

ನವದೆಹಲಿ: ಚೀನಾದ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿರುವ ಮಹಿಳೆ ಜೊತೆ ಪ್ರೇಮ ಸಂಬಂಧ ಹೊಂದಿದ್ದುದನ್ನು ಎನ್ವಿಡಿಯಾ (Nvidia) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಜೆನ್ಸನ್ ಹುವಾಂಗ್ ತಮ್ಮ ಉದ್ಯೋಗಿಗಳಿಗೆ ಬರೆದ ಇ-ಮೇಲ್ನಲ್ಲಿ ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಹುವಾಂಗ್ ವಿದೇಶಿ ಗುಪ್ತಚರ ಸಂಸ್ಥೆಯ ಕಾರ್ಯಾಚರಣೆಗೆ ಗುರಿಯಾಗಿದ್ದರೆಂಬ ವರದಿಗಳ ಕುರಿತು ಎನ್ವಿಡಿಯಾ ಸ್ವತಂತ್ರ ತನಿಖೆ ಆರಂಭಿಸಿದೆ.
ಅಕ್ಟೋಬರ್ 29ರಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಪ್ರಕಟಿಸಿದ ವರದಿಯ ಪ್ರಕಾರ, ಜೆನ್ಸನ್ ಹುವಾಂಗ್ ಅವರನ್ನು ಗುರಿಯಾಗಿಸಿಕೊಂಡು ಚೀನಾದ ಪರವಾಗಿ ಗೂಢಚರ್ಯೆ ನಡೆಸುವ ಸಂಚು ರೂಪಿಸಲಾಗಿತ್ತು. ಸಿಂಗಾಪುರ ಮೂಲದ ಡೇಟಾ ಸೆಂಟರ್ ಕಂಪನಿ ಮೆಗಾಸ್ಪೀಡ್ನ (Megaspeed) ಉನ್ನತ ಅಧಿಕಾರಿಯಾಗಿದ್ದ ಆಲಿಸ್ ಹುವಾಂಗ್ ಅಲಿಯಾಸ್ ಹುವಾಂಗ್ ಲೆ ಎಂಬ ಉದ್ಯಮ ಮಹಿಳೆ ಈ ಕಾರ್ಯಾಚರಣೆಯನ್ನು ಸಂಯೋಜಿಸುತ್ತಿದ್ದಳು ಎನ್ನಲಾಗಿದೆ.
ಚೀನಾ ಪ್ರಜೆಯಾಗಿರುವ ಆಲಿಸ್ ಹುವಾಂಗ್, ಜೆನ್ಸನ್ ಹುವಾಂಗ್ ಅವರ ಜೊತೆ ನಿಕಟ ಸಂಬಂಧ ಬೆಳೆಸಿಕೊಂಡು, ಎನ್ವಿಡಿಯಾದ ಸುಧಾರಿತ ಕೃತಕ ಬುದ್ಧಿಮತ್ತೆ (AI) ಚಿಪ್ಗಳು ಹಾಗೂ ಗುಪ್ತ ಮಾಹಿತಿಯನ್ನು ಬೀಜಿಂಗ್ಗೆ ರವಾನಿಸುತ್ತಿದ್ದಳು ಎಂದು ವರದಿ ತಿಳಿಸಿತ್ತು. ಅಮೆರಿಕದ ಗುಪ್ತಚರ ಸಂಸ್ಥೆಗಳು ಆಲಿಸ್ ಹುವಾಂಗ್ ಎಂಬವಳನ್ನು ಚೀನಾದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ (Intelligence Asset) ಗುರುತಿಸಿದ್ದವು ಎನ್ನಲಾಗಿದೆ.
ಈ ಹಿಂದೆ ಚೀನಾದ ಗೂಢಚರ್ಯೆ ತನಿಖೆಯ ಸುಳಿಗೆ ಸಿಲುಕಿರುವ ಕಂಪನಿಯ ಜೊತೆ ವ್ಯವಹಾರಗಳ ಕುರಿತು ಪ್ರತಿಕ್ರಿಯಿಸಿದ್ದ ಜೆನ್ಸನ್ ಹುವಾಂಗ್, ತಮ್ಮ ವ್ಯವಹಾರಿಕ ಸಂಬಂಧಗಳು ಸಹಜವಾಗಿದ್ದವು ಎಂದು ಹೇಳಿದ್ದರು. ಇದೀಗ ತಮ್ಮ ವೈಯಕ್ತಿಕ ಸಂಬಂಧದ ವಿಚಾರವಾಗಿ ಕುಟುಂಬದವರಲ್ಲಿ ಹಾಗೂ ಉದ್ಯೋಗಿಗಳಲ್ಲಿ ಕ್ಷಮೆಯಾಚಿಸಿರುವ ಅವರು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಪತ್ನಿ, ಮಕ್ಕಳು ಹಾಗೂ ಉದ್ಯೋಗಿಗಳಲ್ಲಿ ಕ್ಷಮೆಯಾಚನೆ
‘ನಮ್ಮ ಕಂಪನಿಗೆ ಒಂದು ಸಂದೇಶ’ ಎಂಬ ಶೀರ್ಷಿಕೆಯಡಿ ಜೆನ್ಸನ್ ಹುವಾಂಗ್ ತಮ್ಮ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದಾರೆ. ಈ ಇ-ಮೇಲ್ನ ಮಾಹಿತಿಯನ್ನು ‘ಆಕ್ಸಿಯೋಸ್’ (Axios) ಬಹಿರಂಗಪಡಿಸಿದೆ.
ಇ-ಮೇಲ್ನಲ್ಲಿ ತಮ್ಮ ಪತ್ನಿಗೆ ದ್ರೋಹ ಬಗೆದಿರುವುದನ್ನು ಒಪ್ಪಿಕೊಂಡಿರುವ ಹುವಾಂಗ್, ತಮ್ಮ ನಡೆ ಪತ್ನಿ ಮತ್ತು ಮಕ್ಕಳಿಗೆ ನೋವುಂಟುಮಾಡಿದೆ. ಇದಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ‘ನನ್ನ ಕುಟುಂಬದವರು ಹಾಗೂ ನಿಮ್ಮೆಲ್ಲರಲ್ಲೂ ನಾನು ಕ್ಷಮೆಯಾಚಿಸಬೇಕಿದೆ. ನಾನು ನನ್ನ ಪತ್ನಿಗೆ ನಿಷ್ಠೆಯಿಂದ ಇರಲಿಲ್ಲ. ನನ್ನ ನಡೆ ಪತ್ನಿ ಮತ್ತು ಮಕ್ಕಳಿಗೆ ನೋವುಂಟುಮಾಡಿದೆ. ನಾನು ಮಾಡಿದ್ದಕ್ಕೆ ಯಾವುದೇ ನೆಪವಿಲ್ಲ. ಇದಕ್ಕಾಗಿ ಹೃತ್ಪೂರ್ವಕವಾಗಿ ಕ್ಷಮೆ ಕೋರುತ್ತೇನೆ’ ಎಂದು ಇ-ಮೇಲ್ನಲ್ಲಿ ತಿಳಿಸಿದ್ದಾರೆ.
‘ನನ್ನ ಜೀವನದುದ್ದಕ್ಕೂ ಕುಟುಂಬದವರು ನನಗೆ ಪ್ರೀತಿ ಮತ್ತು ಬೆಂಬಲ ನೀಡಿದ್ದಾರೆ. ಅವರಿಗೆ ನನ್ನ ಪ್ರಾಮಾಣಿಕತೆ ಹಾಗೂ ನಿಷ್ಠೆ ಸಿಗಬೇಕಿತ್ತು. ಆದರೆ, ನಾನು ಅವರನ್ನು ನಿರಾಸೆಗೊಳಿಸಿದ್ದೇನೆ. ನಾವೆಲ್ಲರೂ ಒಟ್ಟಾಗಿ ಕಟ್ಟಿಕೊಂಡಿದ್ದ ಬದುಕಿಗೆ ಧಕ್ಕೆ ತಂದಿದ್ದೇನೆ. ನಾನು ಮಾಡಿದ ತಪ್ಪು ಮತ್ತು ಅದರಿಂದ ಉಂಟಾದ ನೋವಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ. ಈ ಕಾರಣಕ್ಕಾಗಿ ಎದುರಾಗುವ ಟೀಕೆಗಳನ್ನೂ ಸ್ವೀಕರಿಸುತ್ತೇನೆ’ ಎಂದು ಹೇಳಿದ್ದಾರೆ.


ತಮ್ಮ ಪತ್ನಿ ಮತ್ತು ಕುಟುಂಬದವರನ್ನು ಉದ್ದೇಶಿಸಿ, ‘ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ಮಾಡಿದ ತಪ್ಪನ್ನು ಕೇವಲ ಕ್ಷಮೆಯಾಚನೆಯಿಂದ ಸರಿಪಡಿಸಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ. ನಮ್ಮ ಕುಟುಂಬ ಮತ್ತೆ ಸಹಜ ಸ್ಥಿತಿಗೆ ಮರಳಲಿ ಹಾಗೂ ಕಾಲಕ್ರಮೇಣ ನಿಮ್ಮ ವಿಶ್ವಾಸವನ್ನು ಮರಳಿ ಗಳಿಸಲು ನನಗೆ ಸಾಧ್ಯವಾಗಲಿ ಎಂದು ಆಶಿಸುತ್ತೇನೆ’ ಎಂದು ಬರೆದಿದ್ದಾರೆ.
ಎನ್ವಿಡಿಯಾದಲ್ಲಿ ಹಲವು ದಶಕಗಳಿಂದ ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು, ಆಡಳಿತ ಮಂಡಳಿ, ಪಾಲುದಾರರು ಹಾಗೂ ಜಗತ್ತಿನಾದ್ಯಂತ ಇರುವ ಷೇರುದಾರರನ್ನೂ ಉದ್ದೇಶಿಸಿ ಕ್ಷಮೆಯಾಚಿಸಿದ್ದಾರೆ.
‘ಎನ್ವಿಡಿಯಾವನ್ನು ಮುನ್ನಡೆಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವ. ನಿಮ್ಮ ಸೇವೆ ಮಾಡುವುದು ಮತ್ತು ನಿಮ್ಮ ವಿಶ್ವಾಸಕ್ಕೆ ಅರ್ಹನಾಗಿರುವುದು ನನ್ನ ಜವಾಬ್ದಾರಿ. ಆದರೆ, ಆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ನಾನು ವಿಫಲನಾಗಿದ್ದೇನೆ. ಎನ್ವಿಡಿಯಾ ಸಂಸ್ಥೆಯ ಬಗೆಗಿನ ನನ್ನ ಬದ್ಧತೆ ಸಂಪೂರ್ಣವಾಗಿದೆ. ನಿಮ್ಮ ವಿಶ್ವಾಸವನ್ನು ಮತ್ತೆ ಗಳಿಸಲು ಶ್ರಮಿಸುತ್ತೇನೆ’ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ವಿಚಾರವಾಗಿ ಸ್ವತಂತ್ರ ತನಿಖೆ
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಹುವಾಂಗ್, ಎನ್ವಿಡಿಯಾದ ಆಡಳಿತ ಮಂಡಳಿ ಸ್ವತಂತ್ರ ತನಿಖೆಗೆ ಚಾಲನೆ ನೀಡಿದೆ. ತನಿಖೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.
‘ನಾನು ನಮ್ಮ ದೇಶವನ್ನು ಮತ್ತು ನಮ್ಮ ಕಂಪನಿಯನ್ನು ಪ್ರೀತಿಸುತ್ತೇನೆ. ಎನ್ವಿಡಿಯಾವನ್ನು ರಕ್ಷಿಸುವುದು ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸುವುದು ನನ್ನ ಬದ್ಧತೆಯಾಗಿದೆ. ನಾನು ಅಮೆರಿಕದ ಪ್ರಜೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಹಾಗೂ ಕೃತಜ್ಞನಾಗಿದ್ದೇನೆ’ ಎಂದು ಇ-ಮೇಲ್ನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತಮ್ಮ ವೈಯಕ್ತಿಕ ನಿರ್ಧಾರಗಳಿಗೆ ಕುಟುಂಬದವರು ಯಾವುದೇ ರೀತಿಯಲ್ಲೂ ಹೊಣೆಗಾರರಲ್ಲ. ತಾವು ಮಾಡಿದ ಆಯ್ಕೆಗಳಿಗೆ ತಾವೇ ಜವಾಬ್ದಾರರು. ಹೀಗಾಗಿ ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಉದ್ಯೋಗಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸ್ವತಂತ್ರ ತನಿಖೆಗೆ ಎನ್ವಿಡಿಯಾ ಮಂಡಳಿ ಆದೇಶ
ಇತ್ತೀಚಿನ ವರದಿಗಳಲ್ಲಿ ಎನ್ವಿಡಿಯಾ ಸಂಸ್ಥಾಪಕ ಹಾಗೂ ಸಿಇಒ ಜೆನ್ಸನ್ ಹುವಾಂಗ್ ವಿದೇಶಿ ಗುಪ್ತಚರ ಕಾರ್ಯಾಚರಣೆಯ ಗುರಿಯಾಗಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖೆ ಆರಂಭಿಸಿರುವುದಾಗಿ ಎನ್ವಿಡಿಯಾ ಆಡಳಿತ ಮಂಡಳಿ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತೆ ಅಥವಾ ಕಂಪನಿಯ ರಹಸ್ಯ ಮಾಹಿತಿಗಳು ಸೋರಿಕೆಯಾಗಿವೆ ಎಂಬುದಕ್ಕೆ ಸದ್ಯ ಯಾವುದೇ ಕಾರಣ ಅಥವಾ ಪುರಾವೆ ಕಂಡುಬಂದಿಲ್ಲ. ಆದರೂ, ಲಭ್ಯವಿರುವ ಎಲ್ಲ ಮಾಹಿತಿಗಳನ್ನು ಪರಿಶೀಲಿಸುವ ಉದ್ದೇಶದಿಂದ ತನಿಖೆ ನಡೆಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ. ‘ಅಮೆರಿಕದ ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತೆಯು ಎನ್ವಿಡಿಯಾ ಹಾಗೂ ಅದರ ಷೇರುದಾರರ ಹಿತಾಸಕ್ತಿಗಳಿಗಿಂತಲೂ ಪ್ರಮುಖ ಆದ್ಯತೆಯಾಗಿದೆ’ ಎಂದು ಮಂಡಳಿ ಹೇಳಿದೆ.
ಸ್ವತಂತ್ರ ನಿರ್ದೇಶಕರ ಸಮಿತಿಯು ಈ ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದು, ಹೊರಗಿನ ಸ್ವತಂತ್ರ ಕಾನೂನು ಸಲಹೆಗಾರರೂ ತನಿಖೆಗೆ ನೆರವಾಗಲಿದ್ದಾರೆ. ಇದೇ ವೇಳೆ, ಜೆನ್ಸನ್ ಹುವಾಂಗ್ ಮತ್ತು ಅವರ ನಾಯಕತ್ವದ ತಂಡದ ಮೇಲಿನ ವಿಶ್ವಾಸವನ್ನು ಮಂಡಳಿ ವ್ಯಕ್ತಪಡಿಸಿದೆ.
ಈ ವರದಿಗಳ ಕುರಿತು ಭಾನುವಾರ ಪ್ರತಿಕ್ರಿಯಿಸಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಇದು ಕಂಪನಿಯ ಆಂತರಿಕ ವಿಚಾರವಾಗಿರುವುದರಿಂದ ತಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೆಗಾಸ್ಪೀಡ್ ಜೊತೆಗಿನ ವ್ಯವಹಾರ ಸಹಜವಾಗಿತ್ತು ಎಂದಿದ್ದ ಹುವಾಂಗ್
ಚೀನಿ ಗೂಢಚಾರಿಣಿ ಎಂಬ ಶಂಕೆ ಎದುರಿಸುತ್ತಿರುವ ಆಲಿಸ್ ಹುವಾಂಗ್, ಸಿಂಗಾಪುರ ಮೂಲದ ಮೆಗಾಸ್ಪೀಡ್ ಕಂಪನಿಯ ಉನ್ನತ ಅಧಿಕಾರಿಯಾಗಿದ್ದಳು. ಅಮೆರಿಕದಲ್ಲಿ ಜೋ ಬೈಡನ್ ಅಧ್ಯಕ್ಷರಾಗಿದ್ದ ಕೊನೆಯ ಅವಧಿಯಲ್ಲಿ, ಚೀನಾದ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಮೀರಿ ಎನ್ವಿಡಿಯಾದ ಕೃತಕ ಬುದ್ಧಿಮತ್ತೆ ಚಿಪ್ಗಳನ್ನು ಪಡೆಯಲು ಮೆಗಾಸ್ಪೀಡ್ ನೆರವಾಗುತ್ತಿದೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅಮೆರಿಕದ ವಾಣಿಜ್ಯ ಇಲಾಖೆ (Commerce Department) ಆ ಕಂಪನಿಯ ವಿರುದ್ಧ ತನಿಖೆ ಆರಂಭಿಸಿತ್ತು.
ಈ ಪ್ರಕರಣದ ವರದಿಗಳು ಮೊದಲ ಬಾರಿಗೆ ಪ್ರಕಟವಾದಾಗ, ಮೆಗಾಸ್ಪೀಡ್ ಅಧಿಕಾರಿಗಳೊಂದಿಗೆ ಎನ್ವಿಡಿಯಾ ಹೊಂದಿದ್ದ ಸಂಬಂಧವನ್ನು ಜೆನ್ಸನ್ ಹುವಾಂಗ್ ಸಮರ್ಥಿಸಿಕೊಂಡಿದ್ದರು.
‘ಅವರು ನಮ್ಮ ಜಿಪಿಯುಗಳ (GPU) ಬಳಕೆಯನ್ನು ಎಲ್ಲಿ, ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ನಾವು ಪರಿಶೀಲಿಸಿದ್ದೇವೆ. ಅವರು ನಿಯೋಜಿಸಿರುವ ಎಲ್ಲ ಜಿಪಿಯುಗಳನ್ನು ಲೆಕ್ಕ ಹಾಕಿದ್ದೇವೆ. ಅಮೆರಿಕ ಸರ್ಕಾರವೂ ಈ ಪರಿಶೀಲನೆ ನಡೆಸಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದರು.
ಆಲಿಸ್ ಹುವಾಂಗ್ ಅವರೊಂದಿಗಿನ ತಮ್ಮ ಸಂಪರ್ಕವೂ ಚೀನಾದ ಗ್ರಾಹಕರು ಮತ್ತು ಉದ್ಯಮಿಗಳೊಂದಿಗೆ ಸಾಮಾನ್ಯವಾಗಿ ಹೊಂದಿರುವ ವ್ಯವಹಾರಿಕ ಸಂಪರ್ಕದಂತೆಯೇ ಇತ್ತು ಎಂದು ಜೆನ್ಸನ್ ಸ್ಪಷ್ಟಪಡಿಸಿದ್ದರು. ‘ಮೆಗಾಸ್ಪೀಡ್ಗೆ ಸಂಬಂಧಿಸಿದಂತೆ ನಮ್ಮ ನಡುವೆ ವ್ಯವಹಾರಿಕ ಸಂಬಂಧ ಮತ್ತು ಸಂಪರ್ಕವಿತ್ತು. ಎಲ್ಲವೂ ಸಂಪೂರ್ಣವಾಗಿ ಸಹಜವಾಗಿತ್ತು. ಅದರಲ್ಲಿ ಅಸಾಮಾನ್ಯವಾದುದೇನೂ ಇರಲಿಲ್ಲ’ ಎಂದು ಅವರು ಹೇಳಿದ್ದರು.
ಆಲಿಸ್ ಹುವಾಂಗ್ ಈಗ ಮೆಗಾಸ್ಪೀಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದೂ ತಿಳಿಸಿದ್ದರು. ಅಲ್ಲದೆ, ಆಕೆಯ ವಿರುದ್ಧ ಅಮೆರಿಕ ಸರ್ಕಾರ ಹೊಂದಿರುವ ಅನುಮಾನಗಳ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಜೆನ್ಸನ್ ಹುವಾಂಗ್ ಹೇಳಿಕೊಂಡಿದ್ದರು.



ನಿಮ್ಮ ಕಾಮೆಂಟ್ ಬರೆಯಿರಿ