

ತಿರುವನಂತಪುರಂ: ಕೇರಳದ ಹಿರಿಯ ಕಾಂಗ್ರೆಸ್ ನಾಯಕ, ದಿವಂಗತ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಗೆ ಸೇರುವ ತಮ್ಮ ನಿರ್ಧಾರವನ್ನು ‘ಆತುರದಲ್ಲಿ ಮಾಡಿದ ತಪ್ಪು’ ಎಂದು ಬಣ್ಣಿಸಿರುವ ಅವರು, ಮತ್ತೆ ಕಾಂಗ್ರೆಸ್ಗೆ ಮರಳುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪದ್ಮಜಾ, ಪಕ್ಷಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಅದರ ಸಿದ್ಧಾಂತಕ್ಕೂ ತಮ್ಮ ಆಲೋಚನೆಗಳಿಗೂ ಸಂಪೂರ್ಣ ಹೊಂದಾಣಿಕೆ ಇಲ್ಲ ಎಂಬುದು ಅರಿವಿಗೆ ಬಂದಿತ್ತು ಎಂದು ಹೇಳಿದ್ದಾರೆ. ಆದರೆ, ಬಿಜೆಪಿಯ ಬಗ್ಗೆಯಾಗಲಿ, ಅದರ ನಾಯಕರ ಬಗ್ಗೆಯಾಗಲಿ ತಮಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷದ ನಾಯಕರು ತಮ್ಮ ಜೊತೆ ಉತ್ತಮವಾಗಿಯೇ ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹಠಾತ್ ರಾಜೀನಾಮೆಗೆ ಕಾರಣವೇನು?
ಬಿಜೆಪಿಯ ಸಿದ್ಧಾಂತಕ್ಕೂ ತಮ್ಮ ಸಿದ್ಧಾಂತಕ್ಕೂ ಹೊಂದಾಣಿಕೆಯಾಗದಿರುವುದೇ ಪಕ್ಷ ತೊರೆಯಲು ಪ್ರಮುಖ ಕಾರಣ ಎಂದು ಪದ್ಮಜಾ ಹೇಳಿದ್ದಾರೆ.
“ಅವರ ಸಿದ್ಧಾಂತ ಮತ್ತು ನನ್ನ ಸಿದ್ಧಾಂತ ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗಲಿಲ್ಲ. ಬಿಜೆಪಿಗೆ ಸೇರಿದ ಆರಂಭದಲ್ಲೇ ಈ ವಿಷಯ ನನಗೆ ಅರ್ಥವಾಗಿತ್ತು. ಆದರೆ, ಒಮ್ಮೆ ಒಂದು ಪಕ್ಷಕ್ಕೆ ಸೇರಿದ ಬಳಿಕ ತಕ್ಷಣವೇ ರಾಜೀನಾಮೆ ನೀಡಿ ಹೊರಬರುವುದು ಸರಿಯಲ್ಲವಲ್ಲ? ಬಿಜೆಪಿಯ ಬಗ್ಗೆ ನನಗೆ ಒಂದೇ ಒಂದು ದೂರು ಅಥವಾ ಅಸಮಾಧಾನವಿಲ್ಲ. ಅಲ್ಲಿನ ನಾಯಕರು ನನ್ನ ಜೊತೆ ಉತ್ತಮವಾಗಿ ನಡೆದುಕೊಂಡಿದ್ದರಾಎ. ಅವರು ಯಾವತ್ತೂ ಕೆಟ್ಟದಾಗಿ ನಡೆದುಕೊಂಡಿಲ್ಲ” ಎಂದು ಅವರು ಹೇಳಿದ್ದಾರೆ.
2024ರ ಮಾರ್ಚ್ 7ರಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಪದ್ಮಜಾ, ಇದೀಗ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ ಚಂದ್ರಶೇಖರ ಅವರಿಗೆ ಸಲ್ಲಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮಂಡಳಿ ಸದಸ್ಯೆಯಾಗಿದ್ದ ಪದ್ಮಜಾ, ರಾಜೀನಾಮೆ ಪತ್ರದಲ್ಲಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ.


ಕಾಂಗ್ರೆಸ್ಗೆ ಮರಳುವ ಬಗ್ಗೆ ಇನ್ನೂ ನಿರ್ಧಾರವಿಲ್ಲ
ಬಿಜೆಪಿಗೆ ರಾಜೀನಾಮೆ ನೀಡಿರುವುದರಿಂದ ಮತ್ತೆ ಕಾಂಗ್ರೆಸ್ಗೆ ಮರಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಇನ್ನೂ ಯಾವುದನ್ನೂ ನಿರ್ಧರಿಸಿಲ್ಲ. ನಾನು ಕಾಂಗ್ರೆಸ್ಗೆ ಮರಳಿಲ್ಲ. ಈಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪದ್ಮಜಾ ಬಿಜೆಪಿ ತೊರೆದಿದ್ದಾರೆ ಎಂಬ ಊಹಾಪೋಹಗಳನ್ನೂ ಅವರು ತಳ್ಳಿಹಾಕಿದ್ದಾರೆ.
“ಅದೇ ಕಾರಣವಾಗಿದ್ದರೆ ಚುನಾವಣೆಗೆ ಮುನ್ನವೇ ನಾನು ಕಾಂಗ್ರೆಸ್ಗೆ ಮರಳಬಹುದಿತ್ತಲ್ಲವೇ? ಯುಡಿಎಫ್ ಅಧಿಕಾರಕ್ಕೆ ಬರಲಿದೆ ಎಂಬುದು ನನಗೆ ಗೊತ್ತಿತ್ತು. ಹಾಗಿದ್ದ ಮೇಲೆ ಚುನಾವಣೆಗೆ ಮುನ್ನವೇ ನಾನು ಏಕೆ ರಾಜೀನಾಮೆ ನೀಡಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಆತುರದ ನಿರ್ಧಾರ ಕೈಗೊಂಡಿದ್ದೆ
ತಾವು ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದು ಹಠಾತ್ ಆಗಿ ಮತ್ತು ಭಾವನಾತ್ಮಕ ನೋವಿನ ಹಿನ್ನೆಲೆಯಲ್ಲಿ ಎಂದು ಪದ್ಮಜಾ ಬಹಿರಂಗಪಡಿಸಿದ್ದಾರೆ. ಯಾರ ಬಳಿಯೂ ಯಾವುದೇ ಹುದ್ದೆ ಅಥವಾ ಸ್ಥಾನಮಾನ ಕೇಳಿಕೊಂಡು ತಾವು ಬಿಜೆಪಿಗೆ ಹೋಗಿರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
“ನಾನು ಒಂದೇ ದಿನದಲ್ಲಿ, ಯಾವುದೇ ಪೂರ್ವಯೋಜನೆಯಿಲ್ಲದೆ ಆ ನಿರ್ಧಾರ ಕೈಗೊಂಡಿದ್ದೆ. ಯಾರೊಂದಿಗೂ ಮಾತನಾಡಲು ನನಗೆ ಸಮಯವಿರಲಿಲ್ಲ. ನನ್ನ ಆಪ್ತ ಸ್ನೇಹಿತರಿಗೂ ಈ ವಿಷಯ ತಿಳಿಸಲು ಸಾಧ್ಯವಾಗಿರಲಿಲ್ಲ. ನಾನು ತೀವ್ರ ನೋವು ಮತ್ತು ಬೇಸರದಲ್ಲಿದ್ದೆ. ಅದಕ್ಕಾಗಿಯೇ ಬಿಜೆಪಿಗೆ ಹೋದೆ. ಪಕ್ಷದಿಂದ ನನಗೆ ಇದು ಬೇಕು, ಅದು ಬೇಕು ಎಂದು ಕೇಳಲು ಕೂಡ ನನಗೆ ಸಮಯ ಸಿಗಲಿಲ್ಲ” ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ನಿರೀಕ್ಷಿತ ಹುದ್ದೆ ಸಿಗದ ಕಾರಣಕ್ಕೆ ಪದ್ಮಜಾ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳನ್ನೂ ಅವರು ನಿರಾಕರಿಸಿದ್ದಾರೆ. ಅದರಲ್ಲೂ ಇಂಡಿಯಾ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಷನ್ (ಐಟಿಡಿಸಿ) ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರೀಕ್ಷಿಸಿದ್ದರು, ಆದರೆ ಅವಕಾಶ ಸಿಗದ ಕಾರಣ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಗಳು ಆಧಾರರಹಿತ ಎಂದು ಹೇಳಿದ್ದಾರೆ. “ನಾನು ಬಿಜೆಪಿಯಿಂದ ಏನನ್ನೂ ನಿರೀಕ್ಷಿಸಿರಲಿಲ್ಲ. ಅವರೂ ನನಗೆ ಯಾವುದೇ ಭರವಸೆ ನೀಡಿರಲಿಲ್ಲ. ಪತ್ರಿಕೆಗಳಲ್ಲಿ ಇಂತಹ ಸುದ್ದಿಗಳನ್ನು ಬರೆಯಲಾಗುತ್ತಿದೆ, ಸೃಷ್ಟಿಸಲಾಗುತ್ತಿದೆ. ಅದಕ್ಕೆ ನಾನೇನು ಹೇಳಲಿ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿದ್ದಾಗಲೂ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದೆ
ಬಿಜೆಪಿಯಲ್ಲಿದ್ದ ಅವಧಿಯಲ್ಲಿಯೂ ಕಾಂಗ್ರೆಸ್ ನಾಯಕರ ಜೊತೆಗಿನ ಉತ್ತಮ ಸಂಪರ್ಕ ಮುಂದುವರಿಸಿದ್ದೆ ಎಂದು ಪದ್ಮಜಾ ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ಗೆ ಮರಳುವ ಕುರಿತು ಯಾವುದೇ ವಿಶೇಷ ಮಾತುಕತೆ ನಡೆಸಿರಲಿಲ್ಲ ಎಂದು ಹೇಳಿದ್ದಾರೆ.
ತಮ್ಮ ಬಿಜೆಪಿ ರಾಜೀನಾಮೆ ನಿರ್ಧಾರದ ಬಗ್ಗೆ ಹಿರಿಯ ಸಹೋದರ ಹಾಗೂ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಅವರ ಜೊತೆ ಮಾತ್ರ ಮಾತನಾಡಿದ್ದಾಗಿ ಅವರು ತಿಳಿಸಿದ್ದಾರೆ. ಇತರ ಯಾವುದೇ ಕಾಂಗ್ರೆಸ್ ನಾಯಕರೊಂದಿಗೆ ಈ ಕುರಿತು ವಿಶೇಷ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ