

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಮ್ಮದೇ ಸರ್ಕಾರದ ವಿರುದ್ಧ ಶಾಸಕರ ಬಹಿರಂಗ ಟೀಕೆಗಳು, ಭ್ರಷ್ಟಾಚಾರದ ಆರೋಪಗಳು, ಅಭಿವೃದ್ಧಿ ಅನುದಾನ ಹಂಚಿಕೆ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳು ಹಾಗೂ ಅಧಿಕಾರ ಹಂಚಿಕೆ ಕುರಿತ ಹೊಸ ಬೇಡಿಕೆಗಳು ಪಕ್ಷದ ಆಂತರಿಕ ಬಿಕ್ಕಟ್ಟನ್ನು ಮತ್ತಷ್ಟು ಬಹಿರಂಗಪಡಿಸುತ್ತಿವೆ.
ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ಮುನುಗೋಡು ಶಾಸಕ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಮತ್ತೊಮ್ಮೆ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಹಾಗೂ ಸಚಿವ ಎನ್. ಉತ್ತಮಕುಮಾರ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ತಮ್ಮ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೇವಂತ ರೆಡ್ಡಿ ಮುಖ್ಯಮಂತ್ರಿಯಾಗಿರುವುದು ಅವರ ಅದೃಷ್ಟ ಎಂದು ಹೇಳಿರುವ ಅವರು, ರಾಜ್ಯದ ಇತರ ವಿಧಾನಸಭಾ ಕ್ಷೇತ್ರಗಳನ್ನು ನಿರ್ಲಕ್ಷಿಸಿ ತಮ್ಮ ಸ್ವಂತ ಕ್ಷೇತ್ರ ಹಾಗೂ ತಮ್ಮ ಆಪ್ತ ಸಚಿವರ ಕ್ಷೇತ್ರಗಳ ಅಭಿವೃದ್ಧಿಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನವೆಂಬರ್ 18ರ ಬುಧವಾರ ತಮ್ಮದೇ ಕ್ಷೇತ್ರವಾದ ಮುನುಗೋಡಿನಲ್ಲಿ ನಡೆದ ಪಿಂಚಣಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಗೋಪಾಲ ರೆಡ್ಡಿ, ಮುಖ್ಯಮಂತ್ರಿ ರೇವಂತ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ರೇವಂತ ರೆಡ್ಡಿ ಪ್ರತಿನಿಧಿಸುವ ಕೋಡಂಗಲ್, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಪ್ರತಿನಿಧಿಸುವ ಮಧಿರಾ ಹಾಗೂ ನೀರಾವರಿ ಸಚಿವ ಉತ್ತಮಕುಮಾರ ರೆಡ್ಡಿ ಪ್ರತಿನಿಧಿಸುವ ಹುಜೂರ್ನಗರ ಕ್ಷೇತ್ರಗಳಿಗೆ ಮಾತ್ರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ, ತಮ್ಮ ಕ್ಷೇತ್ರವಾದ ಮುನುಗೋಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೋಡಂಗಲ್ ಕ್ಷೇತ್ರಕ್ಕೆ 10,000 ಕೋಟಿ ರೂ. ಅನುದಾನ ನೀಡುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿಗಳು, ಫ್ಲೋರೈಡ್ ಸಮಸ್ಯೆ ಹಾಗೂ ಬರಗಾಲದಿಂದ ತೀವ್ರವಾಗಿ ಬಾಧಿತವಾಗಿರುವ ಮುನುಗೋಡಿನ ಜನರ ಸಂಕಷ್ಟವನ್ನು ಏಕೆ ಗಮನಿಸುತ್ತಿಲ್ಲ ಎಂದು ಪ್ರಶ್ನಿಸಿದರು.
“ಕೋಡಂಗಲ್ಗೆ 10,000 ಕೋಟಿ ರೂ. ನೀಡುತ್ತೇನೆ ಎಂದು ಹೇಳುತ್ತಿದ್ದೀರಿ. ಆದರೆ, ಇಲ್ಲಿನ ಪರಿಸ್ಥಿತಿ ಏನು? ಇದು ಫ್ಲೋರೈಡ್ ಸಮಸ್ಯೆಯಿಂದ ತತ್ತರಿಸಿರುವ, ಬರಪೀಡಿತ ಪ್ರದೇಶ. ಇಲ್ಲಿನ ಜನರು ವಿಷವನ್ನೇ ಕುಡಿಯುತ್ತಿದ್ದಾರೆ. ಕೆರೆಗಳು ಮತ್ತು ಕೊಳಗಳ ಅಭಿವೃದ್ಧಿಗಾಗಿ ಕನಿಷ್ಠ 500 ಕೋಟಿ ರೂ. ನೀಡಲೂ ನಿಮಗೆ ಸಾಧ್ಯವಾಗುತ್ತಿಲ್ಲವೇ?” ಎಂದು ರಾಜಗೋಪಾಲ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಹಣದ ಕೊರತೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ
ತಮ್ಮ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳು, ನೀರಾವರಿ ಯೋಜನೆಗಳು ಹಾಗೂ ಚೌಟುಪ್ಪಲ್ನಲ್ಲಿ ಪ್ರಸ್ತಾಪಿಸಲಾಗಿರುವ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯಗಳು ಅನುದಾನದ ಕೊರತೆಯಿಂದ ವಿಳಂಬವಾಗುತ್ತಿವೆ ಎಂದು ಶಾಸಕ ಆರೋಪಿಸಿದರು.
ಮೂರು ಲಕ್ಷ ಎಕರೆಗಳಷ್ಟು ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಫ್ಲೋರೈಡ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ತಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದು ಹೇಳಿದ ಅವರು, ಅಗತ್ಯ ಅನುದಾನ ಬಿಡುಗಡೆಯಾಗದ ಕಾರಣ ಈ ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಶಾಸಕ ಅನಿರುದ್ಧ ರೆಡ್ಡಿ ಅವರು, ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ, ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಮರುದಿನವೇಶಾಸಕ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಾವರ ಈ ಹೇಳಿಕೆ ಬಂದಿದೆ.
‘ಶಾಸಕನನ್ನು ತುಳಿದು ಹೊಸಕಿ ಹಾಕುತ್ತೇನೆ ಎಂಬ ಭಾಷೆ ಮುಖ್ಯಮಂತ್ರಿಗೆ ಶೋಭೆಯೇ?’
ಕೋಡಂಗಲ್ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಪಡಿಸುವವರನ್ನು ತುಳಿದು ಹಾಕುವುದಾಗಿ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿರುವುದಾಗಿ ಆರೋಪಿಸಿದ ರಾಜಗೋಪಾಲ ರೆಡ್ಡಿ, ಮುಖ್ಯಮಂತ್ರಿಯವರ ಭಾಷೆ ಮತ್ತು ವರ್ತನೆಯನ್ನು ತೀವ್ರವಾಗಿ ಪ್ರಶ್ನಿಸಿದರು.
“ನಾವು ನಾಲ್ಕು ಗೋಡೆಗಳ ನಡುವೆ ಕುಳಿತು ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ತಿಳಿಸಿ ಮನವಿ ಸಲ್ಲಿಸಿದರೆ ನೀವು ನಿರ್ಲಕ್ಷಿಸುತ್ತೀರಿ. ಹೊರಗೆ ಬಂದು ಮಾತನಾಡಿದರೆ ಶಿಸ್ತಿನ ಪಾಠ ಹೇಳುತ್ತೀರಿ. ಯಾವ ಶಿಸ್ತು ಇದು? ನಮ್ಮನ್ನು ನೆಲಕ್ಕೆ ಕೆಡವಿ ತುಳಿದು ಹೊಸಕಿ ಹಾಕುತ್ತೇನೆ ಎಂದು ಹೇಳುತ್ತೀರಿ. ಮುಖ್ಯಮಂತ್ರಿಯಾಗಿ ನಿಮ್ಮ ವರ್ತನೆ ಎಂಥದ್ದು? ನೀವು ಬಳಸುವ ಭಾಷೆ ಯಾವ ರೀತಿಯದ್ದು?” ಎಂದು ಅವರು ಪ್ರಶ್ನಿಸಿದರು.
“10 ಸಾವಿರ ಕೋಟಿ ರೂ. ಬದಲಿಗೆ ಕೋಡಂಗಲ್ಗೆ 20 ಸಾವಿರ ಕೋಟಿ ರೂ. ಬೇಕಾದರೂ ಕೊಡಿ. ಆದರೆ, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕನೊಬ್ಬ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಕೇಳಿದಾಗ, ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ರಾಜ್ಯದ ಹಿಂದುಳಿದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಬದಲು, ಆತನನ್ನು ತುಳಿದು ಹಾಕುತ್ತೇನೆ, ಹೊಸಕಿ ಹಾಕುತ್ತೇನೆ ಎಂದು ಹೇಳುವುದು ಎಷ್ಟು ಸರಿ?” ಎಂದು ಅವರು ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.
https://x.com/TheSiasatDaily/status/2123075280193605773?ref_src=twsrc%5Etfw%7Ctwcamp%5Etweetembed%7Ctwterm%5E2123075280193605773%7Ctwgr%5E16d63f380cdf346002ed94ffd4e058d1b12054c2%7Ctwcon%5Es1_&ref_url=https%3A%2F%2Fwww.siasat.com%2Fgot-lucky-and-became-cm-congress-mla-raj-gopal-reddy-slams-revanth-3580768%2F
‘ಮುಖ್ಯಮಂತ್ರಿಯಾಗಿದ್ದು ನಿಮ್ಮ ಅದೃಷ್ಟ, ಜನರ ಸೇವೆ ಮಾಡಿ’
ರೇವಂತ ರೆಡ್ಡಿ ಮುಖ್ಯಮಂತ್ರಿಯಾಗಿರುವುದು ಅವರ ಅದೃಷ್ಟ ಎಂದು ಹೇಳಿದ ರಾಜಗೋಪಾಲ ರೆಡ್ಡಿ, ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ಮುಂದಿನ ಎರಡು ವರ್ಷಗಳ ಕಾಲವಾದರೂ ತೆಲಂಗಾಣದ ಜನರಿಗಾಗಿ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವ ಕಾರಣಕ್ಕೆ ತಾವು ಮುಖ್ಯಮಂತ್ರಿಯವರ ವಿರುದ್ಧ ಮಾತನಾಡುತ್ತಿದ್ದೇನೆ ಎಂಬ ಆರೋಪಗಳನ್ನೂ ಅವರು ತಳ್ಳಿಹಾಕಿದರು. ತಾನು ರಾಜಕೀಯಕ್ಕೆ ಬಂದಿರುವುದು ಅಧಿಕಾರ ಅಥವಾ ಸಚಿವ ಸ್ಥಾನಕ್ಕಾಗಿ ಅಲ್ಲ; ಜನರ ಸೇವೆ ಮಾಡುವ ಉದ್ದೇಶದಿಂದ ಎಂದು ಸ್ಪಷ್ಟಪಡಿಸಿದರು.
ತೆಲಂಗಾಣ ಎಂದರೆ ಕೇವಲ ಕೋಡಂಗಲ್ ಮತ್ತು ಮಧಿರಾ ಕ್ಷೇತ್ರಗಳಲ್ಲ ಎಂಬುದನ್ನು ಮುಖ್ಯಮಂತ್ರಿ ಅರ್ಥಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ ಅವರು, ಮುನುಗೋಡು ಕ್ಷೇತ್ರವನ್ನು ಇದೇ ರೀತಿ ನಿರ್ಲಕ್ಷಿಸುತ್ತಾ ಹೋದರೆ ಹೋರಾಟ ಆರಂಭವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಹಿಂದೆಯೂ ರೇವಂತ ರೆಡ್ಡಿ ವಿರುದ್ಧ ಬಹಿರಂಗ ಟೀಕೆ
ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಈ ಹಿಂದೆಯೂ ಮುಖ್ಯಮಂತ್ರಿ ರೇವಂತ ರೆಡ್ಡಿ ವಿರುದ್ಧ ಬಹಿರಂಗವಾಗಿ ಟೀಕೆಗಳನ್ನು ಮಾಡಿದ್ದರು. ಇತ್ತೀಚೆಗಷ್ಟೇ ತಮ್ಮ ಕುಟುಂಬದ ಒಡೆತನದ ಸುಶೀ ಇನ್ಫ್ರಾ (Sushee Infra) ಕಂಪನಿಗೆ ರೇಡಿಯಲ್ ರೋಡ್-2 ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮುಖ್ಯಮಂತ್ರಿ ರೇವಂತ ರೆಡ್ಡಿಯವರ ಆಪ್ತರು ತಡೆಯೊಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಇದೀಗ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಮುಖ್ಯಮಂತ್ರಿಯವರ ವಿರುದ್ಧವೇ ಸ್ವಪಕ್ಷದ ಶಾಸಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ತೆಲಂಗಾಣ ಕಾಂಗ್ರೆಸ್ನೊಳಗಿನ ಭಿನ್ನಾಭಿಪ್ರಾಯವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಶಾಸಕ ಅನಿರುದ್ಧ ರೆಡ್ಡಿ ಹೇಳಿದ್ದೇನು?
ಆಡಳಿತ ಪಕ್ಷಕ್ಕೆ ಮುಜುಗರವನ್ನುಂಟುಮಾಡುವ ಬೆಳವಣಿಗೆಯಲ್ಲಿ, ಅಭಿವೃದ್ಧಿ ಕಾಮಗಾರಿಗಳ ಬಿಲ್ಗಳನ್ನು ಪಾವತಿಸಲು ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರಿಂದ ಶೇಕಡಾ 10 ರಿಂದ 20 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಜಡ್ಚೆರ್ಲ ಶಾಸಕ ಜೆ. ಅನಿರುದ್ಧ ರೆಡ್ಡಿ ಇತ್ತೀಚೆಗೆ ಆರೋಪಿಸಿದ್ದಾರೆ.
5 ಲಕ್ಷ ರೂಪಾಯಿ ಮೌಲ್ಯದ ಸಿಮೆಂಟ್ ರಸ್ತೆ ಯೋಜನೆಯೊಂದನ್ನು ಉದಾಹರಿಸಿದ ಅವರು, ಗುತ್ತಿಗೆದಾರರ ಬಿಲ್ಗಳ ಪ್ರಕ್ರಿಯೆಗೆ ಅಗತ್ಯವಿರುವ ‘ಅಳತೆ ಪುಸ್ತಕ’ಗಳಲ್ಲಿ (Measurement Books – MBs) ಕಾಮಗಾರಿಯ ಅಳತೆಗಳನ್ನು ದಾಖಲಿಸುವುದಕ್ಕಾಗಿಯೇ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಆಸ್ತಿ ಸಂಬಂಧಿತ ಕೆಲಸವೊಂದನ್ನು ಪೂರೈಸಲು ಅಧಿಕಾರಿಯೊಬ್ಬರು 15,000 ರೂಪಾಯಿ ಲಂಚ ಪಡೆದಿದ್ದಾರೆ ಎಂದೂ ಅವರು ದೂರಿದ್ದಾರೆ.
ಆಡಳಿತ ಪಕ್ಷಕ್ಕೆ ಮುಜುಗರವನ್ನುಂಟುಮಾಡುವ ಬೆಳವಣಿಗೆಯಲ್ಲಿ, ಅಭಿವೃದ್ಧಿ ಕಾಮಗಾರಿಗಳ ಬಿಲ್ಗಳನ್ನು ಪಾವತಿಸಲು ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರಿಂದ ಶೇಕಡಾ 10 ರಿಂದ 20 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಜಡ್ಚೆರ್ಲ ಶಾಸಕ ಜೆ. ಅನಿರುದ್ಧ ರೆಡ್ಡಿ ಇತ್ತೀಚೆಗೆ ಆರೋಪಿಸಿದ್ದಾರೆ.
5 ಲಕ್ಷ ರೂಪಾಯಿ ಮೌಲ್ಯದ ಸಿಮೆಂಟ್ ರಸ್ತೆ ಯೋಜನೆಯೊಂದನ್ನು ಉದಾಹರಿಸಿದ ಅವರು, ಗುತ್ತಿಗೆದಾರರ ಬಿಲ್ಗಳ ಪ್ರಕ್ರಿಯೆಗೆ ಅಗತ್ಯವಿರುವ ‘ಅಳತೆ ಪುಸ್ತಕ’ಗಳಲ್ಲಿ (Measurement Books – MBs) ಕಾಮಗಾರಿಯ ಅಳತೆಗಳನ್ನು ದಾಖಲಿಸುವುದಕ್ಕಾಗಿಯೇ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಆಸ್ತಿ ಸಂಬಂಧಿತ ಕೆಲಸವೊಂದನ್ನು ಪೂರೈಸಲು ಅಧಿಕಾರಿಯೊಬ್ಬರು 15,000 ರೂಪಾಯಿ ಲಂಚ ಪಡೆದಿದ್ದಾರೆ ಎಂದೂ ಅವರು ದೂರಿದ್ದಾರೆ.





ನಿಮ್ಮ ಕಾಮೆಂಟ್ ಬರೆಯಿರಿ