ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಪ್ರಿಯತಮೆಯನ್ನು ಹೊಡೆದು ಕೊಂದ ಟೆಕ್ಕಿ; ರಾತ್ರಿಯಿಡೀ ಶವದ ಪಕ್ಕದಲ್ಲೇ ಕುಳಿತಿದ್ದ, ನಂತರ ಆಂಬುಲೆನ್ಸ್‌ಗಾಗಿ ಪೊಲೀಸರಿಗೆ ಕರೆ !

ಪುಣೆ : ಇಲ್ಲಿನ ಹಿಂಜವಾಡಿ ಪ್ರದೇಶದಲ್ಲಿ ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ತನ್ನ ಪ್ರಿಯಕರನಿಗೆ ಬೇರೊಬ್ಬ ಯುವತಿಯ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆ ಜಗಳವಾಡಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಯುವತಿಯನ್ನು ಕೊಂದ ಬಳಿಕ ಆರೋಪಿ ಇಡೀ ರಾತ್ರಿ ಆಕೆಯ ಮೃತದೇಹದ ಪಕ್ಕದಲ್ಲೇ ಕುಳಿತಿದ್ದು, ಬೆಳಗಾಗುವವರೆಗೂ ಅಲ್ಲಿಯೇ ಕಳೆದಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಮಾಹಿತಿ ನೀಡಿ ಕೃತ್ಯವನ್ನು ವರದಿ ಮಾಡಿದ್ದಾನೆ.
ಕೊಲೆಯಾದ ಯುವತಿಯನ್ನು 27 ವರ್ಷದ ಕೋಮಲ್ ದಹಲೆ ಎಂದು ಗುರುತಿಸಲಾಗಿದ್ದು ಈಕೆ ಸಾಫ್ಟ್‌ವೇರ್ ಎಂಜಿನಿಯರ್. ಆರೋಪಿ ಶುಭಂ ಜ್ಞಾನೇಶ್ವರ ಕಲ್ಬಾಂಡೆ ಕೂಡ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾನೆ. ಕೋಮಲ್ ಹಾಗೂ ಶುಭಂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಇವರ ಪ್ರೇಮ ಸಂಬಂಧದ ಬಗ್ಗೆ ಎರಡೂ ಕುಟುಂಬಗಳಿಗೂ ತಿಳಿದಿತ್ತು. ಅಲ್ಲದೆ, ಮದುವೆ ಮಾಡಿಕೊಡಲು ಕುಟುಂಬದವರೂ ಒಪ್ಪಿಗೆ ಸೂಚಿಸಿದ್ದರು.
ಮಹಾರಾಷ್ಟ್ರದ ವಾರ್ಧಾ ಮೂಲದ ಕೋಮಲ್ ವಿಪ್ರೋ (Wipro) ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಬುಲ್ಧಾನಾ ಮೂಲದ ಶುಭಂ ಇನ್ಫೋಸಿಸ್ (Infosys) ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾನೆ.
ಆದರೆ, ಇತ್ತೀಚಿನ ದಿನಗಳಲ್ಲಿ ಶುಭಂ ಬೇರೊಬ್ಬ ಯುವತಿಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಕೋಮಲ್ ಅನುಮಾನ ಪಡುತ್ತಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿಸಿತ್ತು.
ಭಾನುವಾರ ಮತ್ತು ಸೋಮವಾರದ ನಡುವಿನ ಮಧ್ಯರಾತ್ರಿ ಸುಮಾರು 3 ಗಂಟೆಯ ವೇಳೆಗೆ ಹಿಂಜವಾಡಿ ಪ್ರದೇಶದಲ್ಲಿರುವ ಕೋಮಲ್ ವಾಸವಿದ್ದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಯಲ್ಲಿ ಇಬ್ಬರ ನಡುವೆ ಮತ್ತೆ ಇದೇ ವಿಚಾರವಾಗಿ ವಾಗ್ವಾದ ಆರಂಭವಾಗಿದೆ. ಈ ವೇಳೆ ತೀವ್ರ ಆಕ್ರೋಶಗೊಂಡ ಶುಭಂ, ಕೋಮಲ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆಕೆಯ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಕಾಲಿನಿಂದ ಒದ್ದಿದ್ದಲ್ಲದೆ, ಮುಷ್ಟಿಯಿಂದ ಬಲವಾಗಿ ಹೊಡೆದಿದ್ದಾನೆ. ಈ ಬರ್ಬರ ಹಲ್ಲೆಯಿಂದ ಕೋಮಲ್ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಘಟನೆ ನಡೆಯುವ ಮೊದಲು ಕೋಮಲ್ ದಹಲೆ ಹಾಗೂ ಶುಭಂ ಕಲ್ಬಾಂಡೆ ಇಬ್ಬರೂ ಕೋಮಲ್‌ನ ಸ್ನೇಹಿತರ ಜೊತೆ ರಾತ್ರಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೆ ಮರಳಿದ ಬಳಿಕ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ.
ಬಳಿಕ ಇಬ್ಬರ ನಡುವಿನ ವಾಗ್ವಾದ ತೀವ್ರಗೊಂಡು ಅದು ದೈಹಿಕ ಹಲ್ಲೆಗೆ ತಿರುಗಿದೆ. ಶುಭಂ ಕೋಮಲ್‌ಗೆ ಪದೇಪದೆ ಗುದ್ದಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.  ಇದರಿಂದ ಕೋಮಲ್‌ ಕುದಿ ಬಿದ್ದಿದ್ದಾಳೆ. ನಂತರ ಅವರ ಶವದ ಬಳಿಯೇ ಕುಳಿತಿದ್ದಾನೆ. ಬೆಳಗಿನ ಜಾವ ಸುಮಾರು 6:30ರ ವೇಳೆಗೆ ಕೋಮಲ್ ಯಾವುದೇ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ಶುಭಂ, ಪೊಲೀಸರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕಳುಹಿಸುವಂತೆ ಮನವಿ ಮಾಡಿದ್ದಾನೆ. ತಕ್ಷಣ ಕೋಮಲ್‌ಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಪ್ರೀತಿ, ಮದುವೆಯ ಕನಸು ಕಂಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಜೋಡಿಯ ಸಂಬಂಧ ಕೊಲೆಯಲ್ಲಿ ಅಂತ್ಯಗೊಂಡಿರುವುದು ಆಘಾತಕ್ಕೆ ಕಾರಣವಾಗಿದೆ. ಶುಭಂನನ್ನು ಬಂಧಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement