ಕಾರವಾರ : ಸಮುದ್ರಕ್ಕೆ ಇಳಿದಿದ್ದ ವೇಳೆ ಅಪಾಯಕಾರಿ ಅಲೆಗಳ ಸೆಳೆತಕ್ಕೆ ಸಿಲುಕಿ ದಡ ಸೇರಲಾಗದೆ ಪರದಾಡುತ್ತಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರನ್ನು ಕೂಡ್ಲೆ ಬೀಚ್‌ನ ಜೀವ ರಕ್ಷಕ ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಪಾರಾ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ ಎಂದುವರದಿಯಾಗಿದೆ.
ಈ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ ಎಂದು ಹೇಳಲಾಗಿದ್ದು, ಬೆಂಗಳೂರಿನ ಹರಿಬಾಬು (30) ಹಾಗೂ ಶರವಣ (30) ಎಂಬ ಪ್ರವಾಸಿಗರನ್ನು ಸಮುದ್ರದಿಂದ ಬಚಾವ್ ಮಾಡಲಾಗಿದೆ.
ಮೂವರು ಗೋಕರ್ಣ ಪ್ರವಾಸಕ್ಕೆ ಬಂದಿದ್ದ ವೇಳೆ ಸಮುದ್ರಕ್ಕೆ ಇಳಿದು ಈಜಾಟವಾಡುತ್ತಿದ್ದಾಗ ಈ ಇಬ್ಬರು ಸುಳಿಯ ಸೆಳೆತಕ್ಕೆ ಸಿಲುಕಿ ದಡದತ್ತ ಬರಲಾಗದೇ ಅಪಾಯಕ್ಕೆ ಸಿಲುಕಿದ್ದರು.
ಇದನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ ಹಾಗೂ ಜೆಸ್ಕಿ ಚಾಲಕ ಪ್ರಕಾಶ ಲಮಾಣಿ ತಕ್ಷಣ ಸಮುದ್ರಕ್ಕೆ ತೆರಳಿ ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು.
ರಕ್ಷಣಾ ಕಾರ್ಯಾಚರಣೆಗೆ ಜೀವ ರಕ್ಷಕ ಸಿಬ್ಬಂದಿ ನಾಗೇಂದ್ರ ಕೂರ್ಲೆ ಹಾಗೂ ಪ್ರವಾಸಿ ಮಿತ್ರ ಸತೀಶ್ ನಾಯಕ್ ಸಹಕರಿಸಿದರು. ಅಲ್ಲದೇ ಕೂಡ್ಲೆ ಬೀಚ್‌ನ ಮೈ ಸ್ಟಿಕ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಯೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ