

ಮುಂಬೈ: ಸಹೋದರಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ 35 ವರ್ಷದ ವ್ಯಕ್ತಿಯೊಬ್ಬ ತೀರ್ಪು ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನ್ಯಾಯಾಲಯದ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನವಿ ಮುಂಬೈನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ನಾಗೇಶಬಾಬು ಲಾಡ ಎಂದು ಗುರುತಿಸಲಾಗಿದೆ. 2019ರಲ್ಲಿ ತನ್ನ ಸಹೋದರಿಯನ್ನು ಕೊಲೆ ಮಾಡಿದ್ದಲ್ಲದೆ, ಪತ್ನಿಯ ಕೊಲೆಗೂ ಯತ್ನಿಸಿದ್ದ ಪ್ರಕರಣದಲ್ಲಿ ನಾಗೇಶಬಾಬು ಲಾಡ್ ತಪ್ಪಿತಸ್ಥ ಎಂದು ನವಿ ಮುಂಬೈನ ಬೆಲಾಪುರ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದರು. ಈ ತೀರ್ಪಿನ ಬೆನ್ನಲ್ಲೇ ಆತ ನ್ಯಾಯಾಲಯದ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾನೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅಪರಾಧ ಸಾಬೀತಾದ ಬಳಿಕ ನ್ಯಾಯಾಲಯದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯದ ಕೊಠಡಿಯಿಂದ ಏಕಾಏಕಿ ಹೊರಗೆ ಓಡಿಬಂದ ನಾಗೇಶ, ಕಟ್ಟಡದ ಐದನೇ ಮಹಡಿಯಿಂದ ಜಿಗಿದಿದ್ದಾನೆ ಎಂದು ತಿಳಿದುಬಂದಿದೆ.
ಕೆಳಕ್ಕೆ ಬಿದ್ದ ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಚಿಕಿತ್ಸೆ ಆರಂಭಿಸುವ ಮೊದಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಪ್ರಕಟಿಸಿದ್ದಾರೆ.
ಇದಕ್ಕೂ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಕಲಂಗಳ ಅಡಿಯಲ್ಲಿ ನಾಗೇಶ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರು. ತನ್ನ ಸಹೋದರಿ ಸುನೀತಾಳನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ಐಪಿಸಿ ಕಲಂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅದೇ ಪ್ರಕರಣದಲ್ಲಿ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಅಪರಾಧಕ್ಕಾಗಿ ಐಪಿಸಿ ಕಲಂ 307ರ ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನೂ ಪ್ರಕಟಿಸಲಾಗಿತ್ತು.
ಪ್ರಾಸಿಕ್ಯೂಷನ್ ನೀಡಿದ ಮಾಹಿತಿಯ ಪ್ರಕಾರ, ತನ್ನ ಪತ್ನಿಗೆ ಭಾವನಾದ ಜರ್ಮನ್ಜಿತ್ ಸಿಂಗ್ ಜೊತೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನ ನಾಗೇಶಗೆ ಇತ್ತು. ಇದೇ ವಿಚಾರವಾಗಿ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು.


2019ರ ಜುಲೈ 17ರಂದು ಮುಂಜಾನೆ ನವಿ ಮುಂಬೈನಲ್ಲಿರುವ ಪತ್ನಿಯ ತವರು ಮನೆಯ ಮಹಡಿಯ ಮೇಲೆ ನಾಗೇಶ ತನ್ನ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಬಳಿಕ ಅಲ್ಲಿಂದ ಪರಾರಿಯಾಗಿದ್ದ.
ನಂತರ ಆತ ತನ್ನ ಸಹೋದರಿ ಸುನೀತಾ ಅವರ ಮನೆಗೆ ತೆರಳಿದ್ದ. ಪತಿ-ಪತ್ನಿಯರ ನಡುವಿನ ವಿವಾದವನ್ನು ತಿಳಿಗೊಳಿಸಲು ಸುನೀತಾ ಪ್ರಯತ್ನಿಸಿದ್ದರು. ಅಲ್ಲದೆ, ತನ್ನ ಅತ್ತಿಗೆಯ ನೆರವಿಗೂ ಧಾವಿಸಿದ್ದರು. ಆದರೆ, ಇದರಿಂದ ಮತ್ತಷ್ಟು ಆಕ್ರೋಶಗೊಂಡಿದ್ದ ನಾಗೇಶ, ಸುನೀತಾಳ ಮೇಲೆಯೇ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದ. ಆಕೆಯ ಎದೆಗೆ ಹಲವು ಬಾರಿ ಇರಿದಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಸುನೀತಾ ತೀವ್ರ ರಕ್ತಸ್ರಾವ ಮತ್ತು ಆಘಾತದಿಂದ ಮೃತಪಟ್ಟಿದ್ದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಕೊಲೆ ಪ್ರಕರಣದಲ್ಲಿ ಇದೀಗ ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಆರೋಪಿ ನ್ಯಾಯಾಲಯದ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದಾನೆ.



ನಿಮ್ಮ ಕಾಮೆಂಟ್ ಬರೆಯಿರಿ