ನವದೆಹಲಿ: ಇನ್ಮುಂದೆ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ಅಪರಿಚಿತರ ಕಾಲ್ ಬಂದ್ರೂ ಕರೆ ಮಾಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಯಾಕೆಂದರೆ, ಕಾಲ್ ಮಾಡುವವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಮೊಬೈಲ್ ಪರದೆಯ ಮೇಲೆ ತೋರಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ದೂರಸಂಪರ್ಕ ಇಲಾಖೆ (DoT) 2026ರ ನವೆಂಬರ್ 1ರಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ (CNAP) ವ್ಯವಸ್ಥೆ ಜಾರಿಗೆ ತರುವಂತೆ ದೂರಸಂಪರ್ಕ ಕಂಪನಿಗಳಿಗೆ ಸೂಚನೆ ನೀಡಿದೆ. ಈ ವ್ಯವಸ್ಥೆಯಲ್ಲಿ ಕಾಲ್ ಮಾಡುವವರ ಮೊಬೈಲ್ ಸಂಖ್ಯೆ ಜೊತೆಗೆ ಅವರ ಹೆಸರೂ ಕಾಣಿಸಿಕೊಳ್ಳಲಿದೆ.
ಈ ಸೌಲಭ್ಯ 4G ಮತ್ತು 5G ಸೇರಿದಂತೆ ಮುಂದಿನ ತಲೆಮಾರಿನ ಮೊಬೈಲ್ ಜಾಲಗಳನ್ನು ಬಳಸುವವರಿಗೆ ಸ್ವಯಂಚಾಲಿತವಾಗಿ ಲಭ್ಯವಾಗಲಿದೆ. ಅಂದರೆ, ಇದಕ್ಕಾಗಿ ಪ್ರತ್ಯೇಕವಾಗಿ ಯಾವುದೇ ಆ್ಯಪ್ ಡೌನ್ಲೋಡ್ ಮಾಡುವ ಅಥವಾ ಸೆಟ್ಟಿಂಗ್ ಬದಲಾಯಿಸುವ ಅಗತ್ಯವಿಲ್ಲ. ಆದರೆ, 2G, 3G ಜಾಲಗಳು ಹಾಗೂ ಲ್ಯಾಂಡ್ಲೈನ್ ದೂರವಾಣಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ.
ಮೊಬೈಲ್ ಕಾಲ್ ಮಾಡಿದವರ ಹೆಸರು ಹೇಗೆ ಕಾಣಿಸುತ್ತದೆ?
ಮೊಬೈಲ್ನಲ್ಲಿ ಸೇವ್ ಆಗದಿರುವ ಸಂಖ್ಯೆಯಿಂದ ಕರೆ ಬಂದರೆ, ಹೊಸ ವ್ಯವಸ್ಥೆಯ ಮೂಲಕ ಕರೆ ಮಾಡಿದವರ ಹೆಸರು ತಿಳಿಯಲಿದೆ.
ಈಗಾಗಲೇ ಆ ಸಂಖ್ಯೆಯನ್ನು ಮೊಬೈಲ್ನಲ್ಲಿ ಹೆಸರಿನೊಂದಿಗೆ ಸೇವ್ ಮಾಡಿದ್ದರೆ, ಅದೇ ಹೆಸರು ಕಾಣಿಸುತ್ತದೆ. ಒಂದು ವೇಳೆ ಆ ಸಂಖ್ಯೆ ಮೊಬೈಲ್ನ ಸಂಪರ್ಕ ಪಟ್ಟಿಯಲ್ಲಿ ಇಲ್ಲದಿದ್ದರೆ, ಸಿಮ್ ಕಾರ್ಡ್ ಪಡೆಯುವಾಗ ದೂರಸಂಪರ್ಕ ಕಂಪನಿಯಲ್ಲಿ ನೋಂದಾಯಿಸಿರುವ ಹೆಸರನ್ನು ತೋರಿಸಲಾಗುತ್ತದೆ.
ಉದಾಹರಣೆಗೆ, ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ ಆ ಸಂಖ್ಯೆ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ ಎಂಬುದು ತಿಳಿಯುತ್ತದೆ. ಇದರಿಂದ ಕಾಲ್ ಸ್ವೀಕರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯವಾಗಬಹುದು. ಆದರೆ, ಮೊಬೈಲ್ನಲ್ಲಿ ಕಾಣಿಸುವ ಹೆಸರು ಸಿಮ್ ಕಾರ್ಡ್ ನೋಂದಣಿಯಲ್ಲಿರುವ ವ್ಯಕ್ತಿಯ ಹೆಸರಾಗಿರುತ್ತದೆ. ಹೀಗಾಗಿ, ಅದೇ ವ್ಯಕ್ತಿ ಕರೆ ಮಾಡುತ್ತಿದ್ದಾರೆ ಎಂಬ ಖಚಿತತೆ ಇರುವುದಿಲ್ಲ. ಆದರೆ, ವಿದೇಶದಿಂದ ಕರೆ ಬಂದಾಗ ಕರೆ ಮಾಡಿದವರ ಹೆಸರಿನ ಬದಲಿಗೆ ‘ಇಂಟರ್ನ್ಯಾಷನಲ್ ಕಾಲ್’ (International Call) ಎಂಬ ಸಂದೇಶ ಕಾಣಿಸಿಕೊಳ್ಳಲಿದೆ.
ಹೆಸರಿನ ಮಾಹಿತಿ ಎಲ್ಲಿಂದ ಬರುತ್ತದೆ?
ಪ್ರತಿಯೊಂದು ದೂರಸಂಪರ್ಕ ಕಂಪನಿಯೂ ತನ್ನ ಗ್ರಾಹಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಈ ವಿವರಗಳನ್ನು ಬಳಸಿಕೊಂಡು ಕರೆ ಮಾಡಿದವರ ಹೆಸರನ್ನು ಗುರುತಿಸುವ ವ್ಯವಸ್ಥೆಯನ್ನು ಕಂಪನಿಗಳು ನಿರ್ವಹಿಸಬೇಕು.
ಕಾಲ್ ಬಂದಾಗ, ದೂರಸಂಪರ್ಕ ಕಂಪನಿಯು ಕರೆ ಮಾಡಿದವರ ಸಂಖ್ಯೆಯನ್ನು ಆಧರಿಸಿ ತನ್ನ ಮಾಹಿತಿ ಸಂಗ್ರಹದಿಂದ ಹೆಸರನ್ನು ಪಡೆದು ನಿಮ್ಮ ಮೊಬೈಲ್ ಪರದೆಯ ಮೇಲೆ ತೋರಿಸುತ್ತದೆ. ಇದರಿಂದ ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ ಹೆಸರನ್ನು ತಿಳಿಯಲು ಪ್ರತ್ಯೇಕ ಆ್ಯಪ್ ಬಳಸುವ ಅಗತ್ಯ ಇರುವುದಿಲ್ಲ.
ಕಾಲ್ ಮುಗಿದ ಬಳಿಕ ಮಾಹಿತಿ ಸೇವ್ ಮಾಡುವಂತಿಲ್ಲ…
ಬಳಕೆದಾರರ ಖಾಸಗಿತನ ಕಾಪಾಡಲು ದೂರಸಂಪರ್ಕ ಇಲಾಖೆ ಕ್ರಮ ಕೈಗೊಂಡಿದೆ. ಕರೆ ಬಂದಾಗ ಹೆಸರನ್ನು ಪಡೆದು ತೋರಿಸುವ ಪ್ರಕ್ರಿಯೆಯಲ್ಲಿ ದೊರೆತ ಮಾಹಿತಿಯನ್ನು ಕರೆ ಮುಗಿದ ಬಳಿಕ ಉಳಿಸಿಕೊಳ್ಳುವಂತಿಲ್ಲ ಎಂದು ಸೂಚಿಸಿದೆ.
ಇದಲ್ಲದೆ, ಕರೆ ಮಾಡುವಾಗ ತಮ್ಮ ಮೊಬೈಲ್ ಸಂಖ್ಯೆಯನ್ನು ಇತರರಿಗೆ ಕಾಣಿಸದಂತೆ ಮಾಡುವ ಸೌಲಭ್ಯವನ್ನು (Calling Line Identification Restriction — CLIR) ಬಳಸುವವರ ಹೆಸರು ಈ ವ್ಯವಸ್ಥೆಯಲ್ಲಿ ಕಾಣಿಸುವುದಿಲ್ಲ.
ವ್ಯಾಪಾರ ಸಂಸ್ಥೆಗಳಿಗೆ ಪ್ರತ್ಯೇಕ ಹೆಸರಿನ ಅವಕಾಶ
ವ್ಯಾಪಾರ ಸಂಸ್ಥೆಗಳು ಮತ್ತು ಹೆಚ್ಚಿನ ಸಂಖ್ಯೆಯ ಮೊಬೈಲ್ ಸಂಪರ್ಕ ಹೊಂದಿರುವ ಕಂಪನಿಗಳಿಗೆ ತಮ್ಮ ನೋಂದಾಯಿತ ಹೆಸರಿನ ಬದಲಿಗೆ ವ್ಯಾಪಾರದ ಹೆಸರನ್ನು ತೋರಿಸುವ ಅವಕಾಶವನ್ನು ದೂರಸಂಪರ್ಕ ಕಂಪನಿಗಳು ನೀಡಬಹುದು.
ಆದರೆ, ಆ ಹೆಸರು ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ಟ್ರೇಡ್ಮಾರ್ಕ್ ಆಗಿರಬೇಕು ಅಥವಾ ಸರಕು ಮತ್ತು ಸೇವಾ ತೆರಿಗೆ (GST) ಪೋರ್ಟಲ್ನಲ್ಲಿ ನೋಂದಾಯಿಸಿರುವ ವ್ಯಾಪಾರದ ಹೆಸರಾಗಿರಬೇಕು. ಸಂಸ್ಥೆಗಳು ನೀಡುವ ಹೆಸರು ಮತ್ತು ಸಂಬಂಧಿಸಿದ ದಾಖಲೆಗಳನ್ನು ದೂರಸಂಪರ್ಕ ಕಂಪನಿಗಳು ಪರಿಶೀಲಿಸಬೇಕು.
ಈಗಾಗಲೇ ಮೊಬೈಲ್ ಸಂಪರ್ಕ ಹೊಂದಿರುವ ಸಂಸ್ಥೆಗಳು ತಮ್ಮ ಹೆಸರಿನ ಬದಲಿಗೆ ಬೇರೆ ಹೆಸರನ್ನು ತೋರಿಸಲು ಬಯಸಿದರೆ, ಅದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಿಂದೆಯೇ ನಡೆದಿತ್ತು ಪ್ರಯೋಗ
ಕಳೆದ ಕೆಲವು ತಿಂಗಳುಗಳಿಂದ 4G ಮತ್ತು 5G ಮೊಬೈಲ್ ಜಾಲಗಳಲ್ಲಿ ಈ ವ್ಯವಸ್ಥೆಯ ಪ್ರಯೋಗಗಳನ್ನು ನಡೆಸಲಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) 2024ರ ಫೆಬ್ರವರಿಯಲ್ಲಿ ನೀಡಿದ್ದ ಶಿಫಾರಸುಗಳನ್ನೂ ದೂರಸಂಪರ್ಕ ಇಲಾಖೆ ಪರಿಗಣಿಸಿದೆ.
2025ರ ಅಕ್ಟೋಬರ್ನಲ್ಲಿ ಎಲ್ಲ ಬಳಕೆದಾರರಿಗೂ ಈ ಸೌಲಭ್ಯವನ್ನು ಸ್ವಯಂಚಾಲಿತವಾಗಿ ಒದಗಿಸುವ ದೂರಸಂಪರ್ಕ ಇಲಾಖೆಯ ಪ್ರಸ್ತಾವಕ್ಕೆ ಟ್ರಾಯ್ ಒಪ್ಪಿಗೆ ನೀಡಿತ್ತು. ಆದರೆ, ಆರಂಭದಲ್ಲಿ ಬಳಕೆದಾರರು ಮನವಿ ಸಲ್ಲಿಸಿದರೆ ಮಾತ್ರ ಈ ಸೌಲಭ್ಯ ಒದಗಿಸಬೇಕೆಂದು ಟ್ರಾಯ್ ಶಿಫಾರಸು ಮಾಡಿತ್ತು. ಬಳಿಕ ಎಲ್ಲರಿಗೂ ಸ್ವಯಂಚಾಲಿತವಾಗಿ ಸೌಲಭ್ಯ ಒದಗಿಸುವ ನಿರ್ಧಾರಕ್ಕೆ ಒಪ್ಪಿಗೆ ದೊರೆತಿದೆ.
ನವೆಂಬರ್ 1ರಿಂದ ಈ ವ್ಯವಸ್ಥೆ ಜಾರಿಗೆ ಬಂದರೆ, ಅಪರಿಚಿತ ಸಂಖ್ಯೆಯಿಂದ ಕಾಲ್ ಬಂದಾಗ ಆ ಸಂಖ್ಯೆ ಯಾರ ಹೆಸರಿನಲ್ಲಿ ನೋಂದಣಿಯಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿದೆ. ಇದರಿಂದ ಕಾಲ್ಗಳನ್ನು ಗುರುತಿಸುವುದು ಸುಲಭವಾಗಬಹುದು. ಆದರೆ, ಹೆಸರು ಕಾಣಿಸಿದ ಮಾತ್ರಕ್ಕೆ ಕಾಲ್ ಮಾಡಿದವರ ನಿಜವಾದ ಗುರುತು ಅಥವಾ ಅವರ ಉದ್ದೇಶದ ಬಗ್ಗೆ ಸಂಪೂರ್ಣ ಖಚಿತತೆ ಸಿಗುವುದಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ