ಬೆಳಕಿನ ಮೂಲಕ ಮೆದುಳಿನ ನರಕೋಶಗಳನ್ನು ನಿಯಂತ್ರಿಸುವ ಸಂಶೋಧನೆಗೆ ಮೂವರು ವಿಜ್ಞಾನಿಗಳಿಗೆ ನೊಬೆಲ್‌ ಪ್ರಶಸ್ತಿ ಘೋಷಣೆ

ಸ್ಟಾಕ್‌ಹೋಮ್ : ಮೆದುಳಿನಲ್ಲಿರುವ ಪ್ರತ್ಯೇಕ ನರಕೋಶಗಳ (ನರ್ವ್ ಸೆಲ್‌ಗಳು) ಚಟುವಟಿಕೆಯನ್ನು ಬೆಳಕಿನ ಮೂಲಕ ನಿಯಂತ್ರಿಸುವ ಕ್ರಾಂತಿಕಾರಿ ತಂತ್ರಜ್ಞಾನವಾದ ಆಪ್ಟೋಜೆನೆಟಿಕ್ಸ್ (Optogenetics) ಅಭಿವೃದ್ಧಿಪಡಿಸಿದ ಸಾಧನೆಗಾಗಿ ಅಮೆರಿಕದ ಕಾರ್ಲ್ ಡೈಸರೋತ್ (Karl Deisseroth) ಹಾಗೂ ಜರ್ಮನಿಯ ಪೀಟರ್ ಹೆಗೆಮನ್ (Peter Hegemann) ಮತ್ತು ಜಾರ್ಜ್ ನಾಗೆಲ್ (Georg Nagel) ಅವರಿಗೆ 2026ನೇ ಸಾಲಿನ ವೈದ್ಯಕೀಯ ಅಥವಾ ಶರೀರಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ.
ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ನೊಬೆಲ್ ಅಸೆಂಬ್ಲಿ ಈ ಮೂವರು ವಿಜ್ಞಾನಿಗಳನ್ನು “ಬೆಳಕಿನಿಂದ ನಿಯಂತ್ರಿತ ಅಯಾನ್ ಚಾನೆಲ್‌ಗಳು (Light-Gated Ion Channels) ಮತ್ತು ಆಪ್ಟೋಜೆನೆಟಿಕ್ಸ್ ಕುರಿತ ಸಂಶೋಧನೆಗಳಿಗಾಗಿ” ಆಯ್ಕೆ ಮಾಡಿದೆ. ಪ್ರಶಸ್ತಿಯೊಂದಿಗೆ 1.2 ಕೋಟಿ ಸ್ವೀಡಿಷ್ ಕ್ರೌನ್‌ಗಳ (ಸುಮಾರು 12 ಲಕ್ಷ ಡಾಲರ್) ನಗದು ಬಹುಮಾನವನ್ನು ಅವರು ಹಂಚಿಕೊಳ್ಳಲಿದ್ದಾರೆ.
ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ನೊಬೆಲ್ ಅಸೆಂಬ್ಲಿಯ ಪ್ರಧಾನ ಕಾರ್ಯದರ್ಶಿ ಥಾಮಸ್ ಪರ್ಲ್‌ಮನ್ ಮಾತನಾಡಿ, “ಈ ವಿಧಾನವು ಜೀವಂತ ಮೆದುಳಿನಲ್ಲಿ ಪ್ರತ್ಯೇಕ ನರಕೋಶಗಳ ಚಟುವಟಿಕೆಯನ್ನು ಬೇಕಾದಾಗ ಆನ್ ಅಥವಾ ಆಫ್ ಮಾಡಲು ಸಾಧ್ಯವಾಗಿಸುತ್ತದೆ. ಮೆದುಳಿನ ರಹಸ್ಯಗಳನ್ನು ತಿಳಿಯಲು ಈ ತಂತ್ರವನ್ನು ಈಗ ವಿಶ್ವದಾದ್ಯಂತದ ಪ್ರಯೋಗಾಲಯಗಳಲ್ಲಿ ಬಳಸಲಾಗುತ್ತಿದೆ” ಎಂದು ಹೇಳಿದರು.

ಪಾಚಿಯಿಂದ ಆರಂಭವಾದ ಮಹತ್ವದ ಸಂಶೋಧನೆ
ಈ ಸಂಶೋಧನೆಯ ಪಯಣ 1990ರ ದಶಕದ ಆರಂಭದಲ್ಲಿ ಆರಂಭವಾಯಿತು. ಪೀಟರ್ ಹೆಗೆಮನ್ ಅವರು ಕ್ಲಾಮಿಡೊಮೊನಾಸ್ (Chlamydomonas) ಎಂಬ ಏಕಕೋಶ ಪಾಚಿ ಬೆಳಕಿಗೆ ಕೇವಲ ಅರ್ಧ ಮಿಲಿಸೆಕೆಂಡ್‌ನಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅಧ್ಯಯನ ಮಾಡುತ್ತಿದ್ದರು. ಬೆಳಕನ್ನು ಗ್ರಹಿಸುವುದೂ, ಅಯಾನ್ ಚಾನೆಲ್ ಆಗಿ ಕಾರ್ಯನಿರ್ವಹಿಸುವುದೂ ಒಂದೇ ಪ್ರೋಟೀನ್ ಆಗಿರಬಹುದು ಎಂಬ ಊಹೆಯನ್ನು ಅವರು ಮುಂದಿಟ್ಟರು.
ಈ ಊಹೆಯನ್ನು ಪರೀಕ್ಷಿಸಲು ಜಾರ್ಜ್ ನಾಗೆಲ್ ಅವರು ಕ್ಲಾಮಿಡೊಮೊನಾಸ್‌ನ ಜೀನ್‌ಗಳನ್ನು ಕಪ್ಪೆಯ ಮೊಟ್ಟೆಗಳಲ್ಲಿ ಸೇರಿಸಿದರು. ಈ ವೇಳೆ ಬೆಳಕಿಗೆ ಸ್ಪಂದಿಸುವ ಚಾನೆಲ್‌ರೋಡೋಪ್ಸಿನ್-2 (Channelrhodopsin-2) ಎಂಬ ಅಯಾನ್ ಚಾನೆಲ್‌ನ್ನು ಅವರು ಪತ್ತೆಹಚ್ಚಿದರು.
2003ರಲ್ಲಿ, ಬೆಳಕನ್ನು ಬಳಸಿಕೊಂಡು ವಿದ್ಯುತ್ ಸಂಕೇತಗಳನ್ನು (electrical impulses) ಉತ್ಪಾದಿಸಲು ಈ ಪ್ರೋಟೀನ್ ಅನ್ನು ಮಾನವ ಮತ್ತು ಹ್ಯಾಮ್‌ಸ್ಟರ್ ಕೋಶಗಳಲ್ಲಿ ಅಳವಡಿಸಬಹುದು ಎಂಬ ಸಂಶೋಧನಾ ಫಲಿತಾಂಶಗಳನ್ನು ಅವರು ಪ್ರಕಟಿಸಿದರು. ಎರಡು ವರ್ಷಗಳ ನಂತರ ಸ್ಟ್ಯಾನ್‌ಫೋರ್ಡ್‌ನಲ್ಲಿ ಡೈಸರೋತ್ ಅವರು ಇಲಿಗಳ ನರಕೋಶಗಳಲ್ಲಿ ಈ ತಂತ್ರವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು ಮತ್ತು 2006ರಲ್ಲಿ ಈ ವಿಧಾನಕ್ಕೆ ‘ಆಪ್ಟೊಜೆನೆಟಿಕ್ಸ್’ ಎಂದು ಹೆಸರಿಸಲಾಯಿತು.
ಪ್ರಶಸ್ತಿಯ ಬಗ್ಗೆ ತಿಳಿಸಿದಾಗ ಈ ಮೂವರು ವಿಜೇತರು “ಆಶ್ಚರ್ಯಚಕಿತರಾದರು ಮತ್ತು ಸಂತೋಷಪಟ್ಟರು” ಎಂದು ಪರ್ಲ್‌ಮನ್ ಹೇಳಿದರು.
“ಅವರು ಪರಸ್ಪರ ಸ್ನೇಹಿತರೆಂದು ಕರೆದುಕೊಳ್ಳುತ್ತಾ, ಒಟ್ಟಾಗಿ ಈ ಪ್ರಶಸ್ತಿಯನ್ನು ಪಡೆಯುವುದು ಅತ್ಯದ್ಭುತ ವಿಷಯ ಎಂದು ಭಾವಿಸಿದ್ದಾಗಿ ಮೂವರೂ ಒಂದೇ ಮಾತನ್ನು ಹೇಳಿದರು. ಒಟ್ಟಾಗಿ ಇದನ್ನು ಪಡೆಯುವುದು ಒಂದು ದೊಡ್ಡ ಗೌರವ ಎಂದು ಅವರು ಅಭಿಪ್ರಾಯಪಟ್ಟರು” ಎಂದು ಪರ್ಲ್‌ಮನ್ ಹೇಳಿದರು.

ಪ್ರಮುಖ ಸುದ್ದಿ :-   ಬ್ರಹ್ಮಾಂಡದ ನಿಗೂಢ ನ್ಯೂಟ್ರಿನೊಗಳ ಪತ್ತೆಗಾಗಿ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜನ್‌ಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ

ಮೆದುಳಿನ ಕಾಯಿಲೆಗಳ ಚಿಕಿತ್ಸೆಗೆ ಹೊಸ ಭರವಸೆ
ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಈಗಾಗಲೇ ಹಲವು ಮೆದುಳು ಸಂಬಂಧಿತ ಕಾಯಿಲೆಗಳ ಕುರಿತು ಹೊಸ ಅರಿವು ನೀಡುತ್ತಿದೆ. ಸ್ಕಿಜೋಫ್ರೆನಿಯಾ, ಅಲ್ಝೈಮರ್ ರೋಗ, ಪಾರ್ಕಿನ್ಸನ್ ಕಾಯಿಲೆ, ಅಪಸ್ಮಾರ (ಎಪಿಲೆಪ್ಸಿ) ಮತ್ತು ವ್ಯಸನದಂತಹ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾಣಿಗಳ ಮಾದರಿಗಳಲ್ಲಿ ಆಪ್ಟೋಜೆನೆಟಿಕ್ಸ್ ಬಳಸಲಾಗುತ್ತಿದೆ.
ಕರೋಲಿನ್ಸ್ಕಾದ ಆಣ್ವಿಕ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕಿ ಅನ್ನಾ ವೆಡೆಲ್ ಮಾತನಾಡಿ, “ಡಿಮೆನ್ಷಿಯಾ, ಅಪಸ್ಮಾರ ಮತ್ತು ವ್ಯಸನಕ್ಕೆ ಸಂಬಂಧಿಸಿದ ಇಲಿಗಳ ಮಾದರಿಗಳು ಲಭ್ಯವಿವೆ. ಈ ಕಾಯಿಲೆಗಳಲ್ಲಿ ಯಾವ ಕೋಶಗಳು ಸಕ್ರಿಯವಾಗಿವೆ ಎಂಬುದನ್ನು ಇಲಿಗಳಲ್ಲಿ ತಿಳಿದುಕೊಂಡರೆ, ಮಾನವರಲ್ಲಿ ಯಾವ ಭಾಗಗಳನ್ನು ಪರಿಶೀಲಿಸಬೇಕು ಎಂಬುದು ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ.
ಕಾರ್ಲ್ ಡೈಸರೋತ್ ಅವರು ಇಲಿಗಳ ಮೆದುಳಿನ ಮೋಟರ್ ಕಾರ್ಟೆಕ್ಸ್‌ನಲ್ಲಿರುವ ನಿರ್ದಿಷ್ಟ ನರಕೋಶಗಳನ್ನು ಸಕ್ರಿಯಗೊಳಿಸುವ ಮೂಲಕ ಅವುಗಳ ಮೀಸೆಗಳ ಚಲನೆಯನ್ನು ನಿಯಂತ್ರಿಸಿದ್ದರು. ಅಲ್ಲದೆ ಬೆಳಕಿನ ನೆರವಿನಿಂದ ನಿದ್ರಿಸುತ್ತಿದ್ದ ಇಲಿಗಳನ್ನು ಎಚ್ಚರಗೊಳಿಸುವ ಮೂಲಕ ಜಾಗೃತ ಸ್ಥಿತಿಯನ್ನು ನಿಯಂತ್ರಿಸುವ ನಿರ್ದಿಷ್ಟ ನರಕೋಶಗಳ ಅಸ್ತಿತ್ವವನ್ನು ದೃಢಪಡಿಸಿದ್ದರು.

ಕುರುಡರಿಗೆ ದೃಷ್ಟಿ ಮರಳಿಸುವ ಪ್ರಯತ್ನ
ಆಪ್ಟೋಜೆನೆಟಿಕ್ಸ್ ತಂತ್ರವನ್ನು ಬಳಸಿ ರೆಟಿನೈಟಿಸ್ ಪಿಗ್ಮೆಂಟೋಸಾ (Retinitis Pigmentosa) ಎಂಬ ಕ್ರಮೇಣ ದೃಷ್ಟಿ ಕಳೆದುಕೊಳ್ಳುವ ಕಣ್ಣಿನ ಕಾಯಿಲೆಯಿಂದ ಕುರುಡಾದವರಿಗೆ ದೃಷ್ಟಿ ಮರಳಿಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.
ಕರೋಲಿನ್ಸ್ಕಾದ ನರವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪರ್ ಸ್ವೆನ್ನಿಂಗ್ಸನ್ ಅವರ ಪ್ರಕಾರ, “ಆಪ್ಟೋಜೆನೆಟಿಕ್ಸ್ ಬಳಸಿ ರೆಟಿನೈಟಿಸ್ ಪಿಗ್ಮೆಂಟೋಸಾದಿಂದ ದೃಷ್ಟಿ ಕಳೆದುಕೊಂಡ ಕೆಲವು ರೋಗಿಗಳಲ್ಲಿ ಭಾಗಶಃ ದೃಷ್ಟಿಯನ್ನು ಪುನಃಸ್ಥಾಪಿಸಲಾಗಿದೆ. ಈ ರೋಗದಲ್ಲಿ ರೆಟಿನಾದಲ್ಲಿರುವ ರಾಡ್ ಮತ್ತು ಕೋನ್‌ಗಳಂತಹ ಫೋಟೋರೆಸೆಪ್ಟರ್ ಕೋಶಗಳು ನಾಶವಾಗುತ್ತವೆ. ಆದರೆ ಕೆಲವು ಆರೋಗ್ಯಕರ ಕೋಶಗಳು ಉಳಿಯುತ್ತವೆ. ಅವುಗಳನ್ನು ಬೆಳಕಿಗೆ ಸ್ಪಂದಿಸುವಂತೆ ಮಾಡಿ ದೃಷ್ಟಿನರವನ್ನು ಸಕ್ರಿಯಗೊಳಿಸುವ ಮೂಲಕ ಮೆದುಳಿನಲ್ಲಿ ದೃಶ್ಯ ಗ್ರಹಿಕೆಯನ್ನು ಉಂಟುಮಾಡಬಹುದು” ಎಂದು ವಿವರಿಸಿದರು.
ಶ್ರವಣ ಸಾಧನಗಳಲ್ಲೂ ಬಳಕೆಯ ಸಾಧ್ಯತೆ
ಪ್ರಸ್ತುತ ಬಳಸಲಾಗುತ್ತಿರುವ ವಿದ್ಯುತ್ ಆಧಾರಿತ ಕೋಕ್ಲಿಯರ್ ಇಂಪ್ಲಾಂಟ್‌ಗಳಿಗಿಂತ ಹೆಚ್ಚು ನಿಖರವಾಗಿ ಶ್ರವಣ ನರವನ್ನು ಉತ್ತೇಜಿಸಲು ಆಪ್ಟೋಜೆನೆಟಿಕ್ಸ್ ನೆರವಾಗಬಹುದು ಎಂಬ ನಿರೀಕ್ಷೆಯೂ ವಿಜ್ಞಾನಿಗಳಲ್ಲಿದೆ.
ಈ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದ ಹಂತದಲ್ಲಿರುವ ಚಿಕಿತ್ಸೆಗಳ ಪೈಕಿ ಅಮೆರಿಕದ ಜೈವಿಕ ತಂತ್ರಜ್ಞಾನ ಸಂಸ್ಥೆ ಮ್ಯಾಪ್‌ಲೈಟ್ (MapLight) ಅಭಿವೃದ್ಧಿಪಡಿಸುತ್ತಿರುವ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಚಿಕಿತ್ಸೆ, ಅಮೆರಿಕ ಮೂಲದ ನಾನೋಸ್ಕೋಪ್ (Nanoscope) ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ರೆಟಿನೈಟಿಸ್ ಪಿಗ್ಮೆಂಟೋಸಾ ದೃಷ್ಟಿ ಪುನಃಸ್ಥಾಪನಾ ಚಿಕಿತ್ಸೆ ಸೇರಿವೆ. ಆದರೆ ಈ ಚಿಕಿತ್ಸೆಗಳು ಇನ್ನೂ ರೋಗಿಗಳ ಸಾಮಾನ್ಯ ಬಳಕೆಗೆ ಲಭ್ಯವಾಗಲು ಸಮಯ ಬೇಕಾಗಿದೆ.
ವೈದ್ಯಕೀಯ ಅಥವಾ ಶರೀರಶಾಸ್ತ್ರ ವಿಭಾಗದ ಪ್ರಶಸ್ತಿಯೊಂದಿಗೆ ಪ್ರತಿವರ್ಷದ ನೊಬೆಲ್ ಪ್ರಶಸ್ತಿ ಘೋಷಣೆಗಳು ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ವಿಭಾಗಗಳ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. 2026ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರ ಹೆಸರನ್ನು ಶುಕ್ರವಾರ ಪ್ರಕಟಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಫ್ಲೈದುಬೈ ಭೀಕರ ಘಟನೆಯ ಆಘಾತಕಾರಿ ಮಾಹಿತಿ ; ಸ್ಮಿತ್ ಮಚ್ಚಾರ್‌ಗೆ ತಲೆಬುರುಡೆ ಮುರಿತ, ದೃಷ್ಟಿ ದೋಷ, ಸ್ಮರಣಶಕ್ತಿ ಮೇಲೆ ಪರಿಣಾಮ

ನೊಬೆಲ್‌ ಪುರಸ್ಕೃತರ ಹಿನ್ನೆಲೆ
1971ರಲ್ಲಿ ಬೋಸ್ಟನ್‌ನಲ್ಲಿ ಜನಿಸಿದ ಕಾರ್ಲ್ ಡೈಸರೋತ್ ಬಾಲ್ಯದಿಂದಲೇ ವಿಜ್ಞಾನ ಮತ್ತು ಸಾಹಿತ್ಯ ಎರಡರತ್ತಲೂ ಆಕರ್ಷಿತರಾಗಿದ್ದರು. ಆರಂಭದಲ್ಲಿ ನರಶಸ್ತ್ರಚಿಕಿತ್ಸಕರಾಗುವ ಗುರಿ ಹೊಂದಿದ್ದ ಅವರು, ರೋಗಿಗಳ ನೋವುಗಳನ್ನು ಸಮೀಪದಿಂದ ಕಂಡ ಬಳಿಕ ಮನೋವೈದ್ಯಕೀಯ ಕ್ಷೇತ್ರದತ್ತ ತಿರುಗಿದರು. ಖಿನ್ನತೆ ಏಕೆ ಸಂತೋಷವನ್ನು ಕಸಿದುಕೊಳ್ಳುತ್ತದೆ ಮತ್ತು ಆಟಿಸಂಗೆ ಕಾರಣವೇನು ಎಂಬ ಪ್ರಶ್ನೆಗಳು ಅವರನ್ನು ಸಂಶೋಧನೆಯತ್ತ ಸೆಳೆದವು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅತ್ಯುನ್ನತ ಸಾಧನೆಯೊಂದಿಗೆ ಪದವಿ ಪಡೆದ ಅವರು, ಸ್ಟ್ಯಾನ್‌ಫೋರ್ಡ್‌ನಲ್ಲಿ ಎಂ.ಡಿ. ಮತ್ತು ಪಿಎಚ್‌.ಡಿ. ಪದವಿ ಪಡೆದರು.
ವೈದ್ಯರ ಕುಟುಂಬದಲ್ಲಿ ಜನಿಸಿದ ಪೀಟರ್ ಹೆಗೆಮನ್ ಅವರಿಗೆ ಬಾಲ್ಯದಿಂದಲೇ ವಿಜ್ಞಾನ ಮತ್ತು ಅನ್ವೇಷಣೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ಖಗೋಳಶಾಸ್ತ್ರದ ಜೊತೆಗೆ ಕ್ರಿಸ್ಟೋಫರ್ ಕೊಲಂಬಸ್, ಫ್ರಿಟ್ಜೊಫ್ ನಾನ್ಸೆನ್ ಮತ್ತು ರೋಲ್ಡ್ ಅಮುಂಡ್ಸೆನ್ ಅವರಂತಹ ಸಾಹಸಿಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು. 2020ರಲ್ಲಿ ಪ್ರತಿಷ್ಠಿತ ಶಾ ಪ್ರಶಸ್ತಿ ಪಡೆದ ಬಳಿಕ ಅವರು, ವೈಜ್ಞಾನಿಕ ಸಂಶೋಧನೆ ಎಂದರೆ ಅಪರಿಚಿತ ಪ್ರದೇಶವನ್ನು ನಕ್ಷೆ ಮಾಡುವ ಕಾರ್ಯದಂತೆಯೇ ಎಂದು ಹೇಳಿದ್ದರು.
ದಕ್ಷಿಣ ಜರ್ಮನಿಯಲ್ಲಿ ಜನಿಸಿದ ಜಾರ್ಜ್ ನಾಗೆಲ್ ಐದು ವರ್ಷದ ವಯಸ್ಸಿನಲ್ಲಿ ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದು, ಅನೇಕ ಬೇಸಿಗೆ ರಜೆಗಳನ್ನು ಶಸ್ತ್ರಚಿಕಿತ್ಸೆಗಳಿಗಾಗಿ ಕಳೆದಿದ್ದರು. 2020ರ ಶಾ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅವರು ಬಾಲ್ಯದಿಂದಲೇ ಗಣಿತ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಪ್ರೀತಿಸುತ್ತಿದ್ದುದಾಗಿ ಹೇಳಿದ್ದರು. ಶಿಕ್ಷಕರಾಗಿಯೂ ಕೆಲಸ ಮಾಡಿದ ಅವರು, ಒಂದು ಕೆಫೆ ತೆರೆದರು. ಹಾಗೂ ಬಿಡುವಿನ ವೇಳೆಯಲ್ಲಿ ಹ್ಯಾಂಗ್ ಗ್ಲೈಡಿಂಗ್ ಕೂಡ ಮಾಡುತ್ತಿದ್ದರು. ಫ್ರಾಂಕ್‌ಫರ್ಟ್‌ನ ಮ್ಯಾಕ್ಸ್ ಪ್ಲಾಂಕ್ ಬಯೋಫಿಸಿಕ್ಸ್ ಸಂಸ್ಥೆಯಲ್ಲಿ ಪೀಟರ್ ಹೆಗೆಮನ್ ಅವರನ್ನು ಮೊದಲ ಬಾರಿಗೆ ಭೇಟಿಯಾದುದಾಗಿ ಅವರು ಹೇಳಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement