ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ʼತಿಗಣೆ ಕಾಟದಿಂದ ಮುಕ್ತಿ ಕೊಡಿಸಿದ್ರೆ ಹಣ್ಣು-ಕಾಯಿ ಮಾಡಿಸ್ತೀನಿ ತಾಯಿ..ʼ ; ಸವದತ್ತಿ ಯಲ್ಲಮ್ಮ ದೇವಿ ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್‌

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಹಣ, ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳ ಜೊತೆ ತಮ್ಮ ವಿಭಿನ್ನ ಬೇಡಿಕೆಗಳನ್ನು ಬರೆದ ಪತ್ರಗಳನ್ನೂ ಆಗಾಗ ಹಾಕುತ್ತಾರೆ. ಈ ಬಾರಿ  ಮನೆಯಲ್ಲಿನ ತಿಗಣೆಗಳ ಕಾಟದಿಂದ ಮುಕ್ತಿ ದೊರೆತರೆ ದೇವಿಗೆ ಹಣ್ಣು, ಕಾಯಿ ಅರ್ಪಿಸುವುದಾಗಿ ಭಕ್ತರೊಬ್ಬರು ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನಿಗೆ ಹರಕೆ ಹೊತ್ತಿದ್ದಾರೆ. ದೇವಸ್ಥಾನದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯದ ವೇಳೆ ಭಕ್ತರು ಬರೆದಿದ್ದ ಈ ವಿಶೇಷ ಪ್ರಾರ್ಥನಾ ಪತ್ರ ಸಿಕ್ಕಿದ್ದು, ಎಲ್ಲರ ಗಮನ ಸೆಳೆದಿದೆ.
‘ಅಮ್ಮ ತಾಯಿ ಯಲ್ಲಮ್ಮ ದೇವಿ, ನಮ್ಮ ಮನೆಯಲ್ಲಿ ತಿಗಣೆಗಳಿವೆ. ಎಲ್ಲ ತಿಗಣೆಗಳೂ ಮನೆಯಿಂದ ತೊಲಗುವಂತೆ ಮಾಡು. ಹಾಗಾದರೆ ನಿನ್ನ ಗುಡಿಗೆ ಬಂದು ಹಣ್ಣು-ಕಾಯಿ ಮಾಡಿಸುತ್ತೇನೆ’ ಎಂದು ಭಕ್ತರೊಬ್ಬರು ಅಮ್ಮನಿಗೆ ಬೇಡಿಕೊಂಡು ಪತ್ರ ಬರೆದು ಹುಂಡಿಯಲ್ಲಿ ಹಾಕಿರುವುದು ಎಣಿಕೆ ಕಾರ್ಯದ ವೇಳೆ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿ, ಕುಟುಂಬದ ನೆಮ್ಮದಿ, ಆರೋಗ್ಯ, ಉದ್ಯೋಗ ಹಾಗೂ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ದೇವಿಯ ಹುಂಡಿಗೆ ಕಾಣಿಕೆ ಸಲ್ಲಿಸುತ್ತಾರೆ. ಆದರೆ, ಮನೆಯಲ್ಲಿನ ತಿಗಣೆಗಳ ಕಾಟದಿಂದ ಮುಕ್ತಿ ದೊರೆಯಲಿ ಎಂದು ದೇವಿಯ ಮೊರೆ ಹೋಗಿರುವ ಭಕ್ತರ ಹರಕೆ ವಿಭಿನ್ನವಾಗಿದ್ದರಿಂದ ಸುದ್ದಿಯಾಗಿದೆ.
ಸವದತ್ತಿ ಯಲ್ಲಮ್ಮ ದೇವಸ್ಥಾನದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಾಲ್ಕು ದಿನಗಳಿಂದ ನಡೆಯುತ್ತಿದ್ದು, ಈವರೆಗೆ ಒಟ್ಟು 2.69 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ 2.34 ಕೋಟಿ ರೂ. ನಗದು, 26.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7.32 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಸೇರಿವೆ.
ಮೇ 7ರಿಂದ ಅಕ್ಟೋಬರ್ 10ರವರೆಗಿನ ಅವಧಿಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತಿದೆ. ಒಟ್ಟು 139 ಚೀಲಗಳಲ್ಲಿ ಕಾಣಿಕೆ ಸಂಗ್ರಹವಾಗಿದ್ದು, ಈ ಪೈಕಿ 54 ಚೀಲಗಳ ಕಾಣಿಕೆ ಎಣಿಕೆ ಪೂರ್ಣಗೊಂಡಿದೆ. ಇನ್ನೂ 85 ಚೀಲಗಳ ಎಣಿಕೆ ಬಾಕಿ ಇದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement