ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ವಿಮಾನಗಳನ್ನು ಗುರಿಯಾಗಿಸಿಕೊಂಡು 2001ರ ಸೆಪ್ಟೆಂಬರ್ 11ರ (9/11) ದಾಳಿಯ ಮಾದರಿಯಲ್ಲೇ ದಾಳಿಗಳನ್ನು ನಡೆಸುವಂತೆ ಅಲ್ ಖೈದಾ ಕರೆ ನೀಡಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಅಪಹರಿಸಲು ನಡೆದಿತ್ತೆನ್ನಲಾದ ಯತ್ನವನ್ನು ಉಲ್ಲೇಖಿಸಿ,ಈ ಘಟನೆಯನ್ನು ಅಲ್ ಖೈದಾ ಪ್ರಶಂಸಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ಈ ಕರೆ ಅಲ್ ಖೈದಾ ಪರ ಬೆಂಬಲಿಗರು ಜುಲೈನಲ್ಲಿ ಆರಂಭಿಸಿದ್ದ ವಾರಪತ್ರಿಕೆ ಅಲ್-ಬಯಾನ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ ಎನ್ನಲಾಗಿದೆ. ಈ ಪ್ರಕಟಣೆಯನ್ನು ಸಂಘಟನೆಗೆ ಸಂಬಂಧಿಸಿದ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಹಂಚಲಾಗಿದ್ದು, ಬಳಿಕ ಅದನ್ನು ತೆಗೆದುಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಪ್ರಕಟಣೆಯಲ್ಲಿ 9/11 ದಾಳಿ ಹಾಗೂ ಸೆಪ್ಟೆಂಬರ್ 30ರಂದು ನಡೆದ ಫ್ಲೈದುಬೈ ವಿಮಾನ FZ1073ರ ನಿಯಂತ್ರಣ ವಶಪಡಿಸಿಕೊಳ್ಳುವ ಯತ್ನ ಎರಡನ್ನೂ ಉಲ್ಲೇಖಿಸಲಾಗಿದೆ. ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಈ ವಿಮಾನದಲ್ಲಿ 170ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಅವರಲ್ಲಿ ಬಹುತೇಕರು ಇಸ್ರೇಲ್ ಮೂಲದವರಾಗಿದ್ದರು.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಅರೇಬಿಕ್ ಭಾಷೆಯಲ್ಲಿದ್ದ ಲೇಖನವು ಅಮೆರಿಕನ್ನರು ಮತ್ತು ಇಸ್ರೇಲಿಗರನ್ನು ಸಾಗಿಸುತ್ತಿರುವ ವಿಮಾನಗಳ ಮೇಲೆ ದಾಳಿ ನಡೆಸುವಂತೆ ಪ್ರಚೋದನೆ ನೀಡಿದೆ.
“ಯುದ್ಧ ಇನ್ನೂ ಮುಗಿದಿಲ್ಲ. ಜಿಯೋನಿಸ್ಟ್‌ಗಳು, ಅಮೆರಿಕನ್ನರು ಹಾಗೂ ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಇತರ ಎಲ್ಲ ಅವಿಶ್ವಾಸಿಗಳನ್ನು ಸಾಗಿಸುತ್ತಿರುವ ವಿಮಾನಗಳು ಇನ್ನೂ ಆಕಾಶದಲ್ಲಿ ಹಾರುತ್ತಿವೆ. ಸೆಪ್ಟೆಂಬರ್ 11 ಮತ್ತು ಸೆಪ್ಟೆಂಬರ್ 30ರಂದು ನಡೆದಂತೆ ಅವುಗಳನ್ನು ಗುರಿಯಾಗಿಸಬಹುದು” ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ಹೇಳಿದೆ.
ಈ ಪ್ರಕಟಣೆಯಲ್ಲಿ ಸೆಪ್ಟೆಂಬರ್ 11ರ ದಾಳಿಯ ವೇಳೆ ವಿಶ್ವ ವಾಣಿಜ್ಯ ಕೇಂದ್ರಕ್ಕೆ (ವರ್ಡ್ ಟ್ರೇಡ್ ಸೆಂಟರ್) ಡಿಕ್ಕಿ ಹೊಡೆಯುತ್ತಿರುವ ವಿಮಾನದ ಚಿತ್ರವೊಂದರ ಜೊತೆಗೆ, ಫ್ಲೈದುಬೈ ವಿಮಾನವನ್ನು ವಶಪಡಿಸಿಕೊಳ್ಳುವ ಯತ್ನಕ್ಕೆ ಸಂಬಂಧಿಸಿದ ಮತ್ತೊಂದು ಚಿತ್ರವನ್ನೂ ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ.
“ಅಮೆರಿಕ ಮತ್ತು ಜಿಯೋನಿಸ್ಟ್‌ಗಳಿಗೆ ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಶತ್ರುಗಳಿದ್ದಾರೆ. ದೇವರಲ್ಲಿ ನಂಬಿಕೆ ಇಲ್ಲದ ವ್ಯಕ್ತಿಯೊಬ್ಬನೂ ಅವರನ್ನು ಗುರಿಯಾಗಿಸಬಹುದು; ಅಂತಿಮವಾಗಿ ಆ ಕಾರ್ಯಾಚರಣೆಯಿಂದ ಇಸ್ಲಾಂಗೆ ಲಾಭವಾಗಬಹುದು” ಎಂದು ಲೇಖನದಲ್ಲಿ ಹೇಳಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದೇ ವೇಳೆ, “ದುಷ್ಟ ಅಮೆರಿಕ ಸಾಮ್ರಾಜ್ಯದ ಅಂತ್ಯವಾಗುವ ದಿನವೂ ಬರಲಿದೆ” ಎಂದು ಲೇಖನದಲ್ಲಿ ಹೇಳಲಾಗಿದೆ ಎಂದು ವರದಿ ತಿಳಿಸಿದೆ. ಈ ವಿಷಯವನ್ನು ಒಳಗೊಂಡ ಪ್ರಕಟಣೆಯನ್ನು ಅಲ್ ಖೈದಾ ಸಂಬಂಧಿತ ಟೆಲಿಗ್ರಾಂ ಚಾನೆಲ್‌ಗಳ ಮೂಲಕ ಶನಿವಾರ ಹಂಚಲಾಗಿತ್ತು. ಬಳಿಕ ಅದನ್ನು ತೆಗೆದುಹಾಕಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ