ಥಾಣೆ: ಕೋಪದಲ್ಲಿ ತನ್ನ ಆತ್ಮೀಯ ಗೆಳೆಯನನ್ನೇ ಹೊಡೆದು ಕೊಂದ ವ್ಯಕ್ತಿಯೊಬ್ಬ, ಕೊಲೆ ಮಾಡಿದ ಬಳಿಕ ಸತ್ತ ಗೆಳೆಯ ಪ್ರತಿದಿನವೂ ಕನಸಿನಲ್ಲಿ ಬಂದು ಸತತ 20 ದಿನಗಳ ಕಾಲ ಕಾಡಿದ್ದರಿಂದ ತೀವ್ರ ಮಾನಸಿಕ ಯಾತನೆಗೆ ಒಳಗಾದ ವ್ಯಕ್ತಿ ಕೊನೆಗೂ ಪೊಲೀಸರ ಮುಂದೆ ಶರಣಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಡೊಂಬಿವಲಿಯ ಮೊಥಾಗಾಂವ್ ಪ್ರದೇಶದಲ್ಲಿ ಈ ಘಟನೆ ಅಕ್ಟೋಬರ್ 9ರಂದು ನಡೆದಿತ್ತು.
ವಿಶಾಲ ಕದಂ ಮತ್ತು ಪ್ರಭು ಕರಕಾಡೆ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರೂ ಒಂದೇ ಕಡೆ ಕುಳಿತು ಮದ್ಯಪಾನ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರವೊಂದಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಪ್ರಭು, ವಿಶಾಲ ಅವರಿಗೆ ಮನಬಂದಂತೆ ಒದ್ದು ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ವಿಶಾಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೆಳೆಯನ ಸಾವು ಕಂಡು ಗಾಬರಿಗೊಂಡ ಪ್ರಭು, ಏನು ಮಾಡಬೇಕೆಂದು ತೋಚದೆ ತನ್ನ ಮನೆ ಮಾಲೀಕ ಸಂದೇಶ ಮಾತ್ರೆ ಎಂಬಾತನ ಬಳಿ ಸಹಾಯ ಕೋರಿದ್ದಾನೆ. ಇಬ್ಬರೂ ಸೇರಿ ವಿಶಾಲ ಮೃತದೇಹವನ್ನು ಗೋಣಿಚೀಲವೊಂದರಲ್ಲಿ ತುಂಬಿ, ಬಳಿಕ ರಾತ್ರಿ ವೇಳೆ ಯಾರೂ ಇಲ್ಲದ ಸಮಯದಲ್ಲಿ ಸಮೀಪದ ಹಳ್ಳದ ಬಳಿಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಮೃತದೇಹವನ್ನು ಎಸೆದು ಬಂದಿದ್ದಾರೆ. ಕೊಲೆಯ ಸಾಕ್ಷ್ಯವನ್ನು ನಾಶಪಡಿಸಿ ಈ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂದು ಇಬ್ಬರೂ ಭಾವಿಸಿದ್ದ ಅವರಿಗೆ ಗೆಳೆಯ ವಿಶಾಲ ಸತ್ತ ನಂತರವೂ ಶಾಕ್ ನೀಡಿದ್ದಾರೆ.
ಕೊಲೆ ಮಾಡಿದ ಬಳಿಕ ಪ್ರಭು ನಗರದಿಂದ ಪರಾರಿಯಾಗಲು ಆರಂಭದಲ್ಲಿ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಆದರೆ, ಗೆಳೆಯ ಸತ್ತರೂ ಆತನ ಪಾಲಿಗೆ ಆತ ಮಾತ್ರ ಕಾಡುತ್ತಲೇ ಇದ್ದ. ಕೊಲೆ ನಡೆದ ದಿನದಿಂದ ಸತತ 20 ರಾತ್ರಿಗಳ ಕಾಲ . ಮಲಗಿದಾಗಲೆಲ್ಲ ಸತ್ತ ಗೆಳೆಯ ವಿಶಾಲ ಕನಸಿನಲ್ಲಿ ಕಾಣಿಸಿಕೊಂಡು ಈತನಿಗೆ ಕಾಡುತ್ತಿದ್ದ ! ಮೃತ ಗೆಳೆಯ ಪದೇಪದೆ ಕನಸಿನಲ್ಲಿ ಬಂದು ಈತನಿಗೆ ಕಾಡುತ್ತಿದ್ದಂತೆ ಪ್ರಭು ತೀವ್ರ ಮಾನಸಿಕ ಯಾತನೆಗೆ ಒಳಗಾದ. ತಾನು ಮಾಡಿದ ಕೃತ್ಯ ಆತನನ್ನು ಕಾಡತೊಡಗಿದೆ.
ಇದರಿಂದ ಮಾನಸಿಕ ಒತ್ತಡವನ್ನು ತಾಳಲಾರದೆ ಪ್ರಭು ಥಾಣೆಯ ಪೊಲೀಸರನ್ನು ಸಂಪರ್ಕಿಸಿ, ಗೆಳೆಯನನ್ನು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ನಡೆದ 20 ದಿನಗಳ ಬಳಿಕ ಪೊಲೀಸರ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ.
ಪ್ರಭುವಿನ ತಪ್ಪೊಪ್ಪಿಗೆಯ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಒಯ್ದು ಎಸೆಯಲು ಸಹಕರಿಸಿದ್ದಲ್ಲದೆ, ಕೊಲೆಯ ಸಾಕ್ಷ್ಯಗಳನ್ನು ನಾಶಪಡಿಸಲು ನೆರವಾದ ಆರೋಪದ ಮೇಲೆ ಮನೆ ಮಾಲೀಕ ಸಂದೇಶ ಮಾತ್ರೆಯನ್ನೂ ಬಂಧಿಸಲಾಗಿದೆ. ಇಬ್ಬರನ್ನೂ ಕಲ್ಯಾಣ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಸದ್ಯ ಪೊಲೀಸರು ಕೊಲೆಗೆ ನಿಖರವಾದ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಕೊಲೆ ನಡೆದ ಬಳಿಕ ಮೃತದೇಹವನ್ನು ಒಯ್ಯುವಲ್ಲಿ ಮನೆ ಮಾಲೀಕನ ಪಾತ್ರವೇನು, ಆತ ಯಾವ ಕಾರಣಕ್ಕೆ ಪ್ರಭುವಿಗೆ ಸಹಾಯ ಮಾಡಿದ ಎಂಬ ಬಗ್ಗೆಯೂ ವಿಚಾರಣೆ ಮುಂದುವರಿದಿದೆ.
ಕ್ಷಣಿಕ ಕೋಪದಲ್ಲಿ ಆತ್ಮೀಯ ಗೆಳೆಯನ ಜೀವ ತೆಗೆದ ವ್ಯಕ್ತಿ, ಬಳಿಕ ತನ್ನದೇ ಮನಸ್ಸಿನಲ್ಲಿನ ಭಯ ಮತ್ತು ಪಶ್ಚಾತ್ತಾಪದಿಂದಾಗಿ 20 ದಿನಗಳ ನಂತರ ಪೊಲೀಸರಿಗೆ ಶರಣಾಗಿರುವುದು ಈ ಪ್ರಕರಣದ ಅತ್ಯಂತ ಅಚ್ಚರಿಯ ಸಂಗತಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ