ಜೈಪುರ: 20 ರೂಪಾಯಿಯ ಕಚೋರಿಯೊಂದು ಉದ್ಯಮಿಯೊಬ್ಬರಿಗೆ ಅತ್ಯಂತ ದುಬಾರಿ ತಿಂಡಿಯಾಗಿ ಪರಿಣಮಿಸಿದ ಘಟನೆ ಜೈಪುರದಲ್ಲಿ ನಡೆದಿದೆ.
ಹಸಿವು ನೀಗಿಸಿಕೊಳ್ಳಲು 20 ರೂ. ಕೊಟ್ಟು ಕಚೋರಿ ತಿನ್ನುತ್ತ ನಿಂತಿದ್ದ ಉದ್ಯಮಿಯೊಬ್ಬರು ಬರೋಬ್ಬರಿ 20 ಲಕ್ಷ ರೂ. ಕಳೆದುಕೊಂಡಿದ್ದಾರೆ. ಉದ್ಯಮಿ ಕಚೋರಿ ತಿನ್ನುವಲ್ಲಿ ನಿರತರಾಗಿದ್ದಾಗ ಸ್ಕೂಟರ್ನಲ್ಲಿ ಬಂದ ಇಬ್ಬರು ಕಳ್ಳರು, ಅವರ ಬಳಿಯಿದ್ದ 20 ಲಕ್ಷ ರೂ. ನಗದು ತುಂಬಿದ ಚೀಲವನ್ನು ಕದ್ದು ಪರಾರಿಯಾಗಿದ್ದಾರೆ. ಈ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಜೈಪುರದ ನಹರ್ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಮಧ್ಯಾಹ್ನ ಸುಮಾರು 4 ಗಂಟೆಗೆ ಚಂಪಾಲಾಲ ಎಂಬ ಉದ್ಯಮಿ ಕಚೋರಿ ತಿನ್ನಲು ತಮ್ಮ ಸ್ಕೂಟರ್ ನಿಲ್ಲಿಸಿದ್ದರು. ಈ ವೇಳೆ 20 ಲಕ್ಷ ರೂ. ನಗದು ಇದ್ದ ಚೀಲವನ್ನು ಸ್ಕೂಟರ್ನ ಮುಂಭಾಗದಲ್ಲಿ ಇಟ್ಟಿದ್ದರು. ಇದನ್ನೇ ಗಮನಿಸಿದ ಸ್ಕೂಟರ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಉದ್ಯಮಿ ಕಚೋರಿ ತಿನ್ನುತ್ತಿದ್ದಾಗ ಚೀಲವನ್ನು ಕದ್ದು ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.
ಕಚೋರಿ ತಿನ್ನುತ್ತಿದ್ದ ಉದ್ಯಮಿ ಚಂಪಾಲಾಲ ಅವರಿಗೆ ತಮ್ಮ ಹಣದ ಚೀಲವನ್ನು ಕಳ್ಳರು ಎಗರಿಸಿಕೊಂಡು ಹೋಗಿದ್ದು ತಿಳಿಯುತ್ತಿದ್ದಂತೆಯೇ, ಕಳ್ಳರನ್ನು ಹಿಡಿಯಲು ಅವರ ಬೆನ್ನಟ್ಟಿದ್ದಾರೆ. ಸ್ಥಳೀಯ ನಿವಾಸಿಗಳೂ ಉದ್ಯಮಿಯ ನೆರವಿಗೆ ಧಾವಿಸಿ ಕಳ್ಳರನ್ನು ಹಿಂಬಾಲಿಸಿದ್ದಾರೆ. ಆದರೆ, ಇಬ್ಬರು ಆರೋಪಿಗಳು ವೇಗವಾಗಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳತನದ ದೃಶ್ಯ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಚಂಪಾಲಾಲ ಅವರು ತಮ್ಮ ಸ್ಕೂಟರ್ ಮೇಲೆ ಆರಾಮವಾಗಿ ಕುಳಿತು ಕಚೋರಿ ತಿನ್ನುತ್ತಿರುವುದು ಕಾಣಿಸುತ್ತದೆ. ಇದೇ ಸಂದರ್ಭದಲ್ಲಿ ಮತ್ತೊಂದು ಸ್ಕೂಟರ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಪಕ್ಕದಲ್ಲೇ ಬಂದು ನಿಲ್ಲಿಸುತ್ತಾರೆ. ಹಿಂಬದಿ ಸವಾರ ತಕ್ಷಣವೇ ಉದ್ಯಮಿಯ ಸ್ಕೂಟರ್ನ ಮುಂಭಾಗದಲ್ಲಿದ್ದ ನಗದು ತುಂಬಿದ ಚೀಲವನ್ನು ಎಗರಿಸುತ್ತಾನೆ. ಬಳಿಕ ಇಬ್ಬರೂ ಸ್ಕೂಟರ್ನಲ್ಲಿ ವೇಗವಾಗಿ ಅಲ್ಲಿಂದ ತೆರಳುತ್ತಾರೆ.
ಕೈಯಲ್ಲಿ ಕಚೋರಿಯನ್ನು ಹಿಡಿದಿದ್ದ ಚಂಪಾಲಾಲ, ಕಳ್ಳರು ಹಣದ ಚೀಲದೊಂದಿಗೆ ಪರಾರಿಯಾಗುತ್ತಿರುವುದನ್ನು ಕಂಡು ಅವರ ಬೆನ್ನಟ್ಟುತ್ತಾ ಓಡುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ಉದ್ಯಮಿ ಹಾಗೂ ಸ್ಥಳೀಯರು ಬೆನ್ನಟ್ಟಿದರೂ ಕಳ್ಳರನ್ನು ಹಿಡಿಯಲು ಸಾಧ್ಯವಾಗಿಲ್ಲ.
ಹೆಲ್ಮೆಟ್ ಧರಿಸಿದ್ದ ಆರೋಪಿಗಳಿಗಾಗಿ ಶೋಧ
ಘಟನೆಗೆ ಸಂಬಂಧಿಸಿದಂತೆ ಚಂಪಾಲಾಲ ನೀಡಿದ ದೂರಿನ ಆಧಾರದ ಮೇಲೆ ನಹರ್ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಲ್ಮೆಟ್ ಧರಿಸಿದ್ದ ಇಬ್ಬರು ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ