮೆ ಸೂಪರ್‌ ಟ್ಯಾಕಲ್‌ ಹಾಗೂ ಅಸ್ಲಂ ಇನಾಂದಾರ್‌ ಅವರ ಯಶಸ್ವಿ ರೈಡ್‌ ನೆರವಿನಿಂದ ಪುಟಿದೆದ್ದಿತು. ಈ ಹಂತವೇ ಪಂದ್ಯದ ತಿರುವಿಗೆ ಕಾರಣವಾಯಿತು. ಭಾರತ ತನ್ನ ಲಯ ಕಂಡುಕೊಂಡು ಇರಾನ್‌ ತಂಡವನ್ನು ಕೇವಲ ಇಬ್ಬರು ಆಟಗಾರರ ಮಟ್ಟಕ್ಕೆ ಇಳಿಸಿತು. ಇರಾನ್‌ ನಾಯಕ ಫಝೆಲ್‌ ಅಟ್ರಾಚಲಿ ಹಾಗೂ ಓಮಿದ್‌ ಖೋಜಸ್ತೆಹ್‌ಮೊಹಮ್ಮದ್‌ಶಾಹ್‌ ಅವರು ಅರ್ಜುನ್‌ ದೇಶ್ವಾಲ್‌ ವಿರುದ್ಧ ಸೂಪರ್‌ ಟ್ಯಾಕಲ್‌ ನಡೆಸುವ ಮೂಲಕ ಚೇತರಿಕೆಯ ಪ್ರಯತ್ನ ನಡೆಸಿದರು. ಆದರೆ ಭಾರತೀಯ ರಕ್ಷಣಾ ಪಡೆ ಸಂಘಟಿತ ಪ್ರದರ್ಶನ ನೀಡುತ್ತಾ ಪಂದ್ಯದ ಮೊದಲ ‘ಆಲ್‌ಔಟ್‌’ ಅನ್ನು ಇರಾನ್‌ಗೆ ನೀಡಿ 29-24ರ ಮುನ್ನಡೆ ಸಾಧಿಸಿತು.
ಈ ಹಂತದಲ್ಲಿ ಸುಮಿತ್‌ ಅವರ ಪ್ರದರ್ಶನ ನಿರ್ಣಾಯಕವಾಗಿತ್ತು. ಅವರ ಅಂಕ ತಂದುಕೊಟ್ಟ ಟ್ಯಾಕಲ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸಿದವು.
ಇರಾನ್‌ನ ಶದ್ಲೂಯಿ ನಿರಂತರವಾಗಿ ಟಚ್‌ ಪಾಯಿಂಟ್‌ಗಳನ್ನು ಗಳಿಸುತ್ತಾ ತಂಡವನ್ನು ಸ್ಪರ್ಧೆಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಭಾರತೀಯ ರೈಡರ್‌ಗಳು ಅಂಕಗಳ ಅಂತರವನ್ನು ನಿಧಾನವಾಗಿ ಹೆಚ್ಚಿಸುತ್ತಲೇ ಹೋದರು. ಪಂದ್ಯ ಮುಗಿಯಲು ಎರಡು ನಿಮಿಷ ಬಾಕಿ ಇರುವಾಗ ಭಾರತ ಏಳು ಅಂಕಗಳ ಮುನ್ನಡೆ ಸಾಧಿಸಿತ್ತು. ಈ ಮುನ್ನಡೆಯನ್ನು ಸಮರ್ಥವಾಗಿ ಕಾಯ್ದುಕೊಂಡ ಭಾರತ ಅಂತಿಮವಾಗಿ 40-34 ಅಂಕಗಳಿಂದ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡಿತು.

ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್‌: ರೋಚಕ ಹೋರಾಟದಲ್ಲಿ ಇರಾನ್‌ ಮಣಿಸಿ ಚಿನ್ನ ಗೆದ್ದ ಭಾರತ ಮಹಿಳಾ ಕಬಡ್ಡಿ ತಂಡ

ಐಚಿ-ನಗೋಯಾ ಏಷ್ಯನ್‌ ಗೇಮ್ಸ್‌ ಪುರುಷರ ಕಬಡ್ಡಿ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಸ್ಪರ್ಧಿಸಿದ್ದವು. ತಂಡಗಳನ್ನು ತಲಾ ಐದು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.
ಭಾರತದ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಚೈನೀಸ್‌ ತೈಪೆ ಹಾಗೂ ಆತಿಥೇಯ ಜಪಾನ್‌ ತಂಡಗಳಿದ್ದವು. ‘ಬಿ’ ಗುಂಪಿನಲ್ಲಿ ಇರಾನ್‌, ನೇಪಾಳ, ಥಾಯ್ಲೆಂಡ್‌, ಪಾಕಿಸ್ತಾನ ಹಾಗೂ ಮಲೇಷ್ಯಾ ತಂಡಗಳು ಸ್ಪರ್ಧಿಸಿದ್ದವು.
ಲೀಗ್‌ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿದ್ದವು. ಸೆಮಿಫೈನಲ್‌ನಲ್ಲಿ ಸೋತ ಥಾಯ್ಲೆಂಡ್‌ ಮತ್ತು ಚೈನೀಸ್‌ ತೈಪೆ ತಂಡಗಳು ಕಂಚಿನ ಪದಕಕ್ಕೆ ತೃಪ್ತಿಪಟ್ಟವು. ಅಂತಿಮವಾಗಿ ಭಾರತ ಚಿನ್ನ ಮತ್ತು ಇರಾನ್‌ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡವು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement