ಬೌದ್ಧ (ಒಡಿಶಾ): ಸಾಮಾನ್ಯವಾಗಿ ಮೊಸಳೆಯ ದಾಳಿಗೆ ಸಿಲುಕಿದವರು ಬದುಕಿ ಬರುವುದು ಅಪರೂಪ. ಇಬ್ಬರು ಸಹೋದರರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸುಮಾರು ಒಂದೂವರೆ ತಾಸು ಹೋರಾಟ ನಡೆಸಿ ಮೊಸಳೆಯ ದವಡೆಯಿಂದ ತಮ್ಮ ಸಹೋದರನನ್ನು ಪಾರು ಮಾಡಿರುವ ಘಟನೆ ಆದರೆ ಒಡಿಶಾದ ಬೌದ್ಧ ಜಿಲ್ಲೆಯಲ್ಲಿ ನಡೆದಿದೆ. ಜೀವನ್ಮರಣದ ಈ ಹೋರಾಟದಲ್ಲಿ ಇಬ್ಬರು ಧೈರ್ಯಶಾಲಿಗಳು ನದಿ ಮಧ್ಯದಲ್ಲಿ ಮೊಸಳೆ ಜೊತೆ ಹೋರಾಡಿ ಸಹೋದರನನ್ನು ಅಕ್ಷರಶಃ ಸಾವಿನ ದವಡೆಯಿಂದ ಎಳೆದು ತಂದಿದ್ದಾರೆ.
ಭಾನುವಾರ ಸಂಜೆ ಹರಭಂಗಾ ಬ್ಲಾಕ್ನ ಮರಾಡಾ ಮಹಾನದಿ ಘಾಟ್ನಲ್ಲಿ ನಡೆದ ಈ ಹೃದಯ ನಡುಗಿಸುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮೊಸಳೆಯ ದಾಳಿಯಿಂದ ರಕ್ಷಿಸಲ್ಪಟ್ಟ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮರಾಡಾ ಗ್ರಾಮದ ನಿವಾಸಿ ಸುಧೀರ ಬೆಹೆರಾ ಭಾನುವಾರ ಸಂಜೆ ಮಹಾನದಿ ತೀರಕ್ಕೆ ಶೌಚಕ್ಕಾಗಿ ತೆರಳಿದ್ದರು. ನದಿಯ ನೀರಿನೊಳಗೆ ಅಪಾಯ ಕಾದಿದೆ ಎಂಬ ಸುಳಿವೂ ಅವರಿಗೆ ಇರಲಿಲ್ಲ. ನೀರಿನ ಸಮೀಪಕ್ಕೆ ಹೋಗುತ್ತಿದ್ದಂತೆಯೇ, ಬೃಹತ್ ಗಾತ್ರದ ಮೊಸಳೆ ಮಿಂಚಿನ ವೇಗದಲ್ಲಿ ದಾಳಿ ನಡೆಸಿತು. ತನ್ನ ತೀಕ್ಷ್ಣ ದವಡೆಗಳಲ್ಲಿ ಸುಧೀರ ಅವರನ್ನು ಬಿಗಿಯಾಗಿ ಹಿಡಿದ ಮೊಸಳೆ, ಅವರನ್ನು ನದಿಯ ಆಳಕ್ಕೆ ಎಳೆದೊಯ್ಯಲು ಆರಂಭಿಸಿತು.
ಹಠಾತ್ ನಡೆದ ಈ ಮಾರಣಾಂತಿಕ ದಾಳಿಯಿಂದ ಬೆಚ್ಚಿಬಿದ್ದರೂ ಸುಧೀರ ಧೈರ್ಯ ಕಳೆದುಕೊಳ್ಳಲಿಲ್ಲ. ಮೊಸಳೆಯ ಹಿಡಿತದಿಂದ ಪಾರಾಗಲು ಅವರು ತೀವ್ರವಾಗಿ ಹೋರಾಡುತ್ತಾ ಸಹಾಯಕ್ಕಾಗಿ ಜೋರಾಗಿ ಕೂಗಲಾರಂಭಿಸಿದರು. ಅವರ ಆಕ್ರಂದನ ನದಿತೀರದ ನಿಶ್ಶಬ್ದತೆಯನ್ನು ಚೀರಿಕೊಂಡು ದೂರದವರೆಗೂ ಕೇಳಿಸಿತು. ಸಹೋದರನ ಕಿರುಚಾಟ ಕೇಳಿದ ತಕ್ಷಣ ಸುಧೀರ ಅವರ ಸಹೋದರ ಛಬೀಂದ್ರ ಬೆಹೆರಾ ಹಾಗೂ ಸಹೋದರ ಸಂಬಂಧಿ ಪ್ರಮೋದ ಪ್ರಧಾನ ಸ್ಥಳದತ್ತ ಧಾವಿಸಿದರು. ಪರಿಸ್ಥಿತಿಯ ಭೀಕರತೆ ಬಗ್ಗೆ ಅರಿವಿದ್ದರೂ ತಮ್ಮ ಪ್ರಾಣದ ಬಗ್ಗೆ ಯೋಚಿಸದೆ ಇಬ್ಬರೂ ನೇರವಾಗಿ ಮಹಾನದಿಗೆ ಧುಮುಕಿದರು. ಅಲ್ಲಿಂದ ಆರಂಭವಾಯಿತು ಮೊಸಳೆಯ ವಿರುದ್ಧದ ಅವರ ನೇರ ಸಮರ.
ಒಂದೆಡೆ ಮೊಸಳೆಯ ದವಡೆಯೊಳಗೆ ಸಿಲುಕಿದ್ದ ಸುಧೀರ ಬದುಕುಳಿಯಲು ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಛಬೀಂದ್ರ ಮತ್ತು ಪ್ರಮೋದ ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿ ಮೊಸಳೆಯ ಮೇಲೆ ದಾಳಿ ನಡೆಸುತ್ತಿದ್ದರು. ಮೊಸಳೆ ಕೂಡ ಸುಲಭವಾಗಿ ಬೇಟೆಯನ್ನು ಬಿಟ್ಟುಕೊಡಲು ಸಿದ್ಧವಾಗಿರಲಿಲ್ಲ. ಅದು ಪದೇಪದೇ ತಿರುಗಿ ಇಬ್ಬರ ಮೇಲೂ ಅಪಾಯಕಾರಿ ದಾಳಿ ನಡೆಸುತ್ತಾ ಸುಧೀರ ಅವರನ್ನು ತನ್ನ ಹಿಡಿತದಲ್ಲೇ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿತ್ತು.
ಘಟನೆಯ ಸುದ್ದಿ ತಿಳಿದು ನದಿದಡದಲ್ಲಿ ಜನರು ಸೇರಿದ್ದರೂ, ಮೊಸಳೆಯ ಭಯದಿಂದ ಯಾರೂ ನೀರಿಗೆ ಇಳಿಯುವ ಸಾಹಸ ಮಾಡಲಿಲ್ಲ. ಆದರೆ ಛಬೀಂದ್ರ ಮತ್ತು ಪ್ರಮೋದ ಮಾತ್ರ ತಮ್ಮ ಜೀವದ ಹಂಗು ತೊರೆದು ಮೊಸಳೆಯೊಂದಿಗೆ ಸೆಣಸಾಟ ಮುಂದುವರಿಸಿದರು.
ಮಹಾನದಿಯ ನೀರಿನೊಳಗೆ ನಡೆದ ಈ ಹೋರಾಟ ಸಾಮಾನ್ಯ ಹೋರಾಟವಾಗಿರಲಿಲ್ಲ. ನೀರಿನಲ್ಲಿ ಮೊಸಳೆಗೆ ಹೆಚ್ಚಿನ ಬಲವಿರುವುದರಿಂದ ಇದು ಬದುಕು ಮತ್ತು ಸಾವಿನ ನಡುವಿನ ನೇರ ಸಮರವಾಗಿತ್ತು. ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದ್ದ ಈ ರೋಚಕ ಹೋರಾಟ ಸುಮಾರು ಒಂದೂವರೆ ಗಂಟೆಗಳ ಕಾಲ ಮುಂದುವರಿಯಿತು. ಮೊಸಳೆಯ ಭೀಕರ ಶಕ್ತಿ ಮತ್ತು ಆಕ್ರಮಣಕಾರಿ ಸ್ವಭಾವದ ಎದುರು ನಿಲ್ಲುವುದು ಸುಲಭದ ಮಾತಲ್ಲ. ಆದರೂ ಸಹೋದರನನ್ನು ಉಳಿಸಬೇಕೆಂಬ ಒಂದೇ ಸಂಕಲ್ಪದಿಂದ ಛಬೀಂದ್ರ ಮತ್ತು ಪ್ರಮೋದ ತೀವ್ರ ಹೋರಾಟ ನಡೆಸಿದರು.
ಕೊನೆಗೆ ಇಬ್ಬರ ಅಚಲ ಧೈರ್ಯ, ಸಾಹಸ ಮತ್ತು ಬಲವಾದ ಹೊಡೆತಗಳಿಗೆ ಮೊಸಳೆ ಹಿಮ್ಮೆಟ್ಟಿತು. ತನ್ನ ಬೇಟೆಯನ್ನು ಬಿಟ್ಟು ನದಿಯ ನೀರಿನ ಆಳಕ್ಕೆ ಓಡಿ ಹೋಯಿತು. ತಕ್ಷಣವೇ ಸುಧೀರ ಅವರನ್ನು ನದಿಯಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೊದಲು ಅವರನ್ನು ಪುರುನಕಟಕ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಬಳಿಕ ಅವರ ಸ್ಥಿತಿ ಗಂಭೀರವಾಗಿದ್ದರಿಂದ ರಾತ್ರಿ 8:30ರ ಸುಮಾರಿಗೆ ಬೌಧ್ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಪ್ರದೇಶದ ಜನರಲ್ಲಿ ಆಘಾತ ಹಾಗೂ ಪ್ರಶಂಸೆಗೆ ಕಾರಣವಾಗಿದೆ. ಮೊಸಳೆಯಂತಹ ಭೀಕರ ಪ್ರಾಣಿಯ ಎದುರು ಜೀವದ ಹಂಗು ತೊರೆದು ಹೋರಾಡಿದ ಛಬೀಂದ್ರ ಬೆಹೆರಾ ಮತ್ತು ಪ್ರಮೋದ ಪ್ರಧಾನ ಅವರ ಸಾಹಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಹೋದರನಿಗಾಗಿ ಅವರು ತೋರಿದ ಧೈರ್ಯ, ಹೋರಾಟ ಮತ್ತು ಅಚಲ ಮನೋಬಲವು ನಿಜಕ್ಕೂ ಅಪರೂಪದ ಉದಾಹರಣೆಯಾಗಿ ಪರಿಣಮಿಸಿದೆ. ಈ ಮಧ್ಯೆ ನದಿಗೆ ಇಳಿಯುವವರು ಮುಂಜಾಗ್ರತೆ ವಹಿಸುವಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಸೂಚಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ