ಲಕ್ನೋ /ಚಂಡೀಗಢ : ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಿದೆ. ಹಾಕಿ ದಿಗ್ಗಜ ಪರಗತ್ ಸಿಂಗ್ ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಉತ್ತರ ಪ್ರದೇಶ ರಾಜ್ಯಾಧ್ಯಕ್ಷರನ್ನಾಗಿ ಮೂರು ಬಾರಿ ಶಾಸಕರಾಗಿರುವ ಆರಾಧನಾ ಮಿಶ್ರಾ ಮೊನಾ ಅವರಿಗೆ ವಹಿಸಲಾಗಿದೆ.
ಉತ್ತರ ಪ್ರದೇಶದ ರಾಮಪುರ ಖಾಸ್ ಕ್ಷೇತ್ರದ ಮೂರು ಬಾರಿ ಶಾಸಕರಾಗಿರುವ ಆರಾಧನಾ ಮಿಶ್ರಾ ಮೊನಾ ಅವರು ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಅವರ ಪುತ್ರಿ. 2023ರಿಂದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅಜಯ ರೈ ಅವರನ್ನು ಬದಲಿಸಿ ಮೊನಾ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮೊನಾ ಹಾಗೂ ಅವರ ತಂದೆ ಪ್ರಮೋದ ತಿವಾರಿ ಇಬ್ಬರೂ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ ಯಾದವ್ ಅವರಿಗೆ ಆಪ್ತರು ಎಂಬ ಅಭಿಪ್ರಾಯವಿದೆ. ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕಕ್ಕೆ ಹೊಸ ನಾಯಕತ್ವ ನೀಡಿರುವುದನ್ನು ಸಮಾಜವಾದಿ ಪಕ್ಷ ಸ್ವಾಗತಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮನ್ವಯದೊಂದಿಗೆ ಪ್ರಚಾರ ನಡೆಸುವಂತೆ ಕರೆ ನೀಡಿದೆ.
ಉತ್ತರ ಪ್ರದೇಶ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಬದಲಾವಣೆಯೊಂದಿಗೆ ಸಂಘಟನಾ ಮಟ್ಟದಲ್ಲೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಲೋಕಸಭಾ ಸದಸ್ಯ ಇಮ್ರಾನ್ ಮಸೂದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದೇವೇಂದ್ರ ನಿಷಾದ್ ಹಾಗೂ ಅಲೋಕಪ್ರಸಾದ ಅವರನ್ನು ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಇದರ ಜೊತೆಗೆ, ಚೌಧರಿ ವೀರೇಂದ್ರ ಸಿಂಗ್ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಈ ಮಹತ್ವದ ಜವಾಬ್ದಾರಿಯನ್ನು ಆರಾಧನಾ ಮಿಶ್ರಾ ನಿರ್ವಹಿಸುತ್ತಿದ್ದರು.
ಪಂಜಾಬ್‌ನಲ್ಲಿ ಪರಗತ್ ಸಿಂಗ್‌ಗೆ ಪಟ್ಟ
ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಮತದ ನಡುವೆಯೇ ಹಾಕಿ ದಿಗ್ಗಜ ಪರಗತ್ ಸಿಂಗ್ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಅಮರಿಂದರ್ ರಾಜಾ ಸಿಂಗ್ ವಾರಿಂಗ್ ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರೊಂದಿಗೆ ನಡೆದ ತೀವ್ರ ಸಂಘರ್ಷದ ಹಿನ್ನೆಲೆಯಲ್ಲಿ ವಾರಿಂಗ್ ರಾಜೀನಾಮೆ ನೀಡಿದ್ದರು. ಈ ಆಂತರಿಕ ಕಲಹದ ಸಂದರ್ಭದಲ್ಲಿ ಪರಗತ್ ಸಿಂಗ್ ಅವರು ಬಹುತೇಕ ತಟಸ್ಥ ನಿಲುವು ಹೊಂದಿದ್ದರು ಎಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿ ಹಲವು ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಲಾಗಿದ್ದರೆ, ಪಂಜಾಬ್‌ನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾತ್ರ ಘೋಷಿಸಲಾಗಿದೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ವಿಜಯ ಇಂದರ್ ಸಿಂಗ್ಲಾ ಅವರ ಹೆಸರೂ ಪ್ರಮುಖವಾಗಿ ಪರಿಗಣನೆಯಲ್ಲಿತ್ತು. ಹಿಂದೂ ಬನಿಯಾ ಸಮುದಾಯದ ಮುಖವಾಗಿರುವ ಸಿಂಗ್ಲಾ ಸದ್ಯ ಕಾಂಗ್ರೆಸ್‌ನ ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಆದರೆ, ಕಾಂಗ್ರೆಸ್ ಅಂತಿಮವಾಗಿ ಜಾಟ್ ಸಿಖ್ ಸಮುದಾಯದ ಮುಖವಾಗಿರುವ ಪರಗತ್ ಸಿಂಗ್ ಅವರನ್ನು ಆಯ್ಕೆ ಮಾಡಿದೆ. ಪರಗತ್ ಸಿಂಗ್ ಅವರು ಸುಮಾರು 10 ವರ್ಷಗಳ ಹಿಂದೆ ಶಿರೋಮಣಿ ಅಕಾಲಿ ದಳದಲ್ಲೂ ಇದ್ದರು.
ರಾಜಾ ವಾರಿಂಗ್ ಅವರೂ ಜಾಟ್ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಂಜಾಬ್‌ನಲ್ಲಿ ಜಾಟ್ ಸಿಖ್ ಸಮುದಾಯವು ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯ ಮುಖ್ಯಮಂತ್ರಿಗಳನ್ನು ನೀಡಿರುವ ಸಮುದಾಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ