ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಸಂಬಂಧಿಕರ ಕಳುಹಿಸಲು ವಂದೇ ಭಾರತ ರೈಲು ಹತ್ತಿದ 12 ಮಂದಿ..ಬಾಗಿಲು ಲಾಕ್‌..140 ಕಿಮೀ ಪ್ರಯಾಣ..36 ಸಾವಿರ ರೂ. ದಂಡ !

ಇಟಾವಾ: ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನೊಳಗೆ ಹತ್ತಿದ್ದ 12 ಮಂದಿ, ರೈಲಿನ ಸ್ವಯಂಚಾಲಿತ ಬಾಗಿಲುಗಳು (ಆಟೋಮ್ಯಾಟಿಕ್‌ ಡೋರ್ಸ್‌) ಮುಚ್ಚಿಕೊಂಡ ಪರಿಣಾಮ ಒಳಗೇ ಸಿಲುಕಿಕೊಂಡಿದ್ದಾರೆ. ನಿಲ್ದಾಣದಿಂದ ರೈಲು ಹೊರಟ ಬಳಿಕ ತಾವು ರೈಲಿನೊಳಗೆ ಸಿಲುಕಿರುವುದು ಅವರಿಗೆ ಅರಿವಾಗಿದೆ. ಕೊನೆಗೆ ಇಟಾವಾ ಜಂಕ್ಷನ್‌ನಲ್ಲಿ ರೈಲಿನಿಂದ ಕೆಳಗಿಳಿಸಲಾದ ಈ 12 ಮಂದಿಗೆ ರೈಲ್ವೆ ಅಧಿಕಾರಿಗಳು ಒಟ್ಟು 36 ಸಾವಿರ ರೂ. ದಂಡ ವಿಧಿಸಿದ್ದಾರೆ…! ಈ ಘಟನೆ ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಡೆದಿದೆ.
ಕಾನ್ಪುರದ ವಿವಿಧ ಪ್ರದೇಶಗಳಿಂದ ಬಂದಿದ್ದ ಈ 12 ಮಂದಿ, ತಮ್ಮ ಕುಟುಂಬದ ಸದಸ್ಯರು ಪ್ರಯಾಣ ಬೆಳೆಸುವ ಮೊದಲು ಅವರಿಗೆ ರೈಲಿನಲ್ಲಿ ಅಗತ್ಯ ವಸ್ತುಗಳನ್ನು ಜೋಡಿಸಿಕೊಡಲು ಹಾಗೂ ಆಸನಗಳಲ್ಲಿ ವ್ಯವಸ್ಥೆ ಮಾಡಿಕೊಡಲು ರೈಲಿನೊಳಗೆ ಹೋಗಿದ್ದರು. ಆದರೆ, ಅವರು ರೈಲಿನಲ್ಲಿರುವಾಗಲೇ ಸ್ವಯಂಚಾಲಿತ ಬಾಗಿಲುಗಳು (automatic doors) ಮುಚ್ಚಿಕೊಂಡಿವೆ. ಆಧುನಿಕ ವಂದೇ ಭಾರತ್‌ ರೈಲಿನ ಬಾಗಿಲುಗಳು ನಿಗದಿತ ನಿಲ್ದಾಣಗಳಲ್ಲಿ ಮಾತ್ರ ತೆರೆಯುವ ವ್ಯವಸ್ಥೆ ಹೊಂದಿರುವುದರಿಂದ, ಕಾನ್ಪುರ ಸೆಂಟ್ರಲ್‌ ನಿಲ್ದಾಣದಲ್ಲಿ ಕೆಳಗಿಳಿಯಲು ಅವರಿಗೆ ಸಾಧ್ಯವಾಗಲಿಲ್ಲ.

ಸ್ವಲ್ಪ ಸಮಯದಲ್ಲೇ ರೈಲು ನಿಲ್ದಾಣದಿಂದ ಹೊರಟಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 12 ಮಂದಿ ರೈಲಿನೊಳಗೆ ಉಳಿದುಕೊಂಡಿದ್ದಾರೆ. ಇತ್ತ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಅವರ ಕುಟುಂಬದ ಸದಸ್ಯರು ರೈಲು ಹೊರಟುಹೋಗುವುದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ.

ಪ್ರಮುಖ ಸುದ್ದಿ :-   ಟಾಟಾ ಸನ್ಸ್‌ನಲ್ಲಿ ‘ಹಿಂದಿನ ಬಾಗಿಲಿನ ಮೂಲಕ ಅಧಿಕಾರ ಕಬಳಿಕೆ’ ಆರೋಪ: ಮಲಸಹೋದರ ನೋಯೆಲ್ ವಿರುದ್ಧ ಜಿಮ್ಮಿ ಟಾಟಾ ಕಿಡಿ

ರೈಲಿನೊಳಗೆ ಸಿಲುಕಿಕೊಂಡಿದ್ದವರು ಬಾಗಿಲು ತೆರೆಯುವಂತೆ ರೈಲ್ವೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದರೆ, ರೈಲು ಚಲಿಸುತ್ತಿರುವ ಸಂದರ್ಭದಲ್ಲಿ ಸುರಕ್ಷತಾ ನಿಯಮಗಳು ಹಾಗೂ ತಾಂತ್ರಿಕ ನಿರ್ಬಂಧಗಳ ಕಾರಣಕ್ಕೆ ತಕ್ಷಣವೇ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಈ ಪರಿಸ್ಥಿತಿಯಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಈ ಕುರಿತು ತುಂಡ್ಲಾ ರೈಲ್ವೆ ನಿಯಂತ್ರಣ ಕೊಠಡಿಗೆ (ಕಂಟ್ರೋಲ್‌ ರೂಂ) ಮಾಹಿತಿ ನೀಡಿದ್ದಾರೆ. ಅಲ್ಲಿಂದ ಬಂದ ಸೂಚನೆಯಂತೆ ವಾರಾಣಸಿಯಿಂದ ನವದೆಹಲಿಗೆ ತೆರಳುತ್ತಿದ್ದ 22415 ಸಂಖ್ಯೆಯ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಭಾನುವಾರ ಬೆಳಗ್ಗೆ ಸುಮಾರು 10:49ಕ್ಕೆ ಇಟಾವಾ ಜಂಕ್ಷನ್‌ನಲ್ಲಿ ನಿಲ್ಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಇಟಾವಾ ಜಂಕ್ಷನ್‌ ನಿಲ್ದಾಣದ ಅಧೀಕ್ಷಕ ಪಿ.ಎಂ. ಮೀನಾ, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಇನ್‌ಸ್ಪೆಕ್ಟರ್‌ ದಿನೇಶ್‌ ಕುಮಾರ್‌ ಸಿಂಗ್‌ ಹಾಗೂ ಸರ್ಕಾರಿ ರೈಲ್ವೆ ಪೊಲೀಸ್‌ (ಜಿಆರ್‌ಪಿ) ಇನ್‌ಸ್ಪೆಕ್ಟರ್‌ ಯದುವೀರ ಸಿಂಗ್‌ ಪೊಲೀಸ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ.
ಬಳಿಕ ಆರ್‌ಪಿಎಫ್‌ ಮತ್ತು ಜಿಆರ್‌ಪಿ ಅಧಿಕಾರಿಗಳು ರೈಲಿನೊಳಗೆ ಸಿಲುಕಿದ್ದ ಎಲ್ಲ 12 ಮಂದಿಯನ್ನೂ ಸುರಕ್ಷಿತವಾಗಿ ಕೆಳಗಿಳಿಸಿದೆ.

ನಂತರ ಅವರನ್ನು ಆರ್‌ಪಿಎಫ್‌ ಠಾಣೆಗೆ ಕರೆದೊಯ್ಯಲಾಗಿದ್ದು, ರೈಲ್ವೆ ಅಧಿಕಾರಿಗಳು ಘಟನೆಯ ಕುರಿತು ವಿಚಾರಣೆ ನಡೆಸಿ ಅವರಿಂದ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.
ಯಾವುದೇ ಮಾನ್ಯ ಅನುಮತಿ ಇಲ್ಲದೆ ರೈಲಿನೊಳಗೆ ಹೋಗಿದ್ದು ಹಾಗೂ ರೈಲ್ವೆ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ರೈಲ್ವೆಯ ವಾಣಿಜ್ಯ ವಿಭಾಗವು ಪ್ರತಿಯೊಬ್ಬರಿಂದ ತಲಾ 3,000 ರೂ. ದಂಡ ವಸೂಲಿ ಮಾಡಿದ್ದು, ಒಟ್ಟು 36,000 ರೂ. ದಂಡ ಸಂಗ್ರಹಿಸಲಾಗಿದೆ. ದಂಡ ವಿಧಿಸಿದ ಬಳಿಕ, ಮಾನ್ಯವಾದ ಟಿಕೆಟ್‌ ಅಥವಾ ಅನುಮತಿ ಇಲ್ಲದೆ ರೈಲುಗಳೊಳಗೆ ಪ್ರವೇಶಿಸಬಾರದು ಎಂದು ಎಚ್ಚರಿಕೆ ನೀಡಿ ಎಲ್ಲರನ್ನೂ ತೆರಳಲು ಅನುಮತಿಸಲಾಗಿದೆ.
ಈ ಘಟನೆಯು ವಂದೇ ಭಾರತ್‌ನಂತಹ ಆಧುನಿಕ ರೈಲುಗಳಲ್ಲಿ ಪ್ರಯಾಣಿಸುವಾಗ ರೈಲ್ವೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ರಯಾಣಿಕರನ್ನು ಬೀಳ್ಕೊಡಲು ಅಥವಾ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಮಾಡಿದ ಸಣ್ಣ ನಿರ್ಲಕ್ಷ್ಯವೂ ಕೆಲವೊಮ್ಮೆ ದೊಡ್ಡ ಅನಾನುಕೂಲಕ್ಕೆ ಕಾರಣವಾಗುವುದಲ್ಲದೆ, ಭಾರಿ ದಂಡ ತೆರಬೇಕಾದ ಪರಿಸ್ಥಿತಿಯನ್ನೂ ತಂದೊಡ್ಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳನ್ನೇ ಶತ್ರುಗಳೆಂದು ನೋಡುತ್ತಿದೆ, ಸಿಜೆಪಿ ಹೋರಾಟ ದುರ್ಬಲಗೊಳಿಸಿದೆ ; ಕಾಂಗ್ರೆಸ್ ವಿರುದ್ಧ ಮಾಜಿ ಮಿತ್ರನ ವಾಗ್ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement