ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಖಲಿಸ್ತಾನಿ ಉಗ್ರ ಗುರುಪತ್ವಂತ್ ಪನ್ನುನ್ ಹತ್ಯೆ ಸಂಚು: ಭಾರತೀಯನಿಗೆ ಅಮೆರಿಕದಲ್ಲಿ 19 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

ನ್ಯೂಯಾರ್ಕ್: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹಾಗೂ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸುಪಾರಿ ನೀಡಿದ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾಗೆ ಅಮೆರಿಕದ ನ್ಯಾಯಾಲಯ ಶುಕ್ರವಾರ 19 ವರ್ಷ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ನಿಖಿಲ್ ಗುಪ್ತಾ ತಪ್ಪೊಪ್ಪಿಕೊಂಡಿದ್ದರು.
55 ವರ್ಷದ ನಿಖಿಲ್ ಗುಪ್ತಾ ವಿರುದ್ಧ ಹತ್ಯೆಗೆ ಸುಪಾರಿ ನೀಡುವ ಸಂಚು, ಸುಪಾರಿ ಹತ್ಯೆಗೆ ಸಂಬಂಧಿಸಿದ ಪಿತೂರಿ ಹಾಗೂ ಹಣ ಅಕ್ರಮ ವರ್ಗಾವಣೆ ಸಂಚು ಸೇರಿದಂತೆ ಮೂರು ಆರೋಪಗಳನ್ನು ಹೊರಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಅವರು ಈ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿದ್ದ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಗುರುಪತ್ವಂತ್ ಸಿಂಗ್ ಪನ್ನುನ್ ನನ್ನು ಹತ್ಯೆ ಮಾಡಲು ನಡೆಸಿದ ಪ್ರಯತ್ನಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿತ್ತು.
ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ನ್ಯಾಯಾಲಯದ ನ್ಯಾಯಾಧೀಶ ವಿಕ್ಟರ್ ಮರ್ರೆರೊ ಅವರು ಶುಕ್ರವಾರ ನಡೆದ 80 ನಿಮಿಷಗಳ ವಿಚಾರಣೆಯ ಬಳಿಕ ನಿಖಿಲ್ ಗುಪ್ತಾಗೆ 235 ತಿಂಗಳುಗಳ ಜೈಲು ಶಿಕ್ಷೆ ಪ್ರಕಟಿಸಿದರು.
ಪನ್ನುನ್ ಭಾರತ ಸರ್ಕಾರದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದು, ಆತನ ಸಂಘಟನೆಯಾದ ‘ಸಿಖ್ಸ್ ಫಾರ್ ಜಸ್ಟಿಸ್’ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಪನ್ನುನ್ ಅಮೆರಿಕ ಮತ್ತು ಕೆನಡಾ ಎರಡೂ ದೇಶಗಳ ಪೌರತ್ವ ಹೊಂದಿರುವ ವ್ಯಕ್ತಿ. ತನ್ನ ಜೀವಕ್ಕೆ ಅಪಾಯವಿರುವ ವಿಚಾರ ಬಹಿರಂಗವಾದ ಬಳಿಕ ಕಳೆದ ಸುಮಾರು ನಾಲ್ಕು ವರ್ಷಗಳಿಂದ (1,200 ದಿನಗಳಿಗೂ ಹೆಚ್ಚು ಕಾಲ) ತಾನು ವಕೀಲನಾಗಿ ನಡೆಸುತ್ತಿದ್ದ ಸಾಮಾನ್ಯ ವೃತ್ತಿಪರ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಪನ್ನುನ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ.
ಇದೇ ವೇಳೆ, ಪನ್ನುನ್ ಹತ್ಯೆ ಸಂಚಿನಲ್ಲಿ ತನ್ನ ಪಾತ್ರದ ಬಗ್ಗೆ ನಿಖಿಲ್ ಗುಪ್ತಾ ಸಂಕ್ಷಿಪ್ತ ಹೇಳಿಕೆ ನೀಡಿದ್ದು, ನಡೆದ ಘಟನೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ. ವಿಚಾರಣೆಗೂ ಮುನ್ನ ನ್ಯೂಯಾರ್ಕ್‌ನ ನ್ಯಾಯಾಲಯದ ಹೊರಗೆ ಪನ್ನುನ್ ಬೆಂಬಲಿಗರು ಜಮಾಯಿಸಿದ್ದರು. ನಿಖಿಲ್ ಗುಪ್ತಾ ಸೇರಿದಂತೆ ಇತರರ ಪ್ರತಿಕೃತಿಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು.
ಆದರೆ, ಈ ಹತ್ಯೆ ಸಂಚಿನಲ್ಲಿ ಭಾರತದ ಯಾವುದೇ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿದೆ.
ಅಮೆರಿಕದ ಸರ್ಕಾರಿ ಅಭಿಯೋಜಕರ ಆರೋಪದ ಪ್ರಕಾರ, 2023ರ ಮೇ ತಿಂಗಳಲ್ಲಿ ಆಗಿನ ಭಾರತೀಯ ಸರ್ಕಾರಿ ಉದ್ಯೋಗಿಯಾಗಿದ್ದ ವಿಕಾಸ ಯಾದವ್ ಅವರು ಪನ್ನುನ್‌ನನ್ನು ಹತ್ಯೆ ಮಾಡಲು ಸುಪಾರಿ ಹಂತಕನನ್ನು ನೇಮಿಸುವಂತೆ ನಿಖಿಲ್ ಗುಪ್ತಾನನ್ನು ಸಂಪರ್ಕಿಸಿದ್ದರು.
ಅಮೆರಿಕದ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯ ಪ್ರಕಾರ, ವಿಕಾಸ ಯಾದವ್ ಅವರು ಭಾರತದ ಸಂಪುಟ ಸಚಿವಾಲಯದಲ್ಲಿ (ಕ್ಯಾಬಿನೆಟ್ ಸೆಕ್ರೆಟರಿಯೇಟ್) ಉದ್ಯೋಗಿಯಾಗಿದ್ದರು. ಈ ಸಚಿವಾಲಯದ ವ್ಯಾಪ್ತಿಯಲ್ಲಿಯೇ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ-RAW) ಕಾರ್ಯನಿರ್ವಹಿಸುತ್ತದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ವಿಕಾಸ ಯಾದವ್ ಅವರ ಸೂಚನೆಯಂತೆ ನಿಖಿಲ್ ಗುಪ್ತಾ, ಅಪರಾಧ ಜಗತ್ತಿನ ಸಂಪರ್ಕ ಹೊಂದಿರುವ ವ್ಯಕ್ತಿ ಎಂದು ತಾವು ಭಾವಿಸಿದ್ದ ಮತ್ತೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಆದರೆ, ಆ ವ್ಯಕ್ತಿ ವಾಸ್ತವದಲ್ಲಿ ಅಮೆರಿಕದ ಮಾದಕವಸ್ತು ನಿಗ್ರಹ ಆಡಳಿತ ಸಂಸ್ಥೆಯಾದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ಜೊತೆ ಕೆಲಸ ಮಾಡುತ್ತಿದ್ದ ಗೌಪ್ಯ ಮಾಹಿತಿದಾರನಾಗಿದ್ದ ಎಂದು ಅಮೆರಿಕದ ಅಭಿಯೋಜಕರು ತಿಳಿಸಿದ್ದಾರೆ.
ನಂತರ ಆ ಮಾಹಿತಿದಾರನು ನಿಖಿಲ್ ಗುಪ್ತಾನನ್ನು ಸುಪಾರಿ ಹಂತಕನೊಬ್ಬನಿಗೆ ಪರಿಚಯಿಸಿದ್ದ. ಆದರೆ, ಆತ ನಿಜವಾದ ಸುಪಾರಿ ಹಂತಕನಾಗಿರಲಿಲ್ಲ. ಬದಲಾಗಿ ಡಿಇಎ ನಡೆಸುತ್ತಿದ್ದ ರಹಸ್ಯ ಕಾರ್ಯಾಚರಣೆಯ ಭಾಗವಾಗಿದ್ದ ಅಧಿಕಾರಿಯಾಗಿದ್ದ ಎಂದು ಆರೋಪಿಸಲಾಗಿದೆ.
ಪನ್ನುನ್‌ನನ್ನು ಹತ್ಯೆ ಮಾಡಲು ವಿಕಾಶ್ ಯಾದವ್ 1 ಲಕ್ಷ ಅಮೆರಿಕನ್ ಡಾಲರ್ (ಸುಮಾರು 83 ಲಕ್ಷ ರೂ.) ಪಾವತಿಸಲು ಒಪ್ಪಿಕೊಂಡಿದ್ದರು ಎಂದು ಅಮೆರಿಕದ ಅಭಿಯೋಜಕರು ಆರೋಪಿಸಿದ್ದಾರೆ. ಈ ಮೊತ್ತದಲ್ಲಿ 15,000 ಡಾಲರ್‌ಗಳನ್ನು (ಸುಮಾರು 12.5 ಲಕ್ಷ ರೂ.) ಮುಂಗಡವಾಗಿ ನ್ಯೂಯಾರ್ಕ್‌ನಲ್ಲಿ ನೀಡಲಾಗಿತ್ತು ಎನ್ನಲಾಗಿದೆ. ಇದಲ್ಲದೆ, ಪನ್ನುನ್ ವಾಸವಾಗಿದ್ದ ಮನೆಯ ವಿಳಾಸ, ದೂರವಾಣಿ ಸಂಖ್ಯೆಗಳು, ಆತನ ದೈನಂದಿನ ಚಟುವಟಿಕೆಗಳ ವಿವರಗಳು ಹಾಗೂ ಆತನ ಮೇಲೆ ನಿಗಾ ಇರಿಸಿ ತೆಗೆದಿದ್ದ ಛಾಯಾಚಿತ್ರಗಳನ್ನು ನಿಖಿಲ್ ಗುಪ್ತಾ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದವರಿಗೆ ರವಾನಿಸಿದ್ದ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನಿಖಿಲ್ ಗುಪ್ತಾನನ್ನು 2023ರ ಜೂನ್ 30ರಂದು ಜೆಕ್ ಗಣರಾಜ್ಯದ ಪ್ರೇಗ್‌ನಲ್ಲಿ ಬಂಧಿಸಲಾಗಿತ್ತು. ಬಳಿಕ 2024ರ ಜೂನ್‌ನಲ್ಲಿ ಅಮೆರಿಕಕ್ಕೆ ಹಸ್ತಾಂತರಿಸಲಾಯಿತು. ಈ ಪ್ರಕರಣದಲ್ಲಿ ಆರೋಪಿಯಾಗಿರುವ ವಿಕಾಸ ಯಾದವ್ ಮಾತ್ರ ಇನ್ನೂ ಅಮೆರಿಕದ ವಶಕ್ಕೆ ಸಿಕ್ಕಿಲ್ಲ.
ಭಾರತ ಸರ್ಕಾರ ಹೇಳಿದ್ದೇನು?
ನಿಖಿಲ್ ಗುಪ್ತಾ ವಿರುದ್ಧದ ಆರೋಪಪಟ್ಟಿಯನ್ನು ಅಮೆರಿಕ 2023ರ ನವೆಂಬರ್‌ನಲ್ಲಿ ಸಾರ್ವಜನಿಕಗೊಳಿಸಿದ ಮರುದಿನವೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿತ್ತು. ಭಾರತದ ಸರ್ಕಾರಿ ಅಧಿಕಾರಿಯೊಬ್ಬರು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಗಂಭೀರ ಕಳವಳದ ಸಂಗತಿ ಎಂದು ಬಣ್ಣಿಸಿದ್ದ ಸಚಿವಾಲಯ, ಇಂತಹ ಕೃತ್ಯಗಳು ಭಾರತ ಸರ್ಕಾರದ ನೀತಿಗೆ ವಿರುದ್ಧವಾಗಿವೆ ಎಂದು ಸ್ಪಷ್ಟಪಡಿಸಿತ್ತು.
ಅಮೆರಿಕ ಮಾಡಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸಲು ಭಾರತ ಸರ್ಕಾರ ತನಿಖಾ ಸಮಿತಿಯೊಂದನ್ನು ರಚಿಸಿತ್ತು. 2025ರ ಜನವರಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಸಮಿತಿಯ ಶಿಫಾರಸುಗಳ ಕುರಿತು ಮಾಹಿತಿ ನೀಡಿತ್ತು. ಅದರ ಪ್ರಕಾರ, ಈ ಪ್ರಕರಣದಲ್ಲಿ ಈ ಹಿಂದೆ ಅಪರಾಧ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ ಹಿನ್ನೆಲೆಯ ವಿವರಗಳು ತನಿಖೆಯಲ್ಲಿ ಬೆಳಕಿಗೆ ಬಂದಿದ್ದ ‘ಒಬ್ಬ ವ್ಯಕ್ತಿ’ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿತ್ತು. ಆದರೆ, ಆ ವ್ಯಕ್ತಿ ವಿಕಾಸ ಯಾದವ್ ಎಂಬುದನ್ನು ಸಚಿವಾಲಯ ಸ್ಪಷ್ಟವಾಗಿ ತಿಳಿಸಿರಲಿಲ್ಲ.
ಅಜಿತ್ ದೋವಲ್, ಮಾಜಿ ರಾ ಮುಖ್ಯಸ್ಥರ ವಿರುದ್ಧವೂ ಪನ್ನುನ್ ದಾವೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪನ್ನುನ್ ಅಮೆರಿಕದ ನ್ಯಾಯಾಲಯದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಮಾಜಿ ರಾ ಮುಖ್ಯಸ್ಥ ಸಾಮಂತ್ ಗೋಯೆಲ್ ವಿರುದ್ಧವೂ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾನೆ. ಆದರೆ, ಭಾರತ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿದೆ. ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಇಂತಹ ಆಧಾರರಹಿತ ಮೊಕದ್ದಮೆಗಳನ್ನು ನಾವು ತಿರಸ್ಕರಿಸುತ್ತೇವೆ” ಎಂದು ಹೇಳಿದೆ.
ನವೆಂಬರ್ 13ರಂದು ಅಮೆರಿಕದ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಅಜಿತ್ ದೋವಲ್ ಮತ್ತು ಸಾಮಂತ್ ಗೋಯೆಲ್ ಅವರಿಗೆ ಸಂಬಂಧಿಸಿದ ಸಮನ್ಸ್‌ಗಳನ್ನು ದೆಹಲಿಯ ನ್ಯಾಯಾಲಯಗಳ ಮೂಲಕ ತಲುಪಿಸುವಂತೆ ನಿರ್ದೇಶಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಭಾರತ ಸರ್ಕಾರದ ಪ್ರತಿಕ್ರಿಯೆ ಹೊರಬಿದ್ದಿದೆ.
ಇದಕ್ಕೂ ಮೊದಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, “ನಮ್ಮ ಉನ್ನತ ಅಧಿಕಾರಿಗಳ ವಿರುದ್ಧ ಮಾಡಲಾಗುತ್ತಿರುವ ಕಟ್ಟುಕಥೆಯ ಹಾಗೂ ದುರುದ್ದೇಶಪೂರಿತ ದಾಳಿಗಳನ್ನು ನಾವು ತಿರಸ್ಕರಿಸುತ್ತೇವೆ” ಎಂದು ಹೇಳಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement