

ತುಮಕೂರು: ಗ್ರಾಮದಲ್ಲಿ ಆಹಾರ ಹುಡುಕುತ್ತಾ ಬಂದ ಚಿರತೆಯೊಂದು ಮೊದಲು ಮೇಕೆ ಮರಿಯನ್ನು ಹೊತ್ತೊಯ್ದು, ಬಳಿಕ ಮನೆಯೊಳಗೆ ನುಗ್ಗಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ಬಂಡಿಗೌಡನಪಾಳ್ಯ ಗ್ರಾಮದಲ್ಲಿ ಮಂಗಳವಾರ (ನವೆಂಬರ್ 10) ರಾತ್ರಿ ನಡೆದಿದೆ. ಚಿರತೆ ಏಕಾಏಕಿ ನುಗ್ಗಿದ್ದರಿಂದ ಮನೆಯೊಳಗೆ ಟಿವಿ ನೋಡುತ್ತಿದ್ದ ದಂಪತಿ ಒಮ್ಮೆಲೇ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸತತ ಆರು ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಚಿರತೆಯೊಂದು ಬಂಡಿಗೌಡನಪಾಳ್ಯ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತ, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಆಹಾರಕ್ಕಾಗಿ ಗ್ರಾಮದ ಸುತ್ತಮುತ್ತ ಅಲೆದಾಡುತ್ತಿದ್ದ ಚಿರತೆ, ಮಂಗಳವಾರ ರಾತ್ರಿ ಮನೆಯೊಂದರ ಹೊರಗೆ ಕಟ್ಟಿಹಾಕಿದ್ದ ಮೇಕೆ ಮರಿಯ ಮೇಲೆ ದಾಳಿ ನಡೆಸಿ ಅದನ್ನು ಹೊತ್ತೊಯ್ದಿದೆ.
ಬಳಿಕ ಚಿಕ್ಕಮಾರಿಯಪ್ಪ ಮತ್ತು ಅವರ ಪತ್ನಿ ನರಸಮ್ಮ ವಾಸವಿದ್ದ ಮನೆಗೆ ಚಿರತೆ ನುಗ್ಗಿದೆ. ಆ ಸಂದರ್ಭದಲ್ಲಿ ದಂಪತಿ ಮನೆಯೊಳಗೆ ಕುಳಿತು ಟಿವಿ ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಚಿರತೆ ಮನೆಯೊಳಗೆ ಪ್ರವೇಶಿಸಿದ್ದರಿಂದ ದಂಪತಿ ಕಂಗಾಲಾಗಿದ್ದಾರೆ. ಅಪಾಯವನ್ನು ಅರಿತ ನರಸಮ್ಮ ತಕ್ಷಣ ಮನೆಯಿಂದ ಹೊರಗೆ ಓಡಿಬಂದು ಬಾಗಿಲು ಮುಚ್ಚಿಕೊಂಡಿದ್ದಾರೆ. ಇದರಿಂದ ಚಿರತೆಯ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇತ್ತ ಮನೆಯೊಳಗೆ ನುಗ್ಗಿದ್ದ ಚಿರತೆ ಹೊರಬರಲಾಗದೆ ಮಂಚದ ಕೆಳಗೆ ಅವಿತು ಕುಳಿತಿದೆ. ಘಟನೆಯಿಂದ ಆತಂಕಗೊಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಮನೆಯೊಳಗೆ ಅವಿತುಕೊಂಡಿದ್ದ ಚಿರತೆಯನ್ನು ಪತ್ತೆಹಚ್ಚಿ ಯಾವುದೇ ಅಪಾಯವಾಗದಂತೆ ಸೆರೆಹಿಡಿಯುವುದು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತ್ತು.


ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆಹಿಡಿಯುವ ಕಾರ್ಯಾಚರಣೆಗೆ ಬೆಂಗಳೂರಿನ ಬನ್ನೇರುಘಟ್ಟದಿಂದ ಅರವಳಿಕೆ ತಜ್ಞ ಕಿರಣ ಅವರನ್ನೊಳಗೊಂಡ ತಜ್ಞರ ತಂಡವೂ ಆಗಮಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಜ್ಞರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಸುಮಾರು ಆರು ಗಂಟೆಗಳ ಕಾಲ ಸತತ ಪ್ರಯತ್ನ ನಡೆಸಿದ ಬಳಿಕ ಕೊನೆಗೂ ಚಿರತೆಗೆ ಅರವಳಿಕೆ ಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಇದರಿಂದ ಕಳೆದ ಒಂದು ತಿಂಗಳಿಂದ ಚಿರತೆಯ ಓಡಾಟದಿಂದ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಗ್ರಾಮದೊಳಗೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಹಾಗೂ ಮನೆಗಳ ಸಮೀಪವೇ ಸಂಚರಿಸುತ್ತಿರುವುದು ಜನರ ಸುರಕ್ಷತೆ ಮತ್ತು ಜಾನುವಾರುಗಳ ರಕ್ಷಣೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ