ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾಯರಿಗೆ ಆದಿಕವಿ ಪುರಸ್ಕಾರ, ಸಹನಾ ವಿಜಯಕುಮಾರಗೆ ವಾಗ್ದೇವಿ ಪುರಸ್ಕಾರ ಪ್ರದಾನ

ಬೆಂಗಳೂರು: ಬೆಂಗಳೂರಿನ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಭಾನುವಾರ ಆಯೋಜಿಸಿದ್ದ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾಯರಿಗೆ ಆದಿಕವಿ ಪುರಸ್ಕಾರ ಹಾಗೂ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ ಅವರಿಗೆ ವಾಗ್ದೇವಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬಾಬು ಕೃಷ್ಣಮೂರ್ತಿ ಮಾತನಾಡಿ, ‘ಈ ಮೊದಲು ಕುವೆಂಪು, ಬೇಂದ್ರೆಯವರಂತಹ ಶ್ರೇಷ್ಠ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಕಳೆದ ವರ್ಷ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ತಮಿಳು ಕವಿ ವೈರಮುತ್ತು ಎಂಬವರಿಗೆ ಜ್ಞಾನಪೀಠ ಪುರಸ್ಕಾರ ನೀಡಲಾಗಿದೆ. ಇದು ಸಾಹಿತಿಗಳು ತಲೆ ತಗ್ಗಿಸುವ ವಿಚಾರ’ ಎಂದು ಹೇಳಿದ್ದಾರೆ.

‘ಜಗತ್ತಿನಲ್ಲಿ ಕೋಟ್ಯಂತರ ಡಾಲರ್ ಹಣವನ್ನು ನೀಡುವ ದೊಡ್ಡ ದೊಡ್ಡ ಪ್ರಶಸ್ತಿಗಳಿವೆ. ಭಾರತದಲ್ಲಿ ಜ್ಞಾನಪೀಠ, ಸರಸ್ವತಿ ಸಮ್ಮಾನ್ ನಂತಹ ಮೇರು ಪ್ರಶಸ್ತಿಗಳಿವೆ. ಕನ್ನಡದಲ್ಲಿ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಂಹ ಶ್ರೇಷ್ಠ ಸಾಹಿತಿಗಳು ಜ್ಞಾನಪೀಠಕ್ಕೆ ಭಾಜನರಾದರು. ಆದರೆ ಇತ್ತೀಚೆಗೆ ತಮಿಳು ಗೀತರಚನೆಕಾರ ವೈರಮುತ್ತು ಎಂಬ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವವರಿಗೆ ಪ್ರಶಸ್ತಿ ನೀಡಲಾಗಿದೆ.‌ ಇದರಿಂದಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಕೈಯಲ್ಲಿ ಮುಟ್ಟಲೂ ಭಯವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತರ ರಾಜ್ಯಗಳಿಗೆ ಕನ್ನಡ ಸಾಹಿತ್ಯ ಪರಿಚಯಿಸಿ:
‘ಭಾರತದ ಸಾಹಿತ್ಯ ಪ್ರಪಂಚಕ್ಕೆ ಕರ್ನಾಟಕದ ಕೊಡುಗೆ ಅನನ್ಯವಾದದ್ದು. ಪಂಪನಿಂದ ಹಿಡಿದು ಕುವೆಂಪು, ಬೇಂದ್ರೆ, ತರಾಸು, ಅನಕೃ ಅವರಂತಹ ಸಾಹಿತಿಗಳವರೆಗೆ ಸಾವಿರಾರು ಜನ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಆದರೆ ಅವರ ಕೊಡುಗೆಗಳು ಉತ್ತರ ಭಾರತಕ್ಕೆ ತಿಳಿದಿಲ್ಲ. ಇಡೀ ಭಾರತಕ್ಕೆ ಅವರ ಕಾರ್ಯಗಳನ್ನು ಪರಿಚಯಿಸುವ ಕೆಲಸ ಆಗಿಲ್ಲ. ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಕೃತಿಗಳು ಭಾರತದ ಹಲವು ಭಾಷೆಗಳಿಗೆ ಅನುವಾದವಾದವು. ಇಂಥ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಬೇಕು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಈ ನಿಟ್ಟಿನಲ್ಲಿ ಕೆಲಸ ಮಾಡಲಿ’ ಎಂದು ಆಶಿಸಿದರು.

ಪ್ರಮುಖ ಸುದ್ದಿ :-   ತುಮಕೂರು: ಹೆಂಡತಿ ಜೊತೆಗಿನ ಜಗಳ ಬಿಡಿಸಲು ಬಂದ ಅಪ್ರಾಪ್ತ ಮಗನನ್ನೇ ಹಾರೆಯಿಂದ ಹೊಡೆದು ಕೊಂದ ತಂದೆ !

ನನ್ನ ಸಾಧನೆಗೆ ಅನಕೃ ಕಾರಣ: ಶಾ.ಮಂ
ಆದಿಕವಿ ಪುರಸ್ಕಾರ ಪಡೆದ ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾಯ ಮಾತನಾಡಿ, ‘ನನ್ನ ಪ್ರಾಥಮಿಕ ಶಾಲಾ ಶಿಕ್ಷಕ ದ.ರಾ.ಭಟ್ ಹಾಗೂ ಕನ್ನಡದ ಶ್ರೇಷ್ಠ ಸಾಹಿತಿ ಅ.ನ.ಕೃಷ್ಣರಾಯರು ನನ್ನ ಬದುಕಿನ ದಿಕ್ಕನ್ನೇ ಬದಲಿಸಿದವರು. ಅನಕೃ ಅವರ ನಟಸಾರ್ವಭೌಮ ಕಾದಂಬರಿ ನನ್ನ ಮೇಲೆ ಅಗಾಧ ಪರಿಣಾಮ ಬೀರಿತು. ನನ್ನ ಇವತ್ತಿನ ಸಾಧನೆಗೆ ಅನಕೃ ಅವರೇ ಕಾರಣ’ ಎಂದು ಸ್ಮರಿಸಿದರು.
ಋಗ್ವೇದದಲ್ಲಿ ವಾಗ್ದೇವಿ ಉಲ್ಲೇಖ: ಸಹನಾ
ವಾಗ್ದೇವಿ ಪುರಸ್ಕಾರಕ್ಕೆ ಭಾಜನರಾದ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ ಮಾತನಾಡಿ, ‘ವಾಗ್ದೇವಿಯ ಉಲ್ಲೇಖ ಋಗ್ವೇದದಲ್ಲಿ ವಾಗಂಭ್ರಣಿ ಸೂತ್ರದಲ್ಲಿ ಬರುತ್ತದೆ. ಅಂಭ್ರಣಿ ಋಷಿಯ ಮಗಳು ವಾಣಿ. ಆಕೆ ವಾಕ್ ಗೆ ಅಧಿದೇವಿ. ಆಕೆಯೇ ಸಮಸ್ತ ಸೃಷ್ಟಿಗೆ ಕಾರಣಳು. ಜ್ಞಾನಸೂಕ್ತ, ಸರಸ್ವತಿ ಸೂಕ್ತಗಳೂ ಇವೆ. ನಮ್ಮ ಪರಂಪರೆಯಲ್ಲಿ ವಾಕ್, ಮಾತು ಅಥವಾ ವಾಣಿಯನ್ನು ಬಹಳ ಚೆನ್ನಾಗಿ ಕಟ್ಟಿಕೊಡಲಾಗಿದೆ. ಮಾತಿನ ಅಭಿವ್ಯಕ್ತಿಗೆ ಉನ್ನತವಾದ ಸ್ಥಾನಮಾನ ಕೊಟ್ಟ ಪರಂಪರೆ ನಮ್ಮದು. ವಾಗ್ದೇವಿ ಪುರಸ್ಕಾರ ಅತ್ಯಂತ ಸಂತೋಷ ತಂದಿದೆ ‘ ಎಂದರು.

ಅಭಾಸಾಪ ರಾಜ್ಯಾದ್ಯಂತ ಕ್ರಿಯಾಶೀಲ: ಕೋಟಿ
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ಅಧ್ಯಕ್ಷ ಎಸ್. ಜಿ. ಕೋಟಿ ಮಾತನಾಡಿ, ‘ಅಭಾಸಾಪ ಸಂಘಟನೆ ಈಗ ರಾಜ್ಯದ ಉದ್ದಗಲದಲ್ಲಿ ಕ್ರಿಯಾಶೀಲವಾಗಿದೆ. ಕಡಿಮೆ ವೆಚ್ಚ ಅಥವಾ ವೆಚ್ಚವೇ ಇಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಭಾಸಾಪ ವಿಶೇಷತೆ. ಸಂಘಟನೆಯು ಕನ್ನಡನಾಡಿಗೆ ತನ್ನನ್ನು ತಾನು ಗಟ್ಟಿಯಾಗಿ ಸಮರ್ಪಿಸಿಕೊಂಡು ಕಾರ್ಯಪ್ರವೃತ್ತವಾಗಿದೆ‌. ನಿವೃತ್ತ ಪ್ರಾಧ್ಯಾಪಕ ಬೆಳಗೋಡು ಕೃಷ್ಣ ಭಟ್ ಸಂಪಾದಕತ್ವದಲ್ಲಿ ‘ಸಹಿತ’ ಪತ್ರಿಕೆ ಹೊರಬರುತ್ತಿದೆ. ಸಾಹಿತ್ಯಾಸಕ್ತರು ಮತ್ತು ಬರಹಗಾರರು ಇದಕ್ಕೆ ಕೈಜೋಡಿಸಬೇಕು. ಸಾಹಿತ್ಯ ಪ್ರೇಮಿಗಳು ಮತ್ತು ಅನುಕೂಲಸ್ಥರು ತಮ್ಮ ಸಹಾಯ ಹಸ್ತವನ್ನು ಚಾಚುವ ಮೂಲಕ ಅಭಾಸಾಪ ಕಾರ್ಯಗಳಿಗೆ ನೆರವಾಗಬೇಕು’ ಎಂದು ಮನವಿ ಮಾಡಿದರು.
ಅಭಾಸಾಪ ರಾಜ್ಯ ಕಾರ್ಯದರ್ಶಿ ರಘುನಂದನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಡಾ. ನವೀನ್ ಭಟ್ ಗಂಗೋತ್ರಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಎ. ಭಾನುವಾರ ವಂದನಾರ್ಪಣೆ ಮಾಡಿದರು.

ಪ್ರಮುಖ ಸುದ್ದಿ :-   ಬಳ್ಳಾರಿ : ತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ವ್ಯಕ್ತಿಯ ಹೆಸರಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು ! ಬೆಚ್ಚಿಬಿದ್ದ ಯುವಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement