ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ವಿಪರೀತ ಚಳಿಯಲ್ಲಿ ಕಾಡಿನಲ್ಲಿ ದಾರಿತಪ್ಪಿ ಸಾವಿನ ದವಡೆಗೆ ಸಿಲುಕಿದ್ದ ʼಮರೆವಿನ ಕಾಯಿಲೆʼಯ ವೃದ್ಧನ ಜೀವ ಉಳಿಸಿದ ಸಾಕು ನಾಯಿ !

ಮಾತು ಬಾರದಿದ್ದರೂ ನಾಯಿಯು ತನ್ನ ಪ್ರೀತಿ, ನಿಷ್ಠೆ ಮತ್ತು ಸಮಯಪ್ರಜ್ಞೆಯ ಮೂಲಕ ಮನುಷ್ಯನ ಜೀವ ಉಳಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ, ಕೊರೆಯುವ ಚಳಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 69 ವರ್ಷದ ತನ್ನ ಮಾಲೀಕನನ್ನು ಉಳಿಸುವಲ್ಲಿ ಸಾಕು ನಾಯಿ ಮಹತ್ವದ ಪಾತ್ರ ವಹಿಸಿದೆ. ಮಾಲೀಕ ದಟ್ಟ ಕಾಡಿನಲ್ಲಿ ದಾರಿತಪ್ಪಿ ಅಲೆದಾಡುತ್ತಿದ್ದಾಗ ಆತನೊಟ್ಟಿಗಿದ್ದ ನಾಯಿ ಆತನನ್ನು ಕಾಡಿನಲ್ಲಿ ಬಿಟ್ಟು ನೇರವಾಗಿ ಪರ್ವತದ ವಸತಿಗೃಹವೊಂದಕ್ಕೆ ಬಂದು, ಅಲ್ಲಿನ ಸಿಬ್ಬಂದಿಯ ಗಮನ ಸೆಳೆಯುವ ಮೂಲಕ ಅಲ್ಲಿನವರಿಗೆ ಸುಳಿವು ನೀಡಿದೆ. ಕೊನೆಗೆ ಅರಣ್ಯ ರಕ್ಷಕರು ಮತ್ತು ಪೊಲೀಸರ ಸಂಘಟಿತ ಪ್ರಯತ್ನದಿಂದ ವೃದ್ಧನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮೆರಿಕದ ನ್ಯೂಯಾರ್ಕ್ ರಾಜ್ಯದಲ್ಲಿ ನಡೆದ ಈ ಘಟನೆ ಸಾಕುಪ್ರಾಣಿಗಳ ನಿಸ್ವಾರ್ಥ ಪ್ರೀತಿ ಮತ್ತು ಮನುಷ್ಯರ ಜೊತೆ ಅವುಗಳ ಭಾವನಾತ್ಮಕ ಸಂಬಂಧವನ್ನು ಮತ್ತೊಮ್ಮೆ ನೆನಪಿಸುವಂತಿದೆ. ‘ಪೀಪಲ್’ (PEOPLE) ವರದಿ ಮಾಡಿರುವ ಪ್ರಕಾರ, ಬಾಸೆಟ್ ಹೌಂಡ್ (Basset Hound) ತಳಿಯ ಬೆಕಿ ತನ್ನ 69 ವರ್ಷದ ಮಾಲೀಕನೊಂದಿಗೆ ಅರಣ್ಯಕ್ಕೆ ತೆರಳಿತ್ತು. ಆದರೆ, ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಮಾಲೀಕ ಕಾಡಿನಲ್ಲಿ ನಾಪತ್ತೆಯಾಗಿದ್ದರು. ಅವರ ಸುಳಿವು ಸಿಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ನವೆಂಬರ್ 12ರ ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಬೆಕಿ ಹೆಸರಿನ ಈ ನಾಯಿ, ನ್ಯೂಯಾರ್ಕ್‌ನ ಲೇಕ್ ಪ್ಲಾಸಿಡ್‌ನಲ್ಲಿರುವ ವೈಟ್‌ಫೇಸ್ ಮೌಂಟೇನ್ ವಸತಿಗೃಹಕ್ಕೆ (Whiteface Mountain Lodge) ಒಂಟಿಯಾಗಿ ಬಂದಿದೆ. ನಾಯಿಯನ್ನು ನೋಡಿದ ಅಲ್ಲಿನ ಸಿಬ್ಬಂದಿ ತಕ್ಷಣವೇ ಅದನ್ನು ಗುರುತಿಸಿದರು. ಏಕೆಂದರೆ, ಅದರ ಮಾಲೀಕ ಈ ಹಿಂದೆಯೂ ನಾಪತ್ತೆಯಾಗಿದ್ದ ಅನುಭವ ಸಿಬ್ಬಂದಿಗಿತ್ತು. ಹೀಗಾಗಿ ಬೆಕಿ ಒಬ್ಬಳೇ ಬಂದಿರುವುದನ್ನು ಕಂಡಾಗ ಅದುಏನನ್ನೋ ಹೇಳುತ್ತಿರುವಂತೆ ಅನಿಸಿತು ಹಾಗೂ ಅದರ ಮಾಲೀಕ ಮತ್ತೆ ಕಾಡಿನಲ್ಲಿ ಕಳೆದುಹೋಗಿರಬಹುದು ಎಂಬ ಅನುಮಾನ ಮೂಡಿತು. ನಾಯಿಯ ಆಗಮನವನ್ನು ಅವರು ಸಾಮಾನ್ಯ ಘಟನೆಯೆಂದು ಪರಿಗಣಿಸದೆ ಾದೊಂದು ಸುಳಿವು ಎಂದು ತಿಳಿದುಕೊಂಡು ತಕ್ಷಣ ಕಾರ್ಯಪ್ರವೃತ್ತರಾದರು.

ಪ್ರಮುಖ ಸುದ್ದಿ :-   ‘ಭಾರತವನ್ನು ನೋಡಿ’: ಬಡ್ಡಿದರ ಹೆಚ್ಚಳ ಮಾಡಿದ್ದಕ್ಕೆ ಅಮೆರಿಕದ ಕೇಂದ್ರ ಬ್ಯಾಂಕ್ ವಿರುದ್ಧ ಟ್ರಂಪ್ ವಾಗ್ದಾಳಿ

ಕೂಡಲೇ ನ್ಯೂಯಾರ್ಕ್ ರಾಜ್ಯ ಪೊಲೀಸ್ ಇಲಾಖೆಗೆ (NYSP) ಮಾಹಿತಿ ನೀಡಿದರು. ಪೊಲೀಸರು ಅರಣ್ಯ ರಕ್ಷಕರ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ಕಾರ್ಯಾಚರಣೆಯಲ್ಲಿ 14 ಅರಣ್ಯ ರಕ್ಷಕರು ಹಾಗೂ ನ್ಯೂಯಾರ್ಕ್ ರಾಜ್ಯ ಪೊಲೀಸ್ ಮತ್ತು ಅದರ ವೈಮಾನಿಕ ಘಟಕದ ನಾಲ್ವರು ಸಿಬ್ಬಂದಿ ಪಾಲ್ಗೊಂಡಿದ್ದರು. ಡ್ರೋನ್ ಹಾಗೂ ವಾಸನೆ ಹಿಡಿದು ವ್ಯಕ್ತಿಗಳನ್ನು ಪತ್ತೆಹಚ್ಚುವ ತರಬೇತಿ ಪಡೆದ ಬ್ಲಡ್‌ಹೌಂಡ್ ನಾಯಿಯನ್ನೂ ಶೋಧ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು.
ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅರಣ್ಯ ರಕ್ಷಕ ಚಾರ್ಲಿ ಫೌಟ್ಚ್ (Charlie Foutch) ಅವರು ನವೆಂಬರ್ 18ರಂದು ನ್ಯೂಯಾರ್ಕ್ ರಾಜ್ಯ ಪರಿಸರ ಸಂರಕ್ಷಣಾ ಇಲಾಖೆ ಹಂಚಿಕೊಂಡ ಸಂದರ್ಶನದಲ್ಲಿ ಈ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಮೊದಲು ಅರಣ್ಯದ ಪ್ರವೇಶದ್ವಾರದ ಸಮೀಪ ನಾಪತ್ತೆಯಾಗಿದ್ದ ವ್ಯಕ್ತಿಯ ಟ್ರಕ್ ಪತ್ತೆಯಾಯಿತು. ಬಳಿಕ ನದಿಯ ಪಕ್ಕದಲ್ಲಿದ್ದ ಕಾಲುದಾರಿಗಳಲ್ಲಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಲಾಯಿತು.
ಆದರೆ, ಅರಣ್ಯದಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಆ ಪ್ರದೇಶದಲ್ಲಿ ತಾಪಮಾನ 25ರಿಂದ 30 ಡಿಗ್ರಿ ಫ್ಯಾರನ್‌ಹೀಟ್‌ (ಸುಮಾರು ಮೈನಸ್ 4ರಿಂದ ಮೈನಸ್ 1 ಡಿಗ್ರಿ ಸೆಲ್ಸಿಯಸ್) ಇತ್ತು. ಇಂತಹ ಕೊರೆಯುವ ಚಳಿಯಲ್ಲಿ ವೃದ್ಧ ಎಲ್ಲಿ ಸಿಲುಕಿದ್ದಾರೆ ಎಂಬ ಸುಳಿವು ಸಿಗದೆ ರಕ್ಷಣಾ ತಂಡ ಹುಡುಕಾಟ ಮುಂದುವರಿಸಿತ್ತು.
ನವೆಂಬರ್ 13ರ ಶುಕ್ರವಾರ ಬೆಳಗ್ಗೆ ಸುಮಾರು 10 ಗಂಟೆಗೆ ಬೇಟೆಯಾಡಲು ಬಂದಿದ್ದ ವ್ಯಕ್ತಿಯೊಬ್ಬರಿಗೆ ಕಾಡಿನೊಳಗಿನಿಂದ ಏನೋ ಬಿದ್ದ ಸದ್ದು ಹಾಗೂ ಯಾರೋ ಕಿರುಚಿದ ಧ್ವನಿ ಕೇಳಿಸಿತು. ಈ ಧ್ವನಿ ಕೇಳಿದ ಸಮೀಪದಲ್ಲೇ ಇದ್ದ ಅರಣ್ಯ ರಕ್ಷಕರೊಬ್ಬರು ತಕ್ಷಣ ಆ ದಿಕ್ಕಿನಲ್ಲಿ ಧಾವಿಸಿದರು. ಅಲ್ಲಿ 69 ವರ್ಷದ ವೃದ್ಧ ಪತ್ತೆಯಾದರು.

ವೃದ್ಧನ ಸ್ಥಿತಿ ಚಿಂತಾಜನಕವಾಗಿತ್ತು. ಅವರ ಕಾಲಿನಲ್ಲಿ ಶೂಗಳಿರಲಿಲ್ಲ, ಕೈಗಳಿಗೆ ಕೈಗವಸುಗಳೂ ಇರಲಿಲ್ಲ. ತೀವ್ರ ಚಳಿಯಿಂದಾಗಿ ಕೈ ಮತ್ತು ಕಾಲುಗಳಿಗೆ ಫ್ರಾಸ್ಟ್‌ಬೈಟ್‌ (Frostbite) ಉಂಟಾಗಿತ್ತು. ಆದರೂ ಅವರು ಚಲಿಸುವ ಹಾಗೂ ಮಾತನಾಡುವ ಸ್ಥಿತಿಯಲ್ಲಿದ್ದರು. ಅವರು ಸಿಲುಕಿದ್ದ ಸ್ಥಳದಿಂದ ಸಾಮಾನ್ಯವಾಗಿ ಹೊರತರುವುದು ಕಷ್ಟವಾಗಿದ್ದರಿಂದ ಹೆಲಿಕಾಪ್ಟರ್ ಮೂಲಕವೇ ಸ್ಥಳಾಂತರಿಸಲು ನಿರ್ಧರಿಸಲಾಯಿತು.
ಮತ್ತೊಬ್ಬ ಅರಣ್ಯ ರಕ್ಷಕರು ವೃದ್ಧನನ್ನು ಹೆಲಿಕಾಪ್ಟರ್ ಮೂಲಕ ಕಾಡಿನಿಂದ ಹೊರತಂದರು. ಬಳಿಕ ನ್ಯೂಯಾರ್ಕ್ ರಾಜ್ಯ ಪೊಲೀಸ್ ಇಲಾಖೆಯ ಪೈಲಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಕಿ ನಾಯಿಯ ಪಾತ್ರವನ್ನು ಅರಣ್ಯ ರಕ್ಷಕರು ವಿಶೇಷವಾಗಿ ಸ್ಮರಿಸಿದ್ದಾರೆ. ಮಾಲೀಕನಿಂದ ದೂರವಾಗಿ ಒಂಟಿಯಾಗಿ ವಸತಿಗೃಹಕ್ಕೆ ಬಂದ ಬೆಕಿ, ಸಿಬ್ಬಂದಿಯ ಗಮನ ಸೆಳೆಯದಿದ್ದರೆ ವೃದ್ಧನನ್ನು ಪತ್ತೆಹಚ್ಚುವ ಕಾರ್ಯಾಚರಣೆ ಆರಂಭವಾಗಲು ವಿಳಂಬವಾಗುವ ಸಾಧ್ಯತೆಯಿತ್ತು. ತನ್ನ ಮಾಲೀಕನನ್ನು ಹುಡುಕುವ ಪ್ರಯತ್ನದಲ್ಲಿ ಅದು ಮಾಡಿದ ಈ ಕೆಲಸ ಅಂತಿಮವಾಗಿ ಅವರ ಜೀವ ಉಳಿಸುವಲ್ಲಿ ಮಹತ್ವದ ಕೊಂಡಿಯಾಯಿತು.
ಅರಣ್ಯ ರಕ್ಷಕರು, ಪೊಲೀಸರು, ವೈಮಾನಿಕ ಘಟಕದ ಸಿಬ್ಬಂದಿ ಹಾಗೂ ಬೇಟೆಗಾರನ ಸಮಯೋಚಿತ ನೆರವಿನಿಂದ ಕಾರ್ಯಾಚರಣೆ ಯಶಸ್ವಿಯಾಯಿತು. ಆದರೆ, ಈ ಎಲ್ಲ ಪ್ರಯತ್ನಗಳಿಗೆ ಮೊದಲ ಸುಳಿವು ನೀಡಿದ್ದು ಮಾತ್ರ ಬೆಕಿ. ತನ್ನ ಮಾಲೀಕನ ಸಂಕಷ್ಟವನ್ನು ಮಾತಿನಲ್ಲಿ ಹೇಳಲಾಗದಿದ್ದರೂ ತಾನೊಬ್ಬನೇ ವಸತಿಗೃಹಕ್ಕೆ ಬಂದು ತನ್ನ ವರ್ತನೆಯ ಮೂಲಕ ಅಪಾಯದ ಸಂದೇಶವನ್ನು ತಲುಪಿಸಿದ ಆ ಮೂಕ ಜೀವಿಯ ನಿಷ್ಠೆ ಎಲ್ಲರ ಮನಗೆದ್ದಿದೆ. ಪ್ರೀತಿ ಎಂದರೆ ಕೇವಲ ಮಾತುಗಳಲ್ಲ, ಸಂಕಷ್ಟದ ಸಂದರ್ಭದಲ್ಲಿ ತೋರಿಸುವ ಕಾಳಜಿ ಎಂಬುದನ್ನು ಬೆಕಿ ಮತ್ತೊಮ್ಮೆ ಸಾಬೀತುಪಡಿಸಿದೆ.

ಪ್ರಮುಖ ಸುದ್ದಿ :-   ಖಲಿಸ್ತಾನಿ ಉಗ್ರ ಗುರುಪತ್ವಂತ್ ಪನ್ನುನ್ ಹತ್ಯೆ ಸಂಚು: ಭಾರತೀಯನಿಗೆ ಅಮೆರಿಕದಲ್ಲಿ 19 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement