ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಗರಗಸದ ದಾಳಿಯಿಂದ ಸ್ನೇಹಿತೆ ರಕ್ಷಿಸಲು ಹೋರಾಡಿ ಗಾಯಗೊಂಡ ವಿದ್ಯಾರ್ಥಿನಿ ಶಿಕ್ಷಣದ ಹೊಣೆ ಹೊತ್ತ ಉದ್ಯಮಿ ಆನಂದ ಮಹೀಂದ್ರ

ಆಂಧ್ರಪ್ರದೇಶದಶಾಲೆಯ ತರಗತಿಯೊಳಗೆ ಯಂತ್ರಿಕ ಗರಗಸ (Chainsaw) ಹಿಡಿದು ನುಗ್ಗಿದ ದುಷ್ಕರ್ಮಿಯ ದಾಳಿಯಿಂದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಧೈರ್ಯದಿಂದ ಮುನ್ನುಗ್ಗಿ ಹೋರಾಡಿ ಗಾಯಗೊಂಡ 10ನೇ ತರಗತಿಯ ವಿದ್ಯಾರ್ಥಿನಿಯ ಶಿಕ್ಷಣದ ಸಂಪೂರ್ಣ ನೆರವಿಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಮುಂದಾಗಿದ್ದಾರೆ. ವಿದ್ಯಾರ್ಥಿನಿಯ ಸಾಹಸ ಮತ್ತು ಮಾನವೀಯ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ತಮ್ಮ ‘ನನ್ಹಿ ಕಲಿ’ (Nanhi Kali) ಯೋಜನೆಯ ಮೂಲಕ ಆಕೆಯ ಶಿಕ್ಷಣಕ್ಕೆ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ.
ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವಾಗುವಂತೆ ಎಕ್ಸ್ (X) ಬಳಕೆದಾರರೊಬ್ಬರು ಆನಂದ ಮಹೀಂದ್ರಾ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು, ವಿದ್ಯಾರ್ಥಿನಿಯ ಕುಟುಂಬವನ್ನು ಸಂಪರ್ಕಿಸಿ ನೆರವಿನ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.

ಸ್ನೇಹಿತೆಯ ರಕ್ಷಣೆಗೆ  ಹೋರಾಡಿ ಗಾಯಗೊಂಡಿದ್ದ ವಿದ್ಯಾರ್ಥಿನಿ
ಅಕ್ಟೋಬರ್ 31ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿತ್ತು. 21 ವರ್ಷದ ಯುವಕನೊಬ್ಬ ಶಾಲೆಯ ತರಗತಿಯೊಳಗೆ ನುಗ್ಗಿ 15 ವರ್ಷದ ವಿದ್ಯಾರ್ಥಿನಿಯ ಮೇಲೆ ಯಾಂತ್ರಿಕ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ್ದ. ಈ ವೇಳೆ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದವು. ಆಕೆಯನ್ನು ರಕ್ಷಿಸಲು ಮುಂದಾದ ಸ್ನೇಹಿತೆಯೂ ಗಾಯಗೊಂಡಿದ್ದಳು.
ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಹೇಮಂತ ಎಂದು ಗುರುತಿಸಿದ್ದು, ಆತ ಗಾಯಗೊಂಡ ವಿದ್ಯಾರ್ಥಿನಿಯ ಸಂಬಂಧಿ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಈತ ಕೆಲ ಸಮಯದಿಂದ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 1ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ, ಅದೇ ದಿನ ರಾತ್ರಿ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ ಎನ್ನಲಾಗಿದ್ದು, ಈ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದರು. ಗುಂಡೇಟಿನಿಂದ ಆತನ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಬಳಿಕ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ ತೆಗೆಯಬೇಕಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | U-19 ಏಷ್ಯಾ ಕಪ್ : ಭಾರತದ ವಿರುದ್ಧ ಶತಕ ಸಿಡಿಸಿ ಪಾಕಿಸ್ತಾನ ಗೆಲ್ಲಿಸಿದ ನಂತ್ರ ಚೀಟಿ ತೋರಿಸಿದ ಹಮ್ಜಾ ಜಹೂರ್‌ ; ಅದ್ರಲ್ಲಿ ಏನಿತ್ತು ?

ವಿದ್ಯಾರ್ಥಿನಿಯ ಧೈರ್ಯಕ್ಕೆ ಆನಂದ ಮಹೀಂದ್ರಾ ಮೆಚ್ಚುಗೆ
ತನ್ನ ಪ್ರಾಣದ ಹಂಗು ತೊರೆದು ಸ್ನೇಹಿತೆಯನ್ನು ರಕ್ಷಿಸಲು ಮುಂದಾದ ವಿದ್ಯಾರ್ಥಿನಿಯ ಧೈರ್ಯವನ್ನು ಆನಂದ ಮಹೀಂದ್ರಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅವರು, ಯುವತಿಯ ಸಾಹಸವನ್ನು ಪ್ರಶಂಸಿಸಿ, “ಭವಿಷ್ಯ ಹೇಗಿರಬಹುದು ಎಂಬುದನ್ನು ತಿಳಿಯಲು ನಾವು ಸಾಮಾನ್ಯವಾಗಿ ಯುವಜನರತ್ತ ನೋಡುತ್ತೇವೆ. ಆದರೆ, ಕೆಲವೊಮ್ಮೆ ವರ್ತಮಾನದ ಕ್ಷಣದಲ್ಲೇ ಅವರು ನಮಗೆ ಧೈರ್ಯದ ನಿಜವಾದ ಅರ್ಥವನ್ನು ನೆನಪಿಸುತ್ತಾರೆ. ಧೈರ್ಯ ಎಂದರೆ ಭಯವೇ ಇಲ್ಲದಿರುವುದಲ್ಲ; ತನ್ನ ಸ್ವಂತ ಭಯಕ್ಕಿಂತ ಮತ್ತೊಬ್ಬ ಮನುಷ್ಯನ ಬಗ್ಗೆ ಇರುವ ಕಾಳಜಿ ದೊಡ್ಡದಾದಾಗ ಅದು ಧೈರ್ಯವಾಗಿ ಹೊರಹೊಮ್ಮುತ್ತದೆ” ಎಂದು ಅವರು ಬರೆದಿದ್ದಾರೆ. “ಎಂತಹ ಅಸಾಧಾರಣ ಹುಡುಗಿ ಈಕೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ವಿದ್ಯಾರ್ಥಿನಿಯ ಶಿಕ್ಷಣದ ಹೊಣೆಯನ್ನು ವಹಿಸಿಕೊಳ್ಳುವಂತೆ ಆನಂದ ಮಹೀಂದ್ರಾ ಅವರಿಗೆ ಮನವಿ ಮಾಡಿದ್ದರು. ವಿದ್ಯಾರ್ಥಿನಿಯ ತಂದೆ-ತಾಯಿ ದಿನಗೂಲಿ ಕಾರ್ಮಿಕರಾಗಿದ್ದು, ಆಕೆಯ ಮುಂದಿನ ಶಿಕ್ಷಣಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಅವರು ಗಮನ ಸೆಳೆದಿದ್ದರು.
ಈ ಮನವಿಗೆ ಸ್ಪಂದಿಸಿರುವ ಆನಂದ ಮಹೀಂದ್ರಾ, “ಹೌದು, ಇದು ಉತ್ತಮ ಸಲಹೆ. ನಾನೂ ಇದನ್ನು ಒಪ್ಪುತ್ತೇನೆ. ಆಕೆಯ ಕುಟುಂಬವನ್ನು ಸಂಪರ್ಕಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಆಂಧ್ರಪ್ರದೇಶದ ಶಾಸಕ ನಾರಾ ಲೋಕೇಶ ಅವರನ್ನೂ ತಮ್ಮ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.
ಆನಂದ ಮಹೀಂದ್ರಾ ಅವರ ನೆರವಿನ ನಿರ್ಧಾರಕ್ಕೆ ಧನ್ಯವಾದ ತಿಳಿಸಿರುವ ನಾರಾ ಲೋಕೇಶ, ವಿದ್ಯಾರ್ಥಿನಿಯ ಸಾಹಸವನ್ನು ಶ್ಲಾಘಿಸಿದ್ದಾರೆ. “ತನಗೆ ಗಂಭೀರ ಅಪಾಯ ಆಗಬಹುದು ಎಂದು ಅರಿವಿದ್ದರೂ ಸ್ನೇಹಿತೆಯನ್ನು ರಕ್ಷಿಸಲು ವಿದ್ಯಾರ್ಥಿನಿ ತೋರಿದ ಧೈರ್ಯ ನಿಜಕ್ಕೂ ಮಾದರಿಯಾಗಿದೆ. ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಮುಂದುವರಿಯಲು ನನ್ಹಿ ಕಲಿ ಫೌಂಡೇಶನ್ ಆಕೆಗೆ ನೆರವು ನೀಡಲಿದೆ ಎಂಬುದು ಸಂತಸದ ವಿಚಾರ” ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   100ನೇ ವರ್ಷಕ್ಕೆ ಕಾಲಿಟ್ಟ ಎಲ್.ಕೆ. ಅಡ್ವಾಣಿ ; ಲೇಖನದ ಮೂಲಕ ಗೌರವಸಲ್ಲಿಸಿದ ಪ್ರಧಾನಿ ಮೋದಿ

ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವ ‘ನನ್ಹಿ ಕಲಿ’ ಯೋಜನೆ
ಆನಂದ ಮಹೀಂದ್ರಾ ಅವರು 1996ರಲ್ಲಿ ಕೆ.ಸಿ. ಮಹೀಂದ್ರಾ ಎಜುಕೇಶನ್ ಟ್ರಸ್ಟ್ ಮೂಲಕ ‘ಪ್ರಾಜೆಕ್ಟ್ ನನ್ಹಿ ಕಲಿ’ ಯೋಜನೆಯನ್ನು ಆರಂಭಿಸಿದ್ದರು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಶಿಕ್ಷಣದ ಮೂಲಕ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯವಾದ ಬೆಂಬಲವನ್ನು ಈ ಯೋಜನೆ ಒದಗಿಸುತ್ತಿದೆ.
ಸ್ನೇಹಿತೆಯ ಜೀವ ಉಳಿಸಲು ತನ್ನ ಸುರಕ್ಷತೆಯನ್ನೂ ಲೆಕ್ಕಿಸದೆ ಮುನ್ನುಗ್ಗಿದ್ದ ವಿದ್ಯಾರ್ಥಿನಿ ಲಕ್ಷ್ಮಿಯ ಧೈರ್ಯಕ್ಕೆ ಈಗ ಉದ್ಯಮಿ ಆನಂದ ಮಹೀಂದ್ರಾ ಅವರ ಶಿಕ್ಷಣ ನೆರವಿನ ಭರವಸೆ ಮತ್ತಷ್ಟು ಬಲ ತುಂಬಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement