ವಿಡಿಯೋ | “ಪ್ರಾರ್ಥನೆ ಮಾಡಲು ಎದ್ದಿದ್ದ ಸಹ ಪೈಲಟ್‌ ಏಕಾಏಕಿ ದಾಳಿ ನಡೆಸಿದ..2 ಸಲ ಕಾಕ್‌ಪಿಟ್‌ ಬಾಗಿಲು ತೆರೆದಿದ್ದೆ : ವಿಮಾನದಲ್ಲಿ ಏನಾಯ್ತು ವಿವರಿಸಿದ ಮಚ್ಚಾರ್

ದುಬೈ: ಫ್ಲೈದುಬೈ ಎಫ್‌ಝೆಡ್1073 (FZ1073) ವಿಮಾನದಲ್ಲಿ ಸಂಭವಿಸಿದ ಆತಂಕಕಾರಿ ಘಟನೆಯ ವೇಳೆ ಕಾಕ್‌ಪಿಟ್‌ನೊಳಗೆ ಏನಾಯಿತು ಎಂಬುದನ್ನು ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಹಿರಂಗಪಡಿಸಿದ್ದಾರೆ. 174 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುಮಾರು 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಒಮಾನಿ ಮೂಲದ ಸಹ ಪೈಲಟ್ ತನ್ನ ಮೇಲೆ ಹೇಗೆ ದಾಳಿ ನಡೆಸಿದ ಎಂಬುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ವಿವರಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆ ನಡೆದ ವಿಡಿಯೊ ಕರೆ ಸಂಭಾಷಣೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಅವರ ಆರೋಗ್ಯ ವಿಚಾರಿಸಿದ ನೆತನ್ಯಾಹು, ಸಂಕಷ್ಟದ ಸಂದರ್ಭದಲ್ಲಿ ತೋರಿದ ಧೈರ್ಯವನ್ನು ಶ್ಲಾಘಿಸಿದರು. ಇದೇ ವೇಳೆ ಘಟನೆಯ ವಿವರ ಹಂಚಿಕೊಂಡ ಮಚ್ಚಾರ್, ಸಾಮಾನ್ಯ ವಿಮಾನಯಾನ ಹೇಗೆ ಕ್ಷಣಾರ್ಧದಲ್ಲಿ ಜೀವಾಪಾಯದ ಪರಿಸ್ಥಿತಿಗೆ ತಿರುಗಿತು ಎಂಬುದನ್ನು ವಿವರಿಸಿದ್ದಾರೆ. ವಿಮಾನಯಾನದ ಆರಂಭದಲ್ಲಿ ಎಲ್ಲವೂ ಸಹಜವಾಗಿತ್ತು. ಕಾಕ್‌ಪಿಟ್‌ನಲ್ಲಿ ಯಾವುದೇ ಅಸಹಜ ಬೆಳವಣಿಗೆ ಇರಲಿಲ್ಲ. ಈ ವೇಳೆ ಸಹ ಪೈಲಟ್ ಪ್ರಾರ್ಥನೆ ಸಲ್ಲಿಸಲು ಎದ್ದು ಹೋಗಿದ್ದರು. ಅದು ಸ್ಥಳೀಯವಾಗಿ ಸಹಜ ಸಂಗತಿಯಾಗಿದ್ದರಿಂದ ಯಾವುದೇ ಅನುಮಾನ ಮೂಡಿರಲಿಲ್ಲ. ಹಾಗೆಯೇ ಗೌರವದ ದೃಷ್ಟಿಯಿಂದ ತಾನು ಹಿಂದೆ ತಿರುಗಿ ನೋಡಿರಲಿಲ್ಲ ಎಂದು ಮಚ್ಚಾರ್‌ ಹೇಳಿದರು.
ಆದರೆ ನಾಲ್ಕೈದು ನಿಮಿಷಗಳ ಬಳಿಕ ತಲೆಯ ಹಿಂಭಾಗಕ್ಕೆ ಭಾರೀ ಹೊಡೆತ ಬಿದ್ದಿತು ಎಂದು ಅವರು ನೆನಪಿಸಿಕೊಂಡರು. “ಎಲ್ಲವೂ ಸಾಮಾನ್ಯವಾಗಿತ್ತು. ಸಹ ಪೈಲಟ್ ಪ್ರಾರ್ಥನೆ ಮಾಡಲು ಎದ್ದಿದ್ದ. ನಾನು ಮುಂದೆ ಮಾತ್ರ ನೋಡುತ್ತಿದ್ದೆ. ಆದರೆ ನಾಲ್ಕೈದು ನಿಮಿಷಗಳ ಬಳಿಕ ಏಕಾಏಕಿ ತಲೆಯ ಹಿಂಭಾಗಕ್ಕೆ ಭಾರೀ ಹೊಡೆತ ಬಿತ್ತು” ಎಂದು ಮಚ್ಚಾರ್ ವಿವರಿಸಿದರು.
ಮೊದಲಿಗೆ ವಿಮಾನಕ್ಕೆ ತಾಮತ್ರಿಕವಾಗಿ ಭಾರೀ ಹಾನಿಯಾಗಿರಬಹುದು ಎಂದು ಭಾವಿಸಿದ್ದಾಗಿ ಅವರು ಹೇಳಿದರು. ಆದರೆ ಹೊಡೆತಗಳು ನಿರಂತರವಾಗಿ ಮುಂದುವರಿದಾಗ, ವಿಮಾನದಲ್ಲಿ ಸಮಸ್ಯೆಯಲ್ಲ, ತನ್ನೊಂದಿಗೆ ಕಾಕ್‌ಪಿಟ್‌ನಲ್ಲಿದ್ದ ಸಹ ಪೈಲಟ್‌ನೇ ತನ್ನ ಮೇಲೆ ದಾಳಿ ನಡೆಸುತ್ತಿದ್ದಾನೆ ಎಂಬುದು ಅರಿವಾಯಿತು ಎಂದು ತಿಳಿಸಿದರು. ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆಯಲೇಬೇಕೆಂಬ ಅರಿವು ತನಗಿತ್ತು. ನೆನಪಿನ ಆಧಾರದಲ್ಲಿ ಕೋಡ್ ಬಳಸಿ ಬಾಗಿಲು ತೆರೆಯಲು ಯತ್ನಿಸಿದರೂ ಒಮಾನಿ ಮೂಲದ ಸಹ ಪೈಲಟ್ ಅದನ್ನು ತಡೆಯುತ್ತಿದ್ದ ಎಂದು ಅವರು ಹೇಳಿದರು.
ದಾಳಿಯನ್ನು ತಡೆಯಲು ತಾನು ಪ್ರಯತ್ನಿಸಿದ್ದರೂ ಗಂಭೀರ ಗಾಯಗಳ ಕಾರಣದಿಂದ ದೃಷ್ಟಿ ಮಸುಕಾಗತೊಡಗಿತು. ಆರಂಭಿಕ ದಾಳಿಯ ಬಳಿಕ ತಾವು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರೂ, ದಾಳಿಕೋರ ಮತ್ತೆ ಬಾಗಿಲು ಮುಚ್ಚಿದ್ದರಿಂದ ತಾವು ನೆಲಕ್ಕೆ ಬಿದ್ದಿದ್ದಾಗಿ ವಿವರಿಸಿದರು.
ಆತ ಮತ್ತೆ ಮತ್ತೆ ದಾಳಿ ನಡೆಸುತ್ತಿದ್ದ ಎಂದು ಘಟನೆಯ ಅತ್ಯಂತ ಭಯಾನಕ ಕ್ಷಣವನ್ನು ನೆನಪಿಸಿಕೊಂಡ ಮಚ್ಚಾರ್, ಆ ಸಂದರ್ಭದಲ್ಲಿ ವಿಮಾನ ವೇಗವಾಗಿ ಕೆಳಕ್ಕೆ ಇಳಿಯುತ್ತಿರುವ ಅನುಭವವಾಗುತ್ತಿತ್ತು ಹಾಗೂ ವಿಮಾನದೊಳಗೆ ಪ್ರಯಾಣಿಕರ ಕಿರುಚಾಟಗಳು ಕೇಳಿಸುತ್ತಿದ್ದವು ಎಂದು ಹೇಳಿದರು.
“ನನ್ನಲ್ಲಿ ಕೊನೆಯ ಹೋರಾಟದ ಶಕ್ತಿ ಮಾತ್ರ ಉಳಿದಿತ್ತು. ಅದು ನನ್ನ ಬದುಕಿಗಾಗಿ ಆಗಿರಬಹುದು ಅಥವಾ ವಿಮಾನದಲ್ಲಿದ್ದ ಜನರಿಗಾಗಿ ಆಗಿರಬಹುದು. ಆದರೆ ನಾನು ಹೋರಾಡಲೇಬೇಕಿತ್ತು. ನಾನು ಏನೂ ಮಾಡದಿದ್ದರೆ ಸಾಯುವುದು ಖಚಿತವಾಗಿತ್ತು. ಕೊನೆಯ ಪ್ರಯತ್ನವಾಗಿ  ನನ್ನಲ್ಲಿದ್ದ ಉಳಿದ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಬಾಗಿಲಿನತ್ತ ಧಾವಿಸಿ, ಬಾಗಿಲಿನ ನಾಬ್ ಅನ್ನು ಗಟ್ಟಿಯಾಗಿ ತಿರುಗಿಸಿ ಬಾಗಿಲು ತೆರೆದಿದ್ದೆ. ಅದೃಷ್ಟವಶಾತ್ ಹೊರಗೆ ಕಾಯುತ್ತಿದ್ದವರು ಕೂಡಲೇ ಒಳಗೆ ನುಗ್ಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು” ಎಂದು ಅವರು ಹೇಳಿದರು.
ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ಸಾಂಕೇತಿಕ ಜ್ಯೋತಿ ಬೆಳಗಿಸುವ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದರು.
“ನಮ್ಮ ಉತ್ತಮ ಸ್ನೇಹಿತರಾದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಗೌರವದಲ್ಲಿ ಭಾಗಿಯಾಗಬೇಕು ಎಂದು ನಾನು ಬಯಸುತ್ತೇನೆ. ಸ್ವಾತಂತ್ರ್ಯ ದಿನದಂದು ನೀಡುವ ಅತ್ಯುನ್ನತ ಗೌರವಗಳಲ್ಲಿ ಇದು ಒಂದು. ಸಾಮಾನ್ಯವಾಗಿ ಈ ಗೌರವವನ್ನು ಇಸ್ರೇಲ್ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಇಸ್ರೇಲ್‌ನ ಎಲ್ಲ ನಾಗರಿಕರು ನಿಮ್ಮನ್ನು ತಮ್ಮವರಾಗಿ ಸ್ವೀಕರಿಸಲಿದ್ದಾರೆ” ಎಂದು ನೆತನ್ಯಾಹು ಹೇಳಿದರು.
ಘಟನೆ ಹಿನ್ನೆಲೆ:
ಬುಧವಾರ ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಎಫ್‌ಝೆಡ್1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ಸಹ ಪೈಲಟ್ ನಡೆಸಿದ ದಾಳಿಯಿಂದ ಕ್ಯಾಪ್ಟನ್ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದರು.  ತುರ್ತು ಪರಿಸ್ಥಿತಿಗಳಲ್ಲಿ ಬಳಸಲು ಕಾಕ್‌ಪಿಟ್‌ನಲ್ಲಿ ಇರಿಸಲಾಗಿದ್ದ ಕ್ರ್ಯಾಶ್ ಕೊಡಲಿಯನ್ನು ಬಳಸಿಕೊಂಡು ಸಹಪೈಲಟ್‌ ಹಮಾಮ್ ಅಲ್-ಹಮ್ಮಾಮಿ ಎಂಬಾತ ಕ್ಯಾಪ್ಟನ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದರು. ವಿಮಾನದಲ್ಲಿ ಒಟ್ಟು 174 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಘಟನೆಯ ವೇಳೆ ವಿಮಾನದಿಂದ ತುರ್ತು ಸಂದೇಶ ರವಾನೆಯಾಗಿದ್ದು, ಸುಮಾರು 34 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವು ವೇಗವಾಗಿ ಕೆಳಗಿಳಿದು 17 ಸಾವಿರ ಅಡಿಗಿಂತ ಕಡಿಮೆ ಎತ್ತರಕ್ಕೆ ಒಮ್ಮೆಲೇ ಇಳಿದಿತ್ತು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ ಮಚ್ಚಾರ್‌ ಅವರು ಧೈರ್ಯ ಕಳೆದುಕೊಳ್ಳದೆ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಕಾಕ್‌ಪಿಟ್ ಒಳನುಗ್ಗಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಬಳಿಕ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕರ್ತವ್ಯದಲ್ಲಿರದ ಕಾಯ್ದಿರಿಸಿದ ಪೈಲಟ್‌ಗಳು ಕಾಕ್‌ಪಿಟ್‌ಗೆ ಪ್ರವೇಶಿಸಿ ವಿಮಾನದ ನಿಯಂತ್ರಣ ವಹಿಸಿಕೊಂಡರು. ಅಂತಿಮವಾಗಿ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಅಲ್ಲಿಯೇ ಹಮಾಮ್ ಅಲ್-ಹಮ್ಮಾಮಿಯನ್ನು ಅಧಿಕಾರಿಗಳು ವಶಕ್ಕೆ ಪಡೆದರು.
ಈ ಘಟನೆ ವಿಶ್ವದಾದ್ಯಂತ ವ್ಯಾಪಕ ಗಮನ ಸೆಳೆದಿದ್ದು, ಸಂಕಷ್ಟದ ಕ್ಷಣದಲ್ಲಿ ತೋರಿದ ಧೈರ್ಯಕ್ಕಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ, ಮಚ್ಚಾರ್ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement