ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಅಗ್ರಪೂಜೆ ಹಾಗೂ ಸಾಂಪ್ರದಾಯಿಕವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಈ ಬಾರಿಯ 11 ದಿನಗಳ ನಾಡಹಬ್ಬ ದಸರಾಗೆ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಚಾಲನೆ ನೀಡಿದರು.
ಭಾನುವಾರ ಬೆಳಿಗ್ಗೆ 11:50 ರಿಂದ 12:13 ರವರೆಗಿನ ಶುಭ ಧನುರ್ ಲಗ್ನದಲ್ಲಿ ಉದ್ಘಾಟನೆ ಮಾಡಲಾಯಿತು. ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ನಂತರ ಮೈಸೂರು ನಗರದಲ್ಲಿ ಹಲವಾರು ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಇಂದಿನಿಂದ ಅಕ್ಟೋಬರ್ 21 ರವರೆಗೆ ದಸರಾ ಕಾರ್ಯಕ್ರಮಗಳು ನಡೆಯಲಿವೆ.
ಕಳೆದ ವಾರ ಅರಮನೆಯಿಂದ ಅಮ್ಮನವರ ಉತ್ಸವಮೂರ್ತಿಯನ್ನು ಚಾಮುಂಡಿ ಬೆಟ್ಟಕ್ಕೆ ಸಾಂಪ್ರದಾಯಿಕವಾಗಿ ಕರೆತರಲಾಯಿತು. ಅಲ್ಲಿ ವಿಶೇಷವಾಗಿ ತಾಯಿಯನ್ನು ಅಲಂಕರಿಸಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನವರಾತ್ರಿಯ ಮೊದಲ ದಿನವಾದ ಇಂದು ಭಾನುವಾದ (ಅಕ್ಟೋಬರ್ 11) ದೇವಸ್ಥಾನದ ಒಳಗೆ ಪೂಜಾ ಕೈಂಕರ್ಯಗಳನ್ನು ಕೈಗೊಂಡು ವಿಶೇಷ ಅಲಂಕಾರದೊಂದಿಗೆ ಅಮ್ಮನವರ ಉತ್ಸವಮೂರ್ತಿಯನ್ನು ದಸರಾ ಉದ್ಘಾಟನಾ ವೇದಿಕೆಗೆ ಕರೆತಂದು, ಅಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿದ ಬಳಿಕ ನಾಡ ಅಧಿದೇವತೆಗೆ ಗಣ್ಯರಿಂದ ಪುಷ್ಪಾರ್ಚನೆ ಮಾಡಿ ದಸರಾ ಹಬ್ಬವನ್ನು ಉದ್ಘಾಟನೆ ಮಾಡಲಾಯಿತು.
ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಮೈಸೂರಿನ ಸಾಂಸ್ಕೃತಿಕ ಪರಂಪರೆ, ಮೈಸೂರು ರಾಜಮನೆತನದ ಕೊಡುಗೆ, ಕನ್ನಡದ ಸಾಮರಸ್ಯದ ಪರಂಪರೆಯ ಮಹತ್ವವನ್ನು ಒತ್ತಿಹೇಳಿದರು.
“ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ. ದಸರಾ ಇದು ನಾಡಿನ ಗತವೈಭವ, ವರ್ತಮಾನ ಮತ್ತು ಭವಿಷ್ಯದ ಸಂಗಮ. ಮೈಸೂರು ನಗರವು ಅರಮನೆಗಳ ನಗರ, ಸಂಸ್ಕಾರವಂತರ ನಗರ, ಅರಿವಿನ ನಗರ, ಸಾಂಸ್ಕೃತಿಕ ನಗರ ಹಾಗೂ ಗುರುಮನೆಗಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಶ್ರೀಗಳು ಬಣ್ಣಿಸಿದರು.
ದಸರಾ ಕೇವಲ ಉತ್ಸವವಾಗಿರದೆ ಜನರ ಪರಿಶ್ರಮ, ಸಂಸ್ಕೃತಿ ಮತ್ತು ಸಾಮೂಹಿಕ ಬದುಕಿನ ಪ್ರತೀಕವಾಗಬೇಕು ಎಂಬ ಸಂದೇಶ ನೀಡಿದರು.
ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯ ಪರಂಪರೆ ಸಾಮರಸ್ಯದ ಸಂದೇಶ ಸಾರುತ್ತದೆ. ನೀತಿ ಮತ್ತು ಪ್ರೀತಿಯ ನೆಲೆಯಲ್ಲಿ ನಾವು ನಾಡು ಕಟ್ಟಬೇಕು. ಗ್ರಂಥಗಳು ಹಾಗೂ ಪಂಥಗಳು ಬೇರೆ ಇರಬಹುದು; ಆದರೆ ಮಾನವೀಯತೆ ಮತ್ತು ಸತ್ಯದ ಹಾದಿ ಒಂದೇ ಆಗಿರಬೇಕು ಎಂದು ಪ್ರತಿಪಾದಿಸಿದರು. ದುಡಿಮೆಯನ್ನು ಪ್ರೀತಿಸಬೇಕೇ ಹೊರತು ಹಣವನ್ನಷ್ಟೇ ಆರಾಧಿಸಬಾರದು. ದುಡಿದು ಬದುಕುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂಬ ಆಶಿಸಿದರು.
ಮೈಸೂರು ರಾಜಮನೆತನದ ಕೊಡುಗೆ ಸ್ಮರಣೀಯ
ಮೈಸೂರು ರಾಜಮನೆತನವನ್ನು ಹೊರಗಿಟ್ಟು ಕರ್ನಾಟಕದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಶ್ರೀಗಳು, ಶಿಕ್ಷಣ ಮತ್ತು ಜ್ಞಾನ ಕ್ಷೇತ್ರಗಳ ಬೆಳವಣಿಗೆಗೆ ರಾಜಮನೆತನ ಕೊಡುಗೆ ಅಪಾರವಾಗಿದೆ. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಯಲ್ಲಿ ಮೈಸೂರಿನ ರಾಜಮನೆತನದ ಪಾತ್ರ ಮಹತ್ವದ್ದಾಗಿದೆ ಎಂದರು.
ದೇಶದಲ್ಲಿ ದೀಪ ಹಚ್ಚಲು ಕಷ್ಟಸಾಧ್ಯವಾಗಿದ್ದ ಆ ಕಾಲದಲ್ಲಿ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಮೂಲಕ ನಾಡಿಗೆ ಬೆಳಕು ನೀಡಿದವರು. ಆಗಿನ ಕಾಲಕ್ಕೆ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್ಸಿ) 300 ಎಕರೆ ಭೂಮಿ ನೀಡಿದರು, ಮೈಸೂರು ವಿಶ್ವವಿದ್ಯಾಲಯ, ಹೆಣ್ಣುಮಕ್ಕಳಿಗೆ ಶಾಲೆಗಳನ್ನು ತೆರೆದವರು. ಅದಕ್ಕಾಗಿ ಗಾಂಧೀಜಿ ಮೈಸೂರು ರಾಜರನ್ನು ರಾಜಶ್ರೀ ಎಂದು ಕರೆದರು. ಮೈಸೂರು ಮಹಾರಾಜರು ಈ ನೆಲವನ್ನು ಆಳಲಿಲ್ಲ, ಜನರ ಮನಸ್ಸನ್ನು ಆಳಿದರು ಎಂದರು.
ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟು ಕಟ್ಟುವಾಗಿ ಆರ್ಥಿಕ ಪರಿಸ್ಥಿತಿ ಉಂಟಾಗಿ ರಾಜಮಾತೆ ಕೆಂಪಣ್ಣಂಜಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಭರಣ ಒತ್ತೆಯಿಟ್ಟು ನಾಡಿನ ಸಲುವಾಗಿ ಕನ್ನಂಬಾಡಿ ಅಣೆಕಟ್ಟು ಕಟ್ಟಿಸಿದರು. ಜನರ ನೋವನ್ನು ಅರಿತವರು ಮಾತ್ರ ಆಳುವವರು ಎಂದು ಮೈಸೂರು ರಾಜಮನೆತನ ನಮಗೆ ಕಲಿಸಿಕೊಟ್ಟಿತು ಎಂದು ಶ್ರೀಗಳು ಶ್ಲಾಘಿಸಿದರು. ನಾಡಹಬ್ಬ ದಸರಾ ಉದ್ಘಾಟನೆಗೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ