ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಬೆಂಗಳೂರು: ಮದ್ಯದ ಅಮಲಿನಲ್ಲಿ ಮನೆ ಕಾಂಪೌಂಡ್‌ಗೆ ಕಾರು ಡಿಕ್ಕಿ; ಸಂಚಾರ ಪೊಲೀಸರ ಪಿಎಸ್‌ಐ ಮೇಲೆ ಹಲ್ಲೆ, ಕಾರು ಬ್ರೋಕರ್ ಬಂಧನ

ಬೆಂಗಳೂರು: ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿ ಮನೆಯೊಂದರ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದ್ದಲ್ಲದೆ, ಸ್ಥಳಕ್ಕೆ ಬಂದ ಸಂಚಾರ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಮೇಲೆಯೇ ಹಲ್ಲೆ ನಡೆಸಿ, ಅವರ ಸಮವಸ್ತ್ರ ಹರಿದು ಹುದ್ದೆಯ ಗುರುತಿನ ಸ್ಟಾರ್‌ ಕಿತ್ತುಕೊಂಡ ಆರೋಪದ ಮೇಲೆ 35 ವರ್ಷದ ಕಾರು ಬ್ರೋಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ ಮಹದೇಶ್ವರ ನಗರ ಮುಖ್ಯರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಂಧಿತನನ್ನು ಸಂಪಂಗಿರಾಮನಗರ ನಿವಾಸಿ ಸಚಿನ್ ಎಂದು ಗುರುತಿಸಲಾಗಿದೆ.
ಸಚಿನ್ ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮನೆಯೊಂದರ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗೋಡೆಯ ಒಂದು ಭಾಗ ಕುಸಿದುಬಿದ್ದಿದೆ. ಈ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಕಾರು ಡಿಕ್ಕಿ ಹೊಡೆದ ಭಾರಿ ಶಬ್ದಕ್ಕೆ ಎಚ್ಚರಗೊಂಡ ಸ್ಥಳೀಯ ನಿವಾಸಿಗಳು ಮನೆಗಳಿಂದ ಹೊರಬಂದಿದ್ದಾರೆ. ಈ ವೇಳೆ ಸಚಿನ್ ಅವರ ಜೊತೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸಿದ್ದಾನೆ. ಆತನ ವರ್ತನೆಯನ್ನು ಸ್ಥಳೀಯರು ಪ್ರಶ್ನಿಸಿದ್ದಲ್ಲದೆ, ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಗಸ್ತು ತಿರುಗುತ್ತಿದ್ದ ಹೊಯ್ಸಳ ಪೊಲೀಸರೊಂದಿಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣ ಅವರು ಸ್ಥಳಕ್ಕೆ ಆಗಮಿಸಿ ಸಚಿನ್‌ನನ್ನು ವಿಚಾರಿಸಿದ್ದಾರೆ.
ಮದ್ಯ ಸೇವಿಸಿರುವುದನ್ನು ಪತ್ತೆಹಚ್ಚಲು ಪೊಲೀಸರು ಆತನಿಗೆ ಉಸಿರಾಟ ಪರೀಕ್ಷೆ (ಬ್ರೀತ್‌ಅನಲೈಸರ್ ಟೆಸ್ಟ್) ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ಸಚಿನ್ ಪರೀಕ್ಷೆಗೆ ನಿರಾಕರಿಸಿದ್ದಾನೆ. ಅಲ್ಲದೆ, ತಾನು ಪೊಲೀಸ್ ಠಾಣೆಗೆ ಬರುವುದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ.
ಬಳಿಕ ಆತನನ್ನು ಹೊಯ್ಸಳ ಗಸ್ತು ವಾಹನಕ್ಕೆ ಹತ್ತಿಸಲು ಪೊಲೀಸರು ಮುಂದಾದಾಗ ಸಚಿನ್ ಪಿಎಸ್‌ಐ ಕೃಷ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಹರಿದಿದ್ದಾನೆ. ಅಷ್ಟೇ ಅಲ್ಲದೆ, ಪಿಎಸ್‌ಐ ಸಮವಸ್ತ್ರದ ಮೇಲಿದ್ದ ಹುದ್ದೆಯ ಗುರುತಿನ ಸ್ಟಾರ್‌ ಕಿತ್ತು ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಪಿಎಸ್‌ಐ ಕೃಷ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ಸಚಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement