

ಅಲ್ ಅಮೆರಾತ್: ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಕೊನೆಯ ಕ್ಷಣದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಒಂದು ವಿಕೆಟ್ನ ರೋಚಕ ಸೋಲುಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಗೆಲುವಿಗೆ 338 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 8ನೇ ವಿಕೆಟ್ಗೆ ಮೊಹಿತ್ ಉಲ್ವಾ ಮತ್ತು ಮನಲ್ ಚೌಹಾಣ ನಡೆಸಿದ ಅಸಾಧಾರಣ ಹೋರಾಟ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಕೇವಲ 35 ಎಸೆತಗಳಲ್ಲಿ 57 ರನ್ಗಳ ನಿರ್ಣಾಯಕ ಜೊತೆಯಾಟವಾಡಿದ ಈ ಜೋಡಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿತು.
ಕೊನೆಯ ಕೆಲವು ಓವರ್ಗಳಲ್ಲಿ ಗೆಲುವಿಗೆ ಬೇಕಾದ ರನ್ ರೇಟ್ ಓವರ್ಗೆ 10ಕ್ಕಿಂತ ಹೆಚ್ಚಾಗಿತ್ತು. ವಿಕೆಟ್ಗಳು ಒಂದೊಂದಾಗಿ ಉರುಳುತ್ತಿದ್ದರಿಂದ ಭಾರತದ ಗೆಲುವಿನ ಆಸೆ ಕ್ಷೀಣಿಸಿತ್ತು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಮನಲ್ ಚೌಹಾಣ ಸ್ಫೋಟಕ ಬ್ಯಾಟಿಂಗ್ ಮೂಲಕ ಪಾಕಿಸ್ತಾನದ ಬೌಲರ್ಗಳನ್ನು ದಂಡಿಸಿದರು. ಕೇವಲ 32 ಎಸೆತಗಳಲ್ಲಿ 47 ರನ್ ಸಿಡಿಸಿದ ಅವರು ಭಾರತದ ಗೆಲುವಿನ ಆಸೆಯನ್ನು ಮತ್ತೆ ಜೀವಂತವಾಗಿಸಿದರು.
ಇನ್ನೊಂದು ತುದಿಯಲ್ಲಿ ಉತ್ತಮ ಬೆಂಬಲ ನೀಡಿದ ಮೊಹಿತ್ ಉಲ್ವಾ, ಮನಲ್ ಔಟಾದ ಬಳಿಕ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ತೆಗೆದುಕೊಂಡರು. ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದ ಅವರು ಭಾರತಕ್ಕೆ ಗೆಲುವಿನ ಮುದ್ರೆ ಒತ್ತಿದರು. ಗೆಲುವಿನ ರನ್ ಬಾರಿಸುತ್ತಿದ್ದಂತೆ ಮೈದಾನದಲ್ಲಿ ಭಾವನೆಗಳ ಮಹಾಪೂರವೇ ಹರಿಯಿತು. ಭಾರತೀಯ ಆಟಗಾರರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.
ಲಕ್ಷ್ಯ–ಆರ್ಯವೀರ ಭರ್ಜರಿ ಆರಂಭ
338 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಲಕ್ಷ್ಯ ರೈಚಂದಾನಿ ಮತ್ತು ಆರ್ಯವೀರ ಸೆಹ್ವಾಗ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 95 ರನ್ಗಳ ಅಮೂಲ್ಯ ಜೊತೆಯಾಟ ನೀಡಿತು. 61 ಎಸೆತಗಳಲ್ಲಿ 58 ರನ್ ಗಳಿಸಿದ ಆರ್ಯವೀರ ವಿಕೆಟ್ ಒಪ್ಪಿಸಿದರು.
ಆರ್ಯವೀರ ನಿರ್ಗಮನದ ಬಳಿಕ ಭಾರತದ ಬ್ಯಾಟಿಂಗ್ ವೇಗ ಕುಂಠಿತವಾಯಿತು. ರನ್ಗಳ ವೇಗವನ್ನು ಕಾಯ್ದುಕೊಳ್ಳಲು ತಂಡ ಪರದಾಡಿತು. ಒಂದು ತುದಿಯಲ್ಲಿ ವಿಕೆಟ್ಗಳು ಉರುಳುತ್ತಿದ್ದಂತೆ ಭಾರತದ ಮೇಲಿನ ಒತ್ತಡವೂ ಹೆಚ್ಚಾಯಿತು.ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ವಿ.ಕೆ. ವಿನೀತ್ 24 ರನ್ ಗಳಿಸಿದರೆ, ಇದೇ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಸಿಡಿಸಿದ್ದ ಅರ್ಜುನ್ ರಜಪೂತ್ 16 ರನ್ಗಳಿಗೆ ಔಟಾದರು. ಯಶವರ್ಧನ್ ಚೌಹಾಣ ಕೂಡ ಕೇವಲ ಒಂಬತ್ತು ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಇದರಿಂದ ಭಾರತ 186 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆದರೆ ಆರಂಭಿಕ ಆಟಗಾರ ಲಕ್ಷ್ಯ ರೈಚಂದಾನಿ ಮಾತ್ರ ಒಂದು ತುದಿಯಲ್ಲಿ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಿದರು. ಅವರು 80 ರನ್ ಗಳಿಸಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. ಆದರೆ ಮತ್ತೊಂದು ತುದಿಯಿಂದ ಅವರಿಗೆ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ.
ನಂತರ ಕ್ರೀಸ್ಗೆ ಬಂದ ಅನ್ವಯ ದ್ರಾವಿಡ್ ಉತ್ತಮವಾಗಿ ಆಡುತ್ತಿದ್ದರಾದರೂ, ದುರದೃಷ್ಟಕರ ರನ್ಔಟ್ಗೆ ಬಲಿಯಾದರು. 19 ರನ್ ಗಳಿಸಿದ್ದ ಅವರು ಪೆವಿಲಿಯನ್ಗೆ ಮರಳಿದರು. ಈ ಹಂತದಲ್ಲಿ ಪಂದ್ಯ ಭಾರತದ ಕೈತಪ್ಪುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿದ್ದವು.
ಮನಲ್–ಮೊಹಿತ್ ಅಬ್ಬರಕ್ಕೆ ಪಾಕ್ ಬೌಲರ್ಗಳು ಕಂಗಾಲು
ಭಾರತದ ಗೆಲುವಿನ ಸಾಧ್ಯತೆ ಕ್ಷೀಣಿಸಿದ್ದ ನಿರ್ಣಾಯಕ ಸಂದರ್ಭದಲ್ಲಿ ಮನಲ್ ಚೌಹಾಣ ಮತ್ತು ಮೊಹಿತ್ ಉಲ್ವಾ ಜೋಡಿ ಕ್ರೀಸ್ನಲ್ಲಿ ಒಂದಾಯಿತು. ಆರಂಭದಲ್ಲಿ ಮನಲ್ ಆಕ್ರಮಣಕಾರಿ ಆಟಕ್ಕೆ ಮುಂದಾದರೆ, ಮೊಹಿತ್ ಅವರಿಗೆ ಉತ್ತಮ ಬೆಂಬಲ ನೀಡಿದರು.
ಕೇವಲ 35 ಎಸೆತಗಳಲ್ಲಿ 57 ರನ್ಗಳ ಜೊತೆಯಾಟ ನಡೆಸಿದ ಈ ಜೋಡಿ ಪಂದ್ಯದ ಗತಿಯನ್ನೇ ಬದಲಿಸಿತು. ಮನಲ್ 32 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ಆದರೆ ಅವರ ಹೋರಾಟ ವ್ಯರ್ಥವಾಗಲು ಮೊಹಿತ್ ಬಿಡಲಿಲ್ಲ. ನಂತರ ಸ್ವತಃ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ ಕೊನೆಯ ಬಾಲ್ನಲ್ಲಿ ಮೂರು ರನ್ ಬೇಕಾಗಿದ್ದಾಗ ಬೌಂಡರಿ ಸಿಡಿಸಿ ಭಾರತಕ್ಕೆ ಒಂದು ವಿಕೆಟ್ನ ರೋಚಕ ಜಯ ತಂದುಕೊಟ್ಟರು.
ಬಹುತೇಕ ಸಮಯ ಸೋಲಿನ ಅಂಚಿನಲ್ಲಿದ್ದ ಭಾರತಕ್ಕೆ ಕೊನೆಯ ಹಂತದಲ್ಲಿ ಅಸಾಧಾರಣ ಗೆಲುವು ತಂದುಕೊಟ್ಟ ಮೊಹಿತ್ ಮತ್ತು ಮನಲ್ ಅವರ ಆಟ ಅಂಡರ್-19 ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿಯುವಂತಾಗಿದೆ.
ಉಸ್ಮಾನ್ ಖಾನ್ ಶತಕ: ಪಾಕಿಸ್ತಾನಕ್ಕೆ 337 ರನ್ಗಳ ಬೃಹತ್ ಮೊತ್ತ
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡ, ಆರಂಭಿಕ ಆಟಗಾರ ಉಸ್ಮಾನ್ ಖಾನ್ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 337 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು.
ಆರಂಭಿಕ ಆಟಗಾರ ಉಸ್ಮಾನ್ ಖಾನ್ ಮತ್ತು ಹಯಾಮ್ ಖಾನ್ ಮೊದಲ ವಿಕೆಟ್ಗೆ ಕೇವಲ 8.1 ಓವರ್ಗಳಲ್ಲಿ 62 ರನ್ಗಳ ಜೊತೆಯಾಟ ನೀಡಿದರು. ಆರಂಭದಲ್ಲೇ ಉತ್ತಮ ಅಡಿಪಾಯ ಹಾಕಿಕೊಟ್ಟ ಈ ಜೋಡಿ ಭಾರತದ ಬೌಲರ್ಗಳ ಮೇಲೆ ಒತ್ತಡ ಹೇರಿತು.
ನಂತರ ಕ್ರೀಸ್ಗೆ ಬಂದ ಅಬ್ದುಲ್ ಖಾದಿರ್ ಮತ್ತು ಉಸ್ಮಾನ್ ಖಾನ್ ಪಾಕಿಸ್ತಾನದ ಇನ್ನಿಂಗ್ಸ್ಗೆ ಮತ್ತಷ್ಟು ವೇಗ ನೀಡಿದರು. ಈ ಇಬ್ಬರು ಕೇವಲ 18 ಓವರ್ಗಳಲ್ಲಿ 135 ರನ್ಗಳ ಬೃಹತ್ ಜೊತೆಯಾಟ ನಡೆಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಲುಪಿಸಿದರು.
106 ಎಸೆತಗಳಲ್ಲಿ ಶತಕ ಪೂರೈಸಿದ ಉಸ್ಮಾನ್ ಖಾನ್ 107 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿ ಆಕ್ರಮಣಕಾರಿ ಆಟವಾಡಿದ ಅಬ್ದುಲ್ ಖಾದಿರ್ ಕೇವಲ 54 ಎಸೆತಗಳಲ್ಲಿ 80 ರನ್ ಸಿಡಿಸಿದರು. ಈ ಮೂಲಕ ತಮ್ಮ ಚೊಚ್ಚಲ ಯುವ ಏಕದಿನ (Youth ODI) ಅರ್ಧಶತಕವನ್ನು ಕೇವಲ 39 ಎಸೆತಗಳಲ್ಲಿ ಪೂರೈಸಿದರು.
ಭಾರತದ ಎಡಗೈ ಸ್ಪಿನ್ನರ್ ಮನಲ್ ಚೌಹಾಣ ಮತ್ತು ಆಫ್ ಸ್ಪಿನ್ನರ್ ಯಶವರ್ಧನ ಚೌಹಾಣ ಅವರ ಬೌಲಿಂಗ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸಿ ಖಾದಿರ್ ಅಬ್ಬರಿಸಿದರು. ಆದರೆ ಅವರ ಆಕ್ರಮಣಕಾರಿ ಆಟಕ್ಕೆ ಅರ್ಜುನ್ ರಜಪೂತ್ ತೆರೆ ಎಳೆದರು. ಅರ್ಜುನ್ ಎಸೆತದಲ್ಲಿ ಮೇಲಕ್ಕೆತ್ತಿ ಹೊಡೆದ ಚೆಂಡನ್ನು ಕವರ್ ಪ್ರದೇಶದಲ್ಲಿ ನಿಂತಿದ್ದ ವಿ.ಕೆ. ವಿನೀತ್ ಹಿಡಿದು ಖಾದಿರ್ ಅವರ ಆಟಕ್ಕೆ ಅಂತ್ಯ ಹಾಡಿದರು.
ಇತ್ತ ಉಸ್ಮಾನ್ ಖಾನ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ವೇಗದ ಬೌಲರ್ ಕಾವ್ಯ ಪಟೇಲ್ (4/68) ಎಸೆತದಲ್ಲಿ ಅಡ್ಡಾದಿಡ್ಡಿಯಾಗಿ ಬ್ಯಾಟ್ ಬೀಸಿದ ಉಸ್ಮಾನ್, ಮಿಡ್ಆಫ್ನಲ್ಲಿದ್ದ ಅರ್ಜುನ್ ರಜಪೂತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
36 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿದ್ದ ಪಾಕಿಸ್ತಾನ, ಬೃಹತ್ ಮೊತ್ತದತ್ತ ದಾಪುಗಾಲು ಹಾಕಿತ್ತು. ನಂತರ ನಾಯಕ ಫರ್ಹಾನ್ ಯೂಸುಫ್ ಜವಾಬ್ದಾರಿಯುತ ಆಟವಾಡಿ 63 ಎಸೆತಗಳಲ್ಲಿ 60 ರನ್ ಗಳಿಸಿದರು. ಇದರಿಂದ ಪಾಕಿಸ್ತಾನದ ಮೊತ್ತ 300ರ ಗಡಿ ದಾಟಿತು.
ಕೊನೆಯ ಹಂತದಲ್ಲಿ ಭಾರತದ ವೇಗದ ಬೌಲರ್ಗಳಾದ ಕಾವ್ಯ ಪಟೇಲ್ ಮತ್ತು ಸಿ. ವೆಂಕಟ ಪಾಕಿಸ್ತಾನದ ಕೆಲವು ವಿಕೆಟ್ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಸಿ. ವೆಂಕಟ 40 ರನ್ ನೀಡಿ ಮೂರು ವಿಕೆಟ್ ಪಡೆದರೆ, ಕಾವ್ಯ ಪಟೇಲ್ 68 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಆದರೆ ಅಷ್ಟರಲ್ಲಾಗಲೇ ಪಾಕಿಸ್ತಾನ 337 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು.
ಕೊನೆಯವರೆಗೂ ಹೋರಾಡಿ ಗೆದ್ದ ಭಾರತ
338 ರನ್ಗಳ ಕಠಿಣ ಗುರಿ, ಮಧ್ಯಮ ಕ್ರಮಾಂಕದ ಕುಸಿತ, ಕೊನೆಯ ಓವರ್ಗಳಲ್ಲಿ ಹೆಚ್ಚಾದ ರನ್ಗಳ ಒತ್ತಡ… ಹೀಗೆ ಎಲ್ಲ ಸವಾಲುಗಳ ನಡುವೆಯೂ ಭಾರತ ತಂಡ ಸೋಲೊಪ್ಪಿಕೊಳ್ಳಲಿಲ್ಲ. ಲಕ್ಷ್ಯ ರೈಚಂದಾನಿ ಅವರ 80 ರನ್ಗಳ ಹೋರಾಟದ ಬಳಿಕ ಮನಲ್ ಚೌಹಾಣ ಮತ್ತು ಮೊಹಿತ್ ಉಲ್ವಾ ತೋರಿದ ಅಪ್ರತಿಮ ಧೈರ್ಯ ಭಾರತಕ್ಕೆ ಜಯದ ಕಾಣಿಕೆ ನೀಡಿತು.
ಈ ರೋಚಕ ಗೆಲುವಿನೊಂದಿಗೆ ಭಾರತ ಅಂಡರ್-19 ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಾಕಿಸ್ತಾನ ಬೃಹತ್ ಮೊತ್ತ ಗಳಿಸಿದ್ದರೂ ಕೊನೆಯವರೆಗೂ ಹೋರಾಡಿದ ಭಾರತದ ಯುವ ಆಟಗಾರರು ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ಫೈನಲ್ ಪಂದ್ಯವನ್ನು ಉಡುಗೊರೆಯಾಗಿ ನೀಡಿದರು.
ಅಂಡರ್-19 ಏಷ್ಯಾಕಪ್ ಫೈನಲ್: ಸ್ಕೋರ್ಬೋರ್ಡ್
ಪಾಕಿಸ್ತಾನ – 337/9 (50 ಓವರ್)
ಸ್ಕೋರ್ ಬೋರ್ಡ್
ಉಸ್ಮಾನ್ ಖಾನ್ -107 ರನ್
ಹಯಾಮ್ ಖಾನ್-21 ರನ್
ಅಬ್ದುಲ್ ಖಾದಿರ್-80 ರನ್
ಫರ್ಹಾನ್ ಯೂಸುಫ್-60 ರನ್
ಅಹ್ಮದ್ ಹುಸೇನ್-17 ರನ್
ಹಮ್ಜಾ ಜಹೂರ್-10 ರನ್
ಹಸ್ನೈನ್ ಅಬ್ಬಾಸ್ ದಾರ್ -2 ರನ್
ಮೊಹಮ್ಮದ್ ಸಯ್ಯಂ-7 ರನ್
ನಿಕಾಬ್ ಶಫೀಕ್ -11 ರನ್
ರಿಜ್ವಾನುಲ್ಲಾ 4* ಅಜೇಯ
ಅಲಿ ರಝಾ 0*
ಎಕ್ಸ್ಟ್ರಾ: 18
ಭಾರತದ ತಂಡ – 339/9 (50 ಓವರ್)
ಲಕ್ಷ್ಯ ರೈಚಂದಾನಿ-80 ರನ್
ಆರ್ಯವೀರ್ ಸೆಹ್ವಾಗ್-58 ರನ್
ವಿ.ಕೆ. ವಿನೀತ್-24 ರನ್
ಅರ್ಜುನ್ ರಜಪೂತ್-16 ರನ್
ಯಶವರ್ಧನ್ ಚೌಹಾಣ-9 ರನ್
ಅನ್ವಯ ದ್ರಾವಿಡ್-19 ರನ್
ಮನಲ್ ಚೌಹಾಣ-47
ಮೊಹಿತ್ ಉಲ್ವಾ-49 ಅಜೇಯ
ಚಿಗುರುಪತಿ ವೆಂಕಟ-9 ಅಜೇಯ
ರೋಚಕ ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಜಯಗಳಿಸಿತು.





ನಿಮ್ಮ ಕಾಮೆಂಟ್ ಬರೆಯಿರಿ