

ಕೋಲ್ಕತ್ತಾ: ಸುಮಾರು ಏಳು ದಶಕಗಳಿಂದ (70 ವರ್ಷದಿಂದ) ಗಣಿತಜ್ಞರಿಗೆ ಸವಾಲಾಗಿದ್ದ ಸಂಕೀರ್ಣ ಗಣಿತದ ಸಮಸ್ಯೆಯೊಂದನ್ನು ಬಿಡಿಸುವ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಭಾರತೀಯ ಗಣಿತಜ್ಞೆ ನೀನಾ ಗುಪ್ತಾ ಇದೀಗ ಮತ್ತೊಂದು ಮಹತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ (TIME) ನಿಯತಕಾಲಿಕೆ ಮೊದಲ ಬಾರಿಗೆ ಪ್ರಕಟಿಸಿರುವ ‘TIME100 Next India 2026’ ಪಟ್ಟಿಯಲ್ಲಿ ನೀನಾ ಗುಪ್ತಾ ಸ್ಥಾನ ಪಡೆದಿದ್ದಾರೆ.
ಕೋಲ್ಕತ್ತಾದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯಲ್ಲಿ (Indian Statistical Institute-ISI) ಪ್ರಾಧ್ಯಾಪಕರಾಗಿರುವ ನೀನಾ ಗುಪ್ತಾ ಅವರನ್ನು ಗಣಿತ ಮತ್ತು ಬೀಜಗಣಿತದ ರೇಖಾಗಣಿತ (Algebraic Geometry) ಕ್ಷೇತ್ರಕ್ಕೆ ನೀಡಿರುವ ಮಹತ್ವದ ಕೊಡುಗೆಗಳಿಗಾಗಿ ‘ಆರೋಗ್ಯ ಮತ್ತು ವಿಜ್ಞಾನ ಆವಿಷ್ಕಾರಕರು’ (Health and Science Innovators) ವಿಭಾಗದಲ್ಲಿ ಗುರುತಿಸಲಾಗಿದೆ.
ಬಾಲ್ಯದಿಂದಲೇ ಗಣಿತದಲ್ಲಿ ಆಸಕ್ತಿ
1984ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ನೀನಾ ಗುಪ್ತಾ ಅವರಿಗೆ ಬಾಲ್ಯದಿಂದಲೇ ಗಣಿತದ ಬಗ್ಗೆ ಆಸಕ್ತಿ ಇತ್ತು. ಆದರೆ, ಗಣಿತವನ್ನೇ ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಕಲ್ಪನೆ ಆರಂಭದಲ್ಲಿ ಅವರಿಗಿರಲಿಲ್ಲ. ಸಂದರ್ಶನವೊಂದರಲ್ಲಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿರುವ ಅವರು, ಬೆಥೂನ್ ಕಾಲೇಜಿನ ಗಣಿತ ಆನರ್ಸ್ ಕೋರ್ಸ್ಗೆ ಸೇರಲು ಹಿರಿಯರೊಬ್ಬರು ತನ್ನನ್ನು ಹೇಗೆ ಪರಿಚಯಿಸಿದರು ಮತ್ತು ವಿಷಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲು ಪ್ರೋತ್ಸಾಹಿಸಿದರು ಎಂಬುದನ್ನು ಅವರು ಸ್ಮರಿಸಿದ್ದಾರೆ.
ಅವರ ಗಣಿತದ ಆಸಕ್ತಿಯನ್ನು ಬೆಳೆಸುವಲ್ಲಿ ತಾಯಿ ಜ್ಞಾನಲತಾ ಗುಪ್ತಾ ಅವರ ಪಾತ್ರವೂ ಮಹತ್ವದ್ದಾಗಿತ್ತು. ನೀನಾ ಮತ್ತು ಅವರ ಸಹೋದರನಿಗೆ ಗಣಿತದ ಸಮಸ್ಯೆಗಳನ್ನು ಬಿಡಿಸಲು ತಾಯಿ ಪ್ರೋತ್ಸಾಹಿಸುತ್ತಿದ್ದರು. ಕೆಲವೊಮ್ಮೆ ಈ ಅಭ್ಯಾಸವನ್ನು ಇಬ್ಬರ ನಡುವಿನ ಸೌಹಾರ್ದಯುತ ಸ್ಪರ್ಧೆಯನ್ನಾಗಿಯೂ ರೂಪಿಸುತ್ತಿದ್ದರು. ಇದರಿಂದ ಮಕ್ಕಳಲ್ಲಿ ಗಣಿತದ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮತ್ತಷ್ಟು ಬೆಳೆಯಲು ನೆರವಾಯಿತು.
2006ರಲ್ಲಿ ಬೆಥೂನ್ ಕಾಲೇಜಿನಿಂದ ಗಣಿತ ಆನರ್ಸ್ ಪದವಿ ಪಡೆದ ನೀನಾ ಗುಪ್ತಾ, ನಂತರ ಕೋಲ್ಕತ್ತಾದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಗೆ ಉನ್ನತ ಶಿಕ್ಷಣಕ್ಕಾಗಿ ಸೇರ್ಪಡೆಯಾದರು. 2008ರಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅವರು, 2011ರಲ್ಲಿ ಪ್ರೊಫೆಸರ್ ಅಮರ್ತ್ಯಕುಮಾರ ದತ್ತ ಅವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪದವಿ ಗಳಿಸಿದರು.
ಏಳು ದಶಕಗಳ ಹಳೆಯ ಗಣಿತದ ಸಮಸ್ಯೆ
ನೀನಾ ಗುಪ್ತಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ದೊಡ್ಡ ಮನ್ನಣೆ ದೊರೆತದ್ದು 2014ರಲ್ಲಿ. ಗಣಿತಜ್ಞ ಆಸ್ಕರ್ ಜರಿಸ್ಕಿ (Oscar Zariski) ಅವರು 1949ರಲ್ಲಿ ಮುಂದಿಟ್ಟಿದ್ದ ‘ಜರಿಸ್ಕಿ ಕ್ಯಾನ್ಸಲೇಷನ್ ಪ್ರಾಬ್ಲೆಂ’ನ (Zariski Cancellation Problem) ಒಂದು ಆವೃತ್ತಿ(version)ಗೆ ಪ್ರತಿದೃಷ್ಟಾಂತ (Counterexample) ರೂಪಿಸುವ ಮೂಲಕ ಅವರು ಗಣಿತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದರು.
ಈ ಸಮಸ್ಯೆಯ ಮೂಲ ಪ್ರಶ್ನೆ ಏನೆಂದರೆ, ಎರಡು ಗಣಿತೀಯ ರಚನೆಗಳಿಗೆ ಹೆಚ್ಚುವರಿಯಾಗಿ ಮತ್ತೊಂದು ಆಯಾಮವನ್ನು (Dimension) ಸೇರಿಸಿದಾಗ ಅವು ಸಮಾನವಾಗುತ್ತವೆ ಎಂದಾದರೆ, ಆ ಹೆಚ್ಚುವರಿ ಆಯಾಮವನ್ನು ಸೇರಿಸುವ ಮೊದಲೇ ಅವು ಸಮಾನವಾಗಿದ್ದವೇ ಎಂಬುದಾಗಿದೆ.
ಈ ಪ್ರಶ್ನೆಗೆ ಎಲ್ಲ ಸಂದರ್ಭಗಳಲ್ಲಿಯೂ ಹೌದು ಎಂಬ ಉತ್ತರ ನೀಡಲು ಸಾಧ್ಯವಿಲ್ಲ ಎಂಬುದನ್ನು ನೀನಾ ಗುಪ್ತಾ ತಮ್ಮ ಸಂಶೋಧನೆಯ ಮೂಲಕ ತೋರಿಸಿಕೊಟ್ಟರು. ಜಪಾನಿನ ಗಣಿತಜ್ಞ ತಕನೋರಿ ಅಸನೂಮಾ (Takanori Asanuma) ಅಭಿವೃದ್ಧಿಪಡಿಸಿದ್ದ ಮೂರು ಆಯಾಮದ ಅಫೈನ್ ವೆರೈಟಿ (Three-dimensional Affine Variety) ಪರಿಕಲ್ಪನೆಯನ್ನು ಬಳಸಿಕೊಂಡು, ಇದು ಸಕಾರಾತ್ಮಕ ಗುಣಲಕ್ಷಣಗಳಲ್ಲಿ (Positive Characteristic) ಯಾವಾಗಲೂ ನಿಜವಾಗಬೇಕಾಗಿಲ್ಲ ಎಂದು ಗುಪ್ತಾ ನಿರೂಪಿಸಿದರು ಈ ಸಮಾನತೆಯ ನಿಯಮ ಎಲ್ಲ ಸಂದರ್ಭಗಳಲ್ಲಿಯೂ ಅನ್ವಯಿಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರು.
ಅವರ ಈ ಸಂಶೋಧನೆಯು ಅಫೈನ್ ಅಲ್ಜಿಬ್ರಾಯಿಕ್ ಜಾಮೆಟ್ರಿ (Affine Algebraic Geometry) ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಯಿತು. ಸುಮಾರು 70 ವರ್ಷಗಳಿಂದ ಗಣಿತಜ್ಞರ ಗಮನ ಸೆಳೆದಿದ್ದ ಸಮಸ್ಯೆಗೆ ಅವರು ನೀಡಿದ ಈ ಉತ್ತರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಿತು.


ಪ್ರತಿಷ್ಠಿತ ಪ್ರಶಸ್ತಿಗಳ ಗರಿ
ಗಣಿತ ಕ್ಷೇತ್ರದಲ್ಲಿ ನೀನಾ ಗುಪ್ತಾ ಅವರ ಸಾಧನೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. 2014ರಲ್ಲಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಯುವ ವಿಜ್ಞಾನಿ ಪ್ರಶಸ್ತಿ (Young Scientist Award) ಅವರಿಗೆ ಲಭಿಸಿತು. 2019ರಲ್ಲಿ ದೇಶದ ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗೆ ಅವರು ಭಾಜನರಾದರು. 2021ರಲ್ಲಿ ರಾಮಾನುಜನ್ ಪ್ರಶಸ್ತಿಯನ್ನೂ ಪಡೆದರು. ಈ ಗೌರವ ಪಡೆದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಯೂ ಅವರದಾಯಿತು.
2022ರಲ್ಲಿ ಅವರಿಗೆ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. 2024ರಲ್ಲಿ ಇನ್ಫೋಸಿಸ್ ಪ್ರಶಸ್ತಿ ಲಭಿಸಿತು. 2025ರಲ್ಲಿ ಪ್ರತಿಷ್ಠಿತ ಎಮ್ಮಿ ನೋಯೆಥರ್ ಉಪನ್ಯಾಸ (Emmy Noether Lecture) ನೀಡುವ ಗೌರವವೂ ಅವರಿಗೆ ಒಲಿದುಬಂದಿತು.
ಗಣಿತ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಬಗ್ಗೆ ಕಳಕಳಿ
ಗಣಿತ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತಿರುವ ಕುರಿತು ನೀನಾ ಗುಪ್ತಾ ಹಲವು ಸಂದರ್ಭಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಗಣಿತ ತರಗತಿಯಲ್ಲಿ ತಾವೊಬ್ಬರೇ ಮಹಿಳೆಯಾಗಿದ್ದುದನ್ನು ಅವರು ಸ್ಮರಿಸಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಿದ್ದ ಗಣಿತದಂತಹ ಕ್ಷೇತ್ರದಲ್ಲಿ ತಮ್ಮದೇ ಆದ ಸಂಶೋಧನೆಯ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ನೀನಾ ಗುಪ್ತಾ, ಇದೀಗ ಟೈಮ್ ನಿಯತಕಾಲಿಕೆಯ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತೀಯ ವಿಜ್ಞಾನ ಕ್ಷೇತ್ರದ ಹೆಮ್ಮೆಯ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ