ವಿಡಿಯೋ | ಬಾಲಿವುಡ್‌ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮೂವರು ಅಪರಿಚಿತರು ಗುಂಡಿನ ದಾಳಿ ನಡೆಸಿರುವ ದೃಶ್ಯದ ವಿಡಿಯೊವೊಂದು ಹೊರಬಿದ್ದಿದೆ. ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಪಾರಾಗಿದ್ದಾರೆ. ಆದರೆ, ಅವರ ಕಾರಿನ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಮುಂಬೈನ ಜುಹು ಪೊಲೀಸ್ ಠಾಣೆ ವ್ಯಾಪ್ತಿಯ ಪುಷ್ಪಾ ಪಾರ್ಕ್ ಸಮೀಪ ಸಂಜೆ ಸುಮಾರು 7 ಗಂಟೆಗೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಗುಂಡಿನ ದಾಳಿಯಲ್ಲಿ ಟೈಗರ್ ಶ್ರಾಫ್ ಅವರ ಚಾಲಕ ಫಿರ್ದೋಶ್ ಅವರ ಎಡಗೈಗೆ ಗುಂಡೇಟು ತಗುಲಿದೆ. ಘಟನೆಯಲ್ಲಿ ಒಟ್ಟು ಇಬ್ಬರು ಗಾಯಗೊಂಡಿದ್ದಾರೆ. ದಾಳಿಕೋರರು ನಟ ಕುಳಿತಿದ್ದ ಕಾರಿನ ಮೇಲೆ ಸಮೀಪದಿಂದಲೇ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಅಭಿಮಾನಿಗಳ ಗುಂಪಿನ ನಡುವೆ ಕಾರಿನ ಮೇಲೆ ಗುಂಡಿನ ದಾಳಿ
ಹೊರಬಿದ್ದಿರುವ ವಿಡಿಯೊದಲ್ಲಿ ಟೈಗರ್ ಶ್ರಾಫ್ ಅವರ ಕಾರು ಅಭಿಮಾನಿಗಳ ಗುಂಪಿನ ನಡುವೆ ನಿಧಾನವಾಗಿ ಸಾಗುತ್ತಿರುವುದು ಕಾಣಿಸುತ್ತದೆ. ಈ ವೇಳೆ ಮೋಟಾರ್‌ಸೈಕಲ್‌ನಲ್ಲಿ ಮೂವರು ಅಪರಿಚಿತರು ಅಲ್ಲಿಗೆ ಬರುತ್ತಾರೆ. ಅವರಲ್ಲಿ ಒಬ್ಬ ಬೈಕ್‌ನಲ್ಲೇ ಉಳಿದುಕೊಂಡರೆ, ಇನ್ನಿಬ್ಬರು ಕಾರಿನ ಸಮೀಪಕ್ಕೆ ಬಂದು ಗುಂಡು ಹಾರಿಸಿರುವುದು ದೃಶ್ಯದಲ್ಲಿದೆ. ಏಕಾಏಕಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಟ ಕುಳಿತಿದ್ದ ಕಾರಿನತ್ತ ದಾಳಿಕೋರರು ಗುಂಡು ಹಾರಿಸಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.  ಆದರೆ, ಒಟ್ಟು ಎಷ್ಟು ಸುತ್ತು ಗುಂಡು ಹಾರಿಸಲಾಗಿದೆ ಮತ್ತು ಎಷ್ಟು ಬಂದೂಕುಗಳನ್ನು ಬಳಸಲಾಗಿದೆ ಎಂಬುದನ್ನು ತನಿಖಾಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.
ಘಟನೆಯ ನಂತರ ಚಿತ್ರೀಕರಿಸಲಾದ ಮತ್ತೊಂದು ವಿಡಿಯೊದಲ್ಲಿ, ಚಾಲಕ ಗಾಯಗೊಂಡ ಹಿನ್ನೆಲೆಯಲ್ಲಿ ಟೈಗರ್ ಶ್ರಾಫ್ ಅವರೇ ಚಾಲಕನ ಆಸನಕ್ಕೆ ಬಂದು ಕಾರು ಚಲಾಯಿಸಿಕೊಂಡು ಅಲ್ಲಿಂದ ತೆರಳುತ್ತಿರುವುದು ಕಂಡುಬಂದಿದೆ. ಈ ವೇಳೆ ಯಾರಿಗೋ ಗುಂಡು ತಗುಲಿದೆ ಎಂದು ಜನರು ಕೂಗುತ್ತಿರುವುದು ಕೇಳಿಸುತ್ತದೆ. ಕಾರಿನ ಸಮೀಪ ರಕ್ತದ ಕಲೆಗಳೂ ಕಾಣಿಸಿಕೊಂಡಿವೆ. ಆದರೆ, ಆ ರಕ್ತ ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ.
ನಾಲ್ಕು ಸುತ್ತು ಗುಂಡು ಹಾರಿಸಿದ ಶಂಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದ ಮೂವರ ಪೈಕಿ ಇಬ್ಬರು ಗುಂಡು ಹಾರಿಸಿದ್ದು, ಬಳಿಕ ಮೂವರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಒಬ್ಬ ದಾಳಿಕೋರ ಮೂರು ಸುತ್ತು ಹಾಗೂ ಮತ್ತೊಬ್ಬ ಒಂದು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಟೈಗರ್ ಶ್ರಾಫ್ ಕುಳಿತಿದ್ದ ದಿಕ್ಕಿನಲ್ಲೇ ಗುಂಡು ಹಾರಿಸಿರುವುದಾಗಿ ವರದಿಯಾಗಿದೆ. ಆದರೆ, ದಾಳಿಯ ಹಿಂದಿನ ಉದ್ದೇಶವೇನು ಮತ್ತು ಟೈಗರ್ ಶ್ರಾಫ್ ಅವರೇ ದಾಳಿಕೋರರ ಗುರಿಯಾಗಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತನಿಖೆಗೆ 15 ಪೊಲೀಸ್ ತಂಡಗಳ ರಚನೆ
ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರು 15 ತಂಡಗಳನ್ನು ರಚಿಸಿದ್ದಾರೆ. ಮುಂಬೈ ಅಪರಾಧ ವಿಭಾಗದ (ಕ್ರೈಂ ಬ್ರಾಂಚ್) ವಿಶೇಷ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ ಈ ತಂಡಗಳು ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸಾಂತಾಕ್ರೂಜ್ ಪ್ರದೇಶದಿಂದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡವೂ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ದಾಳಿಯಲ್ಲಿ ಭಾಗಿಯಾಗಿರುವವರ ಗುರುತು ಪತ್ತೆಹಚ್ಚಲು ಹಾಗೂ ಒಟ್ಟು ಎಷ್ಟು ಮಂದಿ ದಾಳಿಕೋರರು ಇದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಟೈಗರ್ ಶ್ರಾಫ್ ಯಾರು?
1990ರ ಮಾರ್ಚ್ 2ರಂದು ಜೈ ಹೇಮಂತ ಶ್ರಾಫ್ ಉರುಫ್‌ ಟೈಗರ್ ಶ್ರಾಫ್ ಬಾಲಿವುಡ್‌ನ ಪ್ರಮುಖ ಸಾಹಸಪ್ರಧಾನ ನಟರಲ್ಲಿ ಒಬ್ಬರು. ಇವರು ಖ್ಯಾತ ನಟ ಜಾಕಿ ಶ್ರಾಫ್‌ ಅವರ ಪುತ್ರ. ಅವರು ಸಮರಕಲೆಗಳಲ್ಲೂ ಪರಿಣತಿ ಹೊಂದಿದ್ದು, ಟೇಕ್ವಾಂಡೋದಲ್ಲಿ ಐದನೇ ಹಂತದ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.
2014ರಲ್ಲಿ ಬಿಡುಗಡೆಯಾದ ಹೀರೋಪಂತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಬಾಘಿ, ಬಾಘಿ 2 ಹಾಗೂ ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ವಾರ್ ಚಿತ್ರದ ಮೂಲಕ ಸಾಹಸಪ್ರಧಾನ ನಾಯಕನಾಗಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.
ಸಿನಿಮಾ ಕ್ಷೇತ್ರದ ಹೊರತಾಗಿಯೂ ಕ್ರೀಡಾ ವಲಯದಲ್ಲಿ ಅವರು ಸಕ್ರಿಯರಾಗಿದ್ದಾರೆ. 2019ರಲ್ಲಿ ಮ್ಯಾಟ್ರಿಕ್ಸ್ ಫೈಟ್ ನೈಟ್ (MFN) ಸಂಸ್ಥೆಯ ಸಹಸ್ಥಾಪಕರಾದ ಅವರು, ಭಾರತದಲ್ಲಿ ಮಿಶ್ರ ಸಮರ ಕಲೆಗಳ (ಎಂಎಂಎ) ಸ್ಪರ್ಧೆಗಳನ್ನು ಆಯೋಜಿಸುವ ಪ್ರಮುಖ ಸಂಸ್ಥೆಯೊಂದರ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದಾರೆ. ಈ ಸಂಸ್ಥೆ ಇದೀಗ ಭಾರತದ ಅತಿದೊಡ್ಡ ಮಿಶ್ರ ಸಮರ ಕಲೆಗಳ ಸ್ಪರ್ಧಾ ಆಯೋಜನಾ ಬ್ರ್ಯಾಂಡ್ ಆಗಿ ಬೆಳೆದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement