

ಶ್ರೀನಗರ: ಕಾಶ್ಮೀರದ ಕುಲ್ಗಾಮ್ನಲ್ಲಿ ಮಸೀದಿಯೊಳಗೆ ಅಡಗಿಕೊಂಡಿದ್ದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಕಮಾಂಡರ್, ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ. ಶರಣಾಗುವಂತೆ ಹಲವು ಗಂಟೆಗಳ ಕಾಲ ಮನವೊಲಿಸುವ ಪ್ರಯತ್ನ ನಡೆಸಿದರೂ ಆತ ಒಪ್ಪದ ಹಿನ್ನೆಲೆಯಲ್ಲಿ, ಕೊನೆಗೆ ಅಶ್ರುವಾಯು ಪ್ರಯೋಗಿಸಿ ಆತ ಮಸೀದಿಯಿಂದ ಹೊರಬರುವಂತೆ ಮಾಡಿದ ಭದ್ರತಾ ಪಡೆಗಳು, ಆತ ಓಡಲು ಯತ್ನಿಸಿದಾಗ ಗುಂಡಿಕ್ಕಿ ಹತ್ಯೆಗೈದಿವೆ.
ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾದರೆ ಜೀವ ಉಳಿಸುವುದಾಗಿ ಭದ್ರತಾ ಪಡೆಗಳು ಭರವಸೆ ನೀಡಿದ್ದವು. ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಸೇನಾಧಿಕಾರಿಗಳು ವಿಡಿಯೊ ಕರೆ ಮೂಲಕ ಸುದೀರ್ಘವಾಗಿ ಮಾತನಾಡಿ ಆತನ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ಮಸೀದಿಯೊಳಗೆ ಆಶ್ರಯ ಪಡೆದಿದ್ದ ಲತೀಫ್ ಭಟ್ ಮಾತ್ರ ಶರಣಾಗಲು ನಿರಾಕರಿಸಿದ್ದ. ಅಂತಿಮವಾಗಿ ಭದ್ರತಾ ಪಡೆಗಳು ಅಶ್ರುವಾಯು ಶೆಲ್ಗಳನ್ನು ಸಿಡಿಸಿ ಆತನನ್ನು ಮಸೀದಿಯೊಳಗಿಂದ ಹೊರಬರುವಂತೆ ಮಾಡಿದವು. ಹೊರಬಂದು ಓಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಗುಂಡು ಹೊಡೆಯಲಾಯಿತು.
ಈ ಮೂಲಕ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಲತೀಫ್ ಭಟ್ ಬೇಟೆ ಅಂತ್ಯಗೊಂಡಿದೆ. ಕಳೆದ ವಾರ ಕುಲ್ಗಾಮ್ನ ಸಿಆರ್ಪಿಎಫ್ (CRPF) ಶಿಬಿರದ ಮೇಲೆ ನಡೆದ ದಾಳಿಯ ಬಳಿಕ ಆತನಿಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಕುಲ್ಗಾಮ್ನಲ್ಲಿ ನಡೆದ ದಾಳಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಹಿಂದೆ ನಡೆದ ಹಲವು ಉಗ್ರ ದಾಳಿಗಳ ಹಿಂದೆಯೂ ಲತೀಫ್ ಭಟ್ ಕೈವಾಡವಿದೆ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ.
ಮಸೀದಿಯ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಕಾರ್ಯಾಚರಣೆ
ಬುಧವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಆರಂಭವಾದ ಈ ಎನ್ಕೌಂಟರ್ ಹಲವು ಗಂಟೆಗಳ ಕಾಲ ಮುಂದುವರಿಯಿತು. ಲತೀಫ್ ಭಟ್ ಮಸೀದಿಯೊಳಗೆ ಅಡಗಿಕೊಂಡಿದ್ದರಿಂದ ಭದ್ರತಾ ಪಡೆಗಳ ಮುಂದಿದ್ದ ಸವಾಲು ಕೇವಲ ಆತನನ್ನು ಹತ್ಯೆ ಮಾಡುವುದಾಗಿರಲಿಲ್ಲ. ಮಸೀದಿಗೆ ಹಾನಿಯಾಗದಂತೆ, ಧಾರ್ಮಿಕ ಸ್ಥಳದ ಪಾವಿತ್ರ್ಯವನ್ನು ಕಾಪಾಡಿಕೊಂಡು ಕಾರ್ಯಾಚರಣೆ ಪೂರ್ಣಗೊಳಿಸುವ ಸೂಕ್ಷ್ಮ ಜವಾಬ್ದಾರಿಯೂ ಅವರ ಮೇಲಿತ್ತು.
ಕುಲ್ಗಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಅನಾಯತ್ ಅಲಿ ಅವರು ಖುದ್ದಾಗಿ ಲತೀಫ್ ಭಟ್ ಜೊತೆ ಸುದೀರ್ಘ ವಿಡಿಯೊ ಕರೆ ನಡೆಸಿ ಶರಣಾಗುವಂತೆ ಸೂಚಿಸಿದರು. 9ನೇ ರಾಷ್ಟ್ರೀಯ ರೈಫಲ್ಸ್ (9 RR) ಘಟಕದ ಕಮಾಂಡಿಂಗ್ ಆಫೀಸರ್ ಕೂಡ ಪದೇಪದೆ ಆತನಿಗೆ ಶರಣಾಗುವಂತೆ ಸೂಚಿಸಿದರು. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಹೊರಬಂದರೆ ಆತನ ಜೀವಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಈ ವಿಡಿಯೊ ಕರೆಯ ದೃಶ್ಯಾವಳಿಗಳು ಇದೀಗ ಬಹಿರಂಗವಾಗಿದ್ದು, ಅದರಲ್ಲಿ ಅಧಿಕಾರಿಯೊಬ್ಬರು ಲತೀಫ್ ಭಟ್ಗೆ ‘ಹಮ್ ತುಮ್ಹಾರೆ ಸಾಥ್ ಹೈಂ’ (ನಾವು ನಿನ್ನೊಂದಿಗಿದ್ದೇವೆ) ಎಂದು ಹೇಳುತ್ತಿರುವುದು ಕೇಳಿಬಂದಿದೆ. ಶರಣಾಗುವಂತೆ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಆತ ಮಾತ್ರ ಒಪ್ಪಲಿಲ್ಲ.


ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಮಸೀದಿಯೊಳಗೆ ಅಶ್ರುವಾಯು ಶೆಲ್ಗಳನ್ನು ಸಿಡಿಸಿದವು. ಇದರಿಂದಾಗಿ ಹೊರಬರಬೇಕಾದ ಅನಿವಾರ್ಯತೆಗೆ ಸಿಲುಕಿದ ಲತೀಫ್ ಭಟ್ ಕಟ್ಟಡದಿಂದ ಹೊರಬಂದು ಓಡಲು ಯತ್ನಿಸಿದ. ಈ ವೇಳೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದವು.
ಕಾರ್ಯಾಚರಣೆ ಬಳಿಕ ಮಾತನಾಡಿದ ಎಸ್ಎಸ್ಪಿ ಅನಾಯತ್ ಅಲಿ, ‘ನಮ್ಮ ಕಡೆ ಸಮಯವೂ ಇತ್ತು, ಹಗಲಿನ ಬೆಳಕೂ ಇತ್ತು’ ಎಂದು ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿದರು.
ಲತೀಫ್ ಭಟ್ ಹತ್ಯೆಯ ಬೆನ್ನಲ್ಲೇ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮಹಾನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಭದ್ರತಾ ಪಡೆಗಳನ್ನು ಅಭಿನಂದಿಸಿ ಸಂದೇಶ ಪ್ರಕಟಿಸಿದರು. ಆದರೆ, ಅವರ ಸಂದೇಶದಲ್ಲಿ ಕಠಿಣ ಎಚ್ಚರಿಕೆಯ ಧ್ವನಿಯೂ ಇತ್ತು. ‘ಅಭಿನಂದನೆಗಳು ಗೆಳೆಯರೇ. ಕೆಲವು ತಿನಿಸುಗಳನ್ನು ತಣ್ಣಗಾಗಿಯೇ ಬಡಿಸಿದಾಗ ಹೆಚ್ಚು ರುಚಿಕರವಾಗಿರುತ್ತವೆ, ತಣ್ಣನೆಯ ವಾತಾವರಣದಲ್ಲಿಯೂ ಸಹ’ ಎಂಬ ಅರ್ಥದ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ.
ಕಾರ್ಯಾಚರಣೆ ಆರಂಭವಾಗಿದ್ದು ಹೇಗೆ?
ಕಳೆದ ಸೋಮವಾರ ಕುಲ್ಗಾಮ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಲತೀಫ್ ಭಟ್ನ ಸಹಚರ ಉಮರ್ ನಿಸಾರ್ ದಾರ್ ಹತ್ಯೆಯಾದ ಬಳಿಕ ಭದ್ರತಾ ಸಂಸ್ಥೆಗಳು ಲತೀಫ್ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದವು. ಸೋಮವಾರ ನಡೆದ ಕಾರ್ಯಾಚರಣೆಯ ವೇಳೆ ಲತೀಫ್ ಭಟ್ ಭದ್ರತಾ ಪಡೆಗಳ ಕಣ್ತಪ್ಪಿಸಿ ಪರಾರಿಯಾಗಿದ್ದ. ಹೀಗಾಗಿ ಆತನ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.
ನಂತರ ಲಭ್ಯವಾದ ಹೊಸ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಆತ ಅಡಗಿರುವ ಸ್ಥಳವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದವು. ಬುಧವಾರ ಮುಂಜಾನೆ ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ತಂಡವು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಲತೀಫ್ ಭಟ್ ಇರುವ ಸ್ಥಳವನ್ನು ಪತ್ತೆಹಚ್ಚಿದ ಪಡೆಗಳು ಆತನೊಂದಿಗೆ ಸಂಪರ್ಕ ಸಾಧಿಸಿದವು. ಬಳಿಕ ಗುಂಡಿನ ಚಕಮಕಿ ಆರಂಭವಾಯಿತು. ಹಲವು ಗಂಟೆಗಳ ಕಾರ್ಯಾಚರಣೆಯ ಅಂತ್ಯದಲ್ಲಿ ಲತೀಫ್ ಭಟ್ ಹತನಾದ.
ಸಿಆರ್ಪಿಎಫ್ ಶಿಬಿರದ ಮೇಲಿನ ದಾಳಿಯಲ್ಲಿ ಇಬ್ಬರ ಕೈವಾಡ?
ಕಳೆದ ನವೆಂಬರ್ 11ರಂದು ಕುಲ್ಗಾಮ್ನ ಅಖ್ರಾನ್ ಪ್ರದೇಶದಲ್ಲಿರುವ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ದಾಳಿಯಲ್ಲಿ ಮೂವರು ಅರೆಸೈನಿಕ ಸಿಬ್ಬಂದಿ ಗಾಯಗೊಂಡಿದ್ದರು.
ಉಮರ್ ನಿಸಾರ್ ದಾರ್ ಈ ಹಿಂದೆ ಬ್ರೆಡ್ ತಯಾರಿಸುವ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಬಳಿಕ ಮನೆಯಿಂದ ನಾಪತ್ತೆಯಾಗಿದ್ದ ಎಂದು ವರದಿಯಾಗಿದೆ. ಆತ ಕಳೆದ ಆರು ತಿಂಗಳಿನಿಂದ ಲತೀಫ್ ಭಟ್ಗೆ ಆಶ್ರಯ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದ ಎಂದು ಭದ್ರತಾ ಅಧಿಕಾರಿಗಳು ಆರೋಪಿಸಿದ್ದಾರೆ. ದಾಳಿಗೂ ಮುನ್ನ ಇಬ್ಬರೂ ಹಲವು ಪ್ರದೇಶಗಳಲ್ಲಿ ಸುತ್ತಾಡಿ, ಭದ್ರತಾ ಪಡೆಗಳ ಚಲನವಲನ ಹಾಗೂ ದಾಳಿಗೆ ಸೂಕ್ತ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎನ್ನಲಾಗಿದೆ.
ಅಧಿಕಾರಿಗಳ ಪ್ರಕಾರ, ಉಮರ್ ನಿಸಾರ್ ದಾರ್ ಹತ್ಯೆಯಾಗುವುದಕ್ಕೆ ಕೇವಲ ಒಂದು ವಾರ ಮುನ್ನ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಅಂಗಸಂಸ್ಥೆ ಎಂದು ಹೇಳಲಾಗುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ.
ಮಂಗಳವಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಲತೀಫ್ ಭಟ್ ಮತ್ತು ಉಮರ್ ನಿಸಾರ್ ದಾರ್ ದಾಳಿಗೂ ಮುನ್ನ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ನವೆಂಬರ್ 10ರಂದು ಇಬ್ಬರೂ ನಡೆಸಿದ ಚಲನವಲನಗಳು ಹಾಗೂ ದಾಳಿಯ ಬಳಿಕ ಅಲ್ಲಿಂದ ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಲತೀಫ್ ಭಟ್ ಮತ್ತು ಉಮರ್ ನಿಸಾರ್ ದಾರ್ ಇಬ್ಬರೂ ಮಿರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಿದ್ದರು. ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸೂಕ್ತ ಸ್ಥಳಗಳನ್ನು ಗುರುತಿಸುವುದು ಹಾಗೂ ಕಾರ್ಯಾಚರಣೆಗೆ ಯೋಜನೆ ರೂಪಿಸುವುದು ಅವರ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ಲತೀಫ್ ಭಟ್?
ಕುಲ್ಗಾಮ್ ಎಸ್ಎಸ್ಪಿ ಅನಾಯತ್ ಅಲಿ ನೀಡಿರುವ ಮಾಹಿತಿಯ ಪ್ರಕಾರ, ಲತೀಫ್ ಭಟ್ ಬಡಗಿ ಕೆಲಸ ಮಾಡುತ್ತಿದ್ದ. ಈತ 2025ರ ನವೆಂಬರ್ 18ರಂದು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ. ಆತ ಸ್ವಯಂ ಮೂಲಭೂತವಾದಿ ಚಿಂತನೆಗಳಿಗೆ ಒಳಗಾಗಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗಡಿಯಾಚೆಯಿಂದ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದ ಲತೀಫ್ ಭಟ್, ಕಾಶ್ಮೀರದಲ್ಲಿ ಶಾಂತಿ, ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಪೊಲೀಸರಿಗೆ ಬೇಕಾಗಿದ್ದ ಅತ್ಯಂತ ಪ್ರಮುಖ ಉಗ್ರರ ಪೈಕಿ ಲತೀಫ್ ಭಟ್ ಕೂಡ ಒಬ್ಬನಾಗಿದ್ದ. ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದ್ದ ಸ್ಥಳೀಯ ಉಗ್ರರ ಪೈಕಿ ಆತ ಮಾತ್ರ ಬದುಕುಳಿದಿದ್ದ ಕೊನೆಯ ಉಗ್ರನಾಗಿದ್ದ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.
ಕುಲ್ಗಾಮ್ನ ಅಖ್ರಾನ್ ಪ್ರದೇಶದಲ್ಲಿ ನವೆಂಬರ್ 11ರಂದು ನಡೆದ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲಿನ ದಾಳಿಯಲ್ಲಿ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಭಾಗಿಯಾಗಿದ್ದರು ಎಂಬುದು ಪೊಲೀಸರ ಪ್ರಮುಖ ಆರೋಪವಾಗಿತ್ತು. ಈ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.
ಇಷ್ಟೇ ಅಲ್ಲದೆ, ಕಣಿವೆಯಲ್ಲಿ ನಡೆದ ಇನ್ನೂ ಹಲವು ಉಗ್ರ ದಾಳಿಗಳಲ್ಲಿಯೂ ಲತೀಫ್ ಭಟ್ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಜುಲೈ 22ರಂದು ಅನಂತ್ನಾಗ್ನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ನಡೆದ ಉಗ್ರ ದಾಳಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದ. ಈ ದಾಳಿಯ ಹಿಂದೆಯೂ ಲತೀಫ್ ಭಟ್ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದರು.
ಅದೇ ರೀತಿ, ಆಗಸ್ಟ್ 1ರಂದು ಕುಲ್ಗಾಮ್ನಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಹತ್ಯೆಗೈದ ಘಟನೆಯಲ್ಲಿಯೂ ಲತೀಫ್ ಭಟ್ ಪಾತ್ರವಿದೆ ಎಂಬ ಅನುಮಾನ ಪೊಲೀಸರಿಗಿತ್ತು.
ಹೀಗೆ ಕಾಶ್ಮೀರ ಕಣಿವೆಯಲ್ಲಿ ಹಲವು ದಾಳಿಗಳ ಆರೋಪ ಎದುರಿಸುತ್ತಿದ್ದ ಹಾಗೂ ಭದ್ರತಾ ಪಡೆಗಳ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಲಷ್ಕರ್ ಕಮಾಂಡರ್ ಲತೀಫ್ ಭಟ್, ಕೊನೆಗೂ ಬುಧವಾರದ ಕಾರ್ಯಾಚರಣೆಯಲ್ಲಿ ಹತನಾಗುವುದರೊಂದಿಗೆ ಹಲವು ದಿನಗಳಿಂದ ನಡೆಯುತ್ತಿದ್ದ ಆತನ ಬೇಟೆಗೆ ತೆರೆ ಬಿದ್ದಿದೆ.



ನಿಮ್ಮ ಕಾಮೆಂಟ್ ಬರೆಯಿರಿ