ಏಷ್ಯನ್ ಗೇಮ್ಸ್ 2026 : ಒಂದೇ ದಿನ 5 ಚಿನ್ನದ ಪದಕ ಗೆದ್ದ ಭಾರತ ; ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿತ

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ಚಿನ್ನದ ಪದಕಗಳ ಬೇಟೆಯನ್ನು ಮುಂದುವರಿಸಿದ್ದು, ಶನಿವಾರ ಭಾರತದ ಆಟಗಾರರು ಒಟ್ಟು ಐದು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಹಾಗೂ ಪದಕ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಭಾರತವು ಶನಿವಾರ ಪುರಚರ ಕ್ರಿಕೆಟ್‌ ಮತ್ತು ಹಾಕಿ, ಮಹಿಳೆಯರ ಗಾಲ್ಫ್‌ ಸೇರಿದಂತೆ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಭಾರತವು ಒಟ್ಟಾರೆಯಾಗಿ 21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚಿನ ಪದಕಗಳೊಂದಿಗೆ 4ನೇ ಸ್ಥಾನಕ್ಕೆ ಜಿಗಿಯಿತು.
ಪುರುಷರ ಹಾಕಿ ತಂಡ ಮಲೇಷ್ಯಾವನ್ನು 5-1 ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿದೆ. ಶನಿವಾರ ನಡೆದ ಫೈನಲ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ, ಈ ದಿನದ ಐದನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 21ಕ್ಕೆ ಏರಿದ್ದು, ಸದ್ಯ ಪದಕ ಪಟ್ಟಿಯಲ್ಲಿ ಉಜ್ಬೇಕಿಸ್ತಾನವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.
ಹಾಕಿ ಫೈನಲ್‌ನಲ್ಲಿನ ಗೆಲುವು ಭಾರತದ ಪಾಲಿಗೆ ಕ್ರೀಡಾಕೂಟದ ಅಂತಿಮ ಚಿನ್ನದ ಪದಕವೂ ಆಗಿದೆ. ಮಲೇಷ್ಯಾ ವಿರುದ್ಧ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿದ ಭಾರತ, ಪಂದ್ಯದಲ್ಲಿ 5-1ರ ಭರ್ಜರಿ ಅಂತರದ ಗೆಲುವು ದಾಖಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.

ಇದಕ್ಕೂ ಮುನ್ನ ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಪುರುಷರ 57 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ರೋಚಕ ಗೆಲುವಿನೊಂದಿಗೆ ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಉತ್ತರ ಕೊರಿಯಾದ ಹಾನ್ ಚಾಂಗ್ ಸಾಂಗ್ ವಿರುದ್ಧದ ಹೋರಾಟದಲ್ಲಿ ಅಮನ್ ಅವರು ಒಂದು ಹಂತದಲ್ಲಿ 7-6ರಿಂದ ಹಿನ್ನಡೆಯಲ್ಲಿದ್ದರು. ಪಂದ್ಯ ಮುಗಿಯಲು ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯ ಬಾಕಿ ಇದ್ದಾಗ ಅಮನ್ ಅದ್ಭುತವಾಗಿ ಹೋರಾಟಕ್ಕೆ ಮರಳಿದರು. ಸತತ ಐದು ಅಂಕಗಳನ್ನು ಗಳಿಸುವ ಮೂಲಕ ಎದುರಾಳಿಯ ಮೇಲಿನ ಅಂತರವನ್ನು ತಿರುಗಿಸಿ, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಪ್ರಮುಖ ಸುದ್ದಿ :-   44 ವರ್ಷಗಳ ಕಾಯುವಿಕೆ ಅಂತ್ಯ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮಹಿಳಾ ಹಾಕಿ ತಂಡ

ಪುರುಷರ ಕ್ರಿಕೆಟ್‌ನಲ್ಲೂ ಭಾರತ ಚಿನ್ನದ ಪದಕ ಗೆದ್ದಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಫೈನಲ್‌ನಲ್ಲಿ ಭಾರತ 19 ರನ್‌ಗಳ ಅಂತರದಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಭಾರತ ಮತ್ತೊಂದು ಮಹತ್ವದ ಚಿನ್ನವನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.
ಗಾಲ್ಫ್‌ನಲ್ಲೂ ಭಾರತ ಐತಿಹಾಸಿಕ ಸಾಧನೆ ಮಾಡಿತು. ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಪ್ರಣವಿ ಅರಸ್‌ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದರು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮಹಿಳೆಯರ ವೈಯಕ್ತಿಕ ಗಾಲ್ಫ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಗೂ ಅವರು ಪಾತ್ರರಾದರು. ಇದೇ ವೇಳೆ ತಂಡದ ಸ್ಪರ್ಧೆಯಲ್ಲೂ ಪ್ರಣವಿ ಅರಸ್‌, ಅದಿತಿ ಅಶೋಕ ಮತ್ತು ದೀಕ್ಷಾ ದಾಗರ್ ಅವರನ್ನೊಳಗೊಂಡ ಭಾರತದ ತಂಡವು ಬೆಳ್ಳಿ ಪದಕ ಗೆದ್ದುಕೊಂಡಿತು.

ಬಿಲ್ಲುಗಾರಿಕೆಯಲ್ಲೂ ಭಾರತಕ್ಕೆ ಐತಿಹಾಸಿಕ ಚಿನ್ನ ಒಲಿಯಿತು. ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಕುಂಕುಮ್ ಮೊಹೋಡ್ ದಕ್ಷಿಣ ಕೊರಿಯಾದ ಓ ಯೆಜಿನ್ ಅವರನ್ನು 6-5 ಅಂಕಗಳಿಂದ ಮಣಿಸಿ ಚಿನ್ನದ ಪದಕ ಗೆದ್ದರು. ಈ ಮೂಲಕ ಈ ವಿಭಾಗದಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದರು. ಪುರುಷರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ನೀರಜ್ ಚೌಹಾಣ್ ತಮ್ಮದೇ ದೇಶದ ಧೀರಜ್ ಬೊಮ್ಮದೇವರ ಅವರನ್ನು 6-4 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಗೆದ್ದರು. ಇಬ್ಬರೂ ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸೋಲು ಕಂಡಿದ್ದರು.
ಕುಸ್ತಿ ಸ್ಪರ್ಧೆಯ ಇತರ ಫಲಿತಾಂಶಗಳಲ್ಲೂ ಭಾರತಕ್ಕೆ ವಿವಿಧ ಪದಕಗಳು ಒಲಿದವು. ಮಹಿಳೆಯರ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅಂತಿಮ್ ಪಂಘಾಲ್ ಜಪಾನ್‌ನ ಮೋ ಕಿಯೋಕಾರ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತರಾದರು. ಪುರುಷರ 97 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ದೀಪಕ್ ಪುನಿಯಾ ಮಂಗೋಲಿಯಾದ ಗಾಂಕ್ಯುಯಾಗ್ ಗನ್ಬಾತಾರ್ ಅವರನ್ನು ಮಣಿಸಿ ಕಂಚಿನ ಪದಕ ಗೆದ್ದರು
ಅಕ್ಟೋಬರ್ 3ರಂದು ಹಾಕಿ, ಕ್ರಿಕೆಟ್, ಕುಸ್ತಿ, ಗಾಲ್ಫ್ ಮತ್ತು ಬಿಲ್ಲುಗಾರಿಕೆ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿತು. ಪುರುಷರ ಹಾಕಿಯಲ್ಲಿ ಮಲೇಷ್ಯಾ ವಿರುದ್ಧ 5-1ರ ಗೆಲುವಿನೊಂದಿಗೆ ದಿನದ ಐದನೇ ಚಿನ್ನ ಹಾಗೂ ಕ್ರೀಡಾಕೂಟದ 21ನೇ ಮತ್ತು ಅಂತಿಮ ಚಿನ್ನದ ಪದಕವನ್ನು ಗೆದ್ದ ಭಾರತ, ಸದ್ಯ ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಉಜ್ಬೇಕಿಸ್ತಾನವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ : ಪಕ್ಷದ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ರಾಜೀನಾಮೆ; ಕಾಂಗ್ರೆಸ್ ಸೇರ್ಪಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement